2022ನೇ ಇಸವಿಯ ಮಾರ್ಚ್ 31 ಪ್ರಸಕ್ತ ಹಣಕಾಸು ವರ್ಷದ (Financial Year) ಕೊನೆಯನ್ನು ಸೂಚಿಸುವ ದಿನ. ಇದು ಅಷ್ಟು ಮಾತ್ರವಲ್ಲ, ಮುಂದಿನ ಹಣಕಾಸು ವರ್ಷದ ಆರಂಭಕ್ಕೆ ಆಗುವಂಥ ಬದಲಾವಣೆಯನ್ನೂ ನೆನಪಿಸುತ್ತದೆ. ಏಕೆಂದರೆ ಏಪ್ರಿಲ್ 1, 2022 ಹೊಸ ಆರ್ಥಿಕ ವರ್ಷದ ಆರಂಭವಾಗುತ್ತದೆ. ಏಪ್ರಿಲ್ 1ರ ಆರಂಭಕ್ಕೂ ಮುನ್ನವೇ ಬದಲಾವಣೆಗಳ ಬಗ್ಗೆ ತಿಳಿದುಕೊಳ್ಳುವುದು ಬುದ್ಧಿವಂತಿಕೆ. ಮುಂದಿನ ತಿಂಗಳಿಂದ ಆಗುವಂಥ ಹಣಕಾಸಿನ ಬದಲಾವಣೆಗಳ ಮುನ್ನೋಟ ಇಲ್ಲಿದೆ.
ಪೋಸ್ಟ್ ಆಫೀಸ್ ಖಾತೆಗಳ ಬಡ್ಡಿ ಜಮೆ
ಏಪ್ರಿಲ್ 1, 2022ರಿಂದ ಪೋಸ್ಟ್ ಆಫೀಸ್ MIS, SCSC ಅಥವಾ ಟರ್ಮ್ ಠೇವಣಿ ಮೇಲಿನ ಬಡ್ಡಿಯನ್ನು ನಗದು ರೂಪದಲ್ಲಿ ನೀಡುವುದಿಲ್ಲ. ಬದಲಿಗೆ ಉಳಿತಾಯ ಖಾತೆಗಳಿಗೆ ಜಮಾ ಮಾಡಲಾಗುವುದು. ಹಾಗಾಗಿ ಅಂತಹ ಖಾತೆದಾರರು ತಮ್ಮ ಅಂಚೆ ಕಚೇರಿಯ ಉಳಿತಾಯ ಖಾತೆಯನ್ನು ಈ ಖಾತೆಗಳೊಂದಿಗೆ ಜೋಡಣೆ ಮಾಡಬೇಕು ಎಂದು ಸೂಚಿಸಲಾಗಿದೆ. ಇಲಾಖೆಯು ಅಧಿಸೂಚನೆಯಲ್ಲಿ, “ಬಡ್ಡಿಯನ್ನು ಖಾತೆದಾರರ ಅಂಚೆ ಕಚೇರಿ ಉಳಿತಾಯ ಖಾತೆ ಅಥವಾ ಬ್ಯಾಂಕ್ ಖಾತೆಗೆ ಮಾತ್ರ ಜಮಾ ಮಾಡಲಾಗುವುದು. ಖಾತೆದಾರರು ತಮ್ಮ ಉಳಿತಾಯ ಖಾತೆಯನ್ನು ಹಿರಿಯ ನಾಗರಿಕರ ಉಳಿತಾಯ, ಮಾಸಿಕ ಯೋಜನೆಯೊಂದಿಗೆ, ಟರ್ಮ್ ಡೆಪಾಸಿಟ್ನೊಂದಿಗೆ ಜೋಡಣೆ ಮಾಡಲು ಸಾಧ್ಯವಾಗದಿದ್ದರೆ ಬಾಕಿ ಇರುವ ಬಡ್ಡಿಯನ್ನು ಪೋಸ್ಟ್ ಆಫೀಸ್ ಉಳಿತಾಯ ಖಾತೆಯಲ್ಲಿ ಕ್ರೆಡಿಟ್ ಮೂಲಕ ಅಥವಾ ಚೆಕ್ ಮೂಲಕ ಮಾತ್ರ ಪಾವತಿಸಬೇಕು.”
ಕ್ರಿಪ್ಟೋಕರೆನ್ಸಿ ತೆರಿಗೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ 2022ರ ಭಾಷಣದಲ್ಲಿ ವರ್ಚುವಲ್ ಡಿಜಿಟಲ್ ಆಸ್ತಿಗಳ ವರ್ಗಾವಣೆ ಅಥವಾ ಕ್ರಿಪ್ಟೋಕರೆನ್ಸಿ ಮೇಲಿನ ತೆರಿಗೆಯ ಮೇಲೆ ಶೇ 30ರ ತೆರಿಗೆಯನ್ನು ಘೋಷಿಸಿದರು. ಹಣಕಾಸು ಮಸೂದೆ, 2022ರಲ್ಲಿನ ತಿದ್ದುಪಡಿಗಳನ್ನು ಲೋಕಸಭೆಯಲ್ಲಿ ಅಂಗೀಕರಿಸಿತು. ಏಪ್ರಿಲ್ 1, 2022ರಿಂದ, ಕ್ರಿಪ್ಟೋ ಸ್ವತ್ತುಗಳ ವರ್ಗಾವಣೆಯಿಂದ ಉಂಟಾಗುವ ಯಾವುದೇ ಆದಾಯ ಅಥವಾ ಲಾಭದ ಮೇಲೆ ಶೇ 30ರ ತೆರಿಗೆಯನ್ನು ವಿಧಿಸಲಾಗುತ್ತದೆ. ಅಲ್ಲದೆ, ಕ್ರಿಪ್ಟೋಗಳ ಖರೀದಿ ಮತ್ತು ಮಾರಾಟದ ಮೇಲೆ ಶೇಕಡಾ 1ರಷ್ಟು ಟಿಡಿಎಸ್ ಸಹ ಕಟ್ಟಬೇಕು.
ಹಣಕಾಸು ವರ್ಷ 2020-21ಕ್ಕಾಗಿ ಐಟಿಆರ್ ಸಲ್ಲಿಸದಿದ್ದಲ್ಲಿ ಹೆಚ್ಚಿನ ಟಿಡಿಎಸ್/ಟಿಸಿಎಸ್
ಹಣಕಾಸು ವರ್ಷ 2020-21ಕ್ಕಾಗಿ ಐಟಿಆರ್ ಅನ್ನು ಸಲ್ಲಿಸದಿರುವಲ್ಲಿ ಹೊಸ ಹಣಕಾಸು ವರ್ಷದಲ್ಲಿ ಹೆಚ್ಚಿನ ಟಿಡಿಎಸ್/ಟಿಸಿಎಸ್ ಪಾವತಿಸಬೇಕಾಗುತ್ತದೆ. ಮುಂಬರುವ ಹಣಕಾಸು ವರ್ಷದಿಂದ ಒಬ್ಬ ವ್ಯಕ್ತಿಯು ಹಣಕಾಸು ವರ್ಷ 2019-20ಕ್ಕಾಗಿ ಐಟಿಆರ್ ಅನ್ನು ಸಲ್ಲಿಸಿದ್ದರೆ, ಆದರೆ ಹಣಕಾಸು ವರ್ಷ 2020-21ಕ್ಕೆ ಐಟಿಆರ್ ಅನ್ನು ಸಲ್ಲಿಸದಿದ್ದರೆ ಮತ್ತು ಅದೇ ಹಣಕಾಸಿನ ವರ್ಷದಲ್ಲಿ ಒಟ್ಟು ಟಿಡಿಎಸ್ ರೂ.50,000ಕ್ಕಿಂತ ಹೆಚ್ಚಿದ್ದರೆ ಆ ನಂತರ ಆದಾಯದಿಂದ ಹೆಚ್ಚಿನ ಟಿಡಿಎಸ್, ಟಿಸಿಎಸ್ ಅನ್ನು ಅವರಿಂದ ಕಡಿತಗೊಳಿಸಲಾಗುತ್ತದೆ. ಇದು ರೆಕರಿಂಗ್ ಡೆಪಾಸಿಟ್ನಿಂದ ಬರುವ ಬಡ್ಡಿ ಆದಾಯ, ಫಿಕ್ಸೆಡ್ ಡೆಪಾಸಿಟ್ಸ್, ಡಿವಿಡೆಂಡ್ ಆದಾಯ, ವರ್ಷಾಶನ ಪಾವತಿಗಳಂತಹ ನಿರ್ದಿಷ್ಟ ಆದಾಯದ ಮೂಲಗಳಿಗೆ ಅನ್ವಯಿಸುತ್ತದೆ.
ಸಣ್ಣ ಉಳಿತಾಯ ಯೋಜನೆಯ ಬಡ್ಡಿ ದರ
ಸಣ್ಣ ಉಳಿತಾಯ ಯೋಜನೆಗಳಿಗೆ ಸರ್ಕಾರ ಇನ್ನೂ ಹೊಸ ಬಡ್ಡಿ ದರಗಳನ್ನು ಪ್ರಕಟಿಸಿಲ್ಲ. ಮುಂದಿನ ಹಣಕಾಸು ವರ್ಷದಲ್ಲಿ ದರದಲ್ಲಿ ಬದಲಾವಣೆ ಕಾಣಬಹುದು. ಅಂಚೆ ಕಚೇರಿಯ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರಗಳನ್ನು ಸತತ 7 ತ್ರೈಮಾಸಿಕಗಳವರೆಗೆ ಬದಲಾಯಿಸದೆ ಬಿಡಲಾಗಿದೆ.
ಎಲ್‌ಪಿಜಿ ಬೆಲೆಗಳು
ಎಲ್‌ಪಿಜಿ ಬೆಲೆಗಳನ್ನು ಪ್ರತಿ ತಿಂಗಳು ಪರಿಷ್ಕರಿಸಲಾಗುತ್ತದೆ ಮತ್ತು ಮುಂದಿನ ತಿಂಗಳು ದ್ರವೀಕೃತ ಪೆಟ್ರೋಲಿಯಂ ಅನಿಲದ ಬೆಲೆಗಳಲ್ಲಿ ಬದಲಾವಣೆ ಆಗಬಹುದು. ಮಾರ್ಚ್ 22, 2022ರಂದು ಎಲ್‌ಪಿಜಿ ದರವನ್ನು ಪ್ರತಿ ಸಿಲಿಂಡರ್‌ಗೆ 50 ರೂಪಾಯಿಗಳಷ್ಟು ಹೆಚ್ಚಿಸಲಾಯಿತು.
ಇದನ್ನೂ ಓದಿ: Income Tax Return: ಹಣಕಾಸು ವರ್ಷ 2020-21ಕ್ಕಾಗಿ ಐಟಿಆರ್ ಸಲ್ಲಿಸಿಲ್ಲವೇ? ಏಪ್ರಿಲ್ 1ರಿಂದ ಹೆಚ್ಚಿನ ಟಿಡಿಎಸ್, ಟಿಸಿಎಸ್