ಯಾವುದೇ ಕ್ಷೇತ್ರದ ವೃತ್ತಿಪರರಾದರೂ ಅವರ ಸಂತಾನ ಕೂಡ ಅದೇ ವೃತ್ತಿಗೆ ಇಳಿಯುವ ಸಾಧ್ಯತೆ ಹೆಚ್ಚಿರುತ್ತದೆ. ಅಂತೆಯೇ, ಕ್ರೀಡಾಪಟುಗಳ ಮಕ್ಕಳು ಕ್ರೀಡಾಪಟುವಾಗುವುದು ಹೆಚ್ಚು, ವೈದ್ಯರ ಮಕ್ಕಳು ವೈದ್ಯರಾಗುತ್ತಾರೆ. ಮಾಜಿ ಟೀಮ್ ಇಂಡಿಯಾ ಕ್ರಿಕೆಟಿಗ ಮತ್ತು ಕ್ಯಾಪ್ಟನ್ ಸೌರವ್ ಗಂಗೂಲಿ ಅವರ ಮಗಳು ಸನಾ ಗಂಗೂಲಿ (Sana Ganguly) ಇದಕ್ಕೆ ವ್ಯತಿರಿಕ್ತ ದಿಕ್ಕಿನಲ್ಲಿ ಹೆಜ್ಜೆ ಹಾಕಿದ್ದು, ಕಾರ್ಪೊರೇಟ್ ಕ್ಷೇತ್ರಕ್ಕೆ ಅಡಿ ಇಟ್ಟಿದ್ದಾರೆ. 21 ವರ್ಷದ ಸನಾ ಗಂಗೂಲಿಗೆ ಮೊದಲಿಂದಲೂ ಕ್ರಿಕೆಟ್ ಬಗ್ಗೆ ಆಸಕ್ತಿ ಬರಲಿಲ್ಲ. ಅರ್ಥಶಾಸ್ತ್ರ, ಕಾನೂನು, ಕಾರ್ಪೊರೇಟ್ ವ್ಯವಹಾರಗಳನ್ನು ಅಧ್ಯಯನ ಮಾಡಿರುವ ಅವರು ಕಾರ್ಪೊರೇಟ್ ವ್ಯವಹಾರದ ವೃತ್ತಿಜೀವನ ಆರಂಭಿಸಿದ್ದಾರೆ.
ಭಾರತದ ಮಹಿಳಾ ಕ್ರಿಕೆಟ್ನ ದಂತಕಥೆ ಎನಿಸಿರುವ ಝುಲನ್ ಗೋಸ್ವಾಮಿ ನಿವೃತ್ತರಾದ ಸಂದರ್ಭದಲ್ಲಿ ಸೌರವ್ ಗಂಗೂಲಿ ತಮ್ಮ ಮಗಳ ಕುರಿತು ಹೇಳಿದ್ದ ಒಂದು ಮಾತನ್ನು ಇಲ್ಲಿ ಉಲ್ಲೇಖಿಸಬಹುದು:
‘ನನ್ನ ಮಗಳು ಕ್ರಿಕೆಟ್ ಆಟದಲ್ಲಿ ತೊಡಗಿಸಿಕೊಂಡಿದ್ದರೆ, ಝುಲನ್ ಗೋಸ್ವಾಮಿಯಂತೆ ಆಡು ಎಂದು ಆಕೆಗೆ ನಾನು ಹೇಳುತ್ತಿದ್ದೆ,’ ಎಂದು 2022ರ ಸೆಪ್ಟೆಂಬರ್ನಲ್ಲಿ ಸೌರವ್ ಗಂಗೂಲಿ ಹೇಳಿದ್ದರು.
ಇದನ್ನೂ ಓದಿ: Ram Temple Cost: ಸರ್ಕಾರದ ಧನಸಹಾಯ ಇಲ್ಲದೇ ರಾಮ ಮಂದಿರ ನಿರ್ಮಾಣ; ಇದಕ್ಕೆ ಎಷ್ಟು ವೆಚ್ಚ? ಯಾರಿಂದ ಫಂಡಿಂಗ್?
ಸನಾ ಗಂಗೂಲಿ ಚಿಕ್ಕಂದಿನಿಂದಲೇ ಕ್ರಿಕೆಟ್ ಬದಲು ನೃತ್ಯ ಇತ್ಯಾದಿ ಕಡೆ ಆಸಕ್ತಿ ಹೊಂದಿದ್ದರು. ಬ್ರಿಟನ್ನ ಪ್ರತಿಷ್ಠಿತ ಯುಸಿಎಲ್ ಕಾಲೇಜಿನಲ್ಲಿ (ಯೂನಿವರ್ಸಿಟಿ ಕಾಲೇಜ್ ಲಂಡನ್) ಎಕನಾಮಿಕ್ಸ್ನಲ್ಲಿ ಪದವಿ ಪಡೆದಿದ್ದಾರೆ. ಈ ಅವಧಿಯೊಳಗೆ ಆಕೆ ಏಳು ಕಂಪನಿಗಳಲ್ಲಿ ಇಂಟರ್ನ್ಶಿಪ್ ಕೂಡ ಮಾಡಿದ್ದಾರೆ.
ಅಷ್ಟೇ ಅಲ್ಲ, ಯುಸಿಎಲ್ನಲ್ಲಿ ಓದುವಾಗಲೇ ಎನಾಕ್ಟಸ್, ಕೆಪಿಎಂಜಿ, ಎಚ್ಎಸ್ಬಿಸಿ, ಗೋಲ್ಡ್ಮ್ಯಾನ್ ಸ್ಯಾಕ್ಸ್, ಬಾರ್ಕ್ಲೇಸ್, ಐಸಿಐಸಿಐ ಮೊದಲಾದ ಕಂಪನಿಗಳಲ್ಲಿ ಕೆಲಸ ಮಾಡಿ ಪದವಿಗೆ ಮುನ್ನವೇ ಅಮೂಲ್ಯ ಅನುಭವ ಪಡೆದಿದ್ದಾರೆ.
ಯುಸಿಎಲ್ನಲ್ಲಿ ಪದವಿ ಪಡೆದ ಬಳಿಕ ಪಿಡಬ್ಲ್ಯುಸಿ ಮತ್ತು ಡುಲೋಯ್ಟ್ ಸಂಸ್ಥೆಗಳಲ್ಲಿ ಇಂಟರ್ನ್ಶಿಪ್ ಗಿಟ್ಟಿಸಿದ್ದಾರೆ. ಇವೆರಡೂ ಕೂಡ ಅತ್ಯಂತ ಪ್ರತಿಷ್ಠಿತ ವೃತ್ತಿಪರ ಅಕೌಂಟಿಂಗ್ ಸಂಸ್ಥೆಗಳಾಗಿವೆ. ಆಡಿಟಿಂಗ್, ಲೀಗಲ್ ಅಡ್ವೈಸ್ ಇತ್ಯಾದಿ ಸರ್ವಿಸ್ ಕೊಡುವ ಸಂಸ್ಥೆಗಳಿವು.
ಇದನ್ನೂ ಓದಿ: Electoral Bonds: ಜನವರಿ 2ರಿಂದ 11ರವರೆಗೆ ಎಸ್ಬಿಐನ ಈ 29 ಕಚೇರಿಗಳಲ್ಲಿ ಸಿಗಲಿದೆ ಎಲೆಕ್ಟೋರಲ್ ಬಾಂಡ್; ಏನಿದು ಬಾಂಡ್?
ಪಿಡಬ್ಲ್ಯುಸಿ, ಅಥವಾ ಪ್ರೈಸ್ ವಾಟರ್ಕೂಪರ್ ಸಂಸ್ಥೆಯಲ್ಲಿ ಇಂಟರ್ನ್ಶಿಪ್ ಮಾಡುವವರಿಗೆ ವರ್ಷಕ್ಕೆ 30 ಲಕ್ಷ ರೂ ವೇತನ ಕೊಡಲಾಗುತ್ತದೆ. ಇನ್ನು ಡುಲೋಯಿಟ್ ಸಂಸ್ಥೆಯಲ್ಲಿ ಸನಾ ಗಂಗೂಲಿ 2023ರ ಜೂನ್ನಲ್ಲಿ ಇಂಟರ್ಶಿಪ್ ಆರಂಭಿಸಿದ್ದಾರೆ. ಇಲ್ಲಿ ಇಂಟರ್ನ್ಗಳಿಗೆ ವರ್ಷಕ್ಕೆ 5 ಲಕ್ಷ ರೂನಿಂದ 12 ಲಕ್ಷ ರೂವರೆಗೆ ಸಂಬಳ ಕೊಡಲಾಗುತ್ತದೆ.
ಇದಾದ ಬಳಿಕ ಸನಾ ಗಂಗೂಲಿ ಅವರು ಪೂರ್ಣಪ್ರಮಾಣದ ಉದ್ಯೋಗಿಯಾಗಿ ವೃತ್ತಿಪರ ಜಗತ್ತಿಗೆ ಪ್ರವೇಶ ಮಾಡಬಹುದು. ತಮ್ಮ ತಂದೆ ಕ್ರಿಕೆಟ್ ರಂಗದಲ್ಲಿ ಉಚ್ಛ್ರಾಯ ಹಂತಕ್ಕೆ ಏರಿದ ರೀತಿಯಲ್ಲಿ ಸನಾ ಗಂಗೂಲಿ ತಮ್ಮ ವೃತ್ತಿಯಲ್ಲಿ ಗರಿಷ್ಠ ಮಟ್ಟದವರೆಗೆ ಬೆಳೆಯಲಿ ಎಂದು ಹಾರೈಸಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ