
ನವದೆಹಲಿ, ನವೆಂಬರ್ 18: ಜಾಗತಿಕ ಆರ್ಥಿಕ ಅಸ್ಥಿರತೆ ಹಾಗೂ ಶ್ರೀಮಂತ ರಾಷ್ಟ್ರಗಳ ಸಾಲದ ಬಿಗಿಯಾದ ವಾತಾವರಣದಿಂದಾಗಿ, ಅಭಿವೃದ್ಧಿಶೀಲ ಮತ್ತು ಬಡ ರಾಷ್ಟ್ರಗಳ ಒಟ್ಟು ಬಾಕಿ ಸಾಲವು ದಾಖಲೆಯ 9.4 ಟ್ರಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ಅಂತರರಾಷ್ಟ್ರೀಯ ಹಣಕಾಸು ಮಾರುಕಟ್ಟೆಯಲ್ಲಿ ಸಾಲ ಪಡೆಯುವುದು ದುಬಾರಿಯಾಗಿರುವುದರಿಂದ ಬಡ ದೇಶಗಳು ತೀವ್ರ ಹಣಕಾಸು ಬಿಕ್ಕಟ್ಟನ್ನು ಎದುರಿಸುವಂತಾಗಿದೆ.
ಸಾಲ ಮರುಪಾವತಿ ಮತ್ತು ಬಡ್ಡಿ ಪಾವತಿಸುವುದಕ್ಕೇ ಈ ದೇಶಗಳು ತಮ್ಮ ಆದಾಯದ ಸಿಂಹಪಾಲು ವೆಚ್ಚ ಮಾಡುತ್ತಿರುವುದರಿಂದ, ಆರೋಗ್ಯ, ಶಿಕ್ಷಣ ಮತ್ತು ಮೂಲಸೌಕರ್ಯ ಅಭಿವೃದ್ಧಿಯಂತಹ ಜನಪರ ಕಾರ್ಯಗಳಿಗೆ ಹಣದ ಕೊರತೆ ಉಂಟಾಗಿದೆ.
ಮುಂದುವರಿದ ಮತ್ತು ಶ್ರೀಮಂತ ದೇಶಗಳ ಸರ್ಕಾರಗಳು ಬೇರೆ ಬೇರೆ ಕಾರಣಗಳಿಗೆ ವಿಪರೀತ ಸಾಲ ಮಾಡುತ್ತಿವೆ. ಆ ದೇಶಗಳ ವಿತ್ತೀಯ ಕೊರತೆ ಹಿಗ್ಗುತ್ತಲೇ ಇದೆ. ಅಮೆರಿಕದ ಸಾಲವಂತೂ 40 ಟ್ರಿಲಿಯನ್ ಡಾಲರ್ ದಾಟಿಹೋಗಿದೆ. ಅದರ ಒಟ್ಟು ರಾಷ್ಟ್ರೀಯ ಉತ್ಪನ್ನ ಮೌಲ್ಯಕ್ಕಿಂತ ಹೆಚ್ಚು ಸಾಲ ಇದೆ. ಫ್ರಾನ್ಸ್, ಜಪಾನ್ ಇತ್ಯಾದಿ ಇತರ ಕೆಲ ಶ್ರೀಮಂತ ದೇಶಗಳದ್ದೂ ಇದೇ ಕಥೆ.
ಇದನ್ನೂ ಓದಿ: ಭಾರತದಲ್ಲಿ ಸ್ವಚ್ಛ ಇಂಧನ ಘಟಕಗಳಿಗೆ ಅಮೇಜಾನ್ ಹೆಚ್ಚುವರಿ 7 ಬಿಲಿಯನ್ ಡಾಲರ್ ಹೂಡಿಕೆ; ಕರ್ನಾಟಕದಲ್ಲಿ 2 ಯೋಜನೆಗಳು
ಇದರಿಂದ ಶ್ರೀಮಂತ ದೇಶಗಳ ಸರ್ಕಾರಿ ಬಾಂಡ್ಗಳನ್ನು ಖರೀದಿಸಿ ಸಾಲ ನೀಡಿದ ಹೂಡಿಕೆದಾರರು ಆತಂಕಗೊಂಡಿದ್ದಾರೆ. ಅವರ ಸಾಲ ಉಳಿಸಿಕೊಳ್ಳಲು ಹೆಚ್ಚಿನ ಬಡ್ಡಿ ತೆರಲು ಈ ದೇಶಗಳು ಸಿದ್ಧವಿವೆ. ಇದರಿಂದ ಅಮೆರಿಕ ಇತ್ಯಾದಿ ದೇಶಗಳ ಬಾಂಡ್ ಯೀಲ್ಡ್ ಹೆಚ್ಚಾಗಿದೆ.
ಅಮೆರಿಕದ ಬಾಂಡ್ ಯೀಲ್ಡ್ ಹೆಚ್ಚಾದರೆ, ಹೂಡಿಕೆದಾರರ ಹಣ ಅತ್ತ ಸಾಗುತ್ತದೆ. ರಿಸ್ಕ್ ಹೆಚ್ಚು ಇರುವ ಬಡ ಮತ್ತು ಅಭಿವೃದ್ಧಿಶೀಲ ದೇಶಗಳತ್ತ ಮುಖ ಮಾಡುವುದು ಕಡಿಮೆ. ಹೀಗಾಗಿ, ಈ ಬಡ ದೇಶಗಳ ಸರ್ಕಾರಗಳು ಹೆಚ್ಚು ಬಡ್ಡಿದರ ಆಫರ್ ಮಾಡಬೇಕಾಗುತ್ತದೆ. ಕೀನ್ಯಾ, ನೈಜೀರಿಯಾದಂತಹ ದೇಶಗಳು ಶೇ. 7.5ರಿಂದ ಶೇ. 10 ಹಾಗು ಅದಕ್ಕಿಂತಲೂ ಹೆಚ್ಚು ಬಡ್ಡಿ ಆಫರ್ ಮಾಡಿ, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳನ್ನು ಆಕರ್ಷಿಸಲು ಯತ್ನಿಸುತ್ತವೆ.
ಇಷ್ಟು ವಿಪರೀತ ಬಡ್ಡಿಗೆ ಸಾಲ ಪಡೆಯುವ ಈ ದೇಶಗಳು ಅದನ್ನು ಮರುಪಾವತಿಸುವಷ್ಟರಲ್ಲಿ ಹೈರಾಣಾಗುತ್ತವೆ. ಒಂದು ವರದಿ ಪ್ರಕಾರ 2022ರಿಂದ 2025ರವ ಅವಧಿಯಲ್ಲಿ ಅಭಿವೃದ್ಧಿ ದೇಶಗಳು ಪಡೆದ ಹೊಸ ಸಾಲಕ್ಕಿಂತ 436 ಬಿಲಿಯನ್ ಡಾಲರ್ನಷ್ಟು ಹೆಚ್ಚು ಮೊತ್ತವನ್ನು ಸಾಲ ಹಾಗೂ ಬಡ್ಡಿ ಪಾವತಿಗೆ ವ್ಯಯಿಸಿವೆಯಂತೆ.
ಇದನ್ನೂ ಓದಿ: ಎನ್ವಿಡಿಯಾ ನನ್ನ ಜೀವಮಾನದ ಕಾರ್ಯ; ನಾನು ತಪ್ಪು ಮಾಡಿಬಿಟ್ಟೆ ಎಂದ ಜೆನ್ಸೆನ್ ಹುವಾಂಗ್; ವಾಪಸ್ ಕರೆಸಿಕೊಳ್ಳಲು ಕಂಪನಿ ಹಿಂದೇಟು
ಬಡ ದೇಶಗಳು ತಮ್ಮ ಸಾಲ ಮತ್ತು ಬಡ್ಡಿ ಪಾವತಿಸಲು ಹೊಸ ಸಾಲ ಮಾಡಬೇಕಾದ ಸ್ಥಿತಿ ಇದೆ. ಸರ್ಕಾರಕ್ಕೆ ಬರುವ ಆದಾಯದಲ್ಲಿ ಹೆಚ್ಚಿನ ಹಣವು ಬಡ್ಡಿ, ಅಸಲು ಕಟ್ಟಲೇ ವ್ಯಯವಾಗುತ್ತದೆ. ಅಭಿವೃದ್ಧಿ ಯೋಜನೆಗಳಿಗೆ ಹಣದ ಕೊರತೆ ಆಗುತ್ತಿದೆ. ಹೀಗಾಗಿ, ಆರೋಗ್ಯ ಮತ್ತು ಶಿಕ್ಷಣ ವೆಚ್ಚಗಳಿಗೆ ಸರ್ಕಾರಗಳು ಕತ್ತರಿ ಹಾಕುವಂತಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ