
ನವದೆಹಲಿ, ಜುಲೈ 31: ಭಾರತೀಯ ಎಐ ಸ್ಟಾರ್ಟ್‌ಅಪ್ ಸರ್ವಂ ಎಐ (Sarvam AI) ಮತ್ತು ಅಮೆರಿಕದ ಟೆಕ್ ದೈತ್ಯ ಐಬಿಎಂ ಸಂಸ್ಥೆಗಳು (IBM) ಜೊತೆಗೂಡಿ ಭಾರತ ಸರ್ಕಾರಿ ಇಲಾಖೆಗಳು ಹಾಗೂ ನಿಯಂತ್ರಿತ ವಲಯಗಳಿಗಾಗಿ (Regulated Sectors) “ಸಾವರಿನ್ ಎಐ” (Sovereign AI) ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಮತ್ತು ಪರೀಕ್ಷಿಸಲು ಒಪ್ಪಂದ ಮಾಡಿಕೊಂಡಿವೆ.
ಎಐ ಸಿಸ್ಟಂಗಳನ್ನು ನಿರ್ವಹಿಸಲು ಬೇಕಾದ IBM Sovereign Core ಸಾಫ್ಟ್‌ವೇರ್ ಮತ್ತು ಮಿಡಲ್ವೇರ್ ನೆರವನ್ನು ಐಬಿಎಂ ನೀಡುತ್ತದೆ. ಸರ್ವಂ ಎಐನಿಂದ ಬಹುಭಾಷಾ ಧ್ವನಿ (Multilingual Voice) ಮತ್ತು ಭಾಷಾ ತಂತ್ರಜ್ಞಾನಗಳು ಹಾಗೂ ರೀಸನಿಂಗ್ ಮಾಡಲ್ಗಳನ್ನು ಒದಗಿಸಿ ಈ ಎಐ ಪರಿಹಾರಗಳನ್ನು ನಿರ್ಮಿಸಲಾಗುತ್ತದೆ.
ಸರ್ಕಾರ ಹಾಗೂ ನಿಯಂತ್ರಿತ ಸಂಸ್ಥೆಗಳು ತಮ್ಮ ಡೇಟಾ (Data), ಮೂಲಸೌಕರ್ಯ ಮತ್ತು ನಿಯಮಾವಳಿಗಳ ಮೇಲೆ ಸಂಪೂರ್ಣ ನಿಯಂತ್ರಣವನ್ನು ಕಾಯ್ದುಕೊಳ್ಳಲು ಈ ‘ಸಾವರಿನ್ ಎಐ’ ನೆರವಾಗುತ್ತದೆ.
ಇದನ್ನೂ ಓದಿ: ಮಿನಿಮಮ್ ಬ್ಯಾಲನ್ಸ್ ದಂಡದಿಂದಲೇ ಬ್ಯಾಂಕುಗಳ ಖಜಾನೆಗೆ 7,100 ಕೋಟಿ ರೂ ಭರ್ತಿ
ಸಾರ್ವಜನಿಕ ಸೇವೆಗಳು ಮತ್ತು ಕುಂದುಕೊರತೆ ನಿವಾರಣೆ (Grievance Redressal): ನಾಗರಿಕರು ಫೋನ್ ಕರೆಯ ಮೂಲಕ ತಮ್ಮದೇ ಮಾತೃಭಾಷೆಯಲ್ಲಿ ಸರ್ಕಾರಿ ಸೇವೆಗಳನ್ನು ಪಡೆಯಲು ಮತ್ತು ದೂರುಗಳನ್ನು ಸಲ್ಲಿಸಲು ಇದು ಅವಕಾಶ ನೀಡುತ್ತದೆ.
ದಾಖಲೆಗಳ ಪ್ರಕ್ರಿಯೆ (Document Processing) ಹಾಗೂ ಆಡಳಿತಾತ್ಮಕ ಕೆಲಸಗಳು: ಸರ್ಕಾರಿ ಇಲಾಖೆಗಳಲ್ಲಿನ ದೈನಂದಿನ ದಾಖಲೆ ಮತ್ತು ಕಡತಗಳ ನಿರ್ವಹಣೆಯನ್ನು ಸುಲಭಗೊಳಿಸಲು ಇದು ನೆರವಾಗುತ್ತದೆ.
ಉತ್ತರಪ್ರದೇಶದ ಲಖನೌನಲ್ಲಿರುವ ‘IBM GovTech AI Innovation Center’ ಈ ಎಐ ಅಪ್ಲಿಕೇಶನ್‌ಗಳನ್ನು ಪರೀಕ್ಷಿಸಲು ಹಾಗೂ ಅವುಗಳ ತಾಂತ್ರಿಕ ಮತ್ತು ಭದ್ರತಾ ಅಗತ್ಯತೆಗಳನ್ನು ಮೌಲ್ಯಮಾಪನ ಮಾಡಲು ಮುಖ್ಯ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ.
ಇದನ್ನೂ ಓದಿ: ಸಂಪೂರ್ಣ ಸ್ವಂತವಾಗಿ ಟ್ರಿಲಿಯನ್ ಪ್ಯಾರಾಮೀಟರ್ ಎಐ ಮಾಡಲ್ ಕಟ್ಟುತ್ತಿರುವ ಸರ್ವಂ; ಇದು ಭಾರತಕ್ಕೆ ಹೊಸ ಶಕ್ತಿ
ಇತ್ತೀಚೆಗಷ್ಟೇ HCLTech ನೇತೃತ್ವದ ಹೂಡಿಕೆ ಸುತ್ತಿನಲ್ಲಿ ಸರ್ವಂ ಎಐ $234 ಮಿಲಿಯನ್ ಫಂಡಿಂಗ್ ಸಂಗ್ರಹಿಸಿತ್ತು. ಇದಲ್ಲದೆ, ಒಡಿಶಾ ಸರ್ಕಾರ ಮತ್ತು HCLTech ಜೊತೆಗೂಡಿ ಒಡಿಶಾದಲ್ಲಿ ₹14,257 ಕೋಟಿ ವೆಚ್ಚದ ಎಐ ಡೇಟಾ ಸೆಂಟರ್ ಸ್ಥಾಪಿಸಲು ಸರ್ವಂ ಒಪ್ಪಂದ ಮಾಡಿಕೊಂಡಿದೆ.
ಸರ್ವಂ ಎಐ ಸಂಸ್ಥೆಯು ಸಂಪೂರ್ಣ ಸ್ವಂತವಾಗಿ ಒಂದು ಟ್ರಿಲಿಯನ್ ಪ್ಯಾರಾಮೀಟರ್ನ ಎಐ ಫೌಂಡೇಶನ್ ಮಾಡಲ್ ನಿರ್ಮಿಸುತ್ತಿರುವುದಾಗಿ ತಿಳಿಸಿದೆ. ಫೌಂಡೇಶನ್ ಮಾಡಲ್ನ ಆಚೆ ಭಾರತದಲ್ಲಿ ಎಐ ಇನ್ಫ್ರಾಸ್ಟ್ರಕ್ಚರ್ ನಿರ್ಮಿಸುವ ಹೆಬ್ಬಯಕೆಯನ್ನು ಸಂಸ್ಥೆ ವ್ಯಕ್ತಪಡಿಸಿದೆ. ಇದರಿಂದ ಭಾರತವು ಎಐ ವಿಚಾರದಲ್ಲಿ ವಿದೇಶಿಗರ ಮೇಲೆ ಅವಲಂಬಿತವಾಗುವುದು ತಪ್ಪಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ