ಕರ್ನಾಟಕ ಬಜೆಟ್ 2021: ಕೊರೊನಾ ಕಾಲದಲ್ಲಿ ಯಡಿಯೂರಪ್ಪ ಅರ್ಥಶಾಸ್ತ್ರ ಹೇಗಿರಲಿದೆ?
ಕರ್ನಾಟಕ ಬಜೆಟ್ 2021ಕ್ಕೆ ಮುಂಚೆ ಬಿ.ಎಸ್.ಯಡಿಯೂರಪ್ಪ ಅವರ ಪಾಲಿನ ಆದಾಯ ಮೂಲಗಳು ಕಳೆದ ಒಂದು ವರ್ಷದಲ್ಲಿ ಹೇಗೆ ಹರಿದುಬಂದಿವೆ ಎಂಬ ಅಂಕಿ- ಅಂಶ ಹಾಗೂ ಆದಾಯಕ್ಕೆ ಹೇಗೆ ದಾರಿ ಮಾಡಿಕೊಳ್ಳಬಹುದು ಎಂಬುದಕ್ಕೆ ವಿಶ್ಲೇಷಕರು ಏನು ಹೇಳುತ್ತಾರೆ ಎಂಬ ಮಾಹಿತಿ ಇಲ್ಲಿದೆ.
ಇನ್ನೇನು ಕರ್ನಾಟಕ ಬಜೆಟ್ 2021 (ಮಾರ್ಚ್ 8, 2021) ಕಣ್ಣೆದುರೇ ಇದೆ. “ದೇಶದ ಎಲ್ಲ ಸರ್ಕಾರಗಳು ಆದಾಯದ ಕೊರತೆ ಅನುಭವಿಸುತ್ತಿವೆ,” ಎಂಬ ಮಾತನ್ನು ಕೇಳಿಕೇಳಿ ರೂಢಿ ಆಗಿದೆಯಾ? ಪ್ರಸಕ್ತ ಹಣಕಾಸು ವರ್ಷದ ಆಸಕ್ತಿಕರ ಅಂಕಿ- ಅಂಶವನ್ನು ನಿಮ್ಮೆದುರು ಇಡುತ್ತಿದ್ದೇವೆ. ಕರ್ನಾಟಕದ ಪ್ರಮುಖ ಆದಾಯ ಮೂಲಗಳು ಹೇಗೆ ಕೆಲಸ ಮಾಡಿವೆ ಎಂಬುದನ್ನು ಆ ನಂತರ ನೀವೇ ನಿರ್ಧರಿಸಿ. ಕಳೆದ ವರ್ಷ ಮಾರ್ಚ್ನಲ್ಲಿ ಲಾಕ್ಡೌನ್ ಘೋಷಣೆ ಮಾಡಲಾಯಿತು. ಆಗ ಇಡೀ ದೇಶವೇ ಸ್ತಬ್ಧವಾಯಿತು.
ಏಪ್ರಿಲ್- ಮೇ ತಿಂಗಳಲ್ಲಿ ರಾಜ್ಯ ಸರ್ಕಾರದ ಜಿಎಸ್ಟಿ, ವ್ಯಾಟ್ (ಮಾರಾಟ ತೆರಿಗೆ) ಹಾಗೂ ವೃತ್ತಿಪರ ತೆರಿಗೆ ನೆಲ ಕಚ್ಚಿಹೋಗಿದೆ. ಕ್ರಮವಾಗಿ ಆ ಎರಡು ತಿಂಗಳಿಂದ 3,566.81 ಕೋಟಿ ರೂಪಾಯಿ ಹಾಗೂ 2667.34 ಕೋಟಿ ರೂ. ಆದಾಯ ಬಂದಿದೆ. ಕಳೆದ ಹಣಕಾಸು ವರ್ಷದ ಇದೇ ಅವಧಿಯ ಏಪ್ರಿಲ್ನಲ್ಲಿ ರೂ. 8399.47 ಕೋಟಿ ಹಾಗೂ ರೂ. 4,659.19 ಕೋಟಿ ಆದಾಯ ಬಂದಿತ್ತು. ಆರ್ಥಿಕ ವರ್ಷದ ಮೊದಲ ಎರಡು ತಿಂಗಳು ಕೊರೊನಾ ಬಿಕ್ಕಟ್ಟಿನ ಪ್ರಭಾವ ಸ್ಪಷ್ಟವಾಗಿ ಗೋಚರಿಸುತ್ತದೆ.
2020ರ ಜೂನ್ ನಂತರದಲ್ಲಿ ಚೇತರಿಕೆ: ಆದರೆ, ಜೂನ್ನಲ್ಲಿ ಸ್ಥಿತಿ ಚೇತರಿಸಿಕೊಂಡು 8,558.42 ಕೋಟಿ ರೂಪಾಯಿ ಆದಾಯ ಬಂದಿದೆ. ಅಲ್ಲಿಂದ ಆಚೆಗೆ ಜುಲೈನಲ್ಲಿ 6205.56 ಕೋಟಿ ರೂ., ಆಗಸ್ಟ್ನಲ್ಲಿ 4476.05 ಕೋಟಿ ರೂ., ಸೆಪ್ಟೆಂಬರ್ 4854.24 ಕೋಟಿ ರೂ., ಅಕ್ಟೋಬರ್ 8764.22 ಕೋಟಿ ರೂ., ನವೆಂಬರ್ 6,698.19 ಕೋಟಿ ರೂ., ಡಿಸೆಂಬರ್ 10325.15 ಕೋಟಿ ರೂ., ಜನವರಿ 8341.48 ಕೋಟಿ ರೂ. ಮತ್ತು ಫೆಬ್ರವರಿಯಲ್ಲಿ 7,713.96 ಕೋಟಿ ರೂ. ಆದಾಯ ಬಂದಿದೆ. ಮಾರ್ಚ್ ತಿಂಗಳ ಅಂಕಿ- ಅಂಶ ಇನ್ನೂ ಲಭ್ಯವಾಗಿಲ್ಲ.
ಆದರೆ, ಕಳೆದ ಆರ್ಥಿಕ ವರ್ಷದಲ್ಲಿ ಪೂರ್ತಿಯಾಗಿ, ಅಂದರೆ ಮಾರ್ಚ್ ತಿಂಗಳೂ ಸೇರಿದಂತೆ ಬಂದಿರುವ ಒಟ್ಟು ಆದಾಯ (ಜಿಎಸ್ಟಿ, ಕರ್ನಾಟಕ ಮಾರಾಟ ತೆರಿಗೆ ಹಾಗೂ ವೃತ್ತಿ ತೆರಿಗೆ ಒಳಗೊಂಡಂತೆ) 74,002.14 ಕೋಟಿ ರೂಪಾಯಿ. ಆದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಫೆಬ್ರವರಿಯೊಳಗೆ 72,172.03 ಕೋಟಿ ರೂಪಾಯಿ ಬಂದಿದೆ. ಅಲ್ಲಿಗೆ ಕಳೆದ ಹಣಕಾಸು ವರ್ಷಕ್ಕಿಂತ ಹೆಚ್ಚಿನ ವರಮಾನ ಈ ಮೂರರಿಂದ ಬರುವುದು ಪಕ್ಕಾ.
ಅಬಕಾರಿ ಇಲಾಖೆಯೊಂದರಲ್ಲೇ ಆದಾಯ ಪ್ಲಸ್: ಕರ್ನಾಟಕ ಸರ್ಕಾರಕ್ಕೆ ಪ್ರಮುಖ ಆದಾಯ ಮೂಲಗಳೆಂದರೆ ಸ್ವಂತ ಆದಾಯ ತೆರಿಗೆ, ವಾಣಿಜ್ಯ ತೆರಿಗೆ, ಅಬಕಾರಿ, ಮೋಟಾರು ವಾಹನ ತೆರಿಗೆ, ಮುದ್ರಾಂಕ ಮತ್ತು ನೋಂದಣಿ ಹಾಗೂ ಇತರ ಆದಾಯಗಳು. ಅದೇ ರೀತಿ ಸ್ವಂತ ತೆರಿಗೆ ಹೊರತಾದ ಆದಾಯ, ಕೇಂದ್ರ ಸರ್ಕಾರದ ತೆರಿಗೆ ಹಂಚಿಕೆ, ಕೇಂದ್ರ ಸರ್ಕಾರದ ಸಹಾಯಾನುದಾನ ಬರುತ್ತದೆ. ಈ ಸಲ ಏನಾಗಿದೆ ಅಂದರೆ, ಅಬಕಾರಿ ಇಲಾಖೆ ಆದಾಯವೊಂದನ್ನು ಹೊರತುಪಡಿಸಿದಂತೆ ಉಳಿದ ಯಾವುದೂ ಕಳೆದ ವರ್ಷಕ್ಕಿಂತ (ಈ ಸಲದ ಲೆಕ್ಕಾಚಾರ ಏಪ್ರಿಲ್ನಿಂದ ಡಿಸೆಂಬರ್ ತನಕ ಮಾತ್ರ ಇದೆ) ಹೆಚ್ಚಳ ಕಂಡಿಲ್ಲ. ಮುಖ್ಯವಾಗಿ ಕೇಂದ್ರದಿಂದ ಬರಬೇಕಾದ ತೆರಿಗೆ ಹಂಚಿಕೆ ಹಾಗೂ ಸಹಾಯಾನುದಾನ ಕ್ರಮವಾಗಿ ಶೇಕಡಾ 39.88 ಹಾಗೂ ಶೇಕಡಾ 22.39ರಷ್ಟು ಇಳಿಕೆಯಾಗಿದೆ. ನಿಜವಾಗಲೂ ಚಿಂತೆಗೂ ಗುರಿಯಾಗುವ ಅಂಶ ಇದೇ.
ರಾಜ್ಯ ಸರ್ಕಾರದ ಸ್ವಂತ ತೆರಿಗೆ ಆದಾಯ ಕಳೆದ ಆರ್ಥಿಕ ವರ್ಷಕ್ಕಿಂತ ಶೇಕಡಾ 10.92, ವಾಣಿಜ್ಯ ತೆರಿಗೆ ಶೇಕಡಾ 12.81, ಮೋಟಾರು ವಾಹನ ತೆರಿಗೆ ಶೇ 26.91, ಮುದ್ರಾಂಕ ಮತ್ತು ನೋಂದಣಿ ಶೇ 18.56 ಹಾಗೂ ಇತರೆ ಆದಾಯ ಶೇಕಡಾ 17.30ರಷ್ಟು ಇಳಿದಿದೆ. ಮೊದಲೇ ಹೇಳಿದಂತೆ ಇದು 2021ರ ಏಪ್ರಿಲ್ನಿಂದ ಡಿಸೆಂಬರ್ ಮಧ್ಯದ ಲೆಕ್ಕಾಚಾರ. ಕೇಂದ್ರದಿಂದ ಬರಬೇಕಾದ ಮೊತ್ತವು ಬಾರದೆ, ಇತರ ಆದಾಯ ಮೂಲಗಳು ತಡೆಯೊಡ್ಡಿರುವ ಸಂದಿಗ್ಧ ಕಾಲದಲ್ಲಿ ರಾಜ್ಯ ಸರ್ಕಾರಕ್ಕೆ ಯಡಿಯೂರಪ್ಪ ಹೇಗೆ ಆದಾಯ ತರುತ್ತಾರೆ ಎಂಬುದು ಅತಿ ದೊಡ್ಡ ಪ್ರಶ್ನೆ.
ತೆರಿಗೆಯೇತರ ಆದಾಯಕ್ಕೆ ಹೆಚ್ಚು ಒತ್ತು ನೀಡಬಹುದು: 2021ರ ಬಜೆಟ್ನಲ್ಲಿ ತೆರಿಗೆಯೇತರ ಆದಾಯಕ್ಕೆ ಯಡಿಯೂರಪ್ಪ ಅವರು ಹೆಚ್ಚು ಒತ್ತು ನೀಡಬಹುದು ಎಂಬ ಅಭಿಪ್ರಾಯವನ್ನು ತಜ್ಞರು, ವಿಶ್ಲೇಷಕರು ವ್ಯಕ್ತಪಡಿಸುತ್ತಾರೆ. ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ತೀರಾ ಸಂಕಷ್ಟದಲ್ಲಿ ಸಿಲುಕಿಕೊಂಡಿರುವವರು ಬಡವರು. ಆದ್ದರಿಂದ ತೆರಿಗೆ ಹೊರೆ ಅವರ ಮೇಲೆ ಹಾಕುವಂತಿಲ್ಲ. ಇನ್ನು ಸರ್ಕಾರದಿಂದ ಹೆಚ್ಚಿನ ಖರ್ಚು ಮಾಡಿ, ಬೇಡಿಕೆ ಚೇತರಿಕೆಗೆ ಪ್ರಯತ್ನಿಸಲೇಬೇಕು. ಆದ್ದರಿಂದ ವಿತ್ತೀಯ ಕೊರತೆ ಹೆಚ್ಚಾಗಲಿದೆ (ಬಜೆಟ್ನಲ್ಲಿ ಆದಾಯಕ್ಕಿಂತ ವೆಚ್ಚವೇ ಹೆಚ್ಚಾಗಿರುತ್ತದೆ. ಬಜೆಟ್ ಆದಾಯಕ್ಕಿಂತ ವೆಚ್ಚ ಹೆಚ್ಚಿರುವ ವ್ಯತ್ಯಾಸದ ಮೊತ್ತಕ್ಕೆ ವಿತ್ತೀಯ ಕೊರತೆ ಎನ್ನಲಾಗುತ್ತದೆ).
ಇನ್ನು ಸರ್ಕಾರದ ಉನ್ನತ ಮೂಲಗಳ ಪ್ರಕಾರ, ರಾಜ್ಯ ಬಜೆಟ್ನಲ್ಲಿ ಹೆಚ್ಚಿನದೇನನ್ನೂ ನಿರೀಕ್ಷೆ ಮಾಡುವಂತಿಲ್ಲ. ಆದಾಯ ಹಾಗೂ ವೆಚ್ಚವನ್ನು ಸರಿತೂಗಿಸುವ ಸಮತೋಲನವೇ ಯಡಿಯೂರಪ್ಪ ಅವರ ಪಾಲಿಗೆ ಸವಾಲಿನದಾಗಿದೆ. ಆದ್ದರಿಂದ ಸಾಮಾನ್ಯ ಬಜೆಟ್ ಇದಾಗಿರಲಿದೆ. ಕೊರೊನಾ ಬಿಕ್ಕಟ್ಟಿನಿಂದ ಹೊರಬಂದು, ಸರಿಯಾದ ಹಳಿಗೆ ರಾಜ್ಯದ ಆರ್ಥಿಕತೆ ಬರುವುದಕ್ಕೆ ಸ್ವಲ್ಪ ಸಮಯ ಆಗಲಿದೆ. ಸರ್ಕಾರದ ಆಸ್ತಿಗಳನ್ನು ಕೆಲವು ಮಾರಾಟ ಮಾಡುವ ಮೂಲಕ ಆದಾಯ ಸಂಗ್ರಹಕ್ಕೆ ಪ್ರಯತ್ನ ಆಗಬಹುದು.
ಇದನ್ನೂ ಓದಿ: Karnataka Budget 2021: ಕರ್ನಾಟಕದಲ್ಲಿ ಸರ್ಕಾರಿ ನೌಕರರು ಮರೆಯಲಾಗದಂಥ ಹೆಲ್ತ್ ಸ್ಕೀಮ್ ತರಲು ಬಿಎಸ್ವೈ ಸಿದ್ಧತೆ?
ಇದನ್ನೂ ಓದಿ: ಕರ್ನಾಟಕ ಬಜೆಟ್ 2021: ಗ್ರಾಹಕರು ಖರೀದಿಸುವ ಮೊತ್ತದ ಶೇ 90ರಷ್ಟು ಹಣ ರೈತರ ಕೈ ಸೇರಲಿ- RS ದೇಶಪಾಂಡೆ