ಸ್ಮಾರ್ಟ್​ಫೋನ್ ಉತ್ಪಾದನೆಗೆ ಉತ್ತೇಜಿಸಲು ಸರ್ಕಾರದಿಂದ ಹೊಸ ಸಬ್ಸಿಡಿ ಸ್ಕೀಮ್; ಪಿಎಲ್​ಐ ಬದಲು ಹೊಸ ಯೋಜನೆ

New subsidy scheme for smartphone manufacturing: ಸ್ಮಾರ್ಟ್​ಫೋನ್ ಅಸೆಂಬ್ಲಿಂಗ್ ಜೊತೆಗೆ ಅದಕ್ಕೆ ಬೇಕಾದ ಬಿಡಿಭಾಗಗಳ ತಯಾರಿಕೆಗೂ ಉತ್ತೇಜಿಸಲು ಸರ್ಕಾರ ಹೊಸ ಸಬ್ಸಿಡಿ ಪ್ಲಾನ್ ಮಾಡಿದೆ. ಎಲ್ಲಾ ಬಿಡಿಭಾಗಗಳನ್ನು ಆಮದು ಮಾಡಿ ಅಸೆಂಬಲ್ ಆದ ಫೋನ್​ನ ರಫ್ತಿಗೂ ಸಬ್ಸಿಡಿ ಸಿಗುತ್ತದೆ. ಆದರೆ, ಭಾರತದೊಳಗೆ ತಯಾರಾದ ಬಿಡಿಭಾಗಗಳಿಂದ ಮಾಡಿದ ಫೋನ್​ಗಳ ರಫ್ತಿಗೆ ಹೆಚ್ಚಿನ ಸಬ್ಸಿಡಿ ಸಿಗುತ್ತದೆ.

ಸ್ಮಾರ್ಟ್​ಫೋನ್ ಉತ್ಪಾದನೆಗೆ ಉತ್ತೇಜಿಸಲು ಸರ್ಕಾರದಿಂದ ಹೊಸ ಸಬ್ಸಿಡಿ ಸ್ಕೀಮ್; ಪಿಎಲ್​ಐ ಬದಲು ಹೊಸ ಯೋಜನೆ
ಸ್ಮಾರ್ಟ್​ಫೋನ್

Updated on: Mar 13, 2026 | 6:34 PM

ನವದೆಹಲಿ, ಮಾರ್ಚ್ 13: ದೇಶದಲ್ಲಿ ಸ್ಮಾರ್ಟ್​ಫೋನ್ ಉತ್ಪಾದನೆಗೆ ಉತ್ತೇಜನ ನೀಡಲು ಸರ್ಕಾರ ಹೊಸ ರೀತಿಯ ಸಬ್ಸಿಡಿ ಪ್ಲಾನ್ (New subsidy plan) ಹಾಕಿದೆ. ಪಿಎಲ್​ಐ ಸ್ಕೀಮ್ (PLI scheme) ಬದಲು ಈ ಹೊಸ ಯೋಜನೆ ಜಾರಿಗೆ ಬರುವ ಚಿಂತನೆಯಲ್ಲಿ ಸರ್ಕಾರ ಇದೆ. ಪಿಎಲ್​ಐ ಸ್ಕೀಮ್​ನಲ್ಲಿ ಕಂಪನಿಗಳಿಗೆ ರಫ್ತಿಗೆ ಉತ್ತೇಜನ ಕೊಡಲಾಗುತ್ತದೆ. ಹೊಸ ಸ್ಕೀಮ್​ನಲ್ಲಿ ಸ್ಥಳೀಯವಾಗಿ ಬಿಡಿಭಾಗಗಳ ಪೂರೈಕೆ ಪಡೆಯುವುದಕ್ಕೆ ಉತ್ತೇಜನ ಕೊಡಲು ಯೋಜಿಸಲಾಗಿದೆ. ಅಂದರೆ, ಭಾರತದೊಳಗೆ ತಯಾರಾಗಿರುವ ಬಿಡಿಭಾಗಗಳನ್ನು ಬಳಸಿ ಸ್ಮಾರ್ಟ್​ಫೋನ್ ಅಸೆಂಬ್ಲಿಂಗ್ ಮಾಡಿ, ಅದನ್ನು ರಫ್ತು ಮಾಡಿದರೆ ಸರ್ಕಾರದಿಂದ ಸಬ್ಸಿಡಿ ಸಿಗುತ್ತದೆ.

ಸದ್ಯ, ಆ್ಯಪಲ್, ಸ್ಯಾಮ್ಸುಂಗ್ ಕಂಪನಿಗಳು ತಮ್ಮ ಅನೇಕ ಸ್ಮಾರ್ಟ್​ಫೋನ್​ಗಳನ್ನು ಭಾರತದಲ್ಲಿ ಅಸೆಂಬ್ಲಿಂಗ್ ಮಾಡಿಸುತ್ತಿವೆ. ಆದರೆ, ಅದಕ್ಕೆ ಬೇಕಾದ ಹೆಚ್ಚಿನ ಬಿಡಿಭಾಗಗಳನ್ನು ಚೀನಾ, ತೈವಾನ್ ಮತ್ತು ದಕ್ಷಿಣ ಕೊರಿಯಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ, ಹೊಸ ಸಬ್ಸಿಡಿ ಸ್ಕೀಮ್​ನಿಂದ ಸ್ಥಳೀಯವಾಗಿ ಬಿಡಿಭಾಗಗಳ ಉತ್ಪಾದನೆ ಹೆಚ್ಚುತ್ತದೆ. ಆ್ಯಪಲ್, ಸ್ಯಾಮ್ಸುಂಗ್​ನಂತಹ ಒಇಎಂ ಕಂಪನಿಗಳಿಗೂ ತಯಾರಿಕಾ ವೆಚ್ಚ ಕಡಿಮೆ ಆಗುತ್ತೆ. ಭಾರತೀಯ ಕಂಪನಿಗಳಿಗೆ ಮ್ಯಾನುಫ್ಯಾಕ್ಚರಿಂಗ್ ಅವಕಾಶ ಮತ್ತು ಪರಿಣಿತಿ ಹೆಚ್ಚುತ್ತದೆ.

ಇದನ್ನೂ ಓದಿ: ಸಿಲಿಕಾನ್ ಸಿಟಿ ಹೊಂದಿರುವ ಕರ್ನಾಟಕದಲ್ಲಿ 470 ಹಳ್ಳಿಗಳಲ್ಲಿ ಈಗಲೂ ಇಲ್ಲ ಮೊಬೈಲ್ ಸಂಪರ್ಕ

ಹೇಗಿರುತ್ತೆ ಹೊಸ ಸಬ್ಸಿಡಿ ಪ್ಲಾನ್?

ಈ ಸ್ಕೀಮ್​ಗೆ ಆಯ್ಕೆಯಾಗುವ ಕಂಪನಿಗಳು ರಫ್ತು ಮಾಡುವ ಉತ್ಪನ್ನಗಳು ಹಾಗು ಆ ಉತ್ಪನ್ನಗಳ ತಯಾರಿಕೆಗೆ ಸ್ಥಳೀಯ ಮೌಲ್ಯ ವರ್ಧನೆ ಎಷ್ಟು ಎಂಬುದರ ಲೆಕ್ಕಾಚಾರದ ಮೇಲೆ ಸಬ್ಸಿಡಿ ನೀಡಲಾಗುತ್ತದೆ. ಉದಾಹರಣೆಗೆ, ಆ್ಯಪಲ್ ಕಂಪನಿ ತನ್ನ ಐಫೋನ್ ಅಸೆಂಬ್ಲಿಂಗ್​ಗೆ ಬೇಕಾದ ಬಿಡಿಭಾಗಗಳೆಲ್ಲವನ್ನೂ ಆಮದು ಮಾಡಿಕೊಂಡರೆ ಸಬ್ಸಿಡಿ ಸಿಗುವುದು ಬಹಳ ಕಡಿಮೆ. ಆದರೆ, ಭಾರತದಲ್ಲೇ ತಯಾರಾದ ಕ್ಯಾಮೆರಾ ಮಾಡ್ಯೂಲ್​ಗಳು, ಡಿಸ್​ಪ್ಲೇ ಇತ್ಯಾದಿ ಬಿಡಿಭಾಗಗಳನ್ನು ಪಡೆದು ಬಳಸಿದಾಗ ಹೆಚ್ಚಿನ ಸಬ್ಸಿಡಿ ಸಿಗುತ್ತದೆ.

ಈಗ ಅಸ್ತಿತ್ವದಲ್ಲಿರುವ ಪಿಎಲ್​ಐ ಸ್ಕೀಮ್​ನಿಂದ ಸ್ಮಾರ್ಟ್​ಫೋನ್ ಅಸೆಂಬ್ಲಿಂಗ್ ಕಾರ್ಯ ಭಾರತದಲ್ಲಿ ಗಣನೀಯವಾಗಿ ಹೆಚ್ಚಿದೆ. ಭಾರತದಲ್ಲಿ ಮಾರಾಟವಾಗುವ ಶೇ. 95ಕ್ಕೂ ಹೆಚ್ಚು ಸ್ಮಾರ್ಟ್​ಫೋನ್​ಗಳು ಇಲ್ಲಿಯೇ ಅಸೆಂಬಲ್ ಆಗಿರುವುದು. ಇದರ ಜೊತೆಗೆ ಬಿಡಿಭಾಗಗಳೂ ಇಲ್ಲೇ ತಯಾರಾದಾಗ ಒಟ್ಟಾರೆ ತಯಾರಿಕೆಯ ಚಕ್ರ ಬಹುತೇಕ ಪೂರ್ಣಗೊಳ್ಳುತ್ತದೆ.

ಇದನ್ನೂ ಓದಿ: 18 ವರ್ಷ ಅಡೋಬ್ ಸಿಇಒ ಆಗಿದ್ದ ಭಾರತ ಮೂಲದ ಶಾಂತನು ನಾರಾಯಣ್ ರಾಜೀನಾಮೆ

ಭಾರತದಲ್ಲಿ ಸ್ಮಾರ್ಟ್​ಫೋನ್ ಬಿಡಿಭಾಗಗಳ ತಯಾರಿಕೆ ಹೆಚ್ಚಾದಾಗ ಸಪ್ಲೈ ಚೈನ್ ಮತ್ತಷ್ಟು ಬಲಗೊಳ್ಳುತ್ತದೆ. ಹೀಗಾಗಿ, ಸರ್ಕಾರದ ಹೊಸ ಸಬ್ಸಿಡಿ ಸ್ಕೀಮ್ ಬಗ್ಗೆ ಭಾರತೀಯ ಉದ್ಯಮ ಕುತೂಹಲ ಮತ್ತು ಸ್ವಾಗತಿಸುವ ಸ್ಥಿತಿಯಲ್ಲಿದೆ. ಫಾಕ್ಸ್​ಕಾನ್​ನಂತಹ ಫೋನ್ ಅಸೆಂಬ್ಲಿಂಗ್ ಕಂಪನಿಗಳು ಭಾರತದಲ್ಲಿ ಹೆಚ್ಚೆಚ್ಚು ಹೂಡಿಕೆ ಮಾಡಬಹುದರ ಜೊತೆಗೆ ತಮ್ಮ ಪೂರೈಕೆ ಸರಪಳಿಯನ್ನು ಭಾರತದಲ್ಲೇ ನಿರ್ಮಿಸಲು ಮುಂದಾಗಬಹುದು. ಇದರಿಂದ ಅಂತಿಮ ಲಾಭ ಭಾರತಕ್ಕೆ ಆಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us