ರಿಲಾಯನ್ಸ್ ಗ್ರೂಪ್​ನಲ್ಲಿ ಒಂದು ವರ್ಷದದಲ್ಲಿ 42,000 ಉದ್ಯೋಗಿಗಳ ಸಂಖ್ಯೆ ಇಳಿಮುಖ

|

Updated on: Aug 12, 2024 | 6:11 PM

Reliance group employee strength decreases: ಮುಕೇಶ್ ಅಂಬಾನಿ ಮಾಲಕತ್ವದ ರಿಲಾಯನ್ಸ್ ಗ್ರೂಪ್​ನ ವಿವಿಧ ಉದ್ದಿಮೆಗಳಲ್ಲಿ ಒಟ್ಟಾರೆ ಉದ್ಯೋಗಿಗಳ ಸಂಖ್ಯೆ ಕಡಿಮೆ ಆಗಿದೆ. 2022-23ರಲ್ಲಿ 3.89 ಲಕ್ಷದಷ್ಟಿದ್ದು ಉದ್ಯೋಗಿಗಳ ಸಂಖ್ಯೆ 2023-24ರಲ್ಲಿ 3.47 ಲಕ್ಷಕ್ಕೆ ಇಳಿದಿದೆ. ಉದ್ಯೋಗಿಗಳ ಸಂಖ್ಯೆ 42,000ದಷ್ಟು ಕಡಿಮೆ ಆಗಿದೆ. ರಿಲಾಯನ್ಸ್ ರೀಟೇಲ್ ಸಂಸ್ಥೆಯೊಂದರಲ್ಲೇ 38,000 ಉದ್ಯೋಗಿಗಳ ಸಂಖ್ಯೆ ಕುಸಿದಿದೆ.

ರಿಲಾಯನ್ಸ್ ಗ್ರೂಪ್​ನಲ್ಲಿ ಒಂದು ವರ್ಷದದಲ್ಲಿ 42,000 ಉದ್ಯೋಗಿಗಳ ಸಂಖ್ಯೆ ಇಳಿಮುಖ
ರಿಲಾಯನ್ಸ್ ರೀಟೇಲ್
Follow us on

ಮುಂಬೈ, ಆಗಸ್ಟ್ 12: ಭಾರತದ ಅತಿದೊಡ್ಡ ಸಂಸ್ಥೆಯಾದ ರಿಲಾಯನ್ಸ್ ಗ್ರೂಪ್​ನಲ್ಲಿ ಉದ್ಯೋಗಿಗಳ ಸಂಖ್ಯೆ ಇಳಿಮುಖವಾಗಿದೆ. ತನ್ನ ವಿವಿಧ ಉದ್ದಿಮೆಗಳ ನಡುವೆ ಸಮನ್ವಯತೆ ತರುವ ನಿಟ್ಟಿನಲ್ಲಿ ರಿಲಾಯನ್ಸ್ ಗ್ರೂಪ್ ಅನಗತ್ಯ ಹುದ್ದೆಗಳನ್ನು ಕೈಬಿಡುವ ಕೆಲಸ ಮಾಡುತ್ತಿದೆ. ಇದರಿಂದಾಗಿ ಸಾವಿರಾರು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಜೊತೆಗೆ ಹೊಸ ನೇಮಕಾತಿಗಳೂ ಕೂಡ ಕಡಿಮೆ ಆಗುತ್ತಿವೆ. 2022-23ರ ಹಣಕಾಸು ವರ್ಷದ ಕೊನೆಯಲ್ಲಿ ರಿಲಾಯನ್ಸ್ ಗ್ರೂಪ್​ನ ವಿವಿಧ ಉದ್ದಿಮೆಗಳಲ್ಲಿ ಇದ್ದ ಒಟ್ಟು ಉದ್ಯೋಗಿಗಳ ಸಂಖ್ಯೆ 3,89,414 ಇತ್ತು. 2023-24ರ ಹಣಕಾಸು ವರ್ಷದ ಕೊನೆಯಲ್ಲಿ ಉದ್ಯೋಗಿಗಳ ಸಂಖ್ಯೆ 3,47,362ಕ್ಕೆ ಇಳಿದಿದೆ. ಅಂದರೆ 42,052 ಉದ್ಯೋಗಿಗಳ ಸಂಖ್ಯೆ ಕಡಿಮೆ ಆಗಿದೆ.

2022-23ರ ವರ್ಷದಲ್ಲಿ ರಿಲಾಯನ್ಸ್ ಗ್ರೂಪ್ ತನ್ನ ವಿವಿಧ ಉದ್ದಿಮೆಗಳಲ್ಲಿ 2,62,558 ಹೊಸ ನೇಮಕಾತಿಗಳನ್ನು ಮಾಡಿತ್ತು. 30 ವರ್ಷದೊಳಗಿನ ವಯಸ್ಸಿನ ಹೊಸ ಉದ್ಯೋಗಿಗಳ ಪ್ರಮಾಣ ಶೇ. 81.8ರಷ್ಟಿದ್ದರೆ, ಮಹಿಳೆಯರ ಪ್ರಮಾಣ ಶೇ. 24ರಷ್ಟಿತ್ತು. ಆದರೆ, 2023-24ರಲ್ಲಿ ಹೊಸ ಉದ್ಯೋಗಿಗಳ ನೇಮಕಾತಿ ಆದ ಸಂಖ್ಯೆ 1.71 ಲಕ್ಷ ಎಂದು ಹೇಳಲಾಗುತ್ತಿದೆ.

ರಿಲಾಯನ್ಸ್ ಗ್ರೂಪ್​ನ ರೀಟೇಲ್ ವಿಭಾಗದ ಉದ್ದಿಮೆಯಲ್ಲಿ ಉದ್ಯೋಗಿಗಳ ಸಂಖ್ಯೆ ಇಳಿಮುಖವಾಗಿರುವುದು. ಇದೇ ಉದ್ದಿಮೆಯಲ್ಲಿ ಅತಿಹೆಚ್ಚು ಉದ್ಯೋಗಿಗಳು ಇರುವುದು. 2.45 ಲಕ್ಷ ಇದ್ದ ಉದ್ಯೋಗಿಗಳ ಸಂಖ್ಯೆ ಈಗ 2.07 ಲಕ್ಷಕ್ಕೆ ಇಳಿದಿದೆ. ರಿಲಾಯನ್ಸ್ ರೀಟೇಲ್​ನಲ್ಲಿ 38,000 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: ವಯಸ್ಸಾಗಿರುವ ಮನೆ ಮಾಲೀಕರಿಗೆ ಈ ಮೂರು ಕಷ್ಟಗಳು: ಸಿಇಒ ರಾಧಿಕಾ ಗುಪ್ತಾ ತೆರೆದಿಟ್ಟ ವಾಸ್ತವ ಸಂಗತಿ

ಭಾರತದ ಅತಿದೊಡ್ಡ ರೀಟೇಲ್ ಚೇನ್ ಸಂಸ್ಥೆ ಎನಿಸಿದ ರಿಲಾಯನ್ಸ್ ರೀಟೇಲ್​ನ ಆದಾಯ ಮತ್ತು ಲಾಭ ಹೆಚ್ಚುತ್ತಿದೆ. ತೆರಿಗೆ ಕಳೆದು ಉಳಿಯುವ ನಿವ್ವಳ ಲಾಭ 2023-24ರಲ್ಲಿ ಮೊದಲ ಬಾರಿಗೆ 10,000 ಕೋಟಿ ರೂ ಗಡಿ ಮುಟ್ಟಿದೆ.

ರಿಲಾಯನ್ಸ್​ನ ರೀಟೇಲ್ ಮಳಿಗೆಗಳಿಗೆ ಭೇಟಿ ಕೊಡುವ ಗ್ರಾಹಕರ ಸಂಖ್ಯೆ ಹೆಚ್ಚುತ್ತಿದೆ. ನೊಂದಾಯಿತ ಗ್ರಾಹಕರ ಬಳಗ ಹೆಚ್ಚುತ್ತಿದೆ. ಆದರೆ, ಕಳೆದ ಎರಡು ತ್ರೈಮಾಸಿಕ ಅವಧಿಯಲ್ಲಿ ಈ ಮಳಿಗೆಗಳಲ್ಲಿ ವಹಿವಾಟು ಸಂಖ್ಯೆಯಲ್ಲಿ ಏರಿಕೆ ಆಗುವುದು ಕಡಿಮೆ ಆಗಿದೆ. ಅಂದರೆ, ಮಳಿಗೆಗೆ ಹೋಗುವವರ ಸಂಖ್ಯೆ ಹೆಚ್ಚಿದರೂ ವ್ಯಾಪಾರ ಮಾಡುವವರ ಸಂಖ್ಯೆ ಕಡಿಮೆ ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ