ರಾಜಮೌಳಿ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಂಡ ಹಳೆ ಗೆಳೆಯ, ಲವ್ ಸ್ಟೋರಿ ಕಾರಣ
SS Rajamouli: ನಿರ್ದೇಶಕ ಎಸ್ಎಸ್ ರಾಜಮೌಳಿ ಯಾವುದೇ ಕಳಂಕ ಇಲ್ಲದ ಸ್ವಚ್ಛ ವ್ಯಕ್ತಿತ್ವದ ಸಿನಿಮಾ ಸೆಲೆಬ್ರಿಟಿ ಎಂದೇ ಜನಪ್ರಿಯ. ಆದರೆ ಇದೀಗ ಎಸ್ಎಸ್ ರಾಜಮೌಳಿಯ 34 ವರ್ಷ ಹಳೆಯ ಮಿತ್ರನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ತಮ್ಮ ಆತ್ಮಹತ್ಯೆಗೆ ಎಸ್ಎಸ್ ರಾಜಮೌಳಿ ಮತ್ತು ಅವರ ಪತ್ನಿ ರಮಾ ರಾಜಮೌಳಿ ಕಾರಣ ಎಂದು ಹೇಳಿದ್ದಾರೆ.

ಪ್ರಸ್ತುತ ಭಾರತೀಯ ಚಿತ್ರರಂಗದ ಟಾಪ್ 1 ನಿರ್ದೇಶಕ ರಾಜಮೌಳಿಗೆ (SS Rajamouli) ಸಂಕಷ್ಟವೊಂದು ಎದುರಾಗಿದೆ. ರಾಜಮೌಳಿಯ ಹಳೆಯ ಮಿತ್ರರೊಬ್ಬರು, ರಾಜಮೌಳಿಯ ಹೆಸರು ಬರೆದಿಟ್ಟು, ರಾಜಮೌಳಿಯೇ ತನ್ನ ಸಾವಿಗೆ ಕಾರಣ ಎಂದು ಹೇಳಿ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ರಾಜಮೌಳಿ ಅಭಿಮಾನಿಗಳಿಗೆ ಅಚ್ಚರಿ ತಂದಿದೆ. ಘಟನೆ ಬಳಿಕ ಪೊಲೀಸರು ರಾಜಮೌಳಿ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸುವ ಸಾಧ್ಯತೆ ದಟ್ಟವಾಗಿದೆ.
ಎಸ್ಎಸ್ ರಾಜಮೌಳಿ ನಿರ್ದೇಶನ ಮಾಡಿ ಜೂ ಎನ್ಟಿಆರ್ ನಟಿಸಿದ್ದ ಸೂಪರ್ ಹಿಟ್ ಸಿನಿಮಾ ‘ಯಮದೊಂಗ’ ಸಿನಿಮಾದ ಸಹ ನಿರ್ಮಾಪಕರೂ ಆಗಿದ್ದ ಶ್ರೀನಿವಾಸ್ ರಾವ್, ರಾಜಮೌಳಿಯ ಬಹು ಹಳೆಯ ಮಿತ್ರರಾಗಿದ್ದು, ಇದೀಗ ಇದೇ ಮಿತ್ರ ರಾಜಮೌಳಿ ವಿರುದ್ಧ ಆರೋಪಗಳನ್ನು ಮಾಡಿ ಪತ್ರೆ ಬರೆದಿರುವುದಲ್ಲದೆ ಸೆಲ್ಫಿ ವಿಡಿಯೋ ಮಾಡಿ ಅದನ್ನು ತಮ್ಮ ಆಪ್ತರಿಗೆ ಕಳಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜಮೌಳಿ, ತಮಗೆ ನೀಡಿದ ಹಿಂಸೆಯಿಂದಲೇ ತಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.
ಸಾಯುವ ಮುಂಚೆ ಮಾಡಿರುವ ವಿಡಿಯೋನಲ್ಲಿ ಮಾತನಾಡಿರುವ ಶ್ರೀನಿವಾಸ ರಾವ್, ‘ನನ್ನ ಸಾವಿಗೆ ರಾಜಮೌಳಿ ಮತ್ತು ರಮಾ ರಾಜಮೌಳಿ ಕಾರಣ. ನಾನು ಬಹಳ ವರ್ಷಗಳಿಂದಲೂ ಚಿತ್ರರಂಗದಲ್ಲಿದ್ದೇನೆ. ನಾನು ಹಾಗೂ ರಾಜಮೌಳಿ 34 ವರ್ಷಗಳಿಂದಲೂ ಆತ್ಮೀಯ ಗೆಳೆಯರು. ನಮ್ಮ ಗೆಳೆತನದ ಬಗ್ಗೆಯೂ ಹಲವರಿಗೆ ಗೊತ್ತು. ನಾನು ಹಾಗೂ ರಾಜಮೌಳಿ ಒಬ್ಬಳೇ ಯುವತಿಯನ್ನು ಪ್ರೀತಿಸಿದ್ದೆವು. ಆದರೆ ಆಗ ರಾಜಮೌಳಿ, ನೀನು ತ್ಯಾಗ ಮಾಡು ಅಂದು, ನಾನು ಸಹ ಹಾಗೆಯೇ ಮಾಡಿದೆ. ಆ ನಂತರ ಈವರೆಗೆ ನಾನು ಯಾರನ್ನೂ ಮದುವೆ ಆಗಲಿಲ್ಲ’ ಎಂದಿದ್ದಾರೆ.
ಇದನ್ನೂ ಓದಿ: ಮಹೇಶ್ ಬಾಬು-ರಾಜಮೌಳಿ ಬಗ್ಗೆ ಅಪ್ಸೆಟ್ ಆದ ಅಭಿಮಾನಿಗಳು; ಕಾರಣ ಏನು?
ಮುಂದುವರೆದು, ‘ಆದರೆ ಕೆಲ ತಿಂಗಳ ಮುಂಚೆ ನನಗೆ ಮತ್ತು ರಾಜಮೌಳಿಗೆ ಸಣ್ಣ ಮಾತಿನ ಚಕಮಕಿ ನಡೆಯಿತು, ಆಗ ನಾನು ‘ನಮ್ಮಿಬ್ಬರ ಟ್ರಯಾಂಗಲ್ ಲವ್ ಸ್ಟೋರಿ’ಯನ್ನು ಸಿನಿಮಾ ಮಾಡುತ್ತೀನಿ ಎಂದೆ. ಅದು ಅವನಿಗೆ ಭಯ ಹುಟ್ಟಿಸಿತು. ನಮ್ಮ ಕತೆಯನ್ನು ಎಲ್ಲರಿಗೂ ಹೇಳಿ ಬಿಡುತ್ತಾನೆ ಎಂದುಕೊಂಡು ನನಗೆ ಹಿಂಸೆ ಕೊಡಲು ಆರಂಭಿಸಿದೆ. ಭೈರವ, ಕಾರ್ತಿಕೇಯ (ಕೀರವಾಣಿ, ರಾಜಮೌಳಿ ಮಕ್ಕಳು) ಎಲ್ಲ ನನಗೆ ಆಪ್ತರಾಗಿದ್ದರು, ಆದರೆ ಅವರೂ ಸಹ ದೂರವಾದರು. ನಾನು ಒಂಟಿಯಾಗಿಬಿಟ್ಟೆ’ ಎಂದಿದ್ದಾರೆ ಶ್ರೀನಿವಾಸ್ ರಾವ್.
‘ಮೂವರು ವ್ಯಕ್ತಿಗಳ ನಡುವೆ ನಡೆದ ಘಟನೆಗೆ ಸಾಕ್ಷ್ಯಗಳು ಇರುವುದಿಲ್ಲ. ಆದರೆ ನಾನು ಈಗ ಸಾಯುತ್ತಿದ್ದೇನೆ. ಸುಮೋಟೊ (ಸ್ವಯಂ ಪ್ರೇರಿತ ದೂರು) ದಾಖಲಿಸಿಕೊಂಡು, ರಾಜಮೌಳಿಯನ್ನು ಲೈ ಡಿಟೆಕ್ಟರ್ ಬಳಸಿ ವಿಚಾರಣೆ ನಡೆಸಿದರೆ ನಿಜಾಂಶ ಹೊರಬರುತ್ತದೆ’ ಎಂದಿದ್ದಾರೆ ಶ್ರೀನಿವಾಸ್ ರಾವ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:29 pm, Thu, 27 February 25