Karnataka Budget 2021: ಜನ ಸಾಮಾನ್ಯರಿಗೂ ಗೊತ್ತಿರಬೇಕಾದ ಬಜೆಟ್ ಪಾರಿಭಾಷಿಕ ಪದಗಳು
ಕರ್ನಾಟಕ ಬಜೆಟ್ 2021 ಅನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾರ್ಚ್ 8ನೇ ತಾರೀಕು ಮಂಡನೆ ಮಾಡಲಿದ್ದಾರೆ. ಬಜೆಟ್ನಲ್ಲಿ ಬಳಕೆಯಾಗುವ ಪಾರಿಭಾಷಿಕ ಪದಗಳ ವಿವರಣೆ ಇಲ್ಲಿ ನೀಡಲಾಗಿದೆ.
2021- 22ನೇ ಸಾಲಿನ ಕರ್ನಾಟಕ ಬಜೆಟ್ ಅನ್ನು ಮಾರ್ಚ್ 8ನೇ ತಾರೀಕಿನ ಸೋಮವಾರದಂದು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಲಿದ್ದಾರೆ. ಇದು ಯಡಿಯೂರಪ್ಪ ಅವರ ಎಂಟನೇ ಬಜೆಟ್. ರಾಮಕೃಷ್ಣ ಹೆಗಡೆ ಹಾಗೂ ಸಿದ್ದರಾಮಯ್ಯ ತಲಾ 13 ಬಾರಿ ಬಜೆಟ್ ಮಂಡಿಸಿ, ಅತಿ ಹೆಚ್ಚು ಬಾರಿಯ ದಾಖಲೆ ತಮ್ಮ ಹೆಸರಿಗೆ ಬರೆಸಿಕೊಂಡಿದ್ದರೆ, ಆ ಪಟ್ಟಿಯಲ್ಲಿ ಬಿಎಸ್ವೈ ಎರಡನೇ ಸ್ಥಾನಕ್ಕೆ ಏರಲಿದ್ದಾರೆ. ಬಜೆಟ್ಗೆ ಇನ್ನೊಂದು ದಿನ ಇರುವಂತೆ ಕೆಲವು ಪಾರಿಭಾಷಿಕ ಪದಗಳನ್ನು ನಿಮಗೆ ತಿಳಿಸಿಕೊಡುವುದು ಈ ಲೇಖನದ ಉದ್ದೇಶ. ಇವುಗಳು ಗೊತ್ತಿದ್ದರೆ ಬಜೆಟ್ ಅರ್ಥ ಮಾಡಿಕೊಳ್ಳುವುದು ಸುಲಭವಾಗುತ್ತದೆ.
ಹಣಕಾಸು ವರ್ಷ (Financial Year) ನಮಗೆಲ್ಲ ಕ್ಯಾಲೆಂಡರ್ ವರ್ಷ ಗೊತ್ತಿರುತ್ತದೆ. ಹಾಗೆಂದರೆ ಪ್ರತಿ ವರ್ಷ ಜನವರಿ 1ರಿಂದ ಡಿಸೆಂಬರ್ 31ರ ತನಕ ಒಂದು ವರ್ಷದ ಲೆಕ್ಕ. ಹಣಕಾಸು ವರ್ಷ ಅಂದರೆ, ಏಪ್ರಿಲ್ 1ರಿಂದ ಶುರುವಾಗಿ, ಮರು ವರ್ಷದ ಮಾರ್ಚ್ 31ನೇ ತಾರೀಕಿಗೆ ಕೊನೆಯಾಗುತ್ತದೆ.
ಬಜೆಟ್ (ಆಯ- ವ್ಯಯ ಅಂದಾಜು ಪಟ್ಟಿ) ನಿರ್ದಿಷ್ಟ ಅವಧಿಯಲ್ಲಿ ಬರಬಹುದಾದ ಅಂದಾಜು ಆದಾಯ ಹಾಗೂ ಅಂದಾಜು ಖರ್ಚಿನ ಪಟ್ಟಿಯನ್ನು ಬಜೆಟ್ ಎನ್ನಲಾಗುತ್ತದೆ. ನೆನಪಿರಲಿ, ಇದು ಅಂದಾಜು (Estimates) ಮಾತ್ರ.
ರಾಜ್ಯ ಬಜೆಟ್ ಒಂದು ಹಣಕಾಸು ವರ್ಷದಲ್ಲಿ ರಾಜ್ಯ ಸರ್ಕಾರಕ್ಕೆ ಎಲ್ಲ ಮೂಲಗಳಿಂದ ಲಭ್ಯವಾಗುವ ಆದಾಯ ಮತ್ತು ಅದನ್ನು ಯಾವ್ಯಾವ ವಲಯಗಳಿಗೆ, ಉದ್ದೇಶಗಳಿಗೆ ಸರ್ಕಾರ ಖರ್ಚು ಮಾಡಲಿದೆ ಎನ್ನುವುದನ್ನು ವಿವರಿಸುವ ಒಂದು ಸಮಗ್ರ ವರದಿ ಅಥವಾ ದಾಖಲೆ. ಸರ್ಕಾರವು ಆ ಹಣಕಾಸಿನ ವರ್ಷದಲ್ಲಿ ವ್ಯಯಿಸಲು ಉದ್ದೇಶಿಸಿರುವ ಹಣದ ಅಂದಾಜು ಪಟ್ಟಿಯನ್ನೂ ಬಜೆಟ್ ಒಳಗೊಂಡಿರುತ್ತದೆ. ಇದನ್ನು ಆಯವ್ಯಯ ಅಂದಾಜು ಎಂದು ಕರೆಯಲಾಗುತ್ತದೆ.
ನೇರ ತೆರಿಗೆ ಮತ್ತು ಪರೋಕ್ಷ ತೆರಿಗೆ (Direct and Indirect Taxes) ನೇರ ತೆರಿಗೆ ಅಂದರೆ ವ್ಯಕ್ತಿಯ ಮತ್ತು ಕಂಪೆನಿಗಳ ವಾರ್ಷಿಕ ಆದಾಯದ ಮೇಲೆ ವಿಧಿಸುವ ತೆರಿಗೆಗಳು. ಅವು ನೇರವಾಗಿ ವ್ಯಕ್ತಿಗಳು ಮತ್ತು ಸಂಸ್ಥೆಗಳ ಮೇಲೆ ಬೀಳುತ್ತವೆ. ಪರೋಕ್ಷ ತೆರಿಗೆಗಳನ್ನು ಸರಕು ಮತ್ತು ಸೇವೆಗಳ ಮೇಲೆ ವಿಧಿಸಲಾಗುತ್ತದೆ. ಗ್ರಾಹಕರು ಸರಕು ಇಲ್ಲವೇ ಸೇವೆಗಳನ್ನು ಖರೀದಿಸಿದಾಗ ಪರೋಕ್ಷವಾಗಿ ನಿರ್ದಿಷ್ಟ ಮೊತ್ತದ ತೆರಿಗೆಯನ್ನು ಪಾವತಿಸುತ್ತಾರೆ. ಅಬಕಾರಿ (excise) ಮತ್ತು ಕಸ್ಟಮ್ಸ್ ಸುಂಕಗಳೂ ಇದರಲ್ಲಿ ಸೇರಿವೆ.
ಸೀಮಾ ಸುಂಕ (Customs Duty) ವಿದೇಶಗಳಿಂದ ಆಮದು ಮಾಡಿಕೊಳ್ಳುವ ಮತ್ತು ಇಲ್ಲಿಂದ ಬೇರೆ ದೇಶಗಳಗೆ ರಫ್ತು ಮಾಡುವ ಸರಕುಗಳ ಮೇಲೆ ಸೀಮಾ ಸುಂಕವನ್ನು ವಿಧಿಸಲಾಗುತ್ತದೆ. ಆಮದು ಮಾಡಿಕೊಳ್ಳುವ ಮತ್ತು ರಫ್ತು ಮಾಡುವ ವ್ಯಾಪಾರಿಗಳು ಕಸ್ಟಮ್ಸ್ ಸುಂಕವನ್ನು ಪಾವತಿಸುತ್ತಾರೆ. ಗ್ರಾಹಕರ ಮೇಲೆ ಅದರ ಹೊರೆ ಪರೋಕ್ಷವಾಗಿ ಬೀಳುತ್ತದೆ.
ವಿತ್ತೀಯ ಕೊರತೆ (Fiscal Deficit) ಸರ್ಕಾರದ ಒಟ್ಟಾರೆ ವೆಚ್ಚವು ಅದರ ಎಲ್ಲಾ ಮೂಲಗಳಿಂದ ಸಂಗ್ರಹವಾಗುವ ಆದಾಯಕ್ಕಿಂತ ಹೆಚ್ಚಾಗುವ ಸ್ಥಿತಿಯನ್ನು ವಿತ್ತೀಯ ಕೊರತೆ ಎನ್ನುತ್ತಾರೆ. ವಿತ್ತೀಯ ಕೊರತೆ ಇಂತಿಷ್ಟು ಪ್ರಮಾಣ ಮೀರಬಾರದು ಎಂಬ ನಿಯಮವಿದೆ. ವಿತ್ತೀಯ ಕೊರತೆ ಹೆಚ್ಚಾದರೆ ಸರ್ಕಾರದ ಸಾಲ ಹೆಚ್ಚಾಗುವ ಅಪಾಯ ಎದುರಾಗಿ, ದೀರ್ಘಕಾಲೀನ ದುಷ್ಪರಿಣಾಮಗಳಿಗೆ ಕಾರಣವಾಗುತ್ತದೆ. ಆರ್ಥಿಕ ಶಿಸ್ತು ಕಾಪಾಡಿಕೊಳ್ಳಲು ವಿತ್ತೀಯ ಕೊರತೆಯನ್ನು ಹತೋಟಿಯಲ್ಲಿ ಇಡಬೇಕಾಗುವುದು ಅನಿವಾರ್ಯ. ಕೆಲವೊಮ್ಮೆ ಅನಿವಾರ್ಯವಾಗಿಯಾದರೂ ಸರ್ಕಾರ ತನ್ನ ಆದಾಯಕ್ಕಿಂತ ಹೆಚ್ಚಿನ ವೆಚ್ಚವನ್ನು ಮಾಡಲೇಬೇಕಾಗುತ್ತದೆ. ಕೊರೊನಾದಂಥ ಸನ್ನಿವೇಶ ಅದಕ್ಕೊಂದು ಉದಾಹರಣೆ.
ಆದಾಯ ಕೊರತೆ (Revenue Deficit) ಸರ್ಕಾರಕ್ಕಿರುವ ಎಲ್ಲ ಆದಾಯ ಮೂಲಗಳಿಂದ ಸಂಗ್ರಹವಾಗುವ ಆದಾಯದ ಅಂದಾಜನ್ನೂ ಮೀರಿ, ಆದಾಯ ತರುವ ವೆಚ್ಚಗಳ ಬಳಕೆಗೆ ಹಣವನ್ನು ಮೀಸಲಿಡಬೇಕಾದ ಪರಿಸ್ಥಿತಿಯನ್ನು ಆದಾಯ ಕೊರತೆ ಎನ್ನುತ್ತಾರೆ. ಸರ್ಕಾರದ ಆದಾಯಕ್ಕಿಂತ ಖರ್ಚು ಜಾಸ್ತಿಯಿರುವುದನ್ನು ಇದು ಸೂಚಿಸುತ್ತದೆ. ಈ ಬಾರಿ ಇಂಥ ಸನ್ನಿವೇಶ ಸೃಷ್ಟಿಯಾಗಲಿದೆ ಎನ್ನುತ್ತಾರೆ ವಿಶ್ಲೇಷಕರು.
ಪ್ರಾಥಮಿಕ ಕೊರತೆ (Primary Deficit) ಸರ್ಕಾರದ ಆದಾಯಕ್ಕಿಂತ ವೆಚ್ಚದ ಪ್ರಮಾಣ ಎಷ್ಟು ಜಾಸ್ತಿಯಾಗಿದೆ ಎಂಬುದನ್ನು ಲೆಕ್ಕ ಹಾಕಿದಾಗ ವಿತ್ತೀಯ ಕೊರತೆಯ ಪ್ರಮಾಣ ಸಿಗುತ್ತದೆ. ವಿತ್ತೀಯ ಕೊರತೆಯಲ್ಲಿ ಸರ್ಕಾರವು ಪಾವತಿಸಬೇಕಾದ ಬಡ್ಡಿಯ ಮೊತ್ತವನ್ನು ಕಳೆದಾಗ ಸಿಗುವ ಮೊತ್ತವೇ ಪ್ರಾಥಮಿಕ ಕೊರತೆ. ಬಡ್ಡಿ ಪಾವತಿ ಹೊರತಾದ ಇತರ ವೆಚ್ಚಗಳನ್ನು ಸರಿದೂಗಿಸಲು ಸರ್ಕಾರ ಎಷ್ಟು ಹಣವನ್ನು ವ್ಯಯಿಸುತ್ತದೆ ಎಂಬುದನ್ನು ಇದು ಸೂಚಿಸುತ್ತದೆ.
ಆರ್ಥಿಕ ನೀತಿ (Fiscal policy) ಆದಾಯ ಮತ್ತು ವೆಚ್ಚಗಳನ್ನು ಸರಿದೂಗಿಸಲು ಸರ್ಕಾರ ತೆಗೆದುಕೊಳ್ಳುವ ಕ್ರಮಗಳನ್ನು ಹಣಕಾಸು ನೀತಿ ಎಂದು ಕರೆಯುತ್ತಾರೆ. ಬಜೆಟ್ ಮೂಲಕ ಹಣಕಾಸು ನೀತಿಯನ್ನು ಜಾರಿಗೊಳಿಸಲಾಗುತ್ತದೆ. ಇದು ಆರ್ಥಿತೆಯನ್ನು ಪ್ರಭಾವಿಸಲು, ತನ್ನ ಇಚ್ಛೆಗೆ ತಕ್ಕಂತೆ ನಿಯಂತ್ರಿಸಲು ಸರ್ಕಾರ ತೆಗೆದುಕೊಳ್ಳುವ ಮೊದಲ ಕ್ರಮವಾಗಿರುತ್ತದೆ.
ಹಣದುಬ್ಬರ (Inflation) ಆರ್ಥಿಕತೆಯಲ್ಲಿ ಹಣದ ಚಲಾವಣೆ ಹೆಚ್ಚಾಗುವುದು ಅಥವಾ ಇತರ ಕಾರಣಗಳಿಂದ ಅಗತ್ಯ ವಸ್ತುಗಳೂ ಸೇರಿದಂತೆ ಸರಕು ಮತ್ತು ಸೇವೆಗಳ ಬೆಲೆ ಶೀಘ್ರಗತಿಯಲ್ಲಿ ಮೇಲೇರುವುದನ್ನು ಹಣದುಬ್ಬರ ಎನ್ನುತ್ತಾರೆ. ಸರಕುಗಳ ಒಟ್ಟಾರೆ ಬೆಲೆ ಏರಿಕೆ ಪ್ರಮಾಣದಲ್ಲಿ ಒಟ್ಟಾರೆಯಾಗಿ ಆಗುವ ವ್ಯತ್ಯಾಸವನ್ನು ಸರಾಸರಿ ಲೆಕ್ಕ ಹಾಕಿ, ಹಣದುಬ್ಬರದ ಪ್ರಮಾಣ ತಿಳಿಯಲು ಸಾಧ್ಯ. ಸರ್ಕಾರದ ನೀತಿ, ತೆರಿಗೆ ಲೆಕ್ಕಾಚಾರ ಸೇರಿದಂತೆ ಹಲವು ವಿಷಯಗಳಲ್ಲಿ ಇದು ಮುಖ್ಯ ಪಾತ್ರ ನಿರ್ವಹಿಸುತ್ತದೆ.
ಬಂಡವಾಳ ಬಜೆಟ್ (Capital Budget) ಬಂಡವಾಳ ಸ್ವೀಕೃತಿ ಮತ್ತು ಪಾವತಿಯ ಲೆಕ್ಕಾಚಾರದ ವಿವರಗಳನ್ನು ಬಂಡವಾಳ ಬಜೆಟ್ ಒಳಗೊಂಡಿರುತ್ತದೆ. ಷೇರುಗಳಲ್ಲಿ ಹೂಡಿಕೆ, ರಾಜ್ಯ ಸರ್ಕಾರಗಳು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಕಾರ್ಪೊರೇಷನ್ಗಳು ಮತ್ತು ಇತರ ಸಂಸ್ಥೆಗಳು, ವ್ಯಕ್ತಿಗಳಿಗೆ ಬಂಡವಾಳ ವೃದ್ಧಿಯ ಉದ್ದೇಶದಿಂದ ನೀಡುವ ಸಾಲವು ಬಂಡವಾಳ ಬಜೆಟ್ನ ಭಾಗವಾಗಿರುತ್ತದೆ.
ಕಂದಾಯ ಬಜೆಟ್ (Revenue Budget) ಸರ್ಕಾರದ ಕಂದಾಯ ಮೂಲಗಳ ಆದಾಯ ಮತ್ತು ವೆಚ್ಚವನ್ನು ಕಂದಾಯ ಬಜೆಟ್ ಒಳಗೊಂಡಿರುತ್ತದೆ. ಕಂದಾಯ ಮೂಲಗಳನ್ನು ತೆರಿಗೆ ಮತ್ತು ತೆರಿಗೆಯೇತರ ಆದಾಯಗಳಾಗಿ ವಿಂಗಡಿಸಲಾಗಿದೆ. ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆ, ಅಬಕಾರಿ ಸುಂಕ, ಕಸ್ಟಮ್ಸ್, ಮತ್ತು ಸರ್ಕಾರ ವಿಧಿಸುವ ಸೇವಾ ತೆರಿಗೆಗಳನ್ನು ಇದು ಒಳಗೊಂಡಿರುತ್ತದೆ. ತೆರಿಗೆಯೇತರ ಆದಾಯ ಮೂಲಗಳಲ್ಲಿ ಸರ್ಕಾರ ನೀಡಿರುವ ಸಾಲಗಳಿಂದ ದೊರೆಯುವ ಬಡ್ಡಿ ಮತ್ತು ಹೂಡಿಕೆಗಳಿಂದ ಬರುವ ಡಿವಿಡೆಂಡ್ ಸೇರಿವೆ.
ಹಣಕಾಸು ಮಸೂದೆ (Finance Bill) ಹಣಕಾಸು ಸಚಿವರು ಬಜೆಟ್ ಮಂಡಿಸಿದ ನಂತರ ಬಜೆಟ್ ಅಂಕಿಅಂಶಗಳನ್ನು ಆಧರಿಸಿ, ತೆರಿಗೆ ವ್ಯವಸ್ಥೆಯಲ್ಲಿನ ಸುಧಾರಣೆ, ಬದಲಾವಣೆ, ಹೊಸ ವ್ಯವಸ್ಥೆಯ ಜಾರಿ, ನಿಯಂತ್ರಣಗಳ ಮಾಹಿತಿ ಇರುವ ಮಸೂದೆಯನ್ನು ಮಂಡಿಸುತ್ತಾರೆ. ಇದನ್ನು ಹಣಕಾಸು ಮಸೂದೆ ಎನ್ನುತ್ತಾರೆ.
ಲೇಖಾನುದಾನ (The Vote on Account) ಹೊಸ ಹಣಕಾಸಿನ ವರ್ಷದ ಅವಧಿಯಲ್ಲಿ ಸರ್ಕಾರ ಮಾಡಲಿರುವ ಅಂದಾಜು ವೆಚ್ಚಕ್ಕೆ ಸಂಬಂಧಿಸಿದಂತೆ ವಿಧಾನಮಂಡಲದಲ್ಲಿ ನೀಡುವ ಅನುಮೋದನೆಯನ್ನು ಲೇಖಾನುದಾನ ಎನ್ನುತ್ತಾರೆ.
ಹೆಚ್ಚುವರಿ ಅನುದಾನ (Excess Grants) ಒಂದು ಅನುದಾನದ ಅಡಿಯಲ್ಲಿ ಒಟ್ಟಾರೆ ವೆಚ್ಚವು ಮೂಲ ಮತ್ತು ಪೂರಕ ಅನುದಾನವನ್ನು ಮೀರಿದರೆ ಅದನ್ನು ಸರಿದೂಗಿಸಲು ಹೆಚ್ಚುವರಿ ಅನುದಾನವನ್ನು ಪಡೆದುಕೊಳ್ಳಲು ಅವಕಾಶವಿರುತ್ತದೆ. ಇದನ್ನು ಒಟ್ಟಾರೆ ಪ್ರಕ್ರಿಯೆಯ ಮೂಲಕ ಅಂದರೆ ಅನುದಾನಕ್ಕಾಗಿ ಬೇಡಿಕೆ ಮತ್ತು ವಿನಿಯೋಗ ಮಸೂದೆಗಳ ಮಂಡನೆಯ ಮೂಲಕವೇ ಪಡೆದುಕೊಳ್ಳಬೇಕಾಗುತ್ತದೆ.
ಆಯವ್ಯಯ ಅಂದಾಜು (Budget Estimates) ಯಾವುದೇ ಒಂದು ಸಚಿವಾಲಯಕ್ಕೆ ಅಥವಾ ಯೋಜನೆಗೆ ಮುಂದಿನ ಹಣಕಾಸು ವರ್ಷಕ್ಕೆಂದು ಹಂಚಿಕೆಯಾದ ಹಣದ ಮೊತ್ತ.
ಪರಿಷ್ಕೃತ ಅಂದಾಜು ಪಟ್ಟಿ (Revised Estimates) ಹೊಸ ಸೇವೆಗಳು ಮತ್ತು ಆ ಸೇವೆಗಳಿಗೆ ಅಗತ್ಯವಿರುವ ಪರಿಕರಗಳನ್ನು ಗಮನದಲ್ಲಿರಿಸಿಕೊಂಡು ವರ್ಷದ ಮಧ್ಯಭಾಗದಲ್ಲಿ ಪರಿಶೀಲನೆ ನಡೆಸಿ ಉಳಿದ ಅವಧಿಗೆ ಮಾಡಬೇಕಾಗುವ ವೆಚ್ಚದ ಬಗ್ಗೆ ಅವಲೋಕನ ನಡೆಸುವ ಪ್ರಕ್ರಿಯೆಯೇ ಪರಿಷ್ಕೃತ ಅಂದಾಜು ಪಟ್ಟಿ. ಪರಿಷ್ಕೃತ ಅಂದಾಜುಪಟ್ಟಿ ಸಂಸತ್ತಿನಲ್ಲಿ ಮಂಡನೆಯಾಗುವುದಿಲ್ಲ. ಹೀಗಾಗಿ ಮಾಡಬಹುದಾದ ವೆಚ್ಚಕ್ಕೆ ಅಧಿಕೃತ ಮುದ್ರೆ ಸಿಗುವುದಿಲ್ಲ. ಪರಿಷ್ಕೃತ ಅಂದಾಜು ಪಟ್ಟಿಯಲ್ಲಿ ಹೆಚ್ಚುವರಿ ಖರ್ಚುಗಳನ್ನು ಸೇರ್ಪಡೆಗೊಳಿಸಿದರೆ, ಸಂಸತ್ತಿನ ಅನುಮೋದನೆಯನ್ನು ಬಜೆಟ್ನ ಪರಿಷ್ಕೃತ ಅಂದಾಜುವೆಚ್ಚ ಪ್ರಕ್ರಿಯೆ ಮೂಲಕ ಪಡೆದುಕೊಳ್ಳಬೇಕಾಗುತ್ತದೆ.
ಮರು-ಅಂದಾಜು (Re-appropriations) ಸರ್ಕಾರವು ಒಂದು ಶೀರ್ಷಿಕೆ ಅಥವಾ ಖಾತೆಯಡಿ (ಹೆಡ್) ಬಿಡುಗಡೆಯಾದ ಅನುದಾನವನ್ನು ಅದೇ ಶೀರ್ಷಿಕೆಯ ಮತ್ತೊಂದು ಉಪ-ಖಾತೆಗೆ (ಸಬ್ಹೆಡ್) ಬಳಸುವ ಅವಕಾಶವನ್ನು ಮರು ಅಂದಾಜು ಪ್ರಕ್ರಿಯೆ ಒದಗಿಸುತ್ತದೆ. ಹಣಕಾಸು ವರ್ಷ ಕೊನೆಗೊಳ್ಳುವ ಮೊದಲು ಒಂದು ಸಕ್ಷಮ ಪ್ರಾಧಿಕಾರ ಈ ಅವಕಾಶವನ್ನು ಬಳಸಲು ಅನುಮತಿ ನೀಡಬಹುದಾಗಿದೆ. ಮಹಾ ಲೆಕ್ಕಪರಿಶೋಧಕರು ಮತ್ತು ಸಾರ್ವಜನಿಕ ಖಾತೆಗಳ ಸಮಿತಿ (Public Accounts Committee) ಸದಸ್ಯರು ಈ ಮರು-ಅಂದಾಜು ಪ್ರಕ್ರಿಯೆಯನ್ನು ಪರಿಶೀಲಿಸಿ, ಸರಿಯಾದ ಕ್ರಮಗಳನ್ನು ಅನುಸರಿಸಲು ಸಲಹೆ ನೀಡುತ್ತಾರೆ.
ನಿಲುವಳಿ ಕಡಿತ (Cut Motions) ಹಲವಾರು ಅನುದಾನಗಳ ಬೇಡಿಕೆಗಳಲ್ಲಿ ತಗ್ಗಿಸುವಿಕೆಯ ಪ್ರಸ್ತಾವವನ್ನು ‘ನಿಲುವಳಿ ಕಡಿತ’ದ ಮೂಲಕ ಮಂಡಿಸಲಾಗುವುದು. ಪ್ರಸ್ತುತ ಆರ್ಥಿಕತೆ ಇಲ್ಲವೇ ನೀತಿಯ ಮೇಲಿನ ಭಿನ್ನಾಭಿಪ್ರಾಯ ಅಥವಾ ದೂರುಗಳ ಹಿನ್ನೆಲೆಯಲ್ಲಿ ಸರ್ಕಾರ ಕೇಳುವ ಆನುದಾನದ ಒಟ್ಟಾರೆ ಮೊತ್ತವನ್ನು ಈ ಮೂಲಕ ತಗ್ಗಿಸಲಾಗುತ್ತದೆ.
ಇದನ್ನೂ ಓದಿ: ಕರ್ನಾಟಕ ಬಜೆಟ್ 2021: ಕೊರೊನಾ ಕಾಲದಲ್ಲಿ ಯಡಿಯೂರಪ್ಪ ಅರ್ಥಶಾಸ್ತ್ರ ಹೇಗಿರಲಿದೆ?
ಇದನ್ನೂ ಓದಿ: Karnataka Budget 2021: ರಾಜ್ಯ ಸರ್ಕಾರದ ಆದಾಯಕ್ಕೆ ಹೇಗೆಲ್ಲ ಬಿದ್ದಿದೆ ಕತ್ತರಿ?