ಹುರುನ್ ಅಂಡರ್-35 ಯುವ ಭಾರತೀಯ ಉದ್ಯಮಿಗಳ ಪಟ್ಟಿ ಇತ್ತೀಚೆಗೆ ಪ್ರಕಟವಾಗಿದೆ. ಇದರಲ್ಲಿ ರೋಮನ್ ಸೈನಿ ಮೊದಲ ಸ್ಥಾನ ಪಡೆದಿದ್ದಾರೆ. ಇವರು ಅನ್ಅಕಾಡೆಮಿಯ ಸಹ-ಸಂಸ್ಥಾಪಕರು. 14,000 ಕೋಟಿ ರೂ ಮೌಲ್ಯದ ಅನ್ಅಕಾಡೆಮಿಯನ್ನು ಕಟ್ಟಿದ ಈ ಯುವಕನ ಪ್ರತಿಭೆ ಅಸಾಮಾನ್ಯವಾದುದು. ಇವರದ್ದು ವಯಸ್ಸಿಗೆ ಮೀರಿದ ಪ್ರತಿಭೆ. ವೈದ್ಯರಾಗಬೇಕು, ಐಎಎಸ್ ಅಧಿಕಾರಿ ಆಗಬೇಕು ಎನ್ನುವುದು ಬಹಳ ಜನರ ಜೀವನದ ಹೆಗ್ಗುರಿಯಾಗಿರುತ್ತದೆ. ರೋಮನ್ ಸೈನಿ ಸಣ್ಣ ವಯಸ್ಸಿಗೆ ಇವೆಲ್ಲವನ್ನೂ ಮಾಡಿ ಬಿಟ್ಟು ಅನ್ಅಕಾಡೆಮಿ ಹಾದಿ ಹಿಡಿದವರು…
16-17ರ ವಯಸ್ಸಿನಲ್ಲಿ ರೋಮನ್ ಸೈನಿ ಏಮ್ಸ್ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಆ ಸಾಧನೆ ಮಾಡಿದ ಅತ್ಯಂತ ಕಿರಿಯ ವಯಸ್ಸಿನ ವ್ಯಕ್ತಿ ಅವರು ಎಂಬ ದಾಖಲೆ ಇದೆ. ಅಷ್ಟೇ ಅಲ್ಲ, 18ರ ವಯಸ್ಸಿನಲ್ಲಿ ಇವರು ಬರೆದ ವೈದ್ಯಕೀಯ ಸಂಶೋಧನಾ ವರದಿಯನ್ನು ಪ್ರತಿಷ್ಠಿತ ಮೆಡಿಕಲ್ ಪಬ್ಲಿಕೇಶನ್ನಲ್ಲಿ ಪ್ರಕಟವಾಗಿತ್ತು.
ಆಡಳಿತ ವ್ಯವಸ್ಥೆ ಸರಿಪಡಿಸಲು ಐಎಎಸ್ ಮಾರ್ಗ…
ಎಂಬಿಬಿಎಸ್ ಓದು ಮುಗಿಸಿ ಸ್ವಲ್ಪ ದಿನ ಏಮ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡಿದ ರೋಮನ್ ಸೈನಿ, ಐಎಎಸ್ ಅಧಿಕಾರಿಯಾಗಲು ನಿರ್ಧರಿಸಿದರು. ಹರ್ಯಾಣದ ದಯಾಳಪುರ್ ಗ್ರಾಮದಲ್ಲಿ ವೈದ್ಯನಾಗಿ ಭೇಟಿ ನೀಡಿದಾಗ, ಅಲ್ಲಿ ಮೂಲಸೌಕರ್ಯಗಳೇ ಸರಿಯಾಗಿ ಇಲ್ಲದ್ದನ್ನು ಗಮನಿಸಿದ್ದಾರೆ. ಈ ವ್ಯವಸ್ಥೆ ಬದಲಿಸಬೇಕೆಂದರೆ ಐಎಎಸ್ನಂತಹ ಹುದ್ದೆಗಳಿಂದ ಸಾಧ್ಯ ಎಂದನಿಸಿದೆ. ಆಗಲೇ ಅವರು ಐಎಎಸ್ ಅಧಿಕಾರಿಯಾಗಲು ನಿರ್ಧರಿಸಿದರು.
22ರ ವಯಸ್ಸಿಗೆ ರೋಮನ್ ಸೈನಿ ಯುಪಿಎಸ್ಸಿ ಸಿವಿಲ್ ಸರ್ವಿಸ್ ಪರೀಕ್ಷೆ ಪಾಸ್ ಮಾಡಿ, ಐಎಎಸ್ ಅಧಿಕಾರಿಯಾದರು. ಆರು ತಿಂಗಳ ವೈದ್ಯಕೀಯ ವೃತ್ತಿಗೆ ತಿಲಾಂಜಲಿ ಹೇಳಿ, ಆಡಳಿತ ಸೇವೆಗೆ ನಿಂತರು. ಮಧ್ಯಪ್ರದೇಶದಲ್ಲಿ ಕಲೆಕ್ಟರ್ ಆಗಿ ಮೊದಲು ನಿಯೋಜನೆಗೊಂಡರು.
ಐಎಎಸ್ ಅಧಿಕಾರಿಯಾಗಿದ್ದಾಗ ಬಹಳ ಯುವಕರು ಐಎಎಸ್ ಪರೀಕ್ಷೆಗೆ ತಯಾರಾಗಲು ಕೋಚಿಂಗ್ ಇತ್ಯಾದಿಗೆ ಲಕ್ಷಾಂತರ ರೂ ಹಣ ಕೊಡಲಾಗದೇ ಪರದಾಡುತ್ತಿದ್ದುದು ರೋಮನ್ ಸೈನಿಗೆ ಅರಿವಿತ್ತು. ಇದೇ ಸಂದರ್ಭದಲ್ಲಿ ಅವರ ಸ್ನೇಹಿತ ಗೌರವ್ ಮುಂಜಲ್ ಅವರು ಯೂಟ್ಯೂಬ್ ಚಾನಲ್ನಲ್ಲಿ ಕೋಚಿಂಗ್ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದರು. ಅದೇ ವೇಳೆ ರೋಮನ್ ಅವರು ಬಹಳ ಕಡಿಮೆ ಬೆಲೆಗೆ ಶಿಕ್ಷಣ ಕೊಡಲು ಯೋಜಿಸಿದರು. ಪರಿಣಾಮವಾಗಿ 2015ರಲ್ಲಿ ಗೌರವ್ ಮುಂಜಲ್, ರೋಮನ್ ಸೈನಿ ಮತ್ತು ಹೇಮೇಶ್ ಸಿಂಗ್ ಈ ಮೂವರು ಸೇರಿಕೊಂಡು ಅನ್ ಅಕಾಡೆಮಿ ಸಂಸ್ಥೆ ಸ್ಥಾಪಿಸಿದರು.
ಯೂಟ್ಯೂಬ್ ವಾಹಿನಿಯಾಗಿ ಆರಂಭವಾಗಿದ್ದ ಅನ್ಅಕಾಡೆಮಿ ಇವತ್ತು 2 ಬಿಲಿಯನ್ ಡಾಲರ್ ಮೌಲ್ಯದ ಸಂಸ್ಥೆ ಎನಿಸಿದೆ. 14,000 ಕೋಟಿ ರೂಗೂ ಹೆಚ್ಚು ಮೌಲ್ಯದ ಕಂಪನಿಯಾದ ಅನ್ಅಕಾಡೆಮಿಯಲ್ಲಿ ಪ್ರಸಕ್ತ 5 ಕೋಟಿಗೂ ಹೆಚ್ಚು ಆನ್ಲೈನ್ ಬಳಕೆದಾರರಿದ್ದಾರೆ. ಭಾರತದ ಅತಿದೊಡ್ಡ ಎಜುಟೆಕ್ ಕಂಪನಿಗಳಲ್ಲಿ ಒಂದೆನಿಸಿದೆ.
ಇದನ್ನೂ ಓದಿ: ಸೋಷಿಯಲಿಸ್ಟ್ ಮನೋಭಾವವಾ? ಶ್ರೀಮಂತರನ್ನು ಕಂಡರೆ ಭಾರತೀಯರಿಗೆ ಯಾಕೆ ಕೋಪ? ನಿತಿನ್ ಕಾಮತ್ ನೇರಾನೇರ ಅನಿಸಿಕೆ ಕೇಳಿ
ಜನರು ಹುಟ್ಟುತ್ತಲೇ ಜೀನಿಯಸ್ ಆಗಿರುವುದಿಲ್ಲ. ಎಲ್ಲರಿಗೂ ಅವರದ್ದೇ ಜ್ಞಾನ, ಪ್ರತಿಭೆ, ವ್ಯಕ್ತಿತ್ವಗಳಿರುತ್ತವೆ. ಗುರಿ ಇಟ್ಟುಕೊಂಡು ಪ್ರಯತ್ನಿಸಿದರೆ ಯಾರು ಬೇಕಾದರೂ ಸಾಧಿಸಬಹುದು. ಸವಾಲಿಗೆ ಮುಂಚೆ ಅದನ್ನು ಎದುರಿಸಲು ಸಜ್ಜಾಗಬೇಕು. ಅದನ್ನು ಹೇಗೆ ಎದುರಿಸಬೇಕು ಎಂದು ಕಲಿಯುವುದು ಹೇಗೆ ಎಂಬುದನ್ನು ಮೊದಲು ಕಲಿಯಬೇಕು. ಇದು ಯಶಸ್ಸಿಗೆ ಮೊದಲ ಮೆಟ್ಟಿಲು ಎನ್ನುತ್ತಾರೆ ರೋಮನ್ ಸೈನಿ.
ಮನೆಯಲ್ಲಿ ಪೋಷಕರ ಇಷ್ಟಕ್ಕೆ ವಿರುದ್ಧವಾಗಿ, ಅಥವಾ ಸಮಾಜದ ಕಟ್ಟುಪಾಡಿಗೆ ವಿರುದ್ಧವಾಗಿ, ಅಥವಾ ತಮ್ಮದೇ ಮನಸ್ಸಿನ ಭಯಕ್ಕೆ ವಿರುದ್ಧವಾಗಿ ಹೆಜ್ಜೆಗಳನ್ನು ಇಟ್ಟರೆ ಆಗ ಸಾಧಿಸಬಹುದು ಎಂಬುದು ರೋಮನ್ ಸೈನಿ ಅನಿಸಿಕೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ