ನವದೆಹಲಿ, ನವೆಂಬರ್ 24: ಅಧಿಕೃತವಾಗಿ ನೊಂದಾಯಿಸಲಾಗಿರುವ ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳಲ್ಲಿರುವ ಒಟ್ಟು ಉದ್ಯೋಗಗಳ ಸಂಖ್ಯೆ 23 ಕೋಟಿ ಗಡಿ ದಾಟಿದೆ. ಎಂಎಸ್ಎಂಇ ಸಚಿವಾಲಯದಿಂದ ಇತ್ತೀಚೆಗೆ ಬಿಡುಗಡೆಯಾದ ದತ್ತಾಂಶದ ಪ್ರಕಾರ ಸರ್ಕಾರದ ಉದ್ಯಮ್ ಪೋರ್ಟಲ್ನಲ್ಲಿ 5.49 ಕೋಟಿ ಎಂಎಸ್ಎಂಇಗಳು ನೊಂದಾಯಿತವಾಗಿವೆ. ಇವುಗಳಲ್ಲೆದರಲ್ಲೂ ಇರುವ ಉದ್ಯೋಗಿಗಳ ಸಂಖ್ಯೆ 23.14 ಕೋಟಿ ಎನ್ನಲಾಗಿದೆ.
ಕಳೆದ 15 ತಿಂಗಳಲ್ಲಿ ಈ ಎಂಎಸ್ಎಂಇಗಳಲ್ಲಿನ ಉದ್ಯೋಗಿಗಳ ಸಂಖ್ಯೆ 10 ಕೋಟಿಯಷ್ಟು ಹೆಚ್ಚಾಗಿದೆ. 2023ರ ಆಗಸ್ಟ್ ತಿಂಗಳಲ್ಲಿ ನೊಂದಾಯಿತವಾಗಿದ್ದ 2.33 ಕೋಟಿ ಎಂಎಸ್ಎಂಇಗಳಲ್ಲಿ 13.15 ಕೋಟಿ ಉದ್ಯೋಗಗಳಿದ್ದವು. ಈಗ ನೊಂದಾಯಿತ ಉದ್ದಿಮೆಗಳ ಸಂಖ್ಯೆಯೂ ಹೆಚ್ಚಿದೆ. ಉದ್ಯೋಗಗಳ ಸಂಖ್ಯೆಯೂ ಹೆಚ್ಚಿದೆ.
ಅಸಂಘಟಿತ ವಲಯಕ್ಕೆ ಸೇರಿದ ಅಥವಾ ಅನೌಪಚಾರಿಕ ಅತಿಸಣ್ಣ ಉದ್ದಿಮೆಗಳಲ್ಲಿ ಉದ್ಯಮ್ ಪೋರ್ಟಲ್ಗೆ ನೊಂದಾಯಿತವಾಗಿರುವಂಥವು 2.38 ಕೋಟಿ. ಇಷ್ಟು ಕಿರು ಉದ್ದಿಮೆಗಳಲ್ಲಿ 2.84 ಕೋಟಿ ಉದ್ಯೋಗಗಳಿವೆ. ಒಟ್ಟಾರೆ ನೊಂದಾಯಿತ 5.49 ಕೋಟಿ ಎಂಎಸ್ಎಂಇಗಳಲ್ಲಿ ಅತಿಸಣ್ಣ ಉದ್ದಿಮೆಗಳ ಸಂಖ್ಯೆಯೇ 5.41 ಕೋಟಿ ಇದೆ. ಸಣ್ಣ ಗಾತ್ರದ ಉದ್ದಿಮೆಗಳ ಸಂಖ್ಯೆ 7.27 ಲಕ್ಷ ಇದ್ದರೆ, ಮಧ್ಯಮ ಉದ್ದಿಮೆಗಳ ಸಂಖ್ಯೆ 68,682 ಇದೆ.
ಇದನ್ನೂ ಓದಿ: ಭಾರತದ ಸ್ಟಾರ್ಟಪ್ಗಳಿಗೆ ಈ ವಾರ ಫಂಡಿಂಗ್ ಸುಗ್ಗಿ; ಶೇ. 226ರಷ್ಟು ಫಂಡಿಂಗ್ ಹೆಚ್ಚಳ
ಆರ್ಬಿಐ ದತ್ತಾಂಶದ ಪ್ರಕಾರ 2023-24ರ ಹಣಕಾಸು ವರ್ಷದಲ್ಲಿ ದೇಶದಲ್ಲಿ 4.67 ಕೋಟಿ ಉದ್ಯೋಗಗಳ ಸೃಷ್ಟಿಯಾಗಿದೆ. ಇದರಿಂದ ಒಟ್ಟು ಉದ್ಯೋಗಗಳ ಸಂಖ್ಯೆ 64.33 ಕೋಟಿಗೆ ಏರಿದೆ. ಕೃಷಿ ಕ್ಷೇತ್ರದಲ್ಲಿನ ಉದ್ಯೋಗಗಳ ಪಾಲು ಬರೋಬ್ಬರಿ ಶೇ. 45ರಷ್ಟಿದೆ. ಇದು ಆರ್ಥಿಕ ಸಮೀಕ್ಷೆಯಲ್ಲಿ ಕಂಡುಕೊಳ್ಳಲಾದ ಸಂಖ್ಯೆ. ಅದರ ಪ್ರಕಾರ ಸುಮಾರು 25ರಿಂದ 29 ಕೋಟಿಯಷ್ಟು ಉದ್ಯೋಗಗಳು ಕೃಷಿ ವಲಯದಲ್ಲಿ ಇವೆ.
ಸಣ್ಣ ಉದ್ದಿಮೆಗಳಿಗೆ ಸರ್ಕಾರ ಸಾಲದ ವ್ಯವಸ್ಥೆಯಿಂದ ಹಿಡಿದು ವಿವಿಧ ಕ್ರಮಗಳ ಮೂಲಕ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ. ಆದರೂ ಕೆಲ ಪ್ರಮಾಣದ ಉದ್ದಿಮೆಗಳು ಹೆಚ್ಚು ಕಾಲ ಸಾಗುವುದಿಲ್ಲ. 2020ರಿಂದ ಈಚೆಗೆ ಸುಮಾರು 50,000 ಸಮೀಪದಷ್ಟು ಎಂಎಸ್ಎಂಇಗಳು ಮುಚ್ಚಿದ್ದು, ಇದರಿಂದ ಮೂರು ಲಕ್ಷಕ್ಕೂ ಹೆಚ್ಚು ಉದ್ಯೋಗ ನಷ್ಟವೂ ಆಗಿರುವುದು ಕಂಡು ಬಂದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ