ಪಹಲ್ಗಾಮ್ ದಾಳಿ: ಪತ್ನಿ ಎದುರೇ ಪತಿಯನ್ನು ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದರು ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದ್ದಾರೆ. ಭಯೋತ್ಪಾದಕರ ದಾಳಿಯಲ್ಲಿ ಶಿವಮೊಗ್ಗದ ಉದ್ಯಮಿ ಮಂಜುನಾಥ್ ಮೃತಪಟ್ಟಿದ್ದಾರೆ. ಮಂಜುನಾಥ್ ಅವರನ್ನು ಅವರ ಪತ್ನಿಯ ಎದುರೇ ಉಗ್ರರು ಕೊಂದಿದ್ದಾರೆ. ಅಲ್ಲಿ ನಡೆದ ಭೀಕರ ದೃಶ್ಯಾವಳಿಗಳನ್ನು ಟಿವಿ9 ಮುಂದೆ ಪಲ್ಲಿವಿ ಬಿಚ್ಚಿಟ್ಟಿದ್ದಾರೆ.
ಜಮ್ಮು-ಕಾಶ್ಮೀರದ (jammu and kashmir) ಪಹಲ್ಗಾಮ್‌ದಲ್ಲಿ ನಡೆದ ಉಗ್ರರ ಗುಂಡಿನ ದಾಳಿಯಲ್ಲಿ (Pahalgam Terror Attack) ಶಿವಮೊಗ್ಗದ (Shivamogga) ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಮೃತಪಟ್ಟಿದ್ದಾರೆ. ಪತ್ನಿಯ ಕಣ್ಣೆದುರೇ ಮಂಜುನಾಥ್ ಅವರನ್ನು ಉಗ್ರಗಾಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಮೃತ ಮಂಜುನಾಥ್ ಅವರ ಪತ್ನಿ ಪಲ್ಲವಿ ಮತ್ತು ಅವರ ಪುತ್ರ ಸುರಕ್ಷಿತವಾಗಿದ್ದಾರೆ. ಪಹಲ್ಗಾಮ್ ಪ್ರವಾಸಿ ತಾಣದಲ್ಲಿ ನಡೆದ ಉಗ್ರರ ಅಟ್ಟಾಹಸದ ಬಗ್ಗೆ ಪಲ್ಲವಿ ಟಿವಿ9 ಮುಂದೆ ಬಿಚ್ಚಿಟ್ಟಿದ್ದಾರೆ. ಏಪ್ರಿಲ್ 19ರಂದು ಪ್ರವಾಸಕ್ಕೆ ಬಂದಿದ್ವಿ. ನನ್ನ ಕಣ್ಣೆದುರಿಗೆ ನನ್ನ ಪತಿ ಮೃತಪಟ್ಟಿದ್ದಾರೆ. ನನ್ನ ಗಂಡನನ್ನ ಸಾಯಿಸಿ ನನ್ನ ಮಗನಿಗೆ ಬೈದು ಹಲ್ಲೆ ಮಾಡಿದ್ದಾರೆ. ನನ್ನ, ನನ್ನ ಮಗನನ್ನೂ ಕೊಂದು ಬಿಡು ಎಂದು ಹೇಳಿದ್ವಿ. ನಿನ್ನ ಕೊಲ್ಲಲ್ಲ ಹೋಗಿ ಮೋದಿಗೆ ಹೇಳು ಅಂದ್ರು. ನನ್ನ ಪತಿ ಕೊಂದು ಉಗ್ರರು ಅಲ್ಲೇ ಓಡಾಡುತ್ತಿದ್ದರು ಎಂದು ಅಲ್ಲಿ ನಡೆದ ಭೀಕರ ದೃಶ್ಯಾವಳಿಗಳನ್ನು ಟಿವಿ9 ಜೊತೆ ಹಂಚಿಕೊಂಡಿದ್ದಾರೆ.