
ಟೆಕ್ಸಾಸ್, ಅಮೆರಿಕ, ನವೆಂಬರ್ 15: ಇಲಾನ್ ಮಸ್ಕ್ ಅವರ ಸ್ಪೇಸ್‌ಎಕ್ಸ್ (SpaceX) ಸಂಸ್ಥೆ ತನ್ನ ಸಾಧನೆಗಳ ಓಟ ಮುಂದುವರಿಸಿದೆ. ಇವತ್ತು ಆ ಸಂಸ್ಥೆ ಹಾಗು ತಂತ್ರಜ್ಞಾನ ಕ್ಷೇತ್ರಕ್ಕೆ ಹೊಸ ಪುಷ್ಟಿ ದೊರಕಿದೆ. ಸ್ಪೇಸ್ಎಕ್ಸ್ನ ಅತ್ಯಂತ ಬಲಿಷ್ಠ ‘ಸ್ಟಾರ್‌ಶಿಪ್’ (Starship) ರಾಕೆಟ್ ಸಿಸ್ಟಂ ಅನ್ನು ಯಶಸ್ವಿಯಾಗಿ ಮತ್ತು ಸುರಕ್ಷಿತವಾಗಿ ಭೂಮಿಗೆ ಇಳಿಸಲಾಗಿದೆ. ಅತ್ಯಂತ ವೇಗವಾಗಿ ಬಂದ ಸ್ಟಾರ್‌ಶಿಪ್ ಅನ್ನು 2ನೇ ಲಾಂಚ್ಪ್ಯಾಡ್ ಮೇಲಿದ್ದ ಚಾಪ್ಸ್ಟಿಕ್ಸ್ (Chopsticks) ಎಂದು ಕರೆಯುವ ಎರಡು ದೊಡ್ಡ ಯಾಂತ್ರಿಕ ಕೈಗಳು ಹಿಡಿದಿಟ್ಟುಕೊಂಡವು. ಈ ಮೂಲಕ ಜಗತ್ತೇ ಬೆರಗಾಗುವಂತೆ ಮಾಡಿದೆ.
ಈ ಹಿಂದೆ ಮೂರು ಬಾರಿ ಹೆವಿ ರಾಕೆಟ್ ಬೂಸ್ಟರ್ಗಳನ್ನು ಇದೇ ರೀತಿ ಹಿಡಿದಿಟ್ಟುಕೊಂಡು ಗಮನ ಸೆಳೆದಿತ್ತು ಸ್ಪೇಸ್‌ಎಕ್ಸ್. ಆದರೆ, ಈ ಬಾರಿ ಸ್ಟಾರ್‌ಶಿಪ್ ರಾಕೆಟ್ ಅನ್ನು ಕ್ಯಾಚ್ ಮಾಡುವ ಕೆಲಸ ಸಾಮಾನ್ಯವಾಗಿರಲಿಲ್ಲ. ರಾಕೆಟ್ ಅನ್ನು ಸಮುದ್ರದಲ್ಲಿ ಇಳಿಸುವ ಬದಲು, ನೇರವಾಗಿ ಉಡಾವಣಾ ಸ್ಥಳದಲ್ಲೇ ಸುರಕ್ಷಿತವಾಗಿ ಮರುಬಳಕೆಗಾಗಿ ಹಿಡಿಯುವ ಈ ತಂತ್ರಜ್ಞಾನವು ಭವಿಷ್ಯದ ಬಾಹ್ಯಾಕಾಶ ಯಾನಗಳ ವೆಚ್ಚವನ್ನು ಗಣನೀಯವಾಗಿ ತಗ್ಗಿಸಲಿದೆ.
ಇದನ್ನೂ ಓದಿ: ಅಮೆರಿಕದ ಮಾರುಕಟ್ಟೆಯಲ್ಲಿ ಭಾರತದ ಮೇಲುಗೈ? ಪ್ರತಿಸ್ಪರ್ಧಿಗಳಿಗಿಂತ ಕಡಿಮೆ ಸುಂಕದ ಭರವಸೆ
ಈ ಹಿಂದೆ ಸ್ಪೇಸ್‌ಎಕ್ಸ್ ಸಂಸ್ಥೆಯು ತನ್ನ ಕೆಲ ಫಾಲ್ಕನ್ ರಾಕೆಟ್ಗಳನ್ನು ಉಡಾವಣೆ ಮಾಡಿ ಮಿಷನ್ ಪೂರ್ಣಗೊಂಡ ಬಳಿಕ ಅದರ ಫಸ್ಟ್ ಸ್ಟೇಜ್ ಬೂಸ್ಟರ್ ಅಥವಾ ಕೆಳಭಾಗವನ್ನು ಸುರಕ್ಷಿತವಾಗಿ ಕೆಳಗೆ ತರಲಾಯಿತು. ಆದರೆ, ಆ ಫಾಲ್ಕನ್ ರಾಕೆಟ್ಗೆ ಹೋಲಿಸಿದರೆ ಸ್ಟಾರ್‌ಶಿಪ್ ಬಹಳ ದೊಡ್ಡ ರಾಕೆಟ್ ಸಿಸ್ಟಂ ಮತ್ತು ಅತಿಭಾರತದ್ದು.
ಅಷ್ಟೇ ಅಲ್ಲ, ಇದು ಫಾಲ್ಕನ್ ರಾಕೆಟ್ಗಿಂತ ಬಹಳ ಎತ್ತರಕ್ಕೆ ಹೋಗಿ ಬರುತ್ತದೆ. ಭೂಮಿಯನ್ನು 22 ಗಂಟೆಗಳ ಕಾಲ 14 ಬಾರಿ ಸುತ್ತಿ, 26 ಸೆಟಿಲೈಟ್ಗಳನ್ನು ಭೂಕಕ್ಷೆಗೆ ಬಿಟ್ಟು ಬಂದಿತ್ತು. ಗಂಟೆಗೆ 28,000 ಕಿಮೀ ವೇಗದಲ್ಲಿ ಸಾಗಿ ಬರುವ ಇದನ್ನು ಭೂಮಿಯ ಮೇಲೆ ಹಿಡಿಯುವುದು ಸಾಮಾನ್ಯ ಸಂಗತಿಯಲ್ಲ.
ಇತರ ರಾಕೆಟ್ಗಳಂತೆ ಸ್ಟಾರ್‌ಶಿಪ್ ಲಂಬವಾಗಿ ಕೆಳಗೆ ಬಂದಿಲ್ಲ. ಅಡ್ಡಡ್ಡವಾಗಿ ಬಂದ ಅದು ವಿಶೇಷ ತಂತ್ರಜ್ಞಾನದಿಂದ ನಿಧಾನಗೊಳ್ಳುತ್ತಾ ಹೋಗಿತ್ತು. ಲಾಂಚ್ ಪ್ಯಾಡ್ಗೆ ಒಂದೆರಡು ಸೆಕೆಂಡುಗಳಿರುವಾಗ ಲಂಬಕ್ಕೆ ತಿರುಗಿತು. ಲಾಂಚ್ ಪ್ಯಾಡ್ ಮೇಲಿದ್ದ ದೈತ್ಯ ಯಾಂತ್ರಿಕ ತೋಳುಗಳ ತೆಕ್ಕೆ ಸೇರಿಕೊಂಡಿತು.
ಸ್ಟಾರ್‌ಶಿಪ್ ಪ್ರಯೋಗ ಯಾಕೆ ವಿಶೇಷ ಎನ್ನುವುದಕ್ಕೆ ಮತ್ತೊಂದು ಕಾರಣ ಇದೆ. ಹಿಂದೆ ಫಾಲ್ಕನ್ ರಾಕೆಟ್‌ನ ಕೆಳಗಿನ ಭಾಗವನ್ನು ಯಶಸ್ವಿಯಾಗಿ ಹಿಡಿಯಲಾಗಿತ್ತು. ಆದರೆ, ಸ್ಟಾರ್ಶಿಪ್ನ ಮೇಲ್ಭಾಗವನ್ನು ಈಗ ಹಿಡಿಯಲಾಗಿದೆ. ಅಂದರೆ, ಒಂದು ರಾಕೆಟ್ ಸಿಸ್ಟಂ ಪೂರ್ಣವಾಗಿ ಮರುಬಳಕೆಗೆ ಸಿಗುತ್ತದೆ.
ಸ್ಪೇಸ್‌ಎಕ್ಸ್ ಪ್ರಕಟಿಸಿದ ವಿಡಿಯೋ
ಇತರ ವಿಡಿಯೋಗಳು
ಇದನ್ನೂ ಓದಿ: ಎನ್ವಿಡಿಯಾ ಸಿಇಒ ಸ್ಥಾನಕ್ಕೆ ಹಲವರ ಹೆಸರು ಪರಿಗಣನೆಯಲ್ಲಿ; ಭಾರತ ಮೂಲದ ಮೂವರ ಹೆಸರೂ ಪಟ್ಟಿಯಲ್ಲಿ
ಈ ಮೊದಲು ಸೆಟಿಲೈಟ್ಗಳನ್ನು ಆಗಸಕ್ಕೆ ಕಳುಹಿಸಬೇಕಾದರೆ ಹೊಸ ರಾಕೆಟ್ ಅನ್ನೇ ಬಳಸಬೇಕಾಗಿತ್ತು. ಈಗ ಒಂದು ರಾಕೆಟ್ ಅನ್ನು ಮರುಬಳಕೆ ಮಾಡಲು ಸಾಧ್ಯವಾದರೆ, ಹೊಸ ರಾಕೆಟ್ ನಿರ್ಮಿಸುವ ಪ್ರಮೇಯ ಇರುವುದಿಲ್ಲ. ಇದರಿಂದ ಸೆಟಿಲೈಟ್ ಕಳುಹಿಸುವ ವೆಚ್ಚ ಕಡಿಮೆ ಆಗುತ್ತದೆ.
ಇಲಾನ್ ಮಸ್ಕ್ ಅವರ ಈ ಸಾಧನೆಯು ಚಂದ್ರ ಮತ್ತು ಮಂಗಳ ಗ್ರಹದ ಮುಂದಿನ ಮಾನವ ಸಹಿತ ಯಾನಗಳಿಗೆ ಮಹತ್ವದ ಮುನ್ನುಡಿಯಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:18 am, Sun, 15 November 26