ಷೇರು ಮಾರುಕಟ್ಟೆಯಲ್ಲಿ ವರ್ಷಗಟ್ಟಲೆಯಿಂದ ಹೂಡಿಕೆ ಮಾಡುತ್ತಾ ಇರುವವರು ಅಂದರೆ ಅಲ್ಲಿನ ಆಗು- ಹೋಗುಗಳು ಲಾಭ, ನಷ್ಟಗಳ ಬಗ್ಗೆ ಒಂದು ಅಂದಾಜನ್ನು ತಿಳಿಸುತ್ತಾರೆ. ಇನ್ನು ಹೂಡಿಕೆ ಮಾಡುತ್ತಾ ಯಶಸ್ಸನ್ನೂ ಕಂಡವರು ಅಂದರೆ, ಆ ಅನುಭವದ ಮಾತುಗಳು ಇತರರಿಗೆ ಖಂಡಿತಾ ಸಹಾಯ ಆಗಬಲ್ಲದು. ಅಂಥವರಲ್ಲೊಬ್ಬರು ನಿತಿನ್ ಎಸ್ ಧರ್ಮವತ್. ಮನಿ9.ಕಾಮ್ಗಾಗಿ ರಾಹುಲ್ ಒಬೇರಾಯ್ ಅವರು ಪುಣೆ ಮೂಲದ ನಿತಿನ್ ಸಂದರ್ಶನ ಮಾಡಿದ್ದಾರೆ. ಔರಮ್ ಕ್ಯಾಪಿಟಲ್ನ ಸ್ಥಾಪಕರಲ್ಲಿ ಒಬ್ಬರಾದ ನಿತಿನ್ ಅವರದು ಷೇರುಪೇಟೆಯಲ್ಲಿ ಹೆಜ್ಜೆಗಳು ಕಂಡುಬರುತ್ತವೆ. ಕಳೆದ ಕೆಲವು ವರ್ಷಗಳಲ್ಲಿ ಹಲವು ಮಲ್ಟಿ ಬ್ಯಾಗರ್ಗಳನ್ನು ಗುರುತಿಸಿದ್ದಾರೆ ನಿತಿನ್. 2012ರಲ್ಲಿ ಅತುಲ್ ಲಿಮಿಟೆಡ್ ಕಂಪೆನಿಯ ಷೇರನ್ನು 180 ರೂಪಾಯಿಗೆ ಖರೀದಿಸಿದ್ದ ಅವರು, ಶೇ 1000ಕ್ಕೂ ಹೆಚ್ಚು ರಿಟರ್ನ್ಸ್ ಪಡೆದು, 2017ರಲ್ಲಿ ರೂ. 2000ಕ್ಕೆ ಮಾರಿದ್ದಾರೆ. ಅದೇ ರೀತಿ ಐಪಿಸಿಎ ಲ್ಯಾಬ್ಸ್, ಗೋದಾವರಿ ಪವರ್, ಕೆಎನ್ಆರ್ ಕನ್ಸ್ಟ್ರಕ್ಷನ್ ಮತ್ತು ಫಿನೋಲೆಕ್ಸ್ ಕೇಬಲ್ಸ್, ಸಬೆರೊ ಆರ್ಗಾನಿಕ್ಸ್, ವಿನತಿ ಆರ್ಗಾನಿಕ್ಸ್ನಿಂದ ಕೂಡ ಸಂಪತ್ತು ಸಂಗ್ರಹಕ್ಕೆ ಅವರಿಗೆ ಸಹಾಯ ಮಾಡಿವೆ.
ಅಂದಹಾಗೆ, ಹೂಡಿಕೆದಾರರಲ್ಲಿ ಈಕ್ವಿಟಿ ಮಾರುಕಟ್ಟೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಸಹ ಧರ್ಮವತ್ ಮಾಡುತ್ತಾರೆ. 2008ನೇ ಇಸವಿಯಿಂದಲೂ ಮಾಡಿಕೊಂಡು ಬರುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಹೂಡಿಕೆದಾರರಲ್ಲಿ ಆಗಿರುವ ಬದಲಾವಣೆಯನ್ನು ಗುರುತಿಸುವಲ್ಲಿ ಸಹ ಅವರೇನೂ ಹಿಂದೆ ಬಿದ್ದಿಲ್ಲ. ಅವರ ಜತೆಗಿನ ಸಂದರ್ಶನದ ಆಯ್ದ ಭಾಗವನ್ನು ಟಿವಿ9 ಕನ್ನಡ ಡಿಜಿಟಲ್ ಓದುಗರಿಗಾಗಿ ಇಲ್ಲಿ ನೀಡಲಾಗುತ್ತಿದೆ.
* ಗುಣಮಟ್ಟದ ಷೇರುಗಳನ್ನು ಹೇಗೆ ಹುಡುಕುತ್ತೀರಿ?
ಧರ್ಮವತ್: ಮೂಲಭೂತವಾಗಿ ತುಂಬ ಗಟ್ಟಿಯಾಗಿರುವ ಮಿಡ್ಕ್ಯಾಪ್ ಮತ್ತು ಸ್ಮಾಲ್ಕ್ಯಾಪ್ಗಳ ಮೇಲೆ ದೀರ್ಘಾವಧಿಗೆ ಹಣ ಹೂಡುತ್ತೇನೆ. ಯಾವ ವಲಯ ಹಾಗೂ ಷೇರು ಅಷ್ಟೇನೂ ಚೆನ್ನಾಗಿ ಪ್ರದರ್ಶನ ನೀಡುತ್ತಿರುವುದಿಲ್ಲ ಮತ್ತು ಇನ್ನೇನು ಬದಲಾವಣೆ ಕಾಣಲಿದೆ ಎನ್ನುವಂತಿರುತ್ತದೋ ಅವುಗಳ ಮೇಲೆ ಹೂಡಿಕೆ ಮಾಡ್ತೀನಿ. ನನಗೆ 20 ವರ್ಷಕ್ಕೂ ಹೆಚ್ಚು ಅನುಭವ ಇದೆ. ಕ್ರಿಸಿಲ್ ಮತ್ತು ಎಲ್ಅಂಡ್ಟಿ ಸಮೂಹವನ್ನೂ ನೋಡಿದ್ದೀನಿ. ಇಷ್ಟು ದೊಡ್ಡ ಅನುಭವ ನನಗೆ ಕಂಪೆನಿಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ, ಉದ್ಯಮದ ಸಂಕೀರ್ಣತೆ ತಿಳಿಯಲು ಸಹಾಯ ಮಾಡಿದೆ. ಕೇವಲ ಸಂಖ್ಯೆಗಳನ್ನು ನೋಡದೆ ಅದರಾಚೆಗೆ ತಿಳಿಯುವುದು ನನ್ನ ಧೋರಣೆ. ಉದ್ಯಮ, ಅದರ ತಂತ್ರದ ದಿಕ್ಕುಗಳು, ಸ್ಪರ್ಧೆ, ಆಡಳಿತ ಪ್ರಕ್ರಿಯೆ, ಪ್ರವರ್ತಕರ ಹಿನ್ನೆಲೆ, ಬದಲಾವಣೆಗಳು ಇವೆಲ್ಲವನ್ನೂ ಗಮನಿಸ್ತೀನಿ. ಇವೆಲ್ಲವೂ ಸಂಖ್ಯೆಗಳ ಆಚೆಗಿನ ಗಂಭೀರ ಸಂಗತಿಗಳು. ಈ ಕಾರಣಕ್ಕೆ ಹಲವು ಬುಲ್ (ಗೂಳಿ) ಮತ್ತು ಬೇರ್ (ಕರಡಿ) ಚಕ್ರಗಳನ್ನು ದಾಟಿಯೂ ಯಶಸ್ಸು ಕಾಣಲು ಸಾಧ್ಯವಾಗಿದೆ.
* ನೀವು ಸರಿಯಾದ ಸಮಯಕ್ಕೆ ಹೊರಗೆ ಕೂಡ ಬಂದಿದ್ದೀರಿ. ಸ್ಟಾಕ್ ಮಾರಲು ಹೇಗೆ ನಿರ್ಧರಿಸಿದಿರಿ?
ಧರ್ಮವತ್: ಸ್ಟಾಕ್ನಿಂದ ಹೊರಬರುವುದು ಬಹಳ ಕಷ್ಟದ ನಿರ್ಧಾರ. ವ್ಯಾಲ್ಯುಯೇಷನ್ ಮೇಲೆ ಗಮನ ಹರಿಸಿ, ಅದರಿಂದ ಹೊರಬರಬೇಕು. ಎರಡನೆಯದು ಯಾವುದೇ ಕಾರ್ಪೊರೇಟ್ ಆಡಳಿಯ ಸಮಸ್ಯೆ ಇದ್ದಲ್ಲಿ ಆ ಕಂಪೆನಿಯ ಸ್ಟಾಕ್ನಿಂದ ಹೊರಬರ್ತೀವಿ. ಒಂದು ವೇಳೆ ಈಗಿರುವುದಕ್ಕಿಂತ ಉತ್ತಮ ಅವಕಾಶ ಸಿಕ್ಕರೂ ಮತ್ತು ನಮ್ಮ ಮೂಲ ಹೂಡಿಕೆ ಸರಿ ಹೋಗುತ್ತಿಲ್ಲ ಅಂದರೂ ಹೊರಬರುವ ನಿರ್ಧಾರ ಮಾಡ್ತೀವಿ. ಈ ನಿರ್ಧಾರ ಕೈಗೊಳ್ಳುವ ಮುಂಚೆ, ಯಾವುದೇ ಸಂಗತಿ ಬದಲಾಗಲ್ಲ ಎಂದು ಖಾತ್ರಿ ಮಾಡಿಕೊಳ್ಳಬೇಕು. ಅದೇ ಕಥೆಯನ್ನು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ, ವರ್ಷದಿಂದ ವರ್ಷಕ್ಕೆ ಆಡಳಿತ ಮಂಡಳಿ ಹೇಳುತ್ತಲೇ ಇದ್ದರೆ ಖಾತ್ರಿ ಆಗುತ್ತದೆ.
* ಹೊಸ ಹೂಡಿಕೆದಾರರ ಜತೆಗೆ ಯಾವ ಪಾಠವನ್ನು ಹಂಚಿಕೊಳ್ಳಲು ಬಯಸ್ತೀರಿ?
ಧರ್ಮವತ್: ಮಾರ್ಕೆಟ್ನಿಂದ ತುಂಬ ಪಾಠ ಕಲಿತಿದ್ದೀನಿ. ನಾನು ಯಾವಾಗಲೂ ಹೇಳ್ತಿರ್ತೀನಿ; ಮಾರ್ಕೆಟ್ ಬಹಳ ಒಳ್ಳೆ ಮೇಷ್ಟ್ರು. ಆದರೆ ಅದರಿಂದ ಪಾಠ ಕಲಿಯೋದಿಕ್ಕೆ ಫೀ ಕಟ್ಟಬೇಕಾಗುತ್ತದೆ. ಬೇಗ ಫೀ ಕಟ್ಟಿದರೆ ಅಷ್ಟು ಒಳ್ಳೆಯದು. ನಾನು ಎರಡು ಪಾಠದ ಬಗ್ಗೆ ಹೇಳ್ತೀನಿ.
ಒಂದು, 1992- 93ರಲ್ಲಿ ಹರ್ಷದ್ ಮೆಹ್ತಾ ಹಗರಣ ಆಯಿತು. ಸಣ್ಣ ಹುಡುಗನಾಗಿ ಷೇರು ಮಾರ್ಕೆಟ್ ಬಗ್ಗೆ ಆಕರ್ಷಣೆ ಮೂಡಿತ್ತು. ಅಷ್ಟೇನೂ ಮೌಲ್ಯ ಇಲ್ಲದ ಸ್ಟಾಕ್ಗಳಲ್ಲಿ ಹೂಡಿಕೆ ಮಾಡಿದೆ. ಕೆಲವೇ ಸಮಯದಲ್ಲಿ ನನ್ನ ಹಣ ಪೇಪರ್ ಆಯಿತು. ನೀರಗುಳ್ಳೆ ಒಡೆಯಿತು. ನಿಮ್ಮನ್ನು ಆಚೆ ಹೋಗಲು ಬಿಡಲ್ಲ. ಆ ಮೂರ್ಖರ ಸ್ವರ್ಗದಲ್ಲೇ ಉಳಿಸುತ್ತದೆ. ನೀವು ಹೂಡಿಕೆ ಮಾಡಿದ ಮೊತ್ತದ ಸಮೀಪ ಬರುತ್ತದೆ ಅಂತ ಕಾಯುತ್ತಲೇ ಇರುತ್ತೀರಿ. ಆದರೆ ಅದು ಎಂದಿಗೂ ಬರಲ್ಲ. ಎರಡನೇದು ಈಚೆಗೆ ನಡೆದಿದ್ದು. ಎಂಟು ವರ್ಷಗಳ ಹಿಂದೆ. ಅದು ಎಂಸಿಎಕ್ಸ್ನಲ್ಲಿ ಹೂಡಿಕೆ. ಆ ನಂತರ ಎನ್ಎಸ್ಇಎಲ್, ನ್ಯಾಷನಲ್ ಸ್ಪಾಟ್ ಎಕ್ಸ್ಚೇಂಜ್, ವಂಚನೆ ವರದಿ ಆಯಿತು. ನನಗೆ ಎನ್ಎಸ್ಇಎಲ್ ಏನೋ ಸಮಸ್ಯೆ ಇದೆ ಅನ್ನಿಸಿತು. ಕನಿಷ್ಠ ಮೂರ್ನಾಲ್ಕು ಬ್ರೋಕರ್ಗಳು ಎನ್ಎಸ್ಇಎಲ್ ಸ್ಕೀಮ್ನಲ್ಲಿ ಹೂಡಿಕೆ ಮಾಡುವಂತೆ ಹೇಳಿದರು. ಶೇ 13ರಿಂದ 14ರಷ್ಟು ರಿಟರ್ನ್ಸ್ ಸಿಗುವುದಾಗಿ ಆಫರ್ ಮಾಡಿದರು. ಅದಕ್ಕಾಗಿ ಕಂಪೆನಿ ಶೇ 20ರಿಂದ 25ರಷ್ಟು ಗಳಿಸಬೇಕಿತ್ತು. ಅದು ಅಸಾಧ್ಯವಾಗಿತ್ತು. ಹೆಚ್ಚೂಕಡಿಮೆ ಎನ್ಎಸ್ಇಎಲ್ ಸಮಸ್ಯೆಯನ್ನು ನಾನು ಊಹಿಸಿದ್ದೆ. ಆದರೆ ನಾನು ಅದನ್ನು ಎಂಸಿಎಕ್ಸ್ ಜತೆ ಜೋಡಿಸಲಿಲ್ಲ. ಅದು ಎಂಸಿಎಕ್ಸ್ ಬಾಗಿಲಿಗೂ ಬರುತ್ತದೆ ಅಂದುಕೊಂಡೆ. ಅದು ನಾನು ಮಾಡಿದ ತಪ್ಪು. ಎಂಸಿಎಕ್ಸ್ ಷೇರಿನ ಬಗ್ಗೆ ನನಗಿದ್ದ ಪೂರ್ವಗ್ರಹ ಇದಕ್ಕೆ ಕಾರಣವಾಯಿತು. ಆದರೆ ಎಂಸಿಎಕ್ಸ್ ನಂಬುವುದು ಮುಂದುವರಿಸಿದೆ. ಕೆಳಗೆ ಬೀಳುವಾಗ ಎಂಸಿಎಕ್ಸ್ ಷೇರುಗಳನ್ನು ಖರೀದಿಸಿದೆ. ನಾನು ಪೂರ್ವಗ್ರಹ ಹೊಂದಿರಲಿಲ್ಲ ಅಂದರೆ ಈ ಇಳಿಮುಖದ ಹಾದಿಯನ್ನು ತಡೆಯಬಹುದಿತ್ತು
* ನೀವು ಷೇರು ಮಾರುಕಟ್ಟೆ ಪ್ರವೇಶಿಸಲು ಕಾರಣವಾದ ಅಂಶ ಯಾವುದು?
ಧರ್ಮವತ್: 1992-93ರಲ್ಲಿ ನನ್ನ ಪಯಣ ಆರಂಭಿಸಿದೆ. ಇದು ಬಹಳ ಕೆಟ್ಟ ಆರಂಭ. ಆದರೆ ಅದು ಸಾಂಪ್ರದಾಯಿಕವಾಗಿ ಅಡಿಗಲ್ಲು ಹಾಕಿಕೊಟ್ಟಿತು. ಗುಣಮಟ್ಟದ ಷೇರುಗಳಲ್ಲಿ ಹೂಡಿಕೆ ಮಾಡುವುದಕ್ಕೆ ಯೋಚನೆ ಮಾಡುವುದನ್ನು ಕಲಿಸಿತು. ಆರಂಭದ ವರ್ಷಗಳಲ್ಲಿ ಷೇರು ಮಾರುಕಟ್ಟೆ ನನ್ನ ಹವ್ಯಾಸ ಆಗಿತ್ತು. ಆದರೆ ಒಂದು ಉದ್ಯಮ ಹೇಗೆ ನಡೆಯುತ್ತದೆ ಎಂದು ತಿಳಿಯುವ ಕುತೂಹಲ ಬೆಳೆಸಿತು. ಕಲಿಕೆಗೆ ಷೇರು ಮಾರುಕಟ್ಟೆಗಿಂತ ಒಳ್ಳೆ ಅವಕಾಶ ಎಲ್ಲಿ ಸಿಗುತ್ತದೆ ಹೇಳಿ?
* ನೀವು ಯಾವಾಗಲೂ ಕಾರ್ಪೊರೇಟ್ ಆಡಳಿತದ ಬಗ್ಗೆ ಗಮನ ಹರಿಸುತ್ತೀರಿ. ಯಾವ ಕ್ಷೇತ್ರಗಳ ಕಡೆಗೆ ನಿಮ್ಮ ಗಮನ ಇರುತ್ತದೆ?
ಧರ್ಮವತ್: ಕಾರ್ಪೊರೇಟ್ ಆಡಳಿತ ನನ್ನ ಪಾಲಿಗೆ ತುಂಬ ಮುಖ್ಯ. ನಾವು ಕಳ್ಳರ ಕೈಗೆ ಮನೆ ಚಾವಿ ಕೊಡೊದಿಕ್ಕೆ ಆಗಲ್ಲ. ಕಾರ್ಪೊರೇಟ್ ಆಡಳಿತ ಸಮಸ್ಯೆಗಳಲ್ಲಿ ಸಿಲುಕಿಕೊಂಡ ಕಂಪೆನಿಗಳ ಉದಾಹರಣೆ ಇದೆ. ಕೆಲವು ಸಾರ್ವಜನಿಕರ ತಿಳಿವಳಿಕೆಗೂ ಇದೆ. ಕಾನೂನು ಬದ್ಧವಾಗಿ ಸರಿ ಇರುವ ಹಾಗೂ ನೈತಿಕವಾದ ತಪ್ಪಾದ ವಿಚಾರ ಕೆಲವು ಒವೆ. ಎರಡನೆಯದು ಪೂರ್ಣ ಪ್ರಮಾಣದ ಮೋಸ. ನಾವು ಮೊದಲನೆ ಕೆಟಗಿರಿ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಎರಡನೇ ಕೆಟಗಿರಿ ಹಿಡಿಯುವುದು ಸುಲಭ. ನಾವು ವಂಚಕ ಪ್ರವರ್ತಕರಿಗಿಂತ ಬುದ್ಧಿವಂತರಿರಲು ಸಾಧ್ಯವಿಲ್ಲ. ಆದ್ದರಿಂದ ಹದಿನೈದು- ಇಪ್ಪತ್ತು ಕಂಪೆನಿಗಳನ್ನು ಗುರುತಿಸಿ, ಅದರಲ್ಲೇ ಹೂಡಿಕೆ ಮಾಡುವುದು ಉತ್ತಮ.
* ಹೂಡಿಕೆದಾರರಿಗೆ ಕೆಲವು ಪುಸ್ತಕಗಳನ್ನು ಸಲಹೆ ನೀಡುತ್ತೀರಾ?
ಧರ್ಮವತ್: ನಾನು ಓದಿದ ಮೊದಲ ಪುಸ್ತಕ ಇಂಟೆಲಿಜೆಂಟ್ ಇನ್ವೆಸ್ಟರ್ ಮತ್ತು ಎರಡನೆಯದು ಸೆಕ್ಯೂರಿಟಿ ಅನಲಿಸಿಸ್. ಇವೆಲ್ಲ ಸಾರ್ವಕಾಲಿಕ ಶ್ರೇಷ್ಠ ಪುಸ್ತಕಗಳು. ಫಿಲಿಪ್ ಫಿಷರ್ ಬರೆದಿರುವ “Common Stocks and Uncommon Profits”, ಚಾರ್ಲ್ಸ್ ಬ್ರ್ಯಾಂಡೆಸ್ ಬರೆದ “Value Investing Today” ಮತ್ತು ಆ್ಯಂಡ್ರೈ ಕಿಲ್ಪ್ಯಾಟ್ರಿಕ್ ಬರೆದ “Of Permanent Value: the story of Warren Buffett” ಇವೆಲ್ಲವೂ ಉತ್ತಮ ಪುಸ್ತಕಗಳು. ಅಂತಿಮವಾಗಿ “Value Investing And Behavioural Finance” ಎಂಬ ಶ್ರೇಷ್ಠ ಪುಸ್ತಕವನ್ನು ಪರಾಗ್ ಪರೇಖ್ ಭಾರತೀಯ ಉದಾಹರಣೆಗಳ ಸಹಿತ ಬರೆದಿದ್ದಾರೆ. ಇದು ಬಹಳ ಮೌಲ್ಯಯುತ ಮಾರ್ಗದರ್ಶನ ನೀಡುತ್ತದೆ.
* ಕೊವಿಡ್ -19 ಕಾರಣದಿಂದಾಗಿ ಹೆಚ್ಚುತ್ತಿರುವ ಅನಿಶ್ಚಿತತೆಯ ಮಧ್ಯೆಯೂ ನೀವು ಈ ಮಾರುಕಟ್ಟೆಯನ್ನು ಹೇಗೆ ರೇಟ್ ಮಾಡುತ್ತೀರಿ? ಪ್ರಸ್ತುತ ಯಾವ ರೀತಿಯ ಷೇರುಗಳು ಮತ್ತು ವಲಯಗಳು ಆಕರ್ಷಕವಾಗಿ ಕಾಣುತ್ತಿವೆ?
ಧರ್ಮವತ್: ಕೊವಿಡ್ ಹೆಚ್ಚು ಅನಿಶ್ಚಿತವಾಗಿದೆ. ಮತ್ತು ನಮ್ಮೆಲ್ಲರ ಜೀವನಕ್ಕೂ ಭಯಾನಕವಾಗಿದೆ. ಭವಿಷ್ಯದಲ್ಲಿ ನಾವು ಯಾವುದೇ ಬಲವಾದ ಕೊರೊನಾ ಅಲೆಯ ಹೊಡೆತಕ್ಕೆ ಸಿಲುಕಿದರೂ ಅದು ನೆಗೆಟಿವ್ ಪರಿಣಾಮ ಬೀರುತ್ತದೆ. ಈ ಹಿಂದಿನ ಸಾಂಕ್ರಾಮಿಕ ಕಾಯಿಲೆಗಳು ಮತ್ತು ಪ್ರಸ್ತುತ ಲಸಿಕೆಗಳನ್ನು ಗಮನಿಸಿದರೆ, ಈ ಸಾಂಕ್ರಾಮಿಕ ರೋಗದ ಉತ್ತುಂಗವನ್ನು ನಾವು ನೋಡಿದ್ದೇವೆ.
ಮೂಲಸೌಕರ್ಯ, ಕಾಗದ ಮತ್ತು ಕ್ಯಾಪಿಟಲ್ ಗೂಡ್ಸ್ ಕ್ಷೇತ್ರಗಳನ್ನು ನಾನು ಇಷ್ಟಪಡುತ್ತೇನೆ. ಪ್ರವಾಸೋದ್ಯಮ ಆಧಾರಿತ ಕಂಪನಿಗಳು ಮತ್ತು ಕೈಗಾರಿಕೆಗಳ ಮೇಲೆ ನಿಗಾ ಇಡಬೇಕು. ಇದು ವಿಮಾನಯಾನ ಸಂಸ್ಥೆಗಳು, ಚಿತ್ರಮಂದಿರಗಳು, ಹೋಟೆಲ್‌ಗಳು, ರೆಸಾರ್ಟ್‌ಗಳು, ಮನರಂಜನಾ ಉದ್ಯಾನವನಗಳು ಇತ್ಯಾದಿಗಳ ಷೇರುಗಳನ್ನು ಒಳಗೊಂಡಿರಬಹುದು. ಕೊವಿಡ್ ಅಲೆ ಕ್ಷೀಣಿಸುತ್ತಿರುವ ಹಾದಿಯಲ್ಲಿದ್ದರೆ ಮತ್ತು ಲಸಿಕೆ ಉತ್ತುಂಗಕ್ಕೇರಿದರೆ ನಾವು ‘ರಿವೇಂಜ್’ ಖರ್ಚು ನೋಡಬಹುದು.
* ಹೊಸಬರು ಮತ್ತು ಹಳಬರು ಹೂಡಿಕೆದಾರರಲ್ಲಿ ಏನು ಪ್ರತ್ಯೇಕತೆ ಸೃಷ್ಟಿಸುತ್ತದೆ?
ಧರ್ಮವತ್: ಹೊಸ ಹೂಡಿಕೆದಾರರನ್ನು ಹೆಚ್ಚು ತಿಳಿವಳಿಕೆಯುಳ್ಳ, ಕಲಿತ ಮತ್ತು ದೀರ್ಘಾವಧಿಯ ಉದ್ದೇಶದಿಂದ ಹೂಡಿಕೆ ಮಾಡುತ್ತಿರುವಂತೆ ನಾನು ನೋಡುತ್ತಿರುತ್ತೇನೆ. ಅಲ್ಲದೆ, ಮಾರುಕಟ್ಟೆ ಕುಸಿತಗಳಿಗೆ ಸಾಕ್ಷಿಯಾದಾಗ ಅವರು ಭಯಪಡುವುದಿಲ್ಲ. ತಮ್ಮ ಬಂಡವಾಳ ಪೋರ್ಟ್ಫೋಲಿಯೋವನ್ನು ರೂಪಿಸಲು ವೃತ್ತಿಪರರ ಸಹಾಯ ಪಡೆಯಲು ಮತ್ತು ದೀರ್ಘಾವಧಿಯ ಆಕಾಂಕ್ಷೆಗಳನ್ನು ಸಾಧಿಸಲು ಮುಕ್ತರಾಗಿದ್ದಾರೆ. ಇದು ದೊಡ್ಡ ಬದಲಾವಣೆಯಾಗಿದೆ.
ಇದನ್ನೂ ಓದಿ: Sensex: ಇನ್ನು 10 ವರ್ಷದಲ್ಲಿ 2,00,000 ಪಾಯಿಂಟ್ ತಲುಪುತ್ತದಂತೆ ಭಾರತದ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್
(Pune based stock market investor Niteen S Dharmawath shared his experience of stock market)