ಪ್ರತಿ ವರ್ಷದ ಆರಂಭದಲ್ಲಿ ಹಣಕಾಸು ಯೋಜನೆಯನ್ನು (Financial Planning) ಆರಂಭಿಸಬೇಕು. ಹಣಕಾಸು ಸಮಸ್ಯೆಗೆ ಸಿಲುಕಬಾರದು ಅಂತಾದಲ್ಲಿ ಮುಂಚೆಯೇ ಯೋಜನೆ ರೂಪಿಸುವುದು ಅಗತ್ಯ. ಆದರೆ ಇಡೀ ವರ್ಷ ಯೋಜನೆ ರೂಪಿಸಿಲ್ಲ ಅಂತಾದಲ್ಲಿ ಮತ್ತು ಕೊನೆ ಕ್ಷಣದ ತನಕ ಅತಿ ಮುಖ್ಯವಾದ ಹಣಕಾಸು ಕಾರ್ಯಗಳನ್ನು ಪೂರೈಸಲು ಕಾಯುತ್ತಿದ್ದಲ್ಲಿ ನಿಮಗೆ ಗೊತ್ತಿರಬೇಕಾದ ಚೆಕ್ ಲಿಸ್ಟ್ ಇಲ್ಲಿದೆ.
ತೆರಿಗೆ ಉಳಿತಾಯ ಮಾಡಲು ಹೂಡಿಕೆ
ಈ ವರ್ಷಕ್ಕೆ ನಿಮ್ಮ ಆದಾಯ ಎಷ್ಟು ಎಂಬುದನ್ನು ತೀರ್ಮಾನಿಸಲು ಒಂದಿಷ್ಟು ಸಮಯ ನೀಡಿ. ಆ ನಂತರ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಉಳಿತಾಯ ಇನ್ಸ್ಟ್ರುಮೆಂಟ್ಗಳಲ್ಲಿ ಎಷ್ಟು ಹೂಡಿಕೆ ಮಾಡಬೇಕಾಗುತ್ತದೆ ಎಂಬುದನ್ನು ಲೆಕ್ಕ ಹಾಕಿ. ಈಗಾಗಲೇ ಪಬ್ಲಿಕ್ ಪ್ರಾವಿಡೆಂಟ್ ಫಂಡ್, ನ್ಯಾಷನಲ್ ಪೆನ್ಷನ್ ಸ್ಕೀಮ್, ಸುಕನ್ಯಾ ಸಮೃದ್ಧಿ ಯೋಜನಾ ಮುಂತಾದವುಗಳಲ್ಲಿ ಹೂಡಿಕೆ ಮಾಡಿದ್ದಲ್ಲಿ ಅವುಗಳನ್ನು ಸಕ್ರಿಯವಾಗಿ ಇಡುವುದಕ್ಕಾಗಿ ಕನಿಷ್ಠ ಪ್ರಮಾಣದ ಹೂಡಿಕೆಯನ್ನು ಮಾರ್ಚ್ 31ನೇ ತಾರೀಕಿಗೂ ಮುನ್ನ ಮಾಡಿ.
ಆದಾಯ ತೆರಿಗೆ ರಿಟರ್ನ್ಸ್ ಫೈಲ್
ಅಸೆಸ್ಮೆಂಟ್ ವರ್ಷ 2021-22ಕ್ಕೆ ಆದಾಯ ತೆರಿಗೆ ರಿಟರ್ನ್ಸ್ ಫೈಲಿಂಗ್ಗೆ ಕೊನೆ ದಿನವನ್ನು ಮಾರ್ಚ್ 15ಕ್ಕೆ ವಿಸ್ತರಣೆ ಆಗಿದೆ. ಯಾವುದೇ ದಂಡ ಶುಲ್ಕ ಬೀಳದಂತೆ ಇರಲು ಅದಕ್ಕೂ ಮುನ್ನ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಿದ್ದೀರಾ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.
ಆಧಾರ್- ಪ್ಯಾನ್ ಜೋಡಣೆ
ಆಧಾರ್ ಹಾಗೂ ಪರ್ಮನೆಂಟ್ ಅಕೌಂಟ್ ನಂಬರ್ (PAN) ಜೋಡಣೆಗೆ ಅಂತಿಮ ದಿನಾಂಕವನ್ನು ಮಾರ್ಚ್ 31ನೇ ತಾರೀಕಿಗೆ ವಿಸ್ತರಣೆ ಆಗಿದೆ. ಒಂದು ವೇಳೆ ಇದು ಮಾಡಿಲ್ಲ ಅಂತಾದಲ್ಲಿ ನಿಮ್ಮ ಪ್ಯಾನ್ ಕಾರ್ಡ್ ಬಳಕೆಗೆ ಬರುವುದಿಲ್ಲ ಮತ್ತು ಪ್ಯಾನ್ ಅಗತ್ಯ ಇರುವ ಯಾವುದೇ ಹಣಕಾಸು ವ್ಯವಹಾರಗಳನ್ನು ಮಾಡಲು ಸಾಧ್ಯವಾಗಲ್ಲ.
ಮುಂಗಡ ತೆರಿಗೆ ಫೈಲಿಂಗ್
ಭಾರತದ ಆದಾಯ ತೆರಿಗೆ ಕಾನೂನು ಪ್ರಕಾರ, ಯಾವುದೇ ವ್ಯಕ್ತಿಗೆ 10 ಸಾವಿರ ರೂಪಾಯಿಗಿಂತ ಹೆಚ್ಚಿನ ತೆರಿಗೆ ಜವಾಬ್ದಾರಿ ಇದ್ದಲ್ಲಿ ಅದನ್ನು ನಾಲ್ಕು ಕಂತುಗಳಲ್ಲಿ ಮಾರ್ಚ್ 15ಕ್ಕೂ ಮುನ್ನವೇ ಪಾವತಿಸಬೇಕು. ಒಂದು ವೇಳೆ ವೇತನದಾರರಾಗಿದ್ದಲ್ಲಿ ಅದನ್ನು ಈಗಾಗಲೇ ಉದ್ಯೋಗದಾತರು ಕಡಿತ ಮಾಡಿರುತ್ತಾರೆ. ಫ್ರೀಲ್ಯಾನ್ಸರ್ಗಳಿಗೆ ಮತ್ತು ಸ್ವ ಉದ್ಯೋಗಿಗಳಿಗೆ ಮುಂಗಡ ತೆರಿಗೆ ಪಾವತಿಸುವುದು ಕಡ್ಡಾಯ. ಒಂದು ವೇಳೆ ಗಡುವಿನೊಳಗೆ ತೆರಿಗೆ ಪಾವತಿಸದಿದ್ದಲ್ಲಿ ಕಂತನ್ನು ಮುಂದೂಡಿದ್ದಕ್ಕೆ ತಿಂಗಳಿಗೆ ಶೇ 1ರ ಲೆಕ್ಕಾಚಾರದಲ್ಲಿ ಬಡ್ಡಿ ಹಾಕಲಾಗುತ್ತದೆ.
ಬ್ಯಾಂಕ್ ಬಳಿ ಕೆವೈಸಿ ಅಪ್ಡೇಟ್
ಬ್ಯಾಂಕ್ ಖಾತೆಗೆ ಕೆವೈಸಿ ಪೂರ್ಣಗೊಳಿಸಲು ಗಡುವನ್ನು ಮಾರ್ಚ್ 31ನೇ ತಾರೀಕಿನ ತನಕ ವಿಸ್ತರಣೆ ಮಾಡಲಾಗಿದೆ. ಗ್ರಾಹಕರು ಪ್ಯಾನ್, ವಿಳಾಸದ ಪುರಾವೆ ಒಳಗೊಂಡಂತೆ ಮತ್ತಿತರ ಮಾಹಿತಿಗಳನ್ನು ಬ್ಯಾಂಕ್ಗೆ ಅಗತ್ಯ ಇರುವಂತೆ ಸಲ್ಲಿಕೆ ಮಾಡಬೇಕು.
ಬಾಕಿ ತೆರಿಗೆ ಪಾವತಿ
ವಿವಾದ್ ಸೇ ವಿಶ್ವಾಸ್ ಯೋಜನೆ ಅಡಿಯಲ್ಲಿ ಯಾರದೆಲ್ಲ ತೆರಿಗೆ ಮನವಿ ಅಥವಾ ಅರ್ಜಿಯು ಬಾಕಿ ಇದ್ದ್ಲಲ್ಲಿ ವ್ಯಾಜ್ಯ ಇರುವ ತೆರಿಗೆಯನ್ನು ಮಾರ್ಚ್ 31, 2022ರೊಳಗೆ ಪಾವತಿಸಿದಲ್ಲಿ ಸಂಪೂರ್ಣವಾಗಿ ಬಡ್ಡಿ ಮತ್ತು ದಂಡದಿಂದ ವಿನಾಯಿತಿ ಪಡೆಯಬಹುದು. ಆದ್ದರಿಂದ ಯಾವುದೇ ವ್ಯಾಜ್ಯ ಇದ್ದಲ್ಲಿ ಬಗೆಹರಿಸಿಕೊಂಡು, ತೆರಿಗೆ ಪಾವತಿಸುವುದು ಉತ್ತಮ.
ಇದನ್ನೂ ಓದಿ: Provident Fund: ತೆರಿಗೆ ಲೆಕ್ಕಾಚಾರದ ಸಲುವಾಗಿ ಏ.1ರಿಂದ ಪಿಎಫ್ ಖಾತೆ ಎರಡು ಭಾಗವಾಗಿ ವಿಂಗಡಿಸುವ ಸಾಧ್ಯತೆ