Karnataka Budget 2021: ಕರ್ನಾಟಕದಲ್ಲಿ ಸರ್ಕಾರಿ ನೌಕರರು ಮರೆಯಲಾಗದಂಥ ಹೆಲ್ತ್ ಸ್ಕೀಮ್ ತರಲು ಬಿಎಸ್ವೈ ಸಿದ್ಧತೆ?
ಕರ್ನಾಟಕ ಬಜೆಟ್ 2021ರಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಐತಿಹಾಸಿಕ ಎನಿಸುವಂಥ ಹೆಲ್ತ್ ಸ್ಕೀಮ್ ಘೋಷಣೆ ಮಾಡುತ್ತಾರಾ ಬಿ.ಎಸ್.ಯಡಿಯೂರಪ್ಪ? ಆ ಬಗ್ಗೆ ಉನ್ನತ ಮೂಲಗಳಿಂದ ದೊರೆತ ಮಾಹಿತಿಯ ಆಧಾರದ ಸುದ್ದಿ ಇಲ್ಲಿದೆ.
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಅನುಕೂಲ ಆಗುವಂತೆ, ಸಿಜಿಎಚ್ಎಸ್ (Central Government Health Scheme – CGHS) ಮಾದರಿಯಲ್ಲಿ ಹೆಲ್ತ್ ಸ್ಕೀಮ್ (ಆರೋಗ್ಯ ಯೋಜನೆ) ತರುವುದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಆಲೋಚನೆ ಮಾಡಿದೆ ಎಂದು ಉನ್ನತ ಮೂಲಗಳಿಂದ ಟಿವಿ9 ಕನ್ನಡ ಡಿಜಿಟಲ್ಗೆ ತಿಳಿದುಬಂದಿದೆ. ಈ ಯೋಜನೆಯನ್ನು ದೇಶಕ್ಕೇ ಮಾದರಿ ಆಗುವಂತೆ ರೂಪಿಸುವ ನಿಟ್ಟಿನಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈಗಾಗಲೇ ಹೆಸರನ್ನೂ ಅಂತಿಮಗೊಳಿಸಲಾಗಿದ್ದು, ಅಂದುಕೊಂಡ ಸ್ವರೂಪದಲ್ಲೇ ಜಾರಿಗೆ ಬಂದಲ್ಲಿ ಯಡಿಯೂರಪ್ಪ ಅವರ ಹೆಸರು ಕರ್ನಾಟಕದಲ್ಲಿ ಚಿರಸ್ಥಾಯಿಯಾಗಿ ಉಳಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಲಾಗಿದೆ.
ಕೇಂದ್ರ ಸರ್ಕಾರಿ ನೌಕರರಿಗಾಗಿ ಸಿಜಿಎಚ್ಎಸ್ ಇದ್ದು, ರಾಜ್ಯ ಸರ್ಕಾರಿ ನೌಕರರಿಗೆ ಈ ರೀತಿಯ ಅನುಕೂಲಗಳಿಲ್ಲ. ಆದ್ದರಿಂದ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾದರೂ ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದವರಿಗೆ ಉತ್ತಮ ಚಿಕಿತ್ಸೆ ಸೌಲಭ್ಯ ದೊರಕಬೇಕು ಎಂಬ ದೂರಾಲೋಚನೆಯನ್ನು ಇರಿಸಿಕೊಂಡು ಈಗ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಸಿಜಿಎಚ್ಎಸ್ನಲ್ಲಿ ಇರುವ ಲೋಪ- ದೋಷಗಳನ್ನು ಗುರುತಿಸಿ, ಅದನ್ನು ರಾಜ್ಯ ಸರ್ಕಾರದ ಆರೋಗ್ಯ ಯೋಜನೆಯಲ್ಲಿ ಸರಿಪಡಿಸಲಾಗಿದೆ ಎಂದು ಮಾಹಿತಿ ದೊರೆತಿದೆ.
ಇನ್ನೊಂದು ಮೂಲದ ಪ್ರಕಾರ, ಯೋಜನೆಗೆ ‘ಭಾಗ್ಯ ಸಂಜೀವಿನಿ ಯೋಜನಾ’ (ಬಿಎಸ್ವೈ) ಎಂದು ಹೆಸರನ್ನಿಡಲು ಆಲೋಚಿಸಲಾಗಿದೆ. ರಾಜ್ಯ ಸರ್ಕಾರಿ ನೌಕರರಿಗೆ ಮತ್ತು ಅವರ ಕುಟುಂಬದವರಿಗೆ ವೈದ್ಯಕೀಯ ವೆಚ್ಚವನ್ನು ಭರಿಸುವಂತಹ ಯೋಜನೆ ಇದಾಗಿರುತ್ತದೆ. ಸದ್ಯಕ್ಕೆ ವಿವಿಧ ಇಲಾಖೆಗಳಲ್ಲಿ ಒಂದೊಂದು ರೀತಿಯ ಸ್ಕೀಮ್ ಇದೆ. ಆದರೆ ಭಾಗ್ಯ ಸಂಜೀವಿನಿ ಜಾರಿಗೆ ಬಂದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಕ್ಯಾಶ್ಲೆಸ್ (ನಗದುರಹಿತ) ಚಿಕಿತ್ಸೆ ಪಡೆದುಕೊಳ್ಳುವುದು ಸಮಸ್ಯೆ ಆಗುವುದಿಲ್ಲ ಎನ್ನಲಾಗುತ್ತಿದೆ.
ಒಂದು ವೇಳೆ ರೀಎಂಬರ್ಸ್ಮೆಂಟ್ ಅಂತಾದರೂ ಹೆಚ್ಚಿನ ಶ್ರಮವಿಲ್ಲದೆ ಅದನ್ನು ಪಡೆಯುವಂತಾಗಬೇಕು. ಆದರೆ ಬಹುತೇಕ ಕ್ಯಾಶ್ಲೆಸ್ ಚಿಕಿತ್ಸೆಯೇ ಸಿಗಬೇಕು. ಆ ಮೊತ್ತ ಹದಿನೈದು ಲಕ್ಷದ ತನಕ ಇದ್ದರೂ ಯಾವುದೇ ಅಡೆತಡೆ ಆಗದೆ ಚಿಕಿತ್ಸೆ ಸಿಗುವಂತಾಗಬೇಕು ಎಂದು ದೂರದೃಷ್ಟಿ ಇರಿಸಿಕೊಳ್ಳಲಾಗಿದೆ. ಈ ಮೊತ್ತ ಕಡಿಮೆಯೂ ಆಗಬಹದು. ಆದರೆ ಪರಿಣಾಮಕಾರಿಯಾದ ಅನುಷ್ಠಾನ ಖಾತ್ರಿಯಾಗಿ, ಇಡೀ ದೇಶದಲ್ಲೇ ಮಾದರಿಯಾಗುವಂಥ ಯೋಜನೆ ತರಬೇಕು ಎಂಬ ಉದ್ದೇಶವಂತೂ ಇದೆ. ಕರ್ನಾಟಕ ಬಜೆಟ್ 2021ರಲ್ಲಿ ಅದು ಘೋಷಣೆ ಆಗಬಹುದು ಎನ್ನಲಾಗುತ್ತಿದೆ.
ಇದನ್ನೂ ಓದಿ: ಕರ್ನಾಟಕ ಬಜೆಟ್ 2021: ಗ್ರಾಹಕರು ಖರೀದಿಸುವ ಮೊತ್ತದ ಶೇ 90ರಷ್ಟು ಹಣ ರೈತರ ಕೈ ಸೇರಲಿ- RS ದೇಶಪಾಂಡೆ