ರಿಲಯನ್ಸ್​ನ ಸೆಲ್ ಮತ್ತು ಬೆಸ್ ತಯಾರಿಕೆಯ ಸಾಮರ್ಥ್ಯ 120 GWhಕ್ಕೆ; ಬೆಸ್ ಯಾಕೆ ಮುಖ್ಯ?

Reliance plans for scaling Battery Gigafactory: ರಿಲಾಯನ್ಸ್ ಇಂಡಸ್ಟ್ರೀಸ್​ನ 49ನೇ ಎಜಿಎಂ ಸಭೆಯಲ್ಲಿ ಹಲವು ಮಹತ್ವದ ಯೋಜನೆಗಳನ್ನು ಘೋಷಿಸಲಾಗಿದೆ. ಈ ಪೈಕಿ ಇಂಧನ ಉತ್ಪಾದನೆ ಹೆಚ್ಚಿಸುವ ಯೋಜನೆ ಬಹಳ ಮುಖ್ಯ. ರಿಲಯನ್ಸ್ ತನ್ನ ಬೆಸ್ ಮತ್ತು ಸೆಲ್ ಮ್ಯಾನುಫ್ಯಾಕ್ಚರಿಂಗ್ ಸಾಮರ್ಥ್ಯವನ್ನು ವಾರ್ಷಿಕ 120 GWh ಗೆ ಏರಿಸುವ ಗುರಿ ಘೋಷಿಸಿದೆ.

ರಿಲಯನ್ಸ್​ನ ಸೆಲ್ ಮತ್ತು ಬೆಸ್ ತಯಾರಿಕೆಯ ಸಾಮರ್ಥ್ಯ 120 GWhಕ್ಕೆ; ಬೆಸ್ ಯಾಕೆ ಮುಖ್ಯ?
ಅನಂತ್ ಅಂಬಾನಿ
Image Credit source: Youtube @RelianceUpdates

Updated on: Jun 19, 2026 | 6:53 PM

ಮುಂಬೈ, ಜೂನ್ 19: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ತನ್ನ ಹಸಿರು ಇಂಧನ (Green Energy) ಮಹತ್ವಾಕಾಂಕ್ಷೆಯತ್ತ ಮತ್ತೊಂದು ಪ್ರಮುಖ ಹೆಜ್ಜೆ ಇಟ್ಟಿದೆ. ಕಂಪನಿಯು ತನ್ನ ಬ್ಯಾಟರಿ ಗಿಗಾಫ್ಯಾಕ್ಟರಿ ಸಾಮರ್ಥ್ಯವನ್ನು ವಿಸ್ತರಿಸುವುದರ ಜೊತೆಗೆ ಸೌರಶಕ್ತಿ ಉತ್ಪಾದನಾ ಘಟಕಗಳನ್ನೂ ಕಾರ್ಯಾರಂಭ ಮಾಡಿದೆ. ರಿಲಯನ್ಸ್ ತನ್ನ ಬ್ಯಾಟರಿ ಉತ್ಪಾದನಾ ಸಾಮರ್ಥ್ಯವನ್ನು 120 GWh (ಗಿಗಾವ್ಯಾಟ್ ಅವರ್) ಗೆ ಹೆಚ್ಚಿಸಲು ನಿರ್ಧರಿಸಿದೆ. ಇದು ಭಾರತದ ಇಂಧನ ಶೇಖರಣಾ ಸಾಮರ್ಥ್ಯವನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿಸಲು ಸಹಕಾರಿಯಾಗಲಿದೆ.

ಕಂಪನಿಯು ತನ್ನ ಅತ್ಯಾಧುನಿಕ ಸೌರಶಕ್ತಿ ಉತ್ಪಾದನಾ ಮಾರ್ಗಗಳನ್ನು (Solar Manufacturing Lines) ಕಾರ್ಯಾರಂಭ ಮಾಡಿದೆ. ಇದು ಭಾರತದ ಸೋಲಾರ್ ಪ್ಯಾನಲ್ ಉತ್ಪಾದನಾ ಸಾಮರ್ಥ್ಯಕ್ಕೆ ದೊಡ್ಡ ಬಲ ತುಂಬಲಿದೆ. ರಿಲಯನ್ಸ್‌ನ ಈ ಕ್ರಮವು ಪ್ರಧಾನವಾಗಿ ಪಳೆಯುಳಿಕೆ ಇಂಧನಗಳ (Fossil Fuel) ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಮತ್ತು ಪರಿಸರಸ್ನೇಹಿ ಇಂಧನ ಮೂಲಗಳಿಗೆ ಪರಿವರ್ತನೆ ಹೊಂದುವ ದೇಶದ ಗುರಿಯನ್ನು ಬೆಂಬಲಿಸುತ್ತದೆ. ರಿಲಾಯನ್ಸ್ ಇಂಡಸ್ಟ್ರೀಸ್​ನ 49ನೇ ವಾರ್ಷಿಕ ಮಹಾಸಭೆಯಲ್ಲಿ ಛೇರ್ಮನ್ ಮುಕೇಶ್ ಅಂಬಾನಿ ಹಾಗೂ ಅವರ ಪುತ್ರ ಮತ್ತು ಆರ್​ಐಎಲ್​ನ ಡೈರೆಕ್ಟರ್ ಅನಂತ್ ಅಂಬಾನಿ ಅವರು ಈ ಮಾಹಿತಿ ನೀಡಿದರು.

ಇದನ್ನೂ ಓದಿ: ಜಿಯೋ ಐಪಿಒಗೆ ಸಜ್ಜು; 27 ಕೋಟಿ ಹೊಸ ಈಕ್ವಿಟಿ ಷೇರುಗಳ ಹಂಚಿಕೆ; ಆರ್​​ಐಎಲ್ ಎಜಿಎಂ ಸಭೆಯಲ್ಲಿ ಅಂಬಾನಿ ಮಾಹಿತಿ

ಇಂಧನ ಸ್ವಾವಲಂಬನೆಗೆ ಬೆಸ್ ಬಹಳ ಮುಖ್ಯ

ರಿಲಯನ್ಸ್ ಸಂಸ್ಥೆಯು ಈ ವರ್ಷದ ಕೊನೆಯಲ್ಲಿ 40GWh ಸಾಮರ್ಥ್ಯದ ಬೆಸ್ ಮತ್ತು ಸೆಲ್ ಗಿಗಾಫ್ಯಾಕ್ಟರಿ ನಿರ್ಮಿಸಲಿದೆ. ಒಟ್ಟೂ ಸಾಮರ್ಥ್ಯವನ್ನು 120GWh ಗೆ ಏರಿಸುವುದು ರಿಲಾಯನ್ಸ್​ನ ಗುರಿ. ಇಲ್ಲಿ ಬೆಸ್ (BESS) ಎಂದರೆ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಂ. ಇದು ತಡೆರಹಿತ ವಿದ್ಯುತ್ ಸರಬರಾಜು ಮಾಡಲು ಇರುವ ಬಹಳ ಮುಖ್ಯ ವ್ಯವಸ್ಥೆ.

ಬೆಸ್ ಸಿಸ್ಟಂಗಳು ಹೆಚ್ಚುವರಿ ವಿದ್ಯುತ್ ಅನ್ನು ಬ್ಯಾಟರಿ ರೂಪದಲ್ಲಿ ಹಿಡಿದಿಡುತ್ತವೆ. ವಿದ್ಯುತ್ ಪೂರೈಕೆ ಕಡಿಮೆ ಆದಾಗ ಇದನ್ನು ಬಳಸಬಹುದು. ಈ ಬೆಸ್ ಸಿಸ್ಟಂಗಳು ವಿದ್ಯುತ್ ಗ್ರಿಡ್ ಮೇಲಿನ ಒತ್ತಡ ಕಡಿಮೆ ಮಾಡುತ್ತವೆ, ಮತ್ತು ಇಂಧನ ಪೋಲಾಗುವುದನ್ನು ತಪ್ಪಿಸುತ್ತದೆ.

ರಿಲಾಯನ್ಸ್ ಯೋಜನೆಯ ಪರಿಣಾಮಗಳೇನು?

ವಿದೇಶಿ ಸೋಲಾರ್ ಸೆಲ್ ಮತ್ತು ಬ್ಯಾಟರಿಗಳ ಆಮದನ್ನು ಕಡಿಮೆ ಮಾಡಿ, ದೇಶೀಯವಾಗಿ ಇಂಧನ ಸಾಧನಗಳನ್ನು ಉತ್ಪಾದಿಸಲು ಈ ಘಟಕಗಳು ನೆರವಾಗಲಿವೆ. ಸ್ವದೇಶಿ ಉತ್ಪಾದನೆಯು ದೀರ್ಘಾವಧಿಯಲ್ಲಿ ಸೌರಶಕ್ತಿ ಮತ್ತು ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Reliance AGM 2026: ರಿಲಯನ್ಸ್ ಇಂಡಸ್ಟ್ರೀಸ್​ನಿಂದ ಭರ್ಜರಿ ಬಂಡವಾಳ ವೆಚ್ಚ; ಒಂದು ವರ್ಷದಲ್ಲಿ 1.44 ಲಕ್ಷ ಕೋಟಿ ರೂ ವೆಚ್ಚ

ಅಹಮದಾಬಾದ್‌ನ ಧೀರೂಭಾಯಿ ಅಂಬಾನಿ ಗ್ರೀನ್ ಎನರ್ಜಿ ಗಿಗಾ ಕಾಂಪ್ಲೆಕ್ಸ್‌ನಲ್ಲಿ ನಡೆಯುತ್ತಿರುವ ಈ ಯೋಜನೆಗಳು ಸಾವಿರಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ರಿಲಯನ್ಸ್‌ನ ಈ ಹೂಡಿಕೆಯು ಭಾರತವನ್ನು ಜಾಗತಿಕ ಹಸಿರು ಇಂಧನ ಕೇಂದ್ರವನ್ನಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:48 pm, Fri, 19 June 26

Follow Us