Sasikala: ಸಕ್ರಿಯ ರಾಜಕಾರಣಕ್ಕೆ ಶಶಿಕಲಾ ನಟರಾಜನ್ ಗುಡ್​ ಬೈ: ತಮಿಳುನಾಡು ರಾಜಕಾರಣದಲ್ಲಿ ಅಚ್ಚರಿಯ ಬೆಳವಣಿಗೆ

ತಮಿಳುನಾಡು ರಾಜಕೀಯದಲ್ಲಿ ಹೊಸ ಲೆಕ್ಕಾಚಾರಕ್ಕೆ ಕಾರಣರಾಗಿದ್ದ ಶಶಿಕಲಾ ನಟರಾಜನ್ ರಾಜಕೀಯದಿಂದ ನಿವೃತ್ತರಾಗುವುದಾಗಿ ಘೋಷಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

Sasikala: ಸಕ್ರಿಯ ರಾಜಕಾರಣಕ್ಕೆ ಶಶಿಕಲಾ ನಟರಾಜನ್ ಗುಡ್​ ಬೈ: ತಮಿಳುನಾಡು ರಾಜಕಾರಣದಲ್ಲಿ ಅಚ್ಚರಿಯ ಬೆಳವಣಿಗೆ
ವಿ.ಕೆ.ಶಶಿಕಲಾ
Follow us
|

Updated on:Mar 03, 2021 | 11:07 PM

ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಹೊಸ ಲೆಕ್ಕಾಚಾರಕ್ಕೆ ಕಾರಣರಾಗಿದ್ದ ಶಶಿಕಲಾ ನಟರಾಜನ್ ರಾಜಕೀಯದಿಂದ ನಿವೃತ್ತರಾಗುವುದಾಗಿ ಘೋಷಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಶಶಿಕಲಾ ನಟರಾಜನ್ ಅವರ ಈ ನಿರ್ಧಾರ ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ. ಅಕ್ರಮ ಆಸ್ತಿಗಳಿಕೆ ಪ್ರಕೃಣದಲ್ಲಿ ಶಿಕ್ಷೆ ಅನುಭವಿಸಿದ್ದ ಶಶಿಕಲಾ, ಈಚೆಗಷ್ಟೇ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದರು. ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆ ಪಕ್ಷದ ಮೇಲೆ ನಿಯಂತ್ರಣ ಸಾಧಿಸಲು ಶಶಿಕಲಾ ಯತ್ನಿಸಿದ್ದರು. ಹಲವು ಶಾಸಕರ ಬೆಂಬಲ ಶಶಿಕಲಾ ಅವರಿಗೆ ಇತ್ತು.

‘ನನಗೆ ಯಾವುದೇ ರಾಜಕೀಯ ಹುದ್ದೆ, ಸ್ಥಾನಮಾನಗಳ ಬಗ್ಗೆ ಆಸಕ್ತಿ ಇಲ್ಲ’ ಎಂದು ಶಶಿಕಲಾ ಹೇಳಿದ್ದಾರೆ. ಶಶಿಕಲಾ ಹೇಳಿಕೆ ಅವರ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಅತ್ಯಾಪ್ತ ಗೆಳತಿಯಾಗಿದ್ದ ವಿ.ಕೆ.ಶಶಿಕಲಾ ಬುಧವಾರ (ಮಾರ್ಚ್ 3) ಸಕ್ರಿಯ ರಾಜಕಾರಣದಿಂದ ನಿವೃತ್ತರಾಗುವುದಾಗಿ ಘೋಷಿಸಿದ್ದಾರೆ. ತಮಿಳುನಾಡು ವಿಧಾನಸಭೆ ಚುನಾವಣೆಗೆ ಸುಮಾರು 30 ದಿನ ಬಾಕಿಯಿರುವಾಗ ಈ ಘೋಷಣೆ ಹೊರಬಿದ್ದಿರುವುದು ಆಡಳಿತಾರೂಢ ಎಐಎಡಿಎಂಕೆಯ ಕೆಲ ನಾಯಕರಿಗೆ ನೆಮ್ಮದಿ ತಂದಿದೆ. ಆದರೆ ಶಶಿಕಲಾ ಬೆಂಬಲಿಗರಲ್ಲಿ ‘ಚಿನ್ನಮ್ಮ’ನ ಈ ಹಠಾತ್ ನಿರ್ಧಾರ ಅಚ್ಚರಿ ಮೂಡಿಸಿದೆ.

ರಾಜಕೀಯ ನಿವೃತ್ತಿಯ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಶಶಿಕಲಾ ‘ನಾನು ಅಧಿಕಾರ ಅಥವಾ ಹುದ್ದೆಗಾಗಿ ಎಂದೂ ಹಾತೊರೆಯಲಿಲ್ಲ. ಎಐಎಡಿಎಂಕೆ ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸಿ, ಡಿಎಂಕೆಯನ್ನು ಅಧಿಕಾರದಿಂದ ದೂರ ಇಡಬೇಕು. ಅಮ್ಮನ (ಜಯಲಲಿತಾ) ಸುವರ್ಣ ಆಡಳಿತವನ್ನು ಮರುಸ್ಥಾಪಿಸಬೇಕು’ ಎಂದು ಶಶಿಕಲಾ ಪತ್ರದಲ್ಲಿ ಕರೆನೀಡಿದ್ದಾರೆ.

ನನ್ನ ಸಾರಥ್ಯದಲ್ಲೇ ಎಎಂಎಂಕೆ ಸ್ಪರ್ಧೆ: ದಿನಕರನ್ ಘೋಷಣೆ ಶಶಿಕಲಾ ಅವರು ಸಕ್ರಿಯ ರಾಜಕಾರಣಕ್ಕೆ ವಿದಾಯ ಹೇಳಿದ ನಂತರ ಚೆನೈಯಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಎಎಂಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್, ‘ಚಿನ್ನಮ್ಮ ಅವರು ತೆಗದುಕೊಂಡಿರುವ ನಿರ್ಣಯ ನನ್ನಲ್ಲಿ ತೀವ್ರ ನೋವನ್ನುಂಟು ಮಾಡಿದೆ. ನಿರ್ಧಾರ ಬದಲಿಸಿ ಅಂತ ನಾನು ಅವರಿಗೆ ಬಲವಂತ ಮಾಡಲಾರೆ. ಅವರ ನಿರ್ಣಯವನ್ನು ಗೌರವಿಸುತ್ತೇನೆ. ತಮಿಳುನಾಡು ವಿಧಾನಸಭಾ ಚುನಾವಣೆಯನ್ನು ಎಎಂಎಂಕೆ ಪಕ್ಷವು ನನ್ನ ಸಾರಥ್ಯದಲ್ಲೇ ಎದುರಿಸಿ ಮತ್ತು ಭಾರಿ ಜಯ ಸಾಧಿಸಲಿದೆ’ ಎಂದು ಹೇಳಿದರು.

ಜಯಲಲಿತಾರ ನೆಚ್ಚಿನ ಗೆಳತಿಯಾಗಿದ್ದ ಶಶಿಕಲಾ ಚೆನ್ನೈನಲ್ಲಿ ಸಿನಿಮಾ ವಿಡಿಯೊ ಕ್ಯಾಸೆಟ್ ಬಾಡಿಗೆಗೆ ಕೊಡುವ ಅಂಗಡಿಯೊಂದನ್ನು ನಡೆಸುತ್ತಿದ್ದವರು ಶಶಿಕಲಾ. 80ರ ದಶಕದಲ್ಲಿ ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದ ಜೆ.ಜಯಲಲಿತಾರ ಪರಿಚಯ ಮತ್ತು ಗೆಳೆತನದಿಂದ ಅವರ ದೆಸೆ ಬದಲಾಗಿತ್ತು. ಜಯಲಲಿತಾ ಬದುಕಿರುವವರೆಗೂ ಅವರ ಜೊತೆಗೆ ಗಟ್ಟಿಯಾಗಿ ನಿಂತು ವರ್ಚಸ್ಸು ಹೆಚ್ಚಿಸಿಕೊಂಡರು. ಗೆಳತಿಯರ ಮಧ್ಯೆ ತುಸು ಮನಸ್ತಾಪ ಬಂದಿದ್ದರೂ ಕ್ರಮೇಣ ಮನಸ್ಸುಗಳು ತಿಳಿಗೊಂಡಿದ್ದವು.

ಜಯಲಲಿತಾ 2016ರಲ್ಲಿ ನಿಧನರಾದಾಗ, ಎಂ​ಜಿಆರ್ ಅಂತ್ಯಸಂಸ್ಕಾರದ ಸಮಯದಲ್ಲಿ ಎಂಜಿಆರ್ ದೇಹದ ಪಕ್ಕದಲ್ಲಿಯೇ ಜಯಾ ಇದ್ದಂತೆ, ಜಯಾ ಪಾರ್ಥಿವ ಶರೀರದ ಅಂತ್ಯಸಂಸ್ಕಾರದ ವಿಧಿಗಳು ಮುಗಿಯುವರೆಗೆ ಶಶಿಕಲಾ ಇದ್ದರು. ಜಯಾ ವಿಧವಶರಾದ ನಂತರ ಪಕ್ಷದ ಸದಸ್ಯರು ಶಶಿಕಲಾರನ್ನು ‘ಚಿನ್ನಮ್ಮ’ ಎಂದು ಸಂಬೋಧಿಸಲಾರಂಬಿಸಿದರು. ಮುಖ್ಯಮಂತ್ರಿಯಾಗಿ ಓ.ಪನ್ನೀರ್​ಸೆಲ್ವಂ ಅಧಿಕಾರ ಸ್ವೀಕರಿಸಿದ್ದರೂ, ಆಡಳಿತದ ಚುಕ್ಕಾಣಿ ಶಶಿಕಲಾ ಅವರ ಕೈಲಿತ್ತು.

ಫೆಬ್ರುವರಿ 2017 ರಲ್ಲಿ ಪನ್ನೀರ್ ಸೆಲ್ವಂ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಶಶಿಕಲಾ ಪಟ್ಟಾಭಿಷೇಕಕ್ಕೆ ವೇದಿಕೆ ನಿರ್ಮಾಣಗೊಂಡಿತು. ಆದರೆ ರಾಜ್ಯಪಾಲ ಸಿ.ವಿದ್ಯಾಸಾಗರ ಅವರ ಬಿಡುವಿಲ್ಲದ ಕಾರ್ಯಕ್ರಮಗಳಿಂದಾಗಿ ಶಶಿಕಲಾ ಅಧಿಕಾರ ಸ್ವೀಕರಿಸುವುದು ವಿಳಂಬವಾಯಿತು. ಇದೇ ಹೊತ್ತಿಗೆ ಸುಪ್ರೀಂಕೋರ್ಟ್​ ಆಕೆಯನ್ನು ಅಕ್ರಮ ಆಸ್ತಿ ಗಳಿಕೆ ಪ್ರಕಾರಣದಲ್ಲಿ ದೋಷಿ ಎಂದು ತೀರ್ಪು ನೀಡಿ 4 ವರ್ಷಗಳ ಶಿಕ್ಷೆ ವಿಧಿಸಿತು. ಕೋರ್ಟು ಆಕೆಯ ವಿರುದ್ಧ ತೀರ್ಪು ಪ್ರಕಟಿಸಿದ ಮರದಿನವೇ ಅಂದರೆ ಫೆಬ್ರುವರಿ 15ರಂದು ಆಕೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರೀಯ ಜೈಲು ಅಧಿಕಾರಿಗಳೆದುರು ಶರಣಾದರು.

ಶಶಿಕಲಾ ಅವರ ನಾಲ್ಕು ವರ್ಷದ ಸೆರೆವಾಸ ಜನವರಿ 27, 2021ಕ್ಕೆ ಕೊನೆಗೊಂಡಿತ್ತು. ಆಕೆಯ ಅಭಿಮಾನಿಗಳು, ಬೆಂಬಲಿಗರು ಆಕೆಯನ್ನು ಅಭೂತಪೂರ್ವವಾಗಿ ತಮಿಳುನಾಡಿಗೆ ಬರಮಾಡಿಕೊಂಡಿದ್ದರು. ಎಐಎಡಿಂಕೆ ಪಕ್ಷದ ಮೇಲೆ ಹಿಡಿತ ಸಾಧಿಸುತ್ತಾರೆ, ಬಿಜೆಪಿ ಜೊತೆಗೆ ಮೈತ್ರಿ ಮೂಲಕ ಡಿಎಂಕೆಯನ್ನು ಮಣಿಸಿ ಮುಖ್ಯಮಂತ್ರಿ ಗಾದಿಗೆ ಬರಲಿದ್ದಾರೆ ಎಂಬ ವಿಶ್ಲೇಷಣೆಗಳೂ ಚಾಲ್ತಿಗೆ ಬಂದಿದ್ದವು. ಆದರೆ ಈಗ ಅವರು ರಾಜಕೀಯ ನಿವೃತ್ತಿ ಘೋಷಿಸಿ, ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಇದನ್ನೂ ಓದಿ: ಮುಖ್ಯಮಂತ್ರಿ ಗಾದಿ ಸನಿಹದಲ್ಲಿದ್ದಾಗ ಸೆರೆಮನೆಗೆ ಬಂದ ಶಶಿಕಲಾ ಸವೆಸಿದ ಹಾದಿ ಕಲ್ಲುಮುಳ್ಳಿನದು

ಇದನ್ನೂ ಓದಿ: ಶಶಿಕಲಾ ಬೆಂಗಳೂರು-ಚೆನ್ನೈ ಜರ್ನಿ: 23 ಗಂಟೆ ಪ್ರಯಾಣಕ್ಕೆ 200 ಕೋಟಿ ರೂ ಖರ್ಚು?

Published On - 9:37 pm, Wed, 3 March 21