ಮಾಸ್ಕೋ, ಸೆಪ್ಟೆಂಬರ್ 15: ರಷ್ಯಾ ದೇಶದಲ್ಲಿ ಹಣದುಬ್ಬರ ಏರುತ್ತಿದ್ದು, ಈ ಬೆಲೆ ಏರಿಕೆ ನಿಯಂತ್ರಿಸಲು ಅಲ್ಲಿನ ಸೆಂಟ್ರಲ್ ಬ್ಯಾಂಕ್ ತನ್ನ ಬಡ್ಡಿದರಗಳನ್ನು ಹೆಚ್ಚಿಸಿದೆ. ಇದರಿಂದಾಗಿ ಬಡ್ಡಿದರ ಶೇ. 18 ರಿಂದ ಶೇ. 19ಕ್ಕೆ ಹೆಚ್ಚಳವಾಗಿದೆ. ಉಕ್ರೇನ್ ಮೇಲೆ ಯುದ್ಧಕ್ಕೆ ನಿಂತಾಗಿನಿಂದ ರಷ್ಯಾದಲ್ಲಿ ಬೆಲೆ ಏರಿಕೆ ತಲೆನೋವು ತೀವ್ರವಾಗಿ ಕಾಡತೊಡಗಿದೆ. ಮಿಲಿಟರಿಗಾಗಿ ಹೆಚ್ಚಿನ ಹಣ ವ್ಯಯವಾಗುತ್ತಿದೆ. ಸರಕು ಮತ್ತು ಸೇವೆಗಳ ಸರಬರಾಜು ವ್ಯವಸ್ಥೆ ಕುಂಠಿತಗೊಂಡಿವೆ. ಈ ಅಂಶಗಳು ಹಣದುಬ್ಬರ ಏರಿಕೆಗೆ ಪ್ರಮುಖ ಕಾರಣಗಳಾಗಿವೆ.
ಸದ್ಯ ರಷ್ಯಾದಲ್ಲಿ ಹಣದುಬ್ಬರ ದರ ಶೇ. 9.1ರಷ್ಟಿದೆ. 2025ರಷ್ಟರಲ್ಲಿ ಇದನ್ನು ಶೇ. 4ಕ್ಕೆ ಇಳಿಸಬೇಕೆಂಬುದು ಸೆಂಟ್ರಲ್ ಬ್ಯಾಂಕ್ ಗುರಿಯಾಗಿದೆ. ಒಂದೂವರೆ ವರ್ಷದಲ್ಲಿ ಈ ಗುರಿ ಸಾಧನೆಗೆ ಬಡ್ಡಿದರಗಳನ್ನು ಇನ್ನಷ್ಟು ಹೆಚ್ಚಿಸಲು ಸಿದ್ಧ ಇರುವುದಾಗಿ ಅದು ಹೇಳಿದೆ. ಇದರೊಂದಿಗೆ ರಷ್ಯಾದಲ್ಲಿ ಬ್ಯಾಂಕ್ ದರಗಳು ಶೇ. 23ರವರೆಗೆ ಹೋದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.
ಇದನ್ನೂ ಓದಿ: ಫಾರೆಕ್ಸ್ ರಿಸರ್ವ್ಸ್ ಸಾರ್ವಕಾಲಿಕ ದಾಖಲೆಯಾದ 689 ಬಿಲಿಯನ್ ಡಾಲರ್ ಮಟ್ಟಕ್ಕೆ ಏರಿಕೆ
ಹಣದುಬ್ಬರ ಅಧಿಕ ಮಟ್ಟದಲ್ಲಿದ್ದರೂ ರಷ್ಯಾದ ಒಟ್ಟಾರೆ ಆರ್ಥಿಕತೆ ಇನ್ನೂ ಪತನದ ಹಾದಿ ಹಿಡಿದಿಲ್ಲ. ಅದರ ತೈಲ ಸರಬರಾಜು ಆರ್ಥಿಕತೆಯ ಕೈ ಹಿಡಿದಿದೆ. ಸಾಕಷ್ಟು ಆದಾಯವು ತೈಲ ಸರಬರಾಜು ಮೂಲಕ ಬರುತ್ತಿದೆ. ಹಾಗೆಯೇ, ಮಿಲಿಟರಿ ಸಂಬಂಧಿತ ಉತ್ಪನ್ನಗಳಿಗೆ ಸರ್ಕಾರ ಮಾಡುತ್ತಿರುವ ವೆಚ್ಚವೂ ಆರ್ಥಿಕತೆ ಕುಸಿಯದಂತೆ ನೋಡಿಕೊಳ್ಳುತ್ತಿದೆ ಎನ್ನಲಾಗುತ್ತಿದೆ.
ಆರ್ಥಿಕತೆ ಬೆಳವಣಿಗೆ ಹೊಂದುವುದು ನಿಂತಿಲ್ಲ ಕಾರಣಕ್ಕೆ ರಷ್ಯಾದ ಸೆಂಟ್ರಲ್ ಬ್ಯಾಂಕ್ ಬಡ್ಡಿದರ ಹೆಚ್ಚಳದ ಸಾಹಸಕ್ಕೆ ಕೈ ಹಾಕಿದೆ. ಜನರು ವೆಚ್ಚ ಮಾಡಲು ಹಿಂದೇಟು ಹಾಕಿದರೆ ಬೆಲೆ ಏರಿಕೆಗೆ ಕಡಿವಾಣ ಹಾಕಬಹುದು ಎಂಬುದು ಬಡ್ಡಿದರ ಏರಿಕೆಯ ಕ್ರಮದ ಹಿಂದಿರುವ ತಂತ್ರವಾಗಿದೆ.
ಇದನ್ನೂ ಓದಿ: ಲಂಡನ್ನಲ್ಲಿ ಓದಲು ಹೋಗೋರು ಗಮನಿಸಿ, ಮಾಸಿಕ ಮೈಂಟೆನೆನ್ಸ್ ಫಂಡ್ 1.63 ಲಕ್ಷ ರೂಗೆ ಏರಿಕೆ
ಈ ತಂತ್ರವನ್ನೇ ಎಲ್ಲಾ ಸೆಂಟ್ರಲ್ ಬ್ಯಾಂಕುಗಳೂ ಉಪಯೋಗಿಸುತ್ತವೆ. ಭಾರತದಲ್ಲಿ 2022ರಲ್ಲಿ ಹಣದುಬ್ಬರ ಶೇ. 7ಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿತ್ತು. ಆರ್ಬಿಐ ಸತತವಾಗಿ ಬಡ್ಡಿದರ ಹೆಚ್ಚಿಸುತ್ತಾ ಬಂದಿತು. ಶೇ. 6.5ರವರೆಗೂ ಬಡ್ಡಿದರ ಏರಿಕೆ ಆಯಿತು. ಹೆಚ್ಚೂಕಡಿಮೆ ಒಂದು ವರ್ಷದಿಂದಲೂ ಈ ಮಟ್ಟದಿಂದ ಬಡ್ಡಿದರ ಕೆಳಗೆ ಇಳಿದಿಲ್ಲ. ಹಣದುಬ್ಬರವು ನಿಗದಿತ ಗುರಿಯಾದ ಶೇ. 4ರ ಒಳಗೆ ಬಂದಿದೆ. ಮುಂದಿನ ದಿನಗಳಲ್ಲಿ ಆರ್ಬಿಐ ಬಡ್ಡಿದರ ಇಳಿಕೆ ಮಾಡುವ ಸಾಧ್ಯತೆ ದಟ್ಟವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ