ನವದೆಹಲಿ, ಡಿಸೆಂಬರ್ 11: ಭಾರತೀಯ ರಿಸರ್ವ್ ಬ್ಯಾಂಕ್ನ 26ನೇ ಗವರ್ನರ್ ಆಗಿ ಸಂಜಯ್ ಮಲ್ಹೋತ್ರಾ ಇಂದು ಬುಧವಾರ ಪದಗ್ರಹಣ ಮಾಡಿದ್ದಾರೆ. ಹಿಂದಿನ ಗವರ್ನರ್ ಶಕ್ತಿಕಾಂತ ದಾಸ್ ಅವರ ಸೇವಾವಧಿ ನಿನ್ನೆ (ಡಿ. 10) ಮುಗಿದಿತ್ತು. ಇಂದಿನಿಂದ ಮೂರು ವರ್ಷ ಕಾಲ ಆರ್ಬಿಐನ ಚುಕ್ಕಾಣಿ ಸಂಜಯ್ ಮಲ್ಹೋತ್ರಾ ಅವರದ್ದಾಗಿದೆ. ಹೊಸ ಆರ್ಬಿಐ ಗವರ್ನರ್ ಆಗಮನದ ಬಳಿಕ ಬಡ್ಡಿದರಗಳ ಇಳಿಕೆ ಬಗ್ಗೆ ಚರ್ಚೆಗಳು ನಡೆಯತೊಡಗಿವೆ.
ಶಕ್ತಿಕಾಂತ ದಾಸ್ ಅವರಂತೆ ಸಂಜಯ್ ಮಲ್ಹೋತ್ರಾ ಕೂಡ ಬ್ಯೂರೋಕ್ರಸಿಯೊಳಗಿಂದ ಆರ್ಬಿಐ ಗವರ್ನರ್ ಹುದ್ದೆ ಪಡೆದವರು. ಸಂಜಯ್ ಮಲ್ಹೋತ್ರಾ ಅವರು ಈ ಮುಂಚೆ ಹಣಕಾಸು ಸಚಿವಾಲಯದಲ್ಲಿ ಕಂದಾಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. ಅದಕ್ಕೂ ಮುನ್ನ ಅವರು ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: MSSC scheme: ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್; ಠೇವಣಿ ಮೊತ್ತ, ಅವಧಿ, ಬಡ್ಡಿ ಇತ್ಯಾದಿ ವಿವರ
ಸಂಜಯ್ ಮಲ್ಹೋತ್ರಾ ಅವರು ನೀತಿ ರೂಪಿಸುವ ವಿಚಾರದಲ್ಲಿ ತುಸು ಸಡಿಲಿಕೆಯ ಧೋರಣೆ ಹೊಂದಿದ್ದಾರೆ ಎಂಬುದು ತಜ್ಞರ ಅನಿಸಿಕೆ. ಅಂದರೆ, ಒಂದು ಪಡೆಯಲು ಮತ್ತೊಂದರಲ್ಲಿ ರಾಜಿಗೆ ಸಿದ್ಧವಿರುವ ಧೋರಣೆ. ಜಪಾನ್ನ ಬ್ರೋಕರೇಜ್ ಸಂಸ್ಥೆಯಾದ ನೊಮುರಾ ಪ್ರಕಾರ ಮುಂದಿನ ಆರ್ಬಿಐ ಎಂಪಿಸಿ ಸಭೆಯಲ್ಲಿ ರಿಪೋ ದರ ಇಳಿಕೆ ಶತಃಸಿದ್ಧವಂತೆ.
ಡಿಸೆಂಬರ್ನಲ್ಲಿ ನಡೆದಿದ್ದ ಸಭೆಯಲ್ಲಿ ರಿಪೋ ದರ ಯಥಾಸ್ಥಿತಿ ಉಳಿಸಲು ನಿರ್ಧರಿಸಲಾಗಿತ್ತು. ಫೆಬ್ರುವರಿಯಲ್ಲಿ ಮುಂದಿನ ಎಂಪಿಸಿ ಸಭೆ ನಡೆಯಲಿದೆ. ಬಜೆಟ್ ಮಂಡನೆಯಾದ ಕೆಲವೇ ದಿನಗಳಲ್ಲಿ ಎಂಪಿಸಿ ಸಭೆ ನಡೆಯಲಿರುವುದರಿಂದ ಮಹತ್ವದ ನಿರ್ಧಾರಗಳನ್ನು ನಿರೀಕ್ಷಿಸಬಹುದಾಗಿದೆ.
ಇದನ್ನೂ ಓದಿ: ಮೂರೂವರೆ ಲಕ್ಷ ಕೋಟಿ ರೂ ಗಾತ್ರ ಮುಟ್ಟಲಿರುವ ಭಾರತದ ಮನರಂಜನೆ-ಮಾಧ್ಯಮ ಉದ್ಯಮ
ನೂತನ ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರನ್ನು ಬಲ್ಲವರ ಪ್ರಕಾರ, ಅವರು ಹಣಕಾಸು ಹಾಗೂ ಅದರ ಸಂಬಂಧಿತ ತಂತ್ರಜ್ಞಾನಗಳ ಬಗ್ಗೆ ಹೆಚ್ಚು ಅಸ್ಥೆ ವಹಿಸುತ್ತಾರೆ. ಆಡಳಿತಶಾಹಿ ವ್ಯವಸ್ಥೆಯಿಂದ ಬೆಳೆದು ಬಂದಿರುವ ಅವರು ಸರ್ಕಾರದ ಇರಾದೆಗಳಿಗೆ ಬೇಗ ಸ್ಪಂದಿಸುವ ನಿರೀಕ್ಷೆ ಇದೆ. ಈ ಕಾರಣಕ್ಕೆ ಅವರನ್ನು ಆರ್ಬಿಐ ಗವರ್ನರ್ ಆಗಿ ನೇಮಿಸಿರಬಹುದು ಎಂದು ಭಾವಿಸಲಡ್ಡಿಯಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ