ಮಹೇಶ್ ಬಾಬು-ರಾಜಮೌಳಿ ಸಿನಿಮಾಕ್ಕೆ ಹೆಸರು ಫಿಕ್ಸ್
SS Rajamouli-Mahesh Babu: ರಾಜಮೌಳಿ ಮತ್ತು ಮಹೇಶ್ ಬಾಬು ಅವರ ಸಿನಿಮಾದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದೆ. ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ಸಹ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು (SSMB29) ಎಂದು ಈ ವರೆಗೆ ಕರೆಯಲಾಗುತ್ತಿದೆ. ಇದೀಗ ಸಿನಿಮಾಕ್ಕೆ ಹೆಸರೊಂದನ್ನು ಅಂತಿಮಗೊಳಿಸಲಾಗಿದೆ. ಈ ಹಿಂದಿನ ಸಿನಿಮಾಕ್ಕೆ ಹೆಸರಿಟ್ಟ ರೀತಿಯಲ್ಲಿಯೇ ಹೊಸ ಸಿನಿಮಾಕ್ಕೆ ಹೆಸರಿಟ್ಟಿದ್ದಾರೆ ರಾಜಮೌಳಿ.

ರಾಜಮೌಳಿ ನಿರ್ದೇಶನ ಮಾಡಿ ಮಹೇಶ್ ಬಾಬು ನಟಿಸುತ್ತಿರುವ ಹೊಸ ಸಿನಿಮಾದ ಚಿತ್ರೀಕರಣ ಈಗಾಗಲೇ ಶುರುವಾಗಿದೆ. ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ಸಹ ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಜೋರಿನಿಂದ ಸಾಗಿದ್ದು, ಸಿನಿಮಾ ಅನ್ನು ಸದ್ಯಕ್ಕೆ ‘ಎಸ್ಎಸ್ಎಂಬಿ29’ (SSMB29) ಎಂದು ಕರೆಯಲಾಗುತ್ತಿದೆ. ಆದರೆ ಈ ಸಿನಿಮಾಕ್ಕೆ ಹೆಸರು ನಿಗದಿ ಮಾಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದ್ದು, ಈ ಹಿಂದೆ ‘RRR’ ಸಿನಿಮಾಕ್ಕೆ ಹೆಸರಿಟ್ಟ ರೀತಿಯಲ್ಲಿಯೇ ಮಹೇಶ್ ಬಾಬು-ರಾಜಮೌಳಿ ಸಿನಿಮಾಕ್ಕೂ ಹೆಸರಿಡಲಾಗಿದೆಯಂತೆ.
‘RRR’ ಸಿನಿಮಾಕ್ಕೆ, ರಾಮ್ ಚರಣ್, ರಾಜಮೌಳಿ, ತಾರಕ್ ರಾಮ್ ಮೂವರ ಹೆಸರಿನಲ್ಲಿಯೂ ಸಾಮಾನ್ಯವಾಗಿರುವ ಆರ್ (R) ಅಕ್ಷರವನ್ನು ತೆಗೆದುಕೊಂಡು ‘RRR’ ಎಂದು ಇಡಲಾಗಿತ್ತು. ಹೊಸ ಸಿನಿಮಾಕ್ಕೂ ಇದೇ ಮಾದರಿ ಅನುಸರಿಸಿ ‘ಮಹಾರಾಜ’ ಎಂದು ಹೆಸರಿಡಲಾಗಿದೆ. ಮಹೇಶ್ ಬಾಬು ಅವರ ಹೆಸರಿನ ಮೊದಲ ಮೂರು ಇಂಗ್ಲೀಷ್ ಅಕ್ಷರ, ರಾಜಮೌಳಿಯ ಹೆಸರಿನ ಮೊದಲ ನಾಲ್ಕು ಇಂಗ್ಲೀಷ್ ಅಕ್ಷರಗಳನ್ನು ತೆಗೆದುಕೊಂಡು ಸಿನಿಮಾಕ್ಕೆ ‘ಮಹರಾಜ’ (Mahraja) ಎಂದು ಹೆಸರಿಡಲಾಗಿದೆ.
ಸಿನಿಮಾದ ಕತೆಗೂ ಸಹ ‘ಮಹರಾಜ’ ಹೆಸರು ಸೂಕ್ತವಾಗಿ ಒಗ್ಗುವ ಕಾರಣಕ್ಕೆ ಸಿನಿಮಾಕ್ಕೆ ಇದೇ ಹೆಸರನ್ನು ಅಂತಿಮ ಮಾಡಲಾಗಿದೆಯಂತೆ. ಸಿನಿಮಾದ ಕತೆ ಅಡ್ವೇಂಚರ್ ಥ್ರಿಲ್ಲರ್ ಜಾನರ್ ಒಳಗೊಂಡಿದೆ. ಸುಮಾರು 10 ದೇಶಗಳಲ್ಲಿ ಸುತ್ತಾಡಿ ಸಿನಿಮಾದ ಚಿತ್ರೀಕರಣ ಮಾಡಲಾಗುತ್ತದೆ. ವಿಶೇಷವಾಗಿ ಅಮೆಜಾನ್ ಕಾಡುಗಳಲ್ಲಿ ಅದ್ಭುತ ಸಾಹಸ ದೃಶ್ಯಗಳನ್ನು ಚಿತ್ರೀಕರಣ ಮಾಡಲಿದ್ದಾರೆ ಎಸ್ಎಸ್ ರಾಜಮೌಳಿ. ಅರಣ್ಯದಲ್ಲಿ ನಡೆಯುವ ಥ್ರಿಲ್ಲರ್ ಕತೆಯನ್ನು ಸಿನಿಮಾ ಒಳಗೊಂಡಿದ್ದು, ಸಿನಿಮಾದ ಕತೆಯಲ್ಲಿ ಅರಣ್ಯವಾಸಿಗಳು, ಅವರ ಸಂಪ್ರದಾಯ ಇನ್ನಿತರೆ ವಿಚಾರಗಳು ಇರಲಿವೆ. ಸಿನಿಮಾದ ಕತೆ ಒಬ್ಬ ರಾಜನ ಸುತ್ತ ಸುತ್ತುತ್ತದೆಯಂತೆ ಹಾಗಾಗಿ ಸಿನಿಮಾಕ್ಕೆ ‘ಮಹರಾಜ’ ಹೆಸರು ಸೂಕ್ತವೆನಿಸಿ ಇದೇ ಹೆಸರನ್ನು ಇಡಲಾಗಿದೆಯಂತೆ.
ಇದನ್ನೂ ಓದಿ:ಮಹೇಶ್ ಬಾಬು-ರಾಜಮೌಳಿ ಚಿತ್ರದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಪೃಥ್ವಿರಾಜ್
ಈ ಸಿನಿಮಾಕ್ಕೆ ಸುಮಾರು 1000 ಕೋಟಿಗೂ ಹೆಚ್ಚು ಬಜೆಟ್ ಹಾಕಲಾಗುತ್ತಿದೆ. ಸಿನಿಮಾದಲ್ಲಿ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಮಾತ್ರವೇ ಅಲ್ಲದೆ ಕೆಲವು ಹಾಲಿವುಡ್ನ ಖ್ಯಾತ ನಾಮ ನಟ-ನಟಿಯರು ಸಹ ಇರಲಿದ್ದಾರೆ. ಈ ಸಿನಿಮಾದಲ್ಲಿ ‘ಥಾರ್’ ಖ್ಯಾತಿಯ ಕ್ರಿಸ್ ಹ್ಯಾಮ್ಸ್ವರ್ತ್ ಸಹ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಎಮಾ ವ್ಯಾಟ್ಸನ್ ಹೆಸರು ಸಹ ಕೇಳಿ ಬರುತ್ತಿದೆ. ಆದರೆ ಯಾವುದೂ ಇನ್ನೂ ಖಾತ್ರಿಯಾಗಿಲ್ಲ. ಈ ಸಿನಿಮಾದ ಪ್ರೀ ಪ್ರೊಡಕ್ಷನ್ಗೆ ರಾಜಮೌಳಿ ಸುಮಾರು ಎರಡು ವರ್ಷ ಸಮಯ ತೆಗೆದುಕೊಂಡಿದ್ದಾರೆ. ಸಿನಿಮಾದ ಕತೆ ಬರೆದಿರುವುದು ರಾಜಮೌಳಿಯ ತಂದೆ ವಿಜಯೇಂದ್ರಪ್ರಸಾದ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:47 am, Tue, 11 February 25