
ಚೆನ್ನೈ, ಅಕ್ಟೋಬರ್ 29: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ವೇಗವಾಗಿ ಬೆಳೆಯುತ್ತಿದ್ದು, ಇದು ಉದ್ಯೋಗ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಪರಿಣಾಮ ಬೀರಲಿದೆ ಎಂದು ಜೊಹೋ (Zoho) ಸಹ-ಸಂಸ್ಥಾಪಕ ಮತ್ತು ಮುಖ್ಯ ವಿಜ್ಞಾನಿ ಶ್ರೀಧರ್ ವೆಂಬು ಎಚ್ಚರಿಕೆ ನೀಡಿದ್ದಾರೆ. ಎಐ ನೆರವಿನಿಂದ ಒಬ್ಬನೇ ವ್ಯಕ್ತಿಯು ಹತ್ತು ಜನರ ಕೆಲಸವನ್ನು ಸುಲಭವಾಗಿ ಮಾಡಬಹುದಾದ ದಿನಗಳು ಬಂದಿವೆ ಎಂದು ಅವರು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣವಾದ ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿರುವ ಶ್ರೀಧರ್ ವೆಂಬು, ಕಂಪ್ಯೂಟರ್ ಮೂಲಕ ಮಾಡುವ ಯಾವುದೇ ಕೆಲಸದಲ್ಲಿ ಈಗ ಈ ಅಪಾಯವಿದೆ ಎಂದು ತಿಳಿಸಿದ್ದಾರೆ. “AI ಬಳಸಿ ಒಬ್ಬ ಸ್ಮಾರ್ಟ್ ವ್ಯಕ್ತಿ ಈಗ 10 ಜನರ ಕೆಲಸವನ್ನು ಮಾಡಬಹುದು, ಈ ಅಪಾಯವು ಈಗ ಹೆಚ್ಚು ನಿಜವಾಗುತ್ತಿದೆ” ಎಂದು ಅವರು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಭಾರತ-ಅಮೆರಿಕ ವ್ಯಾಪಾರ ಒಪ್ಪಂದ: ಭಾರತೀಯ ರೈತರ ಹಿತಾಸಕ್ತಿ ಬಲಿಕೊಡುವುದಿಲ್ಲ ಎಂದ ವಾಣಿಜ್ಯ ಸಚಿವ
ಒಬ್ಬ ಸ್ಮಾರ್ಟ್ ವ್ಯಕ್ತಿ 10 ಜನರ ಕೆಲಸವನ್ನು ಮಾಡುತ್ತಾನೆ ಎಂದರೆ ಉಳಿದ 9 ಮಂದಿಗೆ ಕೆಲಸವೇ ಇರುವುದಿಲ್ಲ ಎಂದಲ್ಲ. ಹಿಂದೆ ಸಾಫ್ಟ್‌ವೇರ್ ಎಂಜಿನಿಯರ್‌ಗಳು ಅಥವಾ ಡಿಜಿಟಲ್ ಮಾರ್ಕೆಟಿಂಗ್ ತಜ್ಞರನ್ನು ನೇಮಿಸಿಕೊಳ್ಳಲು ಸಾಧ್ಯವಿಲ್ಲದ ಸಣ್ಣ ಕೈಗಾರಿಕೆಗಳು ಮತ್ತು ವ್ಯವಹಾರಗಳು ಈಗ ಕಡಿಮೆ ವೆಚ್ಚದಲ್ಲಿ ಅಂತಹ ಸೇವೆಗಳನ್ನು ಪಡೆದುಕೊಳ್ಳಲು AI ಅವಕಾಶ ಮಾಡಿಕೊಡಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಶ್ರೀಧರ್ ವೆಂಬು ಅವರ ಎಕ್ಸ್ ಪೋಸ್ಟ್
ಈ ಬದಲಾವಣೆಯು ಸಂಪೂರ್ಣ ಆರ್ಥಿಕತೆಯಲ್ಲಿ ದೊಡ್ಡ ಮಟ್ಟದ ಮರುಸಮತೋಲನಕ್ಕೆ ಕಾರಣವಾಗಲಿದೆ ಎಂದಿರುವ ಅವರು, ಈ ಪರಿವರ್ತನೆಯ ಹಂತವು ಸ್ವಲ್ಪ ನೋವಿನಿಂದ ಕೂಡಿರಬಹುದು. ಆದರೆ, ಇದನ್ನು ಮುಂಚಿತವಾಗಿ ಸ್ವೀಕರಿಸಿ ಅದಕ್ಕೆ ತಕ್ಕಂತೆ ಸಿದ್ಧರಾಗುವುದೊಂದೇ ನಾವು ಮಾಡಬಹುದಾದ ಮಾರ್ಗ ಎಂದು ಅವರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಪಿಎಂ ಕಿಸಾನ್ ಸ್ಕೀಮ್: 24ನೇ ಕಂತಿನ ಹಣ ಬಿಡುಗಡೆ ದಿನ ಫಿಕ್ಸ್; 9.34 ಕೋಟಿ ರೈತರಿಗೆ ಅ. 30ಕ್ಕೆ ಸಿಗಲಿದೆ ಹಣ
ಎಐನಿಂದ ಉದ್ಯೋಗ ಮಾರುಕಟ್ಟೆಯಲ್ಲಿ ದೊಡ್ಡ ಅಲುಗಾಟ ಆಗಲಿದೆ ಎಂದು ಅನೇಕ ತಜ್ಞರ ಅನಿಸಿಕೆಗಳಿಗೆ ಜೋಹೋ ಸಂಸ್ಥಾಪಕರೂ ಧ್ವನಿಗೂಡಿಸಿದ್ದಾರೆ. ಎಐ ಅಭಿವೃದ್ಧಿಗೆ ಭಾರೀ ಹೂಡಿಕೆ ಆಗಿರುವುದು, ಮೆಮೋರಿ ಚಿಪ್ಗಳ ಬೆಲೆ ಏರಿರುವುದು ಇತ್ಯಾದಿ ಕಾರಣಕ್ಕೆ ಜೋಹೋ ವ್ಯವಹಾರಕ್ಕೆ ಹಿನ್ನಡೆಯಾಗಿದೆ ಎಂದಿರುವ ವೆಂಬು, ಈ ವರ್ಷ ತಮ್ಮ ಉದ್ಯೋಗಿಗಳಿಗೆ ಸಂಬಳ ಏರಿಕೆ ತಡೆಹಿಡಿದಿರುವುದಾಗಿ ನೊಂದು ಹೇಳಿದ್ದಾರೆ. ಆದರೆ, ಅದೃಷ್ಟಕ್ಕೆ ಅವರು ಯಾವ ಉದ್ಯೋಗಿಯನ್ನೂ ಕೆಲಸದಿಂದ ತೆಗೆಯುವ ನಿರ್ಧಾರ ಮಾಡಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ