Twitter Case: ಟ್ವಿಟರ್​ಗೆ ಭಾರತದ ಕಾನೂನು ಉಲ್ಲಂಘಿಸುವ ಚಾಳಿಯಿದೆ: ಕರ್ನಾಟಕ ಹೈಕೋರ್ಟ್​ನಲ್ಲಿ ಕೇಂದ್ರ ಸರ್ಕಾರದ ಅಫಿಡವಿಟ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 02, 2022 | 11:57 AM

ಭಾರತದ ಕಾನೂನು ಉಲ್ಲಂಘಿಸುವ ಚಾಳಿಯನ್ನು ಟ್ವಿಟರ್ ಬೆಳೆಸಿಕೊಂಡಿದೆ. ನಮ್ಮ ನೊಟೀಸ್​ಗಳಿಗೆ ಅವರು ತಕ್ಷಣ ಪ್ರತಿಕ್ರಿಯಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಅಫಿಡವಿಟ್​ನಲ್ಲಿ ಹೇಳಿದೆ.

Twitter Case: ಟ್ವಿಟರ್​ಗೆ ಭಾರತದ ಕಾನೂನು ಉಲ್ಲಂಘಿಸುವ ಚಾಳಿಯಿದೆ: ಕರ್ನಾಟಕ ಹೈಕೋರ್ಟ್​ನಲ್ಲಿ ಕೇಂದ್ರ ಸರ್ಕಾರದ ಅಫಿಡವಿಟ್
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಕೆಲವರ​ ಖಾತೆಗಳನ್ನು (Twitter Accounts) ನಿರ್ಬಂಧಿಸುವಂತೆ ಸೂಚಿಸಿರುವ ಕೇಂದ್ರ ಎಲೆಕ್ಟ್ರಾನಿಕ್ಸ್​ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (Union Ministry of Electronics and Information Technology – MEITY) ಆದೇಶ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್​ ಮೆಟ್ಟಿಲೇರಿರುವ ಟ್ವಿಟರ್​ ಕಂಪನಿಯ ವಾದವನ್ನು ಕೇಂದ್ರ ಸರ್ಕಾರದ ವಕೀಲರು ವಿರೋಧಿಸಿ ಅಫಿಡವಿಟ್ ಸಲ್ಲಿಸಿದರು. ಗುಂಪು ಹಲ್ಲೆ (Lynching) ಹಾಗೂ ಗುಂಪು ಘರ್ಷಣೆ (Mob Violence) ತಡೆಯಲೆಂದು ಕೇಂದ್ರ ಸರ್ಕಾರವು ಸಾರ್ವಜನಿಕ ಹಾಗೂ ರಾಷ್ಟ್ರೀಯ ಹಿತಾಸಕ್ತಿ ದೃಷ್ಟಿಯಿಂದ ಕೆಲ ಟ್ವಿಟರ್ ಅಕೌಂಟ್​ಗಳನ್ನು ನಿರ್ಬಂಧಿಸುವಂತೆ ಸೂಚನೆ ನೀಡಿತ್ತು. ಎಲ್ಲ ಭಾರತೀಯರಿಗೆ ಮುಕ್ತ, ಸುರಕ್ಷಿತ, ವಿಶ್ವಾಸಾರ್ಹ ಮತ್ತು ನಂಬಿಕಾರ್ಹ ಇಂಟರ್ನೆಟ್​ ಒದಗಿಸುವ ಬದ್ಧತೆಯನ್ನು ಭಾರತ ಸರ್ಕಾರ ಹೊಂದಿದೆ. ಹೀಗಾಗಿಯೇ ಮಾಹಿತಿಯನ್ನು ನಿರ್ಬಂಧಿಸುವ ಶಕ್ತಿಯನ್ನು ಸೀಮಿತಗೊಳಿಸಿಕೊಂಡಿದೆ ಎಂದು ಕೇಂದ್ರ ಸರ್ಕಾರವು ಅಫಿಡವಿಟ್​ನಲ್ಲಿ ಹೇಳಿದೆ. ಕರ್ನಾಟಕ ಹೈಕೋರ್ಟ್​ ವಿಚಾರಣೆಯನ್ನು ಸೆಪ್ಟೆಂಬರ್ 8ಕ್ಕೆ ಮುಂದೂಡಿದೆ.

ಹೀಗಾಗಿಯೇ ಸರ್ಕಾರವು ಯಾವುದೇ ಖಾತೆಯನ್ನು ನಿರ್ಬಂಧಿಸಲು ಅಥವಾ ನಿರ್ದಿಷ್ಟ ಸಂದೇಶವನ್ನು ತೆಗೆದುಹಾಕಲು ಸೂಚಿಸಿದರೆ ಅದರ ಹಿಂದೆ ರಾಷ್ಟ್ರೀಯ ಮತ್ತು ಸಾರ್ವಜನಿಕ ಹಿತಾಸಕ್ತಿಯ ಉದ್ದೇಶ ಇರುತ್ತದೆ ಎಂದು ಅರ್ಥ. ದೇಶಾದ್ಯಂತ ಹಿಂಸಾಚಾರ ಹರಡುವುದು, ಸಾಮೂಹಿಕ ಹಿಂಸಾಚಾರ, ಗುಂಪು ಹಲ್ಲೆ ತಡೆಯುವ ಉದ್ದೇಶದಿಂದ ಸರ್ಕಾರಗಳು ಅನಿವಾರ್ಯ ಪರಿಸ್ಥಿತಿಯಲ್ಲಿ ಇಂಥ ಆದೇಶಗಳನ್ನು ನೀಡುತ್ತವೆ ಎಂದು ಕೇಂದ್ರ ಸರ್ಕಾರವು ತಿಳಿಸಿದೆ.

ಟ್ವಿಟರ್​ನಂಥ ವೇದಿಗಳು ಸುಳ್ಳು ಸುದ್ದಿ ಹಾಗೂ ಉದ್ದೇಶಪೂರ್ವಕ ತಪ್ಪು ಮಾಹಿತಿ ಹರಡುವುದನ್ನು ಪರಿಣಾಮಕಾರಿಯಾಗಿ ತಡೆಯಲು ಪ್ರಯತ್ನಿಸುತ್ತಿಲ್ಲ. ದೇಶದ ಸಾರ್ವಭೌಮತೆ, ಏಕತೆ, ರಾಷ್ಟ್ರೀಯ ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ವ್ಯಾಪಕವಾಗಿ ಹರಿದಾಡುತ್ತಿದೆ. ಹೀಗಾಗಿಯೇ ಇಂಥ ಸಾಮಾಜಿಕ ಮಾಧ್ಯಮಗಳನ್ನು ಭಾರತ ವಿರೋಧಿ ಶಕ್ತಿಗಳು ಮತ್ತು ವಿದೇಶಗಳಲ್ಲಿರುವ ನಮ್ಮ ವಿರೋಧಿಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಭಾರತದ ಏಕತೆಗೆ ಭಂಗ ತರುವ ಹಾಗೂ ಗಲಭೆಗಳನ್ನು ಹುಟ್ಟುಹಾಕುವ ಪ್ರಯತ್ನಗಳು ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ನಡೆಯುತ್ತಿವೆ ಎಂದು ಅಫಿಡವಿಟ್​ನಲ್ಲಿ ಹೇಳಲಾಗಿದೆ. ಆರಂಭದ ಹಂತದಲ್ಲಿಯೇ ದುರುದ್ದೇಶದ ಸುಳ್ಳು ಮಾಹಿತಿಯನ್ನು ಗುರುತಿಸಿ ನಿರ್ಬಂಧಿಸುವ ಅಗತ್ಯವಿದೆ ಎಂದು ಸರ್ಕಾರ ಒತ್ತಿ ಹೇಳಿತು.

ಫೆಬ್ರುವರಿ 2021ರಿಂದ ಫೆಬ್ರುವರಿ 2022ರ ಅವಧಿಯಲ್ಲಿ ಕೇಂದ್ರ ಸರ್ಕಾರವು ನೀಡಿರುವ 10 ನಿರ್ಬಂಧದ ಆದೇಶಗಳನ್ನು ಪ್ರಶ್ನಿಸಿ ಟ್ವಿಟರ್ ಕರ್ನಾಟಕ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು. ಈ ಆದೇಶಗಳಲ್ಲಿ ಸರ್ಕಾರವು ಹಲವು ಖಾತೆಗಳನ್ನು ನಿರ್ಬಂಧಿಸುವುದು ಹಾಗೂ ಕೆಲ ಪೋಸ್ಟ್​ಗಳನ್ನು ಮರೆಮಾಚಲು ಸೂಚಿಸಿತ್ತು. ಕೇಂದ್ರ ಸರ್ಕಾರದ ಆದೇಶವನ್ನು ಹೈಕೋರ್ಟ್​ನಲ್ಲಿ ಪ್ರಶ್ನಿಸಿದ್ದ ಟ್ವಿಟರ್, ಖಾತೆಗಳನ್ನು ನಿರ್ಬಂಧಿಸುವುದು ಸರಿಯಾಗಲಾರದು. ಇದರಿಂದ ಸಂವಿಧಾನವು ಖಾತ್ರಿಪಡಿಸಿರುವ ನಾಗರಿಕ ಹಕ್ಕುಗಳನ್ನು ಉಲ್ಲಂಘಿಸಿದಂತೆ ಆಗುತ್ತದೆ ಎಂದು ಹೇಳಿತ್ತು. ಕಳೆದ ಜುಲೈ 26ರಂದು ಹೈಕೋರ್ಟ್​ ಟ್ವಿಟರ್​ನ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.

ಟ್ವಿಟರ್​ನ ವಾದವನ್ನು ಕೇಂದ್ರ ಸರ್ಕಾರ ಸಂಪೂರ್ಣ ನಿರಾಕರಿಸಿತು. ಭಾರತದ ಕಾನೂನು ಉಲ್ಲಂಘಿಸುವ ಚಾಳಿಯನ್ನು ಟ್ವಿಟರ್ ಬೆಳೆಸಿಕೊಂಡಿದೆ. ನಮ್ಮ ನೊಟೀಸ್​ಗಳಿಗೆ ಅವರು ತಕ್ಷಣ ಪ್ರತಿಕ್ರಿಯಿಸುವುದಿಲ್ಲ. ಟ್ವಿಟರ್ ಸ್ವತಃ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ. ನ್ಯಾಯಾಂಗ ವ್ಯವಸ್ಥೆಗೆ ಸಂಬಂಧಿಸಿದ ಅತಿಸೂಕ್ಷ್ಮ ವಿಚಾರಗಳನ್ನು ಟ್ವಿಟರ್​ ಪ್ರಚಾರ ಮಾಡುತ್ತದೆ ಎಂದು ಕೇಂದ್ರ ಸರ್ಕಾರವು ಹೇಳಿದೆ. ಇತರ ಸಾಮಾಜಿಕ ಮಾಧ್ಯಮಗಳಿಗೆ ಹೋಲಿಸಿದರೆ ಕಡಿಮೆ ಅಕ್ಷರಗಳ ಮಿತಿ ಇರುವ ಟ್ವಿಟರ್​ಗೆ ಸುಳ್ಳು ಮಾಹಿತಿಯನ್ನು ವ್ಯಾಪಕವಾಗಿ ಹರಡುವ ಶಕ್ತಿಯಿದೆ ಎಂದು ಕೇಂದ್ರ ಸರ್ಕಾರವು ತಿಳಿಸಿದೆ.

Published On - 11:57 am, Fri, 2 September 22