AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಳಿಯೇ ನಾಪತ್ತೆ: ಭಾರತದಲ್ಲಿ ಈ ವರ್ಷದ ಚಳಿಗಾಲ ತಾಪಮಾನ 120 ವರ್ಷಗಳಲ್ಲೇ ದಾಖಲೆ

ಜನೆವರಿ ಮತ್ತು ಫೆಬ್ರುವರಿ ತಿಂಗಳಿಗಳಲ್ಲಿ ಕನಿಷ್ಟ ತಾಪಮಾನ 15.39 ಡಿಗ್ರೀ ಸೆಲ್ಸಿಯಸ್ ದಾಖಲಾಗಿದ್ದು ಇದು ಈ ಎರಡು ತಿಂಗಳುಗಳಲ್ಲಿ ಸಾಮಾನ್ಯವಾಗಿ ದಾಖಲಾಗುವ ಉಷ್ಣಾಂಶಕ್ಕಿಂತ 0.79 ಡಿಗ್ರಿಯಷ್ಟು ಜಾಸ್ತಿಯಾಗಿದೆ.

ಚಳಿಯೇ ನಾಪತ್ತೆ: ಭಾರತದಲ್ಲಿ ಈ ವರ್ಷದ ಚಳಿಗಾಲ ತಾಪಮಾನ 120 ವರ್ಷಗಳಲ್ಲೇ ದಾಖಲೆ
ಅತಿ ತಾಪಮಾನದ ಚಳಿಗಾಲ
Follow us
ಅರುಣ್​ ಕುಮಾರ್​ ಬೆಳ್ಳಿ
| Updated By: Srinivas Mata

Updated on:Mar 03, 2021 | 8:24 PM

‘ಈಗಿನ್ನೂ ಫೆಬ್ರುವರಿ ಮುಗಿದು ಮಾರ್ಚ್​ನಲ್ಲಿ ಕಾಲಿಟ್ಟಿದ್ದೇವೆ, ಅಗಲೇ ಅದೆಂಥ ಸೆಕೆ! ಇದೆಂಥ ಚಳಿಗಾಲಲೇ ಯಪ್ಪಾ, ಬ್ಯಾಸ್ಗಿ, ಚಳಿಗಾಲ್ದಾಗ ಏನ್ಬೀ ಫರಾಕ್ಕೇ ಇಲ್ಲಾರದಂಗ್​ ಆಗ್ಯಾದಲಲೇ ಯಪ್ಪಾ! ಚಳಿಗಾಲದಲ್ಲಿ ಇದೆಂತ ಸೆಕೆ ಮಾರಾಯ್ರೇ, ಬಿಸಿಲಿಗೆ ಮಂಡೆ ಸುಡ್ತುಂಟಲ್ಲ!’ –ನಮ್ಮ ರಾಜ್ಯದಲ್ಲಿ ಈ ಬಗೆಯ ಉದ್ಗಾರಗಳು ವ್ಯಕ್ತವಾಗಿರುವುದನ್ನು ನಾವು ಕೇಳಿಸಿಕೊಂಡಿದ್ದೇವೆ. ಕೇವಲ ನಮ್ಮ ರಾಜ್ಯದಲ್ಲಿ ಮಾತ್ರ ಅಲ್ಲ, ದೇಶದ ಎಲ್ಲ ಮೂಲೆಗಳಲ್ಲೂ ಇತ್ತೀಚಿಗಷ್ಟೇ ಕೊನೆಗೊಂಡ ಚಳಿಗಾಲದಲ್ಲಿ ಇಂಥ ಉದ್ಗಾರಗಳು ಕೇಳಿಬಂದವು. ಇದರ ಹಿಂದೆ ಕಾರಣವಿಲ್ಲದಿಲ್ಲ. ಈ ಬಾರಿಯ ಚಳಿಗಾಲ1901 ರ ನಂತರ ಭಾರತದ ಎರಡನೇ ಅತಿಹೆಚ್ಚು ತಾಪಮಾನದಿಂದ ಕೂಡಿದ ಚಳಿಗಾಲವಾಗಿತ್ತು ಎಂದು ಹವಾಮಾನ ಇಲಾಖೆ ಹೇಳಿದೆ.

ಹವಾಮಾನ ಇಲಾಖೆಯು (IMD) ಮಂಗಳವಾರ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ನಾವು ಮೊನ್ನೆ ಕಳೆದ ಚಳಿಗಾಲವು ಕಳೆದ 120 ವರ್ಷಗಳಲ್ಲಿಯೇ ಅತಿ ಹೆಚ್ಚು ತಾಪಮಾನದಿಂದ ಕೂಡಿದ ಎರಡನೇ ಚಳಿಗಾಲವಾಗಿತ್ತು. ಭಾರತದಲ್ಲಿ ಜನವರಿ ಮತ್ತು ಫೆಬ್ರುವರಿ ತಿಂಗಳುಗಳನ್ನು ಚಳಿಗಾಲದ ತಿಂಗಳುಗಳೆಂದು ಪರಿಗಣಿಸಲಾಗುತ್ತದೆ.

ಈ ಎರಡು ಮಾಸಗಳಲ್ಲಿ ಕನಿಷ್ಠ ತಾಪಮಾನ 15.39 ಡಿಗ್ರೀ ಸೆಲ್ಸಿಯಸ್ ದಾಖಲಾಗಿದ್ದು ಇದು ಫೆಬ್ರುವರಿ ಮತ್ತು ಮಾರ್ಚ್ ತಿಂಗಳುಗಳಲ್ಲಿ ಸಾಮಾನ್ಯವಾಗಿ ದಾಖಲಾಗುವ ಉಷ್ಣಾಂಶಕ್ಕಿಂತ 0.79 ಡಿಗ್ರಿಯಷ್ಟು ಜಾಸ್ತಿಯಾಗಿದೆ. ಇದೇ ಅವಧಿಯಲ್ಲಿ ದಾಖಲಾಗಿರುವ ಗರಿಷ್ಠ ತಾಪಮಾನವು 27.47 ಡಿಗ್ರೀ ಸೆಲ್ಸಿಯ್​ಗಳಷ್ಟಿತ್ತು ಮತ್ತು ಇದು ಸಾಮಾನ್ಯಕ್ಕಿಂತ 0.47 ಡಿಗ್ರೀಯಷ್ಟು ಜಾಸ್ತಿಯಾಗಿದೆ.

ಭಾರತೀಯ ಹವಾಮಾನ ಇಲಾಖೆ

2016ರ ಚಳಿಗಾಲವು ಗರಿಷ್ಠ ತಾಪಮಾನದ ಚಳಿಗಾಲವಾಗಿತ್ತು ಎಂದು ಇಲಾಖೆಯ ದಾಖಲೆಗಳು ಹೇಳುತ್ತವೆ. ಆಗಿನ ಚಳಿಗಾಲದಲ್ಲಿ ದಾಖಲಾದ ತಾಪಮಾನವು ಸಾಮಾನ್ಯಕ್ಕಿಂತ 0.94 ಡಿಗ್ರೀ ಸೆಲ್ಸಿಯಸ್​ನಷ್ಟು ಅಧಿಕವಾಗಿತ್ತು. ಇದಲ್ಲದೆ 1901ರಿಂದ 2021ವರೆಗಿನ ಅವಧಿಯಲ್ಲಿ ದಾಖಲಾಗಿರುವ ಜಾಸ್ತಿ ತಾಪಮಾನದ ಚಳಿಗಾಲಗಳೆಂದರೆ 2009 (ಸಾಮಾನ್ಯ ತಾಪಮಾನಕ್ಕಿಂತ 0.71 ಹೆಚ್ಚು), 1926 (ಸಾಮಾನ್ಯ ತಾಪಮಾನಕ್ಕಿಂತ 0.70 ಜಾಸ್ತಿ) ಮತ್ತು 1912 (ಸಾಮಾನ್ಯ ತಾಪಮಾನಕ್ಕಿಂತ 0.69 ಆಧಿಕ).

ಹಾಗೆ ನೋಡಿದರೆ, ಉತ್ತರ ಭಾರತವು ಜನೆವರಿ ತಿಂಗಳಲ್ಲಿ ಅಸ್ವಾಭಾವಿಕ ಮಳೆಯನ್ನು ಕಂಡಿತು. ತಮಿಳುನಾಡು, ಕೇರಳ ಮತ್ತು ಪುದುಚರಿಯಲ್ಲೂ ಮಳೆಗಳಾದವು. ದಕ್ಷಿಣದ ಜಲಾವೃತ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಚಳಿಗಾಲದಲ್ಲಿ ಆಗುವ ಮಳೆಗಿಂತ ಶೇ 126ರಷ್ಟು ಜಾಸ್ತಿ ಮಳೆ ಸುರಿದಿದ್ದು ದೇಶದಾದ್ಯಂತ ತಾಪಮಾನ ತಗ್ಗಲು ಪೂರಕವಾಯಿತು. ದಕ್ಷಿಣದ ಜಲಾವೃತ ಪ್ರದೇಶಗಳಲ್ಲಿ ಕಳೆದ ಜನೆವರಿ ಮತ್ತು ಫೆಬ್ರುವರಿ ತಿಂಗಳುಗಳಲ್ಲಿ 56.1 ಮಿಮೀಗಳಷ್ಟು ಮಳೆ ಸುರಿದಿದ್ದು ಆ ಪ್ರದೇಶವು ಚಳಿಗಾಲದ ಅವಧಿಯಲ್ಲಿ ನಾಲ್ಕನೇ ಅತಿ ಹೆಚ್ಚು ಮಳೆ ಕಂಡಿರುವ ಸಂದರ್ಭವಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಸಾಮಾನ್ಯವಾಗಿ ಸದರಿ ಪ್ರದೇಶದಲ್ಲಿ ಈ ತಿಂಗಳುಗಳಲ್ಲಿ ಮಳೆಯಾಗುವುದಿಲ್ಲ. ಆದರೆ, 1901 ರಲ್ಲಿ (61 ಮಿಮೀ), 1986ರಲ್ಲಿ (59.9 ಮಿಮೀ) ಮತ್ತು 1984ರಲ್ಲಿ (59.2 ಮಿಮೀ) ಮಳೆಯಾಗಿರುವ ನಿದರ್ಶನಗಳಿವೆ. ಹಾಗೆ ನೋಡಿದರೆ, ಈ ಅವಧಿಯಲ್ಲಿ ದೇಶದೆಲ್ಲೆಡೆ ಸುರಿಯುವ ಮಳೆ ಪ್ರಮಾಣವನ್ನು ಗಮನಕ್ಕೆ ತೆಗೆದುಕೊಂಡರೆ ಅದು ಶೇ 32 ರಷ್ಟು ಕಮ್ಮಿ ಎಂದು ಹವಾಮಾನ ಇಲಾಖೆ ಹೇಳಿದೆ.

ಇದನ್ನೂ ಓದಿ: Weather Alert: ಫೆಬ್ರವರಿ 17ರಿಂದ ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಮಳೆ ಸಾಧ್ಯತೆ

Published On - 7:00 pm, Wed, 3 March 21