Tamil Nadu Election 2021: ಸೀಟು ಹಂಚಿಕೆ ನೆಪ; ಕಾಂಗ್ರೆಸ್ ನಾಯಕರನ್ನು ಕೀಳಾಗಿ ನಡೆಸಿಕೊಂಡ ಡಿಎಂಕೆ, ಸ್ವತಂತ್ರ ಸ್ಪರ್ಧೆಯತ್ತ ಕಾಂಗ್ರೆಸ್ ಒಲವು?
Tamil Nadu Politics: ಸ್ವತಂತ್ರ ಸ್ಪರ್ಧೆ ನಡೆಸಿದರೆ ಎಲ್ಲಾ 234 ಕ್ಷೇತ್ರಗಳಲ್ಲೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಬಹುದು. ಡಿಎಂಕೆಯ ಮರ್ಜಿಯಿಂದ ದೂರವೇ ಉಳಿದು ಸ್ಪರ್ಧೆ ನಡೆಸುವುದು ತಮಿಳುನಾಡು ಕಾಂಗ್ರೆಸ್ ನಾಯಕರಿಗೆ ಸ್ವಾತಂತ್ರ್ಯ ನೀಡಲಿದೆ.
ಚೆನ್ನೈ: ತಮಿಳುನಾಡು ಚುನಾವಣೆ ಸಮೀಪಿಸಿದರೂ ಡಿಎಂಕೆ, ಕಾಂಗ್ರೆಸ್ ಮತ್ತು ಮೈತ್ರಿಕೂಟಗಳ ನಡುವಿನ ಸೀಟು ಹಂಚಿಕೆ ಮಾತುಕತೆ ಇದುವರೆಗೂ ಮುಕ್ತಾಯಗೊಂಡಿಲ್ಲ. ಹಲವು ಹಂತಗಳ ಮಾತುಕತೆಯ ನಡೆಯುತ್ತಿರುವಾಗಲೇ ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಕೆ. ಎಸ್.ಅಳಗಿರಿ ಡಿಎಂಕೆ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾತುಕತೆಯಲ್ಲಿ ಡಿಎಂಕೆ ಮುಖಂಡರು ಕಾಂಗ್ರೆಸ್ ನಾಯಕ ಕೆ.ಎಸ್.ಅಳಗಿರಿ ಅವರನ್ನು ಕೀಳಾಗಿ ನಡೆಸಿಕೊಂಡಿದ್ದಾರೆ. ಹಿರಿಯ ನಾಯಕ ಎಂಬ ಗೌರವವನ್ನೂ ನೀಡದೇ ಅವಮಾನಿಸಿದ್ದಾರೆ . ಇದು ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಕೆ.ಎಸ್.ಅಳಗಿರಿ ಸೇರಿದಂತೆ ಇತರ ಕಾಂಗ್ರೆಸ್ ನಾಯಕರಿಗೂ ಅವರಿಗೆ ಬೇಸರ ಉಂಟುಮಾಡಿದೆ.
2016ರ ವಿಧಾನಸಭಾ ಚುನಾವಣೆಯಲ್ಲಿಯೂ ಡಿಎಂಕೆ ಕಾಂಗ್ರೆಸ್ ಮೈತ್ರಿಕೂಟ ರಚನೆಯಾಗಿತ್ತು. ಅಂದು 42 ಸ್ಥಾನಗಳಲ್ಲಿ ಸ್ಪರ್ಧಿಸುವ ಅವಕಾಶ ಪಡೆದಿದ್ದ ಕಾಂಗ್ರೆಸ್, ಈ ಬಾರಿ 50 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದೆ. ಆದರೆ ಡಿಎಂಕೆಗೆ ಮಾತ್ರ ಕಾಂಗ್ರೆಸ್ಗೆ ಕೇವಲ 25 ಕ್ಷೇತ್ರಗಳನ್ನಷ್ಟೇ ಬಿಟ್ಟುಕೊಡುವ ಮನಸಿದೆ. ಇಷ್ಟೇ ಅಲ್ಲದೇ, ಸೀಟು ಹಂಚಿಕೆ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷರನ್ನು ಡಿಎಂಕೆ ನಾಯಕರು ಕೀಳಾಗಿ ನಡೆಸಿಕೊಂಡಿದ್ದಾರೆ ಎಂದು ಸಹ ಹೇಳಲಾಗುತ್ತಿದೆ. ಈ ಎಲ್ಲ ಘಟನೆಗಳಿಂದ ನೋವುಂಡಿರುವ ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಕೆ.ಎಸ್.ಅಳಗಿರಿ ದೆಹಲಿಯ ವಕ್ತಾರರಲ್ಲಿ ತಮ್ಮ ನೋವು ತೋಡಿಕೊಂಡಿದ್ದಾರೆ. ಆದರೆ, ಸಮರ್ಪಕ ಸೀಟು ಹಂಚಿಕೆ ನಡೆಯಬೇಕಿರುವ ಕಾರಣ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸದ್ಯ ತಣ್ಣಗಿರುವಂತೆ ಕೆ.ಎಸ್. ಅಳಗಿರಿ ಅವರನ್ನು ಸಂತೈಸಿದ್ದಾರೆ ಎಂದು ಕೆಲ ಆಂಗ್ಲ ಜಾಲತಾಣಗಳು ವರದಿ ಮಾಡಿವೆ.
ಸ್ವತಂತ್ರ ಸ್ಪರ್ಧೆಯತ್ತ ಒಲವು?
ಈ ಎಲ್ಲ ಬೆಳವಣಿಗೆಗಳಿಂದ ಬೇಸತ್ತಿರುವ ಕಾಂಗ್ರೆಸ್, ಸ್ವತಂತ್ರ ಸ್ಪರ್ಧೆ ನಡೆಸಲು ಸಹ ಚಿಂತನೆ ನಡೆಸಿದೆ. ಸ್ವತಂತ್ರ ಸ್ಪರ್ಧೆ ನಡೆಸಿದರೆ ಎಲ್ಲಾ 234 ಕ್ಷೇತ್ರಗಳಲ್ಲೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಬಹುದು. ಡಿಎಂಕೆಯ ಮರ್ಜಿಯಿಂದ ದೂರವೇ ಉಳಿದು ಸ್ಪರ್ಧೆ ನಡೆಸುವುದು ತಮಿಳುನಾಡು ಕಾಂಗ್ರೆಸ್ ನಾಯಕರಿಗೆ ಸ್ವಾತಂತ್ರ್ಯ ನೀಡಲಿದೆ. ಚುನಾವಣಾ ಫಲಿತಾಂಶ ಘೋಷಣೆಯ ನಂತರ ಡಿಎಂಕೆಗೆ ಅಧಿಕಾರ ಹಿಡಿಯಲು ಶಾಸಕರ ಕೊರೆತಯಾದಲ್ಲಿ ಬೆಂಬಲ ನೀಡುವ ಅವಕಾಶವಂತೂ ತೆರೆದೇ ಇರುತ್ತದೆ. ಹೀಗಾಗಿ ಚುನಾವಣೋತ್ತರ ಮೈತ್ರಿ ಅಗತ್ಯವಿಲ್ಲ ಎಂಬುದು ತಮಿಳುನಾಡು ರಾಜ್ಯ ಕಾಂಗ್ರೆಸ್ ನಾಯಕರ ಅಭಿಪ್ರಾಯವಾಗಿದೆ.
ಡಿಎಂಕೆ ಒಲವು ತೋರದಿರಲು ಕಾರಣವೇನು? ಕಾಂಗ್ರೆಸ್ಗೆ ಹೆಚ್ಚು ಸ್ಥಾನಗಳನ್ನು ಬಿಟ್ಟುಕೊಡದೇ ಹೆಚ್ಚಿನ ಕ್ಷೇತ್ರಗಳಲ್ಲಿ ತಾನೇ ಸ್ಪರ್ಧಿಸಲು ಡಿಎಂಕೆಗೆ ಬಿಹಾರ ವಿಧಾನಸಭಾ ಚುನಾವಣೆ ಬಹುದೊಡ್ಡ ನೆಪವಾಗಿದೆ. ಬಿಹಾರದಲ್ಲಿ ಪ್ರಾದೇಸಿಕ ಪಕ್ಷ ಆರ್ಜೆಡಿ ಜತೆ ಮೈತ್ರಿ ರಚಿಸಿಕೊಂಡು ಸೀಟು ಹಂಚಿಕೆ ಮಾಡಿಕೊಂಡಿದ್ದ ಕಾಂಗ್ರೆಸ್ ನೆಲಕಚ್ಚಿತ್ತು. ಹೆಚ್ಚಿನ ಸೀಟುಗಳನ್ನು ಪಡೆದರೂ ಸಹ ಆರ್ಜೆಡಿಗಿಂತ ಕಡಿಮೆ ಸ್ಥಾನಗಳಲ್ಲಿ ಗೆದ್ದಿತ್ತು. ಇದನ್ನೇ ಉದಾಹರಣೆಯನ್ನಾಗಿ ಮುಂದಿರಿಸಿರುವ ಡಿಎಂಕೆ, ಕೇವಲ 25 ಕ್ಷೇತ್ರಗಳನ್ನಷ್ಟೇ ಕಾಂಗ್ರೆಸ್ಗೆ ಬಿಟ್ಟುಕೊಡುವ ಯೋಜನೆಯಲ್ಲಿದೆ.
ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಏಪ್ರಿಲ್ 6ರಂದು ಚುನಾವಣೆ ಮತ್ತು ಮೇ 2ರಂದು ಮತ ಎಣಿಕೆ ನಡೆಯಲಿದೆ.
ಪ್ರಕಟವಾಗಿದೆ ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟದ ಪಟ್ಟಿ
ಈಗಾಗಲೇ ತಮಿಳುನಾಡು ವಿಧಾನಸಭಾ ಚುನಾವಣೆಗೆ ಆಡಳಿತಾರೂಢ ಎಐಎಡಿಎಂಕೆ ಪಕ್ಷದ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಮೊದಲ ಪಟ್ಟಿಯಲ್ಲಿ ಆರು ಪ್ರಭಾವಿ ನಾಯಕರ ಕ್ಷೇತ್ರಗಳನ್ನು ಅಂತಿಮಗೊಳಿಸಲಾಗಿದೆ. ಶಶಿಕಲಾ ರಾಜಕೀಯ ನಿವೃತ್ತಿ ಘೋಷಣೆಯ ನಂತರ ತಮಿಳುನಾಡು ರಾಜಕಾರಣ ದೇಶದ ಗಮನ ಸೆಳೆದಿತ್ತು. ಶಶಿಕಲಾ ನಿರ್ಧಾರ ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟದ ಹಿತಕ್ಕೆ ಪೂರಕವಾಗಬಹುದು ಎಂಬ ವಿಶ್ಲೇಷಣೆಗಳು ಚಾಲ್ತಿಗೆ ಬಂದಿದ್ದವು.
ಸೇಲಂ ಜಿಲ್ಲೆಯ ಎಡಪ್ಪಾಡಿ ಕ್ಷೇತ್ರದಿಂದ ಮುಖ್ಯಮಂತ್ರಿ ಪಳನಿಸ್ವಾಮಿ, ತೇನಿ ಜಿಲ್ಲೆಯ ಬೋಡಿನಯಾಕ್ಕನೂರ್ ಕ್ಷೇತ್ರದಿಂದ ಉಪಮುಖ್ಯಮಂತ್ರಿ ಓ.ಪನ್ನೀರ್ಸೆಲ್ವಂ ಸ್ಪರ್ಧಿಸಲಿದ್ದಾರೆ.
ಮೀನುಗಾರಿಕೆ ಸಚಿವ ಡಿ.ಜಯಕುಮಾರ್ ರಾಯಪುರಂ ಕ್ಷೇತ್ರದಿಂದ ಮತ್ತು ಮತ್ತು ಕಾನೂನು ಸಚಿವ ಸಿ.ವಿ.ಷಣ್ಮುಗಂ ಉತ್ತರ ತಮಿಳುನಾಡಿನ ವಿಲ್ಲುಪುರಂ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಶಾಸಕರಾದ ಎಸ್.ಪಿ.ಷಣ್ಮುಗನಾಥನ್ ಮತ್ತು ಎಸ್.ತೆನ್ಮೊಳಿ ಅವರಿಗೆ ಕ್ರಮವಾಗಿ ಶ್ರೀವೈಕುಂಠಂ ಮತ್ತು ನಿಲಕ್ಕೋಟಿ (ಮೀಸಲು) ಕ್ಷೇತ್ರಗಳನ್ನು ಘೋಷಿಸಲಾಗಿದೆ.
ಇದನ್ನೂ ಓದಿ: Sasikala: ಸಕ್ರಿಯ ರಾಜಕಾರಣಕ್ಕೆ ಶಶಿಕಲಾ ನಟರಾಜನ್ ಗುಡ್ ಬೈ: ತಮಿಳುನಾಡು ರಾಜಕಾರಣದಲ್ಲಿ ಅಚ್ಚರಿಯ ಬೆಳವಣಿಗೆ
Tamil Nadu Assembly Elections 2021: ಚುನಾವಣಾ ಮೈತ್ರಿಗಾಗಿ ಕಮಲ್ ಹಾಸನ್ ಭೇಟಿ ಮಾಡಿದ ಶರತ್ ಕುಮಾರ್
Published On - 8:04 pm, Sat, 6 March 21