200 ಕೋಟಿ ರೂಪಾಯಿ ಸಂಭಾವನೆ ಕೇಳುತ್ತಿರುವ ರಾಜಮೌಳಿ; ಸ್ಟಾರ್ ನಟರೇ ಶಾಕ್
ಎಸ್ಎಸ್ ರಾಜಮೌಳಿ ನಿರ್ದೇಶನದ ಸಿನಿಮಾಗೆ ಬಂಡವಾಳ ಹೂಡಿದರೆ ಖಂಡಿತಾ ಲಾಭ ಆಗುತ್ತದೆ ಎಂಬುದು ನಿರ್ಮಾಪಕರಿಗೆ ಖಚಿತವಾಗಿದೆ. ಹಾಗಾಗಿ ರಾಜಮೌಳಿ ಕೇಳಿದಷ್ಟು ಸಂಭಾವನೆ ನೀಡಲು ನಿರ್ಮಾಪಕರು ಸಿದ್ಧರಿದ್ದಾರೆ. ಈಗ ರಾಜಮೌಳಿ ಅವರು ಬರೋಬ್ಬರಿ 200 ಕೋಟಿ ರೂಪಾಯಿ ಸಂಭಾವನೆ ಕೇಳುತ್ತಿದ್ದಾರೆ ಎಂದು ಸುದ್ದಿ ಆಗಿದೆ.

ಭಾರತೀಯ ಚಿತ್ರರಂಗದಲ್ಲಿ ಸಾಮಾನ್ಯವಾಗಿ ನಿರ್ದೇಶಕರಿಗಿಂತಲೂ ನಟರೇ ಹೆಚ್ಚು ಸಂಭಾವನೆ ಪಡೆಯುತ್ತಾರೆ. ಆದರೆ ಕೆಲವು ನಿರ್ದೇಶಕರು ಸ್ಟಾರ್ ನಟರಿಗಿಂತಲೂ ಹೆಚ್ಚು ಜನಪ್ರಿಯತೆ ಹೊಂದಿರುತ್ತಾರೆ. ಅಂಥವರ ಸಾಲಿನಲ್ಲಿ ಮೊದಲು ಕೇಳಿಬರುವ ಹೆಸರು ಎಸ್.ಎಸ್. ರಾಜಮೌಳಿ (SS Rajamouli) ಅವರದ್ದು. ಈಗಾಗಲೇ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಅವರು ಈಗ ಮಹೇಶ್ ಬಾಬು ಜೊತೆ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ನಡುವೆ, ರಾಜಮೌಳಿ ಅವರ ಸಂಭಾವನೆ (Rajamouli Remuneration) ಬಗ್ಗೆ ಹೆಚ್ಚು ಸುದ್ದಿ ಆಗುತ್ತಿದೆ. ವರದಿಗಳ ಪ್ರಕಾರ, ರಾಜಮೌಳಿ ಅವರು ಪ್ರತಿ ಸಿನಿಮಾಗೆ 200 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ! ಈ ವಿಷಯ ಕೇಳಿ ಸ್ಟಾರ್ ನಟರಿಗೇ ಶಾಕ್ ಆಗಿದೆ.
ರಾಜಮೌಳಿ ಅವರು ತಮ್ಮ ಸಾಮರ್ಥ್ಯ ಏನು ಎಂಬುದನ್ನು ಈಗಾಗಲೇ ಸಾಬೀತು ಮಾಡಿದ್ದಾರೆ. ತೆಲುಗು ಚಿತ್ರರಂಗವನ್ನು ಅವರು ಜಾಗತಿಕ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ‘ಬಾಹುಬಲಿ 2’, ‘ಆರ್ಆರ್ಆರ್’ ಸಿನಿಮಾಗಳ ಮೂಲಕ ಅವರು ವಿಶ್ವಾದ್ಯಂತ ಹೆಸರು ಮಾಡಿದ್ದಾರೆ. ಹಾಗಾಗಿ ಅವರ ನಿರ್ದೇಶನದ ಸಿನಿಮಾ ಎಂದರೆ ಸಹಜವಾಗಿಯೇ ಎಲ್ಲ ಕಡೆಗಳಲ್ಲಿ ಬಿಸ್ನೆಸ್ ಆಗುತ್ತದೆ. ಅದಕ್ಕೆ ತಕ್ಕಂತೆ ರಾಜಮೌಳಿ ಅವರು ಡಿಮ್ಯಾಂಡ್ ಹೆಚ್ಚಿಸಿಕೊಂಡಿದ್ದಾರೆ.
ಬಾಕ್ಸ್ ಆಫೀಸ್ನಲ್ಲಿ ರಾಜಮೌಳಿ ಅವರು ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದಾರೆ. ಅವರು ನಿರ್ದೇಶನ ಮಾಡುವ ಸಿನಿಮಾಗಳು ಸಾವಿರಾರು ಕೋಟಿ ರೂಪಾಯಿ ಗಳಿಸುತ್ತವೆ. ಭಾರತದಲ್ಲಿ ಮಾತ್ರವಲ್ಲದೇ ಜಪಾನ್ನಲ್ಲಿ ಕೂಡ ರಾಜಮೌಳಿ ಅವರ ಸಿನಿಮಾಗಳು ಭರ್ಜರಿ ಪ್ರದರ್ಶನ ಕಾಣುತ್ತವೆ. ಆ ಮೂಲಕ ವಿದೇಶದಲ್ಲಿ ನೂರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡುತ್ತವೆ.
ಸತತವಾಗಿ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ ಬಳಿಕ ರಾಜಮೌಳಿ ಅವರ ಹೆಸರು ಬ್ರ್ಯಾಂಡ್ ಆಗಿದೆ. ಅವರ ಜೊತೆ ಸಿನಿಮಾ ಮಾಡಿದರೆ ಯಶಸ್ಸು ಗ್ಯಾರಂಟಿ ಎಂಬುದು ಎಲ್ಲ ನಿರ್ಮಾಪಕರಿಗೆ ಮತ್ತು ನಟರಿಗೆ ಗೊತ್ತಾಗಿದೆ. ಹಾಗಾಗಿ ರಾಜಮೌಳಿ ಕೇಳಿದಷ್ಟು ಸಂಭಾವನೆ ನೀಡಲು ನಿರ್ಮಾಪಕರು ಸಿದ್ಧರಿದ್ದಾರೆ. ಆ ಬೇಡಿಕೆಗೆ ತಕ್ಕಂತೆಯೇ ರಾಜಮೌಳಿ ಅವರು 200 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಮಾತು ಕೇಳಿಬಂದಿದೆ.
ಇದನ್ನೂ ಓದಿ: ಇದೇ ವರ್ಷ ಪ್ರಾರಂಭವಾಗಲಿದೆ ‘ಮಹಾಭಾರತ’: ನಿರ್ದೇಶಕ ರಾಜಮೌಳಿ ಅಲ್ಲ, ಮತ್ಯಾರು?
ಪ್ರಸ್ತುತ ಮಹೇಶ್ ಬಾಬು ಮತ್ತು ರಾಜಮೌಳಿ ಅವರು ಜೊತೆಯಾಗಿ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್ ಸುಕುಮಾರನ್ ಮುಂತಾದ ಘಟಾನುಘಟಿ ಕಲಾವಿದರು ಅಭಿನಯಿಸುತ್ತಿದ್ದಾರೆ. ಭಾರಿ ಬಜೆಟ್ನಲ್ಲಿ ನಿರ್ಮಾಣ ಆಗುತ್ತಿರುವ ಈ ಸಿನಿಮಾಗೆ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.