ನವದೆಹಲಿ: ಕೇಂದ್ರ ಬಜೆಟ್ ಮಂಡನೆಯಾದ ಕೆಲವೇ ದಿನಗಳಲ್ಲಿ ಆರ್ಬಿಐ (RBI) ಹಣಕಾಸು ನೀತಿ ಸಮಿತಿ ಸಭೆ (MPC) ಸೇರಲಿದ್ದು, ರೆಪೊ ದರವನ್ನು ಮತ್ತೆ 25 ಮೂಲಾಂಶ ಹೆಚ್ಚಿಸಿ ಶೇ 6.50ಕ್ಕೆ ನಿಗದಿಪಡಿಸುವ ನಿರೀಕ್ಷೆ ಇದೆ ಎಂದು ‘ರಾಯಿಟರ್ಸ್’ ಸುದ್ದಿ ಸಂಸ್ಥೆಯ ಸಮೀಕ್ಷಾ ವರದಿ ತಿಳಿಸಿದೆ. ಅರ್ಥಶಾಸ್ತ್ರಜ್ಞರನ್ನು ಸಮೀಕ್ಷೆಗೆ ಒಳಪಡಿಸಿ ಸುದ್ದಿ ಸಂಸ್ಥೆ ವರದಿ ಸಿದ್ಧಪಡಿಸಿದೆ. ಸಮೀಕ್ಷೆಯಲ್ಲಿ ಭಾಗವಹಿಸಿದ 52 ಮಂದಿ ಅರ್ಥಶಾಸ್ತ್ರಜ್ಞರ ಪೈಕಿ 40 ಮಂದಿ ರೆಪೊ ದರ ಹೆಚ್ಚಳದ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ. ಉಳಿದ 12 ಮಂದಿ ರೆಪೊ ದರ ಬದಲಾಗುವ ಸಾಧ್ಯತೆ ಕಡಿಮೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಜನವರಿ 13-27 ಅವಧಿಯಲ್ಲಿ ಸಮೀಕ್ಷೆ ನಡೆಸಲಾಗಿತ್ತು. 2023ರ ಅಂತ್ಯದ ವರೆಗೂ ರೆಪೊ ದರವನ್ನು ಆರ್ಬಿಐ ಶೇ 6.50 ಮಟ್ಟದಲ್ಲಿ ಇರಿಸುವ ಸಾಧ್ಯತೆ ಇದೆ ಎಂದೂ ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.
‘ಈ ಹಿಂದೆ ಹಣಕಾಸು ನೀತಿ ಸಮಿತಿಯು ಕೈಗೊಂಡಿದ್ದ ಕಠಿಣ ಕ್ರಮಗಳು ಒಟ್ಟಾರೆ ಆರ್ಥಿಕ ಬೆಳವಣಿಗೆ ಮತ್ತು ಹಣದುಬ್ಬರದ ಮೇಲೆ ಪರಿಣಾಮ ಬೀರಿದೆ. ಒಂದು ಹಂತದಲ್ಲಿ ಅವರು (ಆರ್ಬಿಐ) ರೆಪೊ ದರವನ್ನು ಸ್ಥಗಿತಗೊಳಿಸುವ ಅಗತ್ಯವಿದೆ. ಶೇ 6.50ರ ರೆಪೊ ದರ ನಿಗದಿಪಡಿಸಿದ ಬಳಿಕ ಸ್ಥಗಿತಗೊಳಿಸುವುದು ಉತ್ತಮ ಎಂಬುದು ನನ್ನ ಭಾವನೆ’ ಎಂದು ಕೋಟಕ್ ಮಹೀಂದ್ರಾ ಬ್ಯಾಂಕ್ನ ಮುಖ್ಯ ಅರ್ಥಶಾಸ್ತ್ರಜ್ಞೆ ಉಪಾಸನಾ ಭಾರದ್ವಾಜ್ ತಿಳಿಸಿದ್ದಾರೆ. ರೆಪೊ ದರ ಸ್ಥಗಿತಗೊಳಿಸಬೇಕು ಎಂದ ಮಾತ್ರಕ್ಕೆ ಅವರು ಹಣದುಬ್ಬರದ ಮೇಲಿನ ಗಮನ ಬಿಟ್ಟುಬಿಡುತ್ತಾರೆ ಎಂದರ್ಥವಲ್ಲ ಎಂದೂ ಅವರು ಹೇಳಿದ್ದಾರೆ.
ಇದನ್ನೂ ಓದಿ: Philips Layoff: ಮತ್ತೆ 6,000 ಉದ್ಯೋಗಿಗಳ ವಜಾಗೊಳಿಸಿದ ಫಿಲಿಪ್ಸ್
ಡಿಸೆಂಬರ್ 7ರಂದು ಹಣಕಾಸು ನೀತಿ ಸಮಿತಿಯು ರೆಪೊ ದರವನ್ನು 35 ಮೂಲಾಂಶ ಹೆಚ್ಚಿಸಿತ್ತು. ಇದರೊಂದಿಗೆ ಪರಿಷ್ಕೃತ ರೆಪೊ ದರ ಶೇಕಡಾ 6.25 ಆಗಿತ್ತು. ಇದರೊಂದಿಗೆ, ಒಟ್ಟಾರೆಯಾಗಿ 23ನೇ ಹಣಕಾಸು ವರ್ಷದಲ್ಲಿ ಆರ್ಬಿಐ 225 ಮೂಲಾಂಶದಷ್ಟು ರೆಪೊ ದರ ಹೆಚ್ಚಿಸಿದಂತಾಗಿತ್ತು. ಪರಿಣಾಮವಾಗಿ ಸಾಲಗಳ ಮೇಲಿನ ಬಡ್ಡಿ ದರ, ಎಫ್ಡಿ ಸೇರಿದಂತೆ ಉಳಿತಾಯ ಖಾತೆಗಳ ಮೇಲಿನ ಬಡ್ಡಿ ದರಗಳನ್ನೂ ಬ್ಯಾಂಕ್ಗಳು ಹೆಚ್ಚಿಸಿದ್ದವು.
ಆದರೆ, ಈ ಬಾರಿ 25 ಮೂಲಾಂಶದಷ್ಟು ರೆಪೊ ದರ ಹೆಚ್ಚಳವಾದರೂ ಬ್ಯಾಂಕ್ಗಳು ಎಫ್ಡಿ ಬಡ್ಡಿ ದರವನ್ನು ತಕ್ಷಣವೇ ಹೆಚ್ಚಿಸುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಆರ್ಬಿಐ ರೆಪೊ ದರ ಹೆಚ್ಚಳವನ್ನು ಬ್ಯಾಂಕ್ಗಳು ಯಾವ ಪ್ರಮಾಣದಲ್ಲಿ ಗ್ರಾಹಕರಿಗೆ ವರ್ಗಾಯಿಸುತ್ತವೆ ಎಂಬುದನ್ನು ಕಾದುನೋಡಬೇಕಷ್ಟೆ ಎಂದು ತಜ್ಞರು ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ