ಅಂಕಿತಿ ಬೋಸ್ (Ankiti Bose) ಹೆಸರು ಕೇಳಿರಬಹುದು. 23ನೇ ವಯಸ್ಸಿನಲ್ಲಿ ಜಿಲಿಂಗೋ (Zilingo) ಎಂಬ ಕಂಪನಿಯನ್ನು ಸ್ಥಾಪಿಸಿ ಭಾರತದ ಸ್ಟಾರ್ಟಪ್ ಮುಖಂಡರ ಸಾಲಿನಲ್ಲಿ ಗುರುತಿಸಿಕೊಂಡವರಾಗಿದ್ದರು. ಬೆಂಗಳೂರಿನಲ್ಲಿ ಮೊದಲ ಉದ್ಯೋಗ ಮಾಡಿ ಬಳಿಕ ಇವರು ಸ್ಥಾಪಿಸಿದ್ದ ಕಂಪನಿ 7,000 ಕೋಟಿ ರೂ ಮೌಲ್ಯದ ಕಂಪನಿಯಾಗಿ ಬೆಳೆಸಿದ ಕೀರ್ತಿ ಇವರದ್ದು. ಆದರೆ, ತಾನೇ ಕಟ್ಟಿದ ಕಂಪನಿಯಿಂದ ಹೊರದಬ್ಬಿಸಿಕೊಂಡ ದುರದೃಷ್ಟವಂತೆಯೂ ಹೌದು.
ಅಂಕಿತಿ ಬೋಸ್ ಉತ್ತರಾಖಂಡ್ನ ಡೆಹ್ರಾಡೂನ್ನವರು. ಓದಿದ್ದು ಮುಂಬೈನಲ್ಲಿ. ಕೆಲಸ ಆರಂಭಿಸಿದ್ದು ಬೆಂಗಳೂರಿನಲ್ಲಿ. ಮೆಕಿನ್ಸೀ ಅಂಡ್ ಕಂಪನಿ ಮತ್ತು ಸಿಕ್ವೋಯ ಕ್ಯಾಪಿಟಲ್ (Sequoia Capital) ಕಂಪನಿಗಳಲ್ಲಿ ಕೆಲಸ ಮಾಡಿದರು. 23ನೇ ವಯಸ್ಸಿನಲ್ಲಿ ಧ್ರುವ್ ಕಪೂರ್ ಜೊತೆ ಸೇರಿ ಅಂಕಿತಿ ಬೋಸ್ 2015ರಲ್ಲಿ ಜಿಲಿಂಗೋ ಕಂಪನಿಯನ್ನು ಸ್ಥಾಪಿಸಿದರು.
ಅಂಕಿತಿ ಬೋಸ್ ಬೆಂಗಳೂರಿನಲ್ಲಿ ಸೀಕ್ವೋಯ ಕ್ಯಾಪಿಟಲ್ ಎಂಬ ಹಣಕಾಸು ಸಂಸ್ಥೆಯಲ್ಲಿ ಕೆಲಸ ಮಾಡುವಾಗ ಥಾಯ್ಲೆಂಡ್ ಪ್ರವಾಸ ಕೈಗೊಂಡಿದ್ದರು. ಥಾಯ್ಲೆಂಡ್ನ ಅತಿದೊಡ್ಡ ವೀಕೆಂಡ್ ಮಾರುಕಟ್ಟೆ ಎನಿಸಿದ ಚತುಚಕ್ ಮಾರ್ಕೆಟ್ಗೆ ಹೋದಾಗ ಅಂಕಿತಿಗೆ ಒಳ್ಳೆಯ ಬಿಸಿನೆಸ್ ಐಡಿಯ ಬಂದಿತ್ತು.
ಇದನ್ನೂ ಓದಿ: ಅದೇ ಸಂಬಳ, ಹೆಚ್ಚು ಕೆಲಸ; ಉದ್ಯೋಗಿಗಳನ್ನು ಕಾಡುತ್ತಿದೆ ‘ಒಣ ಬಡ್ತಿ’ ಟ್ರೆಂಡ್
ಆ ವೀಕೆಂಡ್ ಮಾರ್ಕೆಟ್ನಲ್ಲಿ ಬರೋಬ್ಬರಿ 11,000ಕ್ಕೂ ಹೆಚ್ಚು ಸ್ಟಾಲ್ಗಳಿವೆ. ಆದರೆ, ಈ ಸ್ಥಳೀಯ ಶಾಪ್ಗಳು ಆನ್ಲೈನ್ ಸೇವೆ ಹೊಂದಿಲ್ಲದಿರುವುದು ಮತ್ತು ಈ ಅಂಗಡಿಗಳಿಂದ ಇನ್ನೂ ಹೆಚ್ಚಿನ ಮಟ್ಟದ ಬಿಸಿನೆಸ್ ಆಗುವ ಸಂಭಾವ್ಯತೆಯನ್ನು ಅಂಕಿತಿ ಗ್ರಹಿಸಿದರು. ಅದರ ಬೆನ್ನಲ್ಲೇ ಜಿಲಿಂಗೋ ಸ್ಥಾಪನೆ ಮಾಡಿದರು. ಥಾಯ್ಲೆಂಡ್, ಫಿಲಿಪ್ಪೈನ್ಸ್, ಇಂಡೋನೇಷ್ಯಾ, ಹಾಂಕಾಂಗ್, ಆಸ್ಟ್ರೇಲಿಯಾ ಮತ್ತು ಅಮೆರಿಕದಲ್ಲಿ ಇದರ ಬಿಸಿನೆಸ್ ಹರಡಿದೆ. 2019ರಲ್ಲಿ ಜಿಲಿಂಗೋದ ಮಾರುಕಟ್ಟೆ ಮೌಲ್ಯ 7,000 ಕೋಟಿ ರೂ ಮುಟ್ಟಿತ್ತು.
ಜಿಲಿಂಗೋದ ಸಹ-ಸಂಸ್ಥಾಪಕಿಯಾಗಿ ಮತ್ತು ಅದರ ಬಿಸಿನೆಸ್ ಸಕ್ಸಸ್ನಲ್ಲಿ ಪ್ರಮುಖ ಪಾತ್ರಧಾರಿಯಾಗಿದ್ದ ಅಂಕಿತಿ ಬೋಸ್ ಅವರನ್ನು ಆ ಕಂಪನಿಯಿಂದಲೇ ಉಚ್ಛಾಟಿಸಲಾಗಿತ್ತು. ಬೋರ್ಡ್ ಅನುಮತಿ ಇಲ್ಲದೇ ಸಂಬಳವನ್ನು ಹಲವು ಪಟ್ಟು ಹೆಚ್ಚಿಸಿಕೊಂಡ ಆರೋಪ ಅವರ ಮೇಲಿದೆ. ಹಾಗೆಯೇ, ಹಲವು ವೆಂಡರ್ಗಳಿಗೆ ಅಕ್ರಮವಾಗಿ ಹಣ ಪಾವತಿ ಮಾಡಿರುವುದು ಇನ್ನೊಂದು ಆರೋಪ ಇದೆ. ಅಲ್ಲದೇ, ಉದ್ಯೋಗಿಗಳನ್ನು ಬೆದರಿಸಿ ಕೆಲಸ ಮಾಡಿಸುತ್ತಾರೆ ಎನ್ನುವ ಆರೋಪವೂ ಇತ್ತು. ಈ ಕಾರಣಕ್ಕೆ ಕಂಪನಿಯ ಮ್ಯಾನೇಜ್ಮೆಂಟ್ ಬೋರ್ಡ್ 2022ರಲ್ಲಿ ಅಂಕಿತಿ ಬೋಸ್ ಅವರನ್ನು ಸಿಇಒ ಸ್ಥಾನದಿಂದ ತೆಗೆದುಹಾಕಿತು.
ಇದನ್ನೂ ಓದಿ: ಭಾರತ ಮುಂದುವರಿದ ದೇಶವಾಗಬೇಕಾದರೆ ಈ ನಾಲ್ಕು ಅಂಶಗಳು ಮುಖ್ಯ: ಮಾಜಿ ಆರ್ಬಿಐ ಗವರ್ನರ್ ಸುಬ್ಬಾರಾವ್ ಸಲಹೆ
ಮಹೇಶ್ ಮೂರ್ತಿ ಎಂಬ ಹೂಡಿಕೆದಾರರೊಬ್ಬರು 2023ರ ಮಾರ್ಚ್ 1ರಂದು ಔಟ್ಲುಕ್ ಬಿಸಿನೆಸ್ ಮ್ಯಾಗಜಿನ್ನಲ್ಲಿ ಭಾರತದಲ್ಲಿನ ಹೂಡಿಕೆ ಕಂಪನಿಗಳ ಬಗ್ಗೆ ಲೇಖನ ಬರೆದಿದ್ದರು. ಅದರಲ್ಲಿ ಅಂಕಿತಿ ಬೋಸ್ ವಿರುದ್ಧ ಬರೆಯಲಾಗಿತ್ತು.
ತನ್ನ ಬಗ್ಗೆ ಸುಳ್ಳು ಸಂಗತಿಗಳನ್ನು ಬರೆದು ಮಾನ ಹಾನಿಗೆ ಕಾರಣವಾಗಿದ್ದಾರೆ ಎಂದು ಆರೋಪಿಸಿ ಅಂಕಿತಿ ಬೋಸ್ ಅವರು ಎಪ್ರಿಲ್ ತಿಂಗಳಲ್ಲಿ ಬಾಂಬೆ ಹೈಕೋರ್ಟ್ನಲ್ಲಿ 820 ಕೋಟಿ ರೂ ಮೊತ್ತಕ್ಕೆ ಡಿಫೆಮೇಶನ್ ಕೇಸ್ ಹಾಕಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ