AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sensex: ಇನ್ನು 10 ವರ್ಷದಲ್ಲಿ 2,00,000 ಪಾಯಿಂಟ್ ತಲುಪುತ್ತದಂತೆ ಭಾರತದ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್

ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್​ನ ಮಲ್ಟಿಇಯರ್ ಗೂಳಿ ಓಟ ಇನ್ನು ಹತ್ತು ವರ್ಷದಲ್ಲಿ, 2030ರ ಹೊತ್ತಿಗೆ 2,00,000 ಪಾಯಿಂಟ್​ಗೆ ತಲುಪಬಹುದು ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಿದ್ದಾರೆ.

Sensex: ಇನ್ನು 10 ವರ್ಷದಲ್ಲಿ 2,00,000 ಪಾಯಿಂಟ್ ತಲುಪುತ್ತದಂತೆ ಭಾರತದ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್
ಸಾಂದರ್ಭಿಕ ಚಿತ್ರ
Srinivas Mata
|

Updated on: May 31, 2021 | 1:55 PM

Share

ಹಲವು ವರ್ಷಗಳ ಗೂಳಿ ಓಟದ (ಬುಲ್ ರನ್) ಮುನ್ನುಡಿಯೇ ಈಗಿನ ಷೇರುಪೇಟೆ ಸೂಚ್ಯಂಕದ ಗಳಿಕೆ. ಇದು ಮುಂದಿನ ಹತ್ತು ವರ್ಷದಲ್ಲಿ ಬಿಎಸ್​ಇ ಸೆನ್ಸೆಕ್ಸ್ ಅನ್ನು 2,00,000 ಪಾಯಿಂಟ್ಸ್​ಗೆ ಒಯ್ಯಬಹುದು ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್ ಸಹ ಸಂಸ್ಥಾಪಕ ಹಾಗೂ ಅಧ್ಯಕ್ಷ ರಾಮ್​ದೇವ್ ಅಗರ್​ವಾಲ್ ಹೇಳಿದ್ದಾರೆ. ಭಾರತವು ಕಳೆದ ಕೆಲವು ವರ್ಷಗಳಲ್ಲಿ ಸ್ಥಿರವಾದ ಆರ್ಥಿಕ ಬೆಳವಣಿಗೆ ಕಂಡಿದೆ. ಪ್ರಜಾಪ್ರಭುತ್ವ, ಜನಸಂಖ್ಯೆ, ಡಿಜಿಟೈಸೇಷನ್, ಡಾಲರ್ ಮೀಸಲು ಮತ್ತು ಸ್ಥಿರವಾದ ಸರ್ಕಾರಗಳಿಂದ ಸನ್ನಿವೇಶವು ದೇಶಕ್ಕೆ ಪೂರಕವಾಗಿ ಮಾರ್ಪಟ್ಟಿದೆ. ಮುಂದಿನ ಹತ್ತು ವರ್ಷಗಳಲ್ಲಿ ಸೆನ್ಸೆಕ್ಸ್ ಸೂಚ್ಯಂಕ 2,00,000 ಪಾಯಿಂಟ್ ಮುಟ್ಟುವುದೆಂದರೆ, ಈಗಿರುವ 51,000 ಪಾಯಿಂಟ್​ನ ನಾಲ್ಕು ಪಟ್ಟು ಆಗುತ್ತದೆ. ತಕ್ಷಣ ಲೆಕ್ಕ ಹಾಕಿದರೆ ಇದು ಶೇ 15 ಸಿಎಜಿಆರ್ (ಕಾಂಪೌಂಡ್ ಆ್ಯನ್ಯುಯೆಲ್ ಗ್ರೋಥ್ ರೇಟ್) ಎಂಬಂತೆ ಕಾಣುತ್ತದೆ.

ಸೆನ್ಸೆಕ್ಸ್​ ಏರಿಕೆಗೆ ಯಾವುದು ಸಹಾಯ ಮಾಡಬಹುದು? ಪ್ರಬಲ ಆರ್ಥಿಕತೆ: ರಾಮ್​ದೇವ್ ಅವರು ಹಲವು ಪೂರಕ ಅಂಶಗಳನ್ನು ಪಟ್ಟಿದ್ದಾರೆ. ಅದರಲ್ಲಿ ಪ್ರಾಥಮಿಕವಾಗಿ ಶೇ 12ರಿಂದ 13ರಷ್ಟು ನಾಮಿನಲ್ ಜಿಡಿಪಿ ಬೆಳವಣಿಗೆ ಸಾಧ್ಯತೆ. ರಿಯಲ್ ಜಿಡಿಪಿ ಶೇ 7ರಿಂದ 8 ಹಾಗೂ ಹಣದುಬ್ಬರ ಶೇ 4ರಿಂದ 5 ಅಂದಾಜು ಮಾಡಿದ್ದಾರೆ. ತಲಾದಾಯ ಜಿಡಿಪಿಯು 10ಪಟ್ಟು ಮತ್ತು ಉಳಿತಾಯ ಹಾಗೂ ಹೂಡಿಕೆ ಸೇವೆಗಳು ನಾಲ್ಕು ಪಟ್ಟು ಅವಕಾಶಗಳನ್ನು ಸೂಚಿಸುತ್ತಿವೆ ಎಂದು ಅಗರ್​ವಾಲ್ ಹೇಳಿದ್ದಾರೆ.

ಕಾರ್ಪೊರೇಟ್ ಲಾಭದಲ್ಲಿ ಏರಿಕೆ ನಿರೀಕ್ಷೆ: ಜಿಡಿಪಿ ಬೆಳವಣಿಗೆಗಿಂತ ಕಾರ್ಪೊರೇಟ್ ಲಾಭ ಹೆಚ್ಚಿರಲಿದೆ ಎಂದು ನಿರೀಕ್ಷಿಸಲಾಗಿದೆ. ಕಾರ್ಪೊರೇಟ್ ಲಾಭ ಶೇ 15 ಸಿಎಜಿಆರ್ ಏರಿಕೆ ಆಗುವ ನಿರೀಕ್ಷೆ ಇದೆ.

ಮಾರುಕಟ್ಟೆ ಬೆಳಣಿಗೆ: ಕಾರ್ಪೊರೇಟ್ ಲಾಭದ ಜತೆಗೆ ಷೇರುಪೇಟೆ ಕೂಡ ಬೆಳವಣಿಗೆ ಸಾಧಿಸುವ ನಿರೀಕ್ಷೆ ಇದೆ. ಅದು ಕಾರ್ಪೊರೇಟ್ ಲಾಭದ ಹಾದಿಯಲ್ಲೇ ಸಾಗಿ, ಶೇ 15 ಸಿಎಜಿಆರ್​ನಲ್ಲಿ ಸೆನ್ಸೆಕ್ಸ್ ನಾಲ್ಕು ಪಟ್ಟು ಮೇಲೆರಲು ನೆರವು ನೀಡುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಪ್ರಜಾಪ್ರಭುತ್ವ: ಭಾರತದ ಪ್ರಬಲ ಪ್ರಜಾಪ್ರಭುತ್ವ ಮತ್ತು ತುಂಬ ಚೆನ್ನಾಗಿ ರೂಪುಗೊಂಡಿರುವ ಸರ್ಕಾರದ ರಚನೆಯಿಂದ ಕೂಡ ಬೆಳವಣಿಗೆಗೆ ಸಹಾಯ ಆಗುತ್ತದೆ. ಭಾರತದಲ್ಲಿ ಈಗ ಯುವಜನರ ಜನಸಂಖ್ಯೆ ಹೆಚ್ಚಾಗಿದೆ. 2030ರ ಹೊತ್ತಿಗೆ ಆ ದೊಡ್ಡ ಜನಸಖ್ಯೆ ಮೇಲ್ಮಧ್ಯಮ ವರ್ಗಕ್ಕೆ ಸಾಗುವ ನಿರೀಕ್ಷೆ ಇದೆ.

ಗಮನಿಸಬೇಕಾದ ವಲಯಗಳು ಯಾವುವು? ಮುಂದಿನ ದಶಕ ವಹಿವಾಟು ನಡೆಸುವುದಕ್ಕೆ ಸೂಕ್ತವಾಗಿರಲಿದೆ. ಅದಕ್ಕೆ ಪೂರಕವಾಗಿ ಸೆನ್ಸೆಕ್ಸ್ ಬೆಳವಣಿಗೆ ಇರುತ್ತದೆ. ಆ ಪೈಕಿ ಹೆಚ್ಚಿನ ಹೂಡಿಕೆ ಇನ್ಫರ್ಮೇಷನ್ ಟೆಕ್ನಾಲಜಿಗೆ ಬರುವ ಸಾಧ್ಯತೆ ಇದೆ. ಜಾಗತಿಕ ಮಟ್ಟದ ಸ್ಪರ್ಧೆಯ ಲಾಭ ಭಾರತದ ಕಂಪೆನಿಗಳಿಗೆ ಆಗಲಿದೆ. ದೀರ್ಘಕಾಲದ ಡಿಜಿಟೈಸೇಷನ್ ಕೂಡ ಬಾಕಿ ಇದೆ. ಭಾರತದ ಕಂಪೆನಿಗಳ ನಿವ್ವಳ ಲಾಭದಲ್ಲಿ ಐ.ಟಿ. ವಲಯದ ಪಾಲು ಶೇ 27. ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ ಶೇ 12.4. ಇನ್ನು ಖಾಸಗಿ ವಲಯದ ಬ್ಯಾಂಕ್​ಗಳು, ಖಾಸಗಿ ಲೈಫ್ ಇನ್ಷೂರೆನ್ಸ್ ವಲಯ ಕೂಡ ಫೇವರಿಟ್. ಇದರೊಂದಿಗೆ ವಾಹನಗಳು, ಗ್ರಾಹಕ ಬಳಕೆ ವಸ್ತುಗಳು, ಪೇಂಟ್ಸ್ ಮತ್ತು ಆಯ್ದ ಕೈಗಾರಿಕೆಗಳನ್ನು ಹೂಡಿಕೆಗೆ ಸೂಕ್ತ ವಲಯಗಳು ಎಂದು ರಾಮ್​ದೇವ್ ಅಗರ್​ವಾಲ್ ಅಭಿಪ್ರಾಯ ಪಟ್ಟಿದ್ದಾರೆ.

(ಈ ಲೇಖನದ ಅಭಿಪ್ರಾಯಗಳು ಬ್ರೋಕರೇಜ್​ ಹೌಸ್​ನ ವಿಶ್ಲೇಷಕರದೇ ಹೊರತು ಟಿವಿ9ಕನ್ನಡ ಡಿಜಿಟಲ್ ಮತ್ತು ಸೋದರ ಸಂಸ್ಥೆಗಳದಲ್ಲ.)

ಇದನ್ನೂ ಓದಿ: stock market investor: ವ್ಯಕ್ತಿಯ ಸಾವಿನ ನಂತರ ಷೇರು ವರ್ಗಾವಣೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?

ಇದನ್ನೂ ಓದಿ: Minimum amount for investment: ನನ್ನ ಹೂಡಿಕೆ ಪಯಣ 11 ರೂಪಾಯಿ ಜತೆ ಶುರುವಾಗಿದ್ದು ಹೇಗೆ ಗೊತ್ತಾ?

(BSE Sensex index may touch 2,00,000 points by the year 2030, according to Motilal Oswal brokerage firm chairman Ramdeo Agarwal)