ರಿಯಲ್ ಎಸ್ಟೇಟ್​ನಲ್ಲಿ ಸರ್ಕಲ್ ರೇಟ್ ಎಂದರೇನು? ಮಾರ್ಕೆಟ್ ರೇಟ್​ಗೂ ಅದಕ್ಕೂ ಏನು ವ್ಯತ್ಯಾಸ? ಇಲ್ಲಿದೆ ವಿವರ

|

Updated on: Jan 14, 2025 | 4:18 PM

Knowledge story on Market rate and circle rate: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಮಾರ್ಕೆಟ್ ರೇಟ್ ಮತ್ತು ಸರ್ಕಲ್ ರೇಟ್ ಹೆಸರು ಕೇಳಿರಬಹುದು. ಸರ್ಕಲ್ ರೇಟ್ ಎಂಬುದು ಸರ್ಕಾರ ಒಂದು ಪ್ರದೇಶದ ಸ್ಥಿರಾಸ್ತಿಗಳಿಗೆ ನಿಗದಿ ಮಾಡಿರುವ ಕನಿಷ್ಠ ದರ. ಮಾರ್ಕೆಟ್ ರೇಟ್ ಎಂಬುದು ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ ಬದಲಾಗುವ ದರ. ಸರ್ಕಲ್ ರೇಟ್ ಅನ್ನು ಸರ್ಕಾರವು ತೆರಿಗೆ ಗಳಿಕೆಗೆ ನಿಗದಿ ಮಾಡುತ್ತದೆ.

ರಿಯಲ್ ಎಸ್ಟೇಟ್​ನಲ್ಲಿ ಸರ್ಕಲ್ ರೇಟ್ ಎಂದರೇನು? ಮಾರ್ಕೆಟ್ ರೇಟ್​ಗೂ ಅದಕ್ಕೂ ಏನು ವ್ಯತ್ಯಾಸ? ಇಲ್ಲಿದೆ ವಿವರ
ರಿಯಲ್ ಎಸ್ಟೇಟ್
Follow us on

ನೀವು ಸ್ಥಿರಾಸ್ತಿ ಖರೀದಿಸುತ್ತಿದ್ದರೆ ಅಥವಾ ಮಾರುತ್ತಿದ್ದರೆ ಸರ್ಕಲ್ ರೇಟ್ ಅಥವಾ ಪ್ರಾಪರ್ಟಿ ಗೈಡೆನ್ಸ್ ವ್ಯಾಲ್ಯೂ (ಮಾರ್ಗಸೂಚಿ ದರ) ಹೆಸರನ್ನು ಕೇಳಿರುತ್ತೀರಿ. ಒಂದು ನಿರ್ದಿಷ್ಟ ಪ್ರದೇಶಕ್ಕೆ ಸರ್ಕಾರವೇ ಸರ್ಕಲ್ ರೇಟ್ ನಿಗದಿ ಮಾಡುತ್ತದೆ. ಸರ್ಕಲ್ ರೇಟ್ ಎಂಬುದು ಒಂದು ಪ್ರದೇಶದ ಸ್ಥಿರಾಸ್ತಿಯ ಕನಿಷ್ಠ ಮೌಲ್ಯ ಅಥವಾ ಕನಿಷ್ಠ ಬೆಲೆ ಆಗಿರುತ್ತದೆ. ಇದು ಸರ್ಕಾರಕ್ಕೆ ಆದಾಯ ಹೆಚ್ಚಿಸಲು ಮತ್ತು ಕಪ್ಪು ಹಣಕ್ಕೆ ನಿಯಂತ್ರಣ ಹಾಕಲು ಸರ್ಕಾರ ತೆಗೆದುಕೊಂಡಿರುವ ಕ್ರಮ. ಸ್ಥಿರಾಸ್ತಿ ವ್ಯವಹಾರದಲ್ಲಿ ಬಳಸಲಾಗುವ ನೊಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಇದೇ ಸರ್ಕಲ್ ರೇಟ್ ಅಥವಾ ಗೈಡೆನ್ಸ್ ವ್ಯಾಲ್ಯೂ ಆಧಾರದಲ್ಲಿ ನಿಗದಿ ಮಾಡಲಾಗುತ್ತದೆ. ಈ ಸ್ಟ್ಯಾಂಪ್ ಡ್ಯೂಟಿ ಮೂಲಕ ಸರ್ಕಾರಕ್ಕೆ ತೆರಿಗೆ ಪ್ರಾಪ್ತವಾಗುತ್ತದೆ.

ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಗೈಡೆನ್ಸ್ ವ್ಯಾಲ್ಯೂ ಬಹಳ ಕಡಿಮೆ ಇತ್ತು. ಒಂದು ಕೋಟಿ ರೂ ಮಾರುಕಟ್ಟೆ ಮೌಲ್ಯ ಹೊಂದಿರುವ ಸ್ಥಿರಾಸ್ತಿಗೆ ಸರ್ಕಲ್ ರೇಟ್ ಕೆಲ ಲಕ್ಷಗಳಷ್ಟು ಮಾತ್ರವೇ ಇತ್ತು. ಸರ್ಕಲ್ ರೇಟ್​ಗೂ ಮಾರ್ಕೆಟ್ ರೇಟ್​ಗೂ ಅಜಗಜಾಂತರ ವ್ಯತ್ಯಾಸ ಇತ್ತು. ಕೆಲ ವರ್ಷಗಳ ಹಿಂದೆ ಸರ್ಕಾರ ಈ ದರವನ್ನು ಗಣನೀಯವಾಗಿ ಹೆಚ್ಚಿಸಿತು. ಬಹುತೇಕ ಮಾರುಕಟ್ಟೆಗೆ ದರಕ್ಕೆ ಸಮೀಪದಷ್ಟು ಸರ್ಕಲ್ ರೇಟ್ ಹೋಯಿತು. ಎರಡು ವರ್ಷದ ಹಿಂದೆಯೂ ಸರ್ಕಾರ ಮತ್ತೊಮ್ಮೆ ಸರ್ಕಲ್ ರೇಟ್ ಪರಿಷ್ಕರಿಸಿ ಶೇ. 30ರಷ್ಟು ಹೆಚ್ಚಿಸಿದೆ.

ಒಂದೊಂದು ಪ್ರದೇಶಕ್ಕೂ ಸರ್ಕಾರ ಪ್ರತ್ಯೇಕ ಸರ್ಕಲ್ ರೇಟ್ ನಿಗದಿ ಮಾಡುತ್ತದೆ. ಒಂದು ಪ್ರದೇಶದ ಸ್ಥಿರಾಸ್ತಿಗಳಿಗೆ ಇರುವ ಮಾರುಕಟ್ಟೆ ಬೇಡಿಕೆ ಹಾಗೂ ಮೌಲ್ಯವನ್ನು ಗಮನದಲ್ಲಿರಿಸಿಕೊಂಡು ಮಾರ್ಗಸೂಚಿ ದರ ನಿಗದಿ ಮಾಡುತ್ತದೆ ಸರ್ಕಾರ. ಸಾಮಾನ್ಯವಾಗಿ ಸರ್ಕಲ್ ರೇಟ್​ಗಿಂತ ಮಾರ್ಕೆಟ್ ರೇಟ್ ಹೆಚ್ಚಾಗಿರಬಹುದು.

ಇದನ್ನೂ ಓದಿ: Startup India: ಹೊಸ ಉದ್ಯಮಿಗಳಿಗೆ ಕನಸಿನ ಉದ್ಯಮ ಆರಂಭಿಸಲು ಸರ್ಕಾರದಿಂದ ಸಿಗಲಿದೆ ಸೌಲಭ್ಯ, ಅರ್ಜಿ ಸಲ್ಲಿಸುವುದು ಹೇಗೆ?

ಮಾರ್ಕೆಟ್ ರೇಟ್ ಹೇಗೆ ನಿಗದಿಯಾಗುತ್ತದೆ?

ಮಾರುಕಟ್ಟೆ ಮೌಲ್ಯವನ್ನು ಸರ್ಕಾರ ನಿಯಂತ್ರಿಸಲು ಆಗುವುದಿಲ್ಲ. ಮಾರುಕಟ್ಟೆಯೇ ನಿರ್ಧರಿಸುತ್ತದೆ. ಅಂದರೆ ಸ್ವತ್ತುಗಳ ಮಾರಾಟಗಾರರು, ಖರೀದಿದಾರರು, ಮಧ್ಯವರ್ತಿಗಳಿಂದ ಈ ಮಾರುಕಟ್ಟೆ ಮೌಲ್ಯ ನಿರ್ಧರಿತವಾಗಬಹುದು. ಪ್ರದೇಶದ ಪ್ರಾಮುಖ್ಯತೆ, ಸ್ಥಿರಾಸ್ತಿಗಳಿಗೆ ಇರುವ ಬೇಡಿಕೆ ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮಾರಾಟಗಾರರು ತಮ್ಮ ಸ್ವತ್ತುಗಳಿಗೆ ನಿರ್ದಿಷ್ಟ ಬೆಲೆ ಅಪೇಕ್ಷಿಸಬಹುದು. ಖರೀದಿದಾರರಿಗೆ ಬೇರೆ ಉತ್ತಮ ಆಯ್ಕೆಗಳಿಲ್ಲದಿದ್ದರೆ ಆ ಬೆಲೆಗೆ ಒಪ್ಪಬಹುದು, ಅಥವಾ ಚೌಕಾಶಿ ಮಾಡಬಹುದು. ಒಂದು ಪ್ರದೇಶದಲ್ಲಿನ ಸ್ವತ್ತೊಂದು ಎಷ್ಟು ಬೆಲೆಗೆ ಮಾರಾಟವಾಯಿತು ಎಂಬುದು ಇತರ ಸ್ವತ್ತುಗಳ ವ್ಯವಹಾರದ ಮೇಲೆ ಪ್ರಭಾವ ಬೀರುತ್ತದೆ. ಅಂತೆಯೇ ಮಾರುಕಟ್ಟೆ ಮೌಲ್ಯ ಬದಲಾವಣೆ ಆಗುತ್ತಿರುತ್ತದೆ.

ಸರ್ಕಲ್ ರೇಟ್​ಗಿಂತ ಕಡಿಮೆ ಬೆಲೆಗೆ ಸ್ಟ್ಯಾಂಪ್ ಡ್ಯೂಟ್ ಇಟ್ಟರೆ?

ಒಂದು ವೇಳೆ ಸರ್ಕಾರ ನಿಗದಿ ಮಾಡಿದ ಮಾರ್ಗಸೂಚಿ ದರ ಅಥವಾ ಗೈಡೆನ್ಸ್ ವ್ಯಾಲ್ಯೂಗಿಂತ ಕಡಿಮೆ ಬೆಲೆಗೆ ಸ್ಟ್ಯಾಂಪ್ ಡ್ಯೂಟಿ ಮತ್ತು ರಿಜಿಸ್ಟ್ರೇಶನ್ ಫೀಸ್ ಇದ್ದರೆ ಆಗ ಸರ್ಕಲ್ ರೇಟ್ ಮತ್ತು ನೊಂದಣಿ ಶುಲ್ಕ ನಡುವಿನ ವ್ಯತ್ಯಾಸದ ಮೊತ್ತಕ್ಕೆ ಹೆಚ್ಚಿನ ಆದಾಯ ತೆರಿಗೆ ಅನ್ವಯ ಆಗುತ್ತದೆ. ಒಂದು ಉಳಿಸಲು ಹೋಗಿ ದೊಡ್ಡದೊಂದನ್ನು ಕಳೆದುಕೊಂಡಂತಾಗುತ್ತದೆ.

ಇದನ್ನೂ ಓದಿ: ಹೊಸ ವಿಳಾಸಕ್ಕೆ ಹೋಗ್ತಿದ್ದೀರಾ? ನಿಮ್ಮ ಎಲ್​ಪಿಜಿ ಸಂಪರ್ಕವನ್ನು ವರ್ಗಾಯಿಸುವುದು ಹೇಗೆ? ಇಲ್ಲಿದೆ ಮಾಹಿತಿ

ಕೆಲ ಅಪರೂಪದ ಪ್ರಕರಣಗಳಲ್ಲಿ ಮಾರುಕಟ್ಟೆ ದರವು ಸರ್ಕಲ್ ರೇಟ್​ಗಿಂತಲೂ ಕಡಿಮೆಯೇ ಇರಬಹುದು. ಅಂಥ ಸಂದರ್ಭದಲ್ಲಿ ಸರ್ಕಲ್ ರೇಟ್ ಪ್ರಕಾರವೇ ನೊಂದಣಿ ಮತ್ತು ಮುದ್ರಾಂಕ ಶುಲ್ಕ ಪಡೆಯಬೇಕಾಗುತ್ತದೆ. ಈ ರೀತಿ ಮಾರುಕಟ್ಟೆ ಮೌಲ್ಯ ಕಡಿಮೆ ಇರುವ ಪ್ರಕರಣ ಸಾಮಾನ್ಯವಾಗಿ ಇರಲ್ಲ.

ಎಷ್ಟು ಸ್ಟ್ಯಾಂಪ್ ಡ್ಯೂಟಿ ನೀಡಬೇಕು?

20 ಲಕ್ಷ ರೂಗಿಂತ ಕಡಿಮೆ ಮೌಲ್ಯದ ಆಸ್ತಿಗೆ ಶೇ. 2ರಷ್ಟು ಮೊತ್ತವನ್ನು ಸ್ಟ್ಯಾಂಪ್ ಡ್ಯೂಟಿಯಾಗಿ ತೆರಬೇಕಾಗುತ್ತದೆ. ಹಾಗೆಯೇ ಮಾರುಕಟ್ಟೆ ಮೌಲ್ಯದ (ಸರ್ಕಲ್ ರೇಟ್) ಶೇ. 1ರಷ್ಟು ಮೊತ್ತವನ್ನು ನೊಂದಣಿ ಶುಲ್ಕವಾಗಿ ನೀಡಬೇಕಾಗುತ್ತದೆ. ಒಟ್ಟಾರೆ ಶೇ. 3ರಷ್ಟು ಮೊತ್ತವನ್ನು ನೊಂದಣಿ ಮತ್ತು ಮುದ್ರಾಂಕ ಶುಲ್ಕವಾಗಿ ನೀಡಲಾಗುತ್ತದೆ. ಆದರೆ, ಮುದ್ರಾಂಕ ಶುಲ್ಕವು ಆಸ್ತಿಗೆ ಬೆಲೆಗೆ ಅನುಗುಣವಾಗಿ ಬದಲಾಗುತ್ತದೆ.

ಒಂದು ನಿವೇಶನದ ಮಾರುಕಟ್ಟೆ ಬೆಲೆ 30 ಲಕ್ಷ ರೂ ಇರುತ್ತದೆ. ಆ ಪ್ರದೇಶದ ಮಾರ್ಗಸೂಚಿ ದರ 15 ಲಕ್ಷ ರೂ ಇದೆ ಎಂದಿಟ್ಟುಕೊಳ್ಳಿ. ಮಾರ್ಗಸೂಚಿ ದರವನ್ನೇ ಮಾರುಕಟ್ಟೆ ದರವಾಗಿ ಪರಿಗಣಿಸಿದರೂ ನೀವು ಶೇ. 2, ಎಂದರೆ 30,000 ರೂ ಮುದ್ರಾಂಕ ಶುಲ್ಕ ಪಾವತಿಸಬೇಕು.

ಆಸ್ತಿ ಬೆಲೆ ಹೆಚ್ಚಾದಂತೆ ಮುದ್ರಾಂಕ ಶುಲ್ಕವೂ ಏರುತ್ತದೆ. ಸದ್ಯ ಬೆಂಗಳೂರಿನ ಈಗಿನ ಅಧಿಕೃತ ದರಗಳ ಪ್ರಕಾರ 20 ಲಕ್ಷ ರೂ ಒಳಗಿನ ಬೆಲೆಯ ಆಸ್ತಿಗಳಿಗೆ ಮುದ್ರಾಂಕ ಶುಲ್ಕ ಶೇ. 2ರಷ್ಟು ಇದೆ. 20 ಲಕ್ಷ ರೂನಿಂದ 45 ಲಕ್ಷ ರೂ ಒಳಗಿನ ಮೌಲ್ಯದ ಆಸ್ತಿಗಳಿಗೆ ಶೇ. 3; ಹಾಗೂ 45 ಲಕ್ಷ ರೂಗಿಂತ ಹೆಚ್ಚಿನ ಮೌಲ್ಯದ ಆಸ್ತಿಗಳಿಗೆ ಶೇ. 5ರಷ್ಟು ಸ್ಟ್ಯಾಂಪ್ ಡ್ಯೂಟಿ ಇರುತ್ತದೆ. ರಿಜಿಸ್ಟ್ರೇಶನ್ ಫೀ ಎಂಬುದು ಆಸ್ತಿಬೆಲೆಯ ಶೇ. 1ರಷ್ಟಿರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ