ನವದೆಹಲಿ, ಜುಲೈ 27: ನಾಣ್ಯ, ನೋಟುಗಳ (Coins and Bank Notes) ವಿಚಾರದಲ್ಲಿ ಜನರಿಗೆ ಒಂದು ರೀತಿಯಲ್ಲಿ ಸದಾ ಅನುಮಾನಗಳೇ ತುಂಬಿರುತ್ತವೆ. 10 ರುಪಾಯಿ ನಾಣ್ಯ, 5 ರುಪಾಯಿ ನೋಟು ಇತ್ಯಾದಿಯನ್ನು ಜನರೂ ಮುಟ್ಟೋದಿಲ್ಲ, ಅಂಗಡಿಯವರೂ ಸ್ವೀಕರಿಸಲ್ಲ. ಸೋಷಿಯಲ್ ಮೀಡಿಯಾ, ವಾಟ್ಸಾಪ್ ಇತ್ಯಾದಿ ಕಡೆ, ಹಾಗೆಯೇ ಕೆಲವೊಮ್ಮೆ ಮಾಧ್ಯಮಗಳಲ್ಲಿ ಬರುವ ಸುದ್ದಿಗಳಿಂದ ಪ್ರಸಾರವಾಗುವ ತಪ್ಪು ಮಾಹಿತಿ ಇದಕ್ಕೆ ಕಾರಣವಾಗಿರುತ್ತದೆ. ಸ್ಟಾರ್ (*) ಚಿಹ್ನೆ ಇರುವ ಕರೆನ್ಸಿ ನೋಟುಗಳ (Star Notes) ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಈಗ ಚರ್ಚೆಯಾಗುತ್ತದೆ.
ನೋಟಿನ ಸೀರಿಯಲ್ ನಂಬರ್ನಲ್ಲಿ ಸ್ಟಾರ್ ಗುರುತು (*) ಇರುವ ನೋಟುಗಳು ಮಾರುಕಟ್ಟೆಯಲ್ಲಿ ಚಲಾವಣೆ ಆಗುತ್ತಿವೆ. ಈ ನೋಟುಗಳನ್ನು ಅಮಾನ್ಯವಾಗಿವೆ ಎಂದು ಕೆಲ ಗುಂಪುಗಳು ವಾದಿಸುತ್ತಿವೆ. ಈ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟನೆ ನೀಡಿದ್ದು ಸ್ಟಾರ್ (*) ಚಿಹ್ನೆ ಇರುವ ನೋಟು ಸಂಪೂರ್ಣ ಸಿಂಧುವಾಗಿದ್ದು ಯಾವುದೇ ನೋಟಿನಂತೆ ಚಲಾವಣೆ ಮಾಡಬಹುದು ಎಂದು ಹೇಳಿದೆ.
ಯಾವುದೇ ನೋಟಿನಲ್ಲೂ ನೀವು ಸೀರಿಯಲ್ ನಂಬರ್ ಅನ್ನು ನೋಡಬಹುದು. ಈ ನಂಬರ್ನಲ್ಲಿ ಮೊದಲಿಗೆ 3 ಅಂಕಿಗಳ ಆಲ್ಫಾನ್ಯೂಮರಿಕ್ ಸಂಖ್ಯೆಯ ಪ್ರಿಫಿಕ್ಸ್ ಇರುತ್ತದೆ. ಅದಾದ ಬಳಿಕ ಸೀರಿಯಲ್ ನಂಬರ್ ಇರುತ್ತದೆ. ಕೆಲ ನೋಟುಗಳಲ್ಲಿ ಪ್ರಿಫಿಕ್ಸ್ ಮತ್ತು ಸೀರಿಯಲ್ ನಂಬರ್ ಮಧ್ಯೆ * ಚಿಹ್ನೆ ದಾಖಲಾಗಿರುತ್ತದೆ.
ಆರ್ಬಿಐ ಹೇಳಿರುವ ಪ್ರಕಾರ, ನೋಟುಗಳನ್ನು ಮುದ್ರಿಸುವಾಗ ಕೆಲವು ದೋಷದಿಂದ ಕೂಡಿರಬಹುದು. ಸೀರಿಯಲ್ ನಂಬರ್ ಪ್ರಕಾರ ಬಂಡಲ್ಗಳಲ್ಲಿ ನೋಟುಗಳಿರುತ್ತವೆ. ದೋಷಯುಕ್ತ ನೋಟುಗಳಿದ್ದಲ್ಲಿ ಅದಕ್ಕೆ ಬದಲಿಯಾಗಿ ಬೇರೆ ನೋಟು ಮುದ್ರಿಸಿ ಬಂಡಲ್ಗೆ ಸೇರಿಸಲಾಗುತ್ತದೆ. ಈ ಬದಲೀ ನೋಟುಗಳ ಸೀರಿಯಲ್ ನಂಬರ್ ಮಧ್ಯೆ * ಗುರುತನ್ನು ಸೇರಿಸಲಾಗುತ್ತದೆ ಎಂದು ಹೇಳಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ