
ಅಬುಧಾಬಿ, ಜೂನ್ 23: ಯುನೈಟೆಡ್ ಅರಬ್ ಎಮಿರೇಟ್ಸ್ (UAE) ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ಸಾರ್ವಜನಿಕರಿಗಾಗಿ ‘ಎತಿಹಾದ್ ರೈಲ್’ (Etihad Rail) ಪ್ಯಾಸೆಂಜರ್ ರೈಲು ಸೇವೆಯನ್ನು ಮುಂದಿನ ವಾರ (ಜೂನ್ 30) ಆರಂಭಿಸುತ್ತಿದೆ. ಯುಎಇಯಲ್ಲಿರುವ ಏಳು ಸಂಸ್ಥಾನಗಳ (ಎಮಿರೇಟ್) ಪೈಕಿ ನಾಲ್ಕನ್ನು ಸಂಪರ್ಕಿಸುವ ರೈಲು ಪ್ರಾಜೆಕ್ಟ್ನ ಮೊದಲ ಹಂತ ಇದಾಗಿದೆ. ಈ ಆರಂಭಿಕ ಹಂತದಲ್ಲಿ ಅಬುಧಾಬಿ ಮತ್ತು ಫುಜೇರಾ ಮಧ್ಯೆ ರೈಲು ಸಂಚಾರ ಇರುತ್ತದೆ. ದುಬೈ ಹಾಗೂ ಶಾರ್ಜಾ ಸ್ಟೇಷನ್ಗಳು ಮುಂಬರುವ ದಿನಗಳಲ್ಲಿ ಶುರುವಾಗಲಿವೆ. ದುಬೈ ಸ್ಟೇಷನ್ ಸೆಪ್ಟೆಂಬರ್ 30ರಂದು, ಮತ್ತು ಶಾರ್ಜಾ ಸ್ಟೇಷನ್ 2027ರ ಮಾರ್ಚ್ 30ರಂದು ಕಾರ್ಯಾರಂಭಗೊಳ್ಳಬಹುದು.
ಯುಎಇಯಲ್ಲಿ ಏಳು ಸಂಸ್ಥಾನಗಳಿವೆ. ದುಬೈ, ಶಾರ್ಜಾ, ಅಬುಧಾಬಿ, ಅಜ್ಮನ್, ಉಮ್ ಅಲ್ ಖುವೇನ್, ರಸ್ ಅಲ್ ಕೈಮಾಹ್, ಫುಜೇರಾಹ್ ಸಂಸ್ಥಾನಗಳು ಸೇರಿ ಯುಎಇ ಆಗಿದೆ. ದುಬೈ, ಶಾರ್ಜಾ ಮತ್ತು ಅಬುಧಾಬಿ ಬಹಳ ಖ್ಯಾತವಾಗಿರುವ ಸಂಸ್ಥಾನಗಳು ಮತ್ತು ನಗರಗಳು. ಸದ್ಯ ಎತಿಹಾದ್ ರೈಲು ನೆಟ್ವರ್ಕ್ ಅನ್ನು ನಾಲ್ಕು ನಗರಗಳಲ್ಲಿ ಸ್ಥಾಪಿಸಲಾಗುತ್ತಿದೆಯಾದರೂ, ಉಳಿದ ಮೂರು ಸಂಸ್ಥಾನಗಳಲ್ಲೂ ಅದರ ಅಳವಡಿಕೆ ಆಗಬಹುದು. ಅದಕ್ಕಾಗಿ ಅಧ್ಯಯನಕ್ಕೆ ಆದೇಶಿಸಿ ಸಾಧ್ಯತಾ ವರದಿಯನ್ನು ತರಿಸಿಕೊಳ್ಳುವ ಪ್ಲಾನ್ ಮಾಡಲಾಗಿದೆ.
ಸದ್ಯ ಜೂನ್ 30ರಂದು ಚಾಲನೆಗೊಳ್ಳಲಿರುವ ರೈಲು ನೆಟ್ವರ್ಕ್ನಲ್ಲಿ 13 ರೈಲುಗಳಿರುತ್ತವೆ. ಪ್ರತಿಯೊಂದು ರೈಲಿನಲ್ಲೂ 400 ಪ್ರಯಾಣಿಕರು ಕೂರಬಹುದು.
ಭಾರತದಂತಹ ದೇಶಗಳಲ್ಲಿ ಶತಮಾನದ ಹಿಂದೆಯೇ ಪ್ಯಾಸೆಂಜರ್ ರೈಲು ವ್ಯವಸ್ಥೆ ನಿರ್ಮಾಣವಾಗಿತ್ತು. ಆದರೆ, ಬಹಳ ಮುಂದುವರಿದಿರುವ ಮತ್ತು ಶ್ರೀಮಂತವಾಗಿರುವ ಗಲ್ಫ್ ದೇಶವಾದ ಯುಎಇಯಲ್ಲಿ ಇದು ಬರಲು ಇಷ್ಟು ಸಮಯ ಯಾಕೆ ಎನ್ನುವ ಪ್ರಶ್ನೆ ಕೆಲವರಿಗೆ ಉದ್ಭವಿಸಬಹುದು. ಗಮನಿಸಬೇಕಾದ ಸಂಗತಿ ಎಂದರೆ, ಇದು ತಂತ್ರಜ್ಞಾನ ಅಳವಡಿಕೆಯಲ್ಲಿ ಉಂಟಾದ ವಿಳಂಬವಲ್ಲ (Delayed), ಬದಲಿಗೆ ಅತ್ಯಂತ ವ್ಯವಸ್ಥಿತವಾಗಿ ಯೋಜಿಸಲಾದ ಹಂತ-ಹಂತದ ಅಭಿವೃದ್ಧಿಯಾಗಿದೆ (Planned Development).
ಯುಎಇ ಮೊದಲಿನಿಂದಲೂ ರಸ್ತೆ ಮತ್ತು ವಾಯು ಸಾರಿಗೆಗೆ ಅತಿ ಹೆಚ್ಚು ಒತ್ತು ನೀಡಿದ್ದರಿಂದ, ಇಡೀ ದೇಶವನ್ನು ಸಂಪರ್ಕಿಸುವ ರೈಲ್ವೆ ಜಾಲವನ್ನು ನಿರ್ಮಿಸಲು ದೀರ್ಘಕಾಲದ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗಿತ್ತು. ಆ ದೇಶಾದ್ಯಂತ ಈಗಾಗಲೇ ರಸ್ತೆ ಮತ್ತು ವಾಯು ಪ್ರದೇಶದಲ್ಲಿ ಬಹಳ ವ್ಯವಸ್ಥಿತವಾದ ಸಾಗಣೆ ವ್ಯವಸ್ಥೆ ಇದೆ. ಸರಕು ಸಾಗಣೆಗೆ ರೈಲಿನ ಬಳಕೆ ಹಲವು ವರ್ಷಗಳ ಹಿಂದೆಯೇ ಶುರುವಾಗಿದೆ. ಮೆಟ್ರೋ ರೈಲುಗಳು ಪ್ರತೀ ನಗರದೊಳಗೆ ಇದೆ. ಈಗ ವಿವಿಧ ಸಂಸ್ಥಾನಗಳನ್ನು ಸಂಪರ್ಕಿಸುವ ಪ್ಯಾಸೆಂಜರ್ ರೈಲು ನೆಟ್ವರ್ಕ್ ಅಳವಡಿಕೆ ಆಗುತ್ತಿದೆ.
ಈ ಮಹತ್ವಾಕಾಂಕ್ಷೆಯ ಯೋಜನೆಯ ಸಂಪೂರ್ಣ ವಿವರಗಳು ಮತ್ತು ಅದು ಜಾರಿಯಾಗುತ್ತಿರುವ ಹಂತಗಳು ಇಲ್ಲಿವೆ:
ಯುಎಇ ತನ್ನ ಇಡೀ ರೈಲ್ವೆ ಯೋಜನೆಯನ್ನು ಸುರಕ್ಷತೆ ಮತ್ತು ಜಾಗತಿಕ ಗುಣಮಟ್ಟವನ್ನು ಕಾಯ್ದುಕೊಳ್ಳಲು ಮೂರು ಪ್ರಮುಖ ಹಂತಗಳಲ್ಲಿ ರೂಪಿಸಿದೆ.
ಮೊದಲ ಹಂತ (ಸರಕು ಸಾಗಣೆ): 2016 ರಿಂದಲೇ ಯುಎಇಯಲ್ಲಿ ಕಚ್ಚಾ ವಸ್ತುಗಳು ಮತ್ತು ಗಂಧಕದಂತಹ ಸರಕುಗಳನ್ನು ಸಾಗಿಸಲು ರೈಲ್ವೆ ಹಳಿಗಳನ್ನು ಬಳಸಲಾಗುತ್ತಿದೆ. 2023 ರಲ್ಲಿ ಇದರ ವ್ಯಾಪ್ತಿಯನ್ನು 900 ಕಿಲೋಮೀಟರ್‌ಗೆ ವಿಸ್ತರಿಸಲಾಯಿತು.
ಎರಡನೇ ಹಂತ (ಪ್ರಾಯೋಗಿಕ ಸಂಚಾರ): 2026 ರ ಆರಂಭದಲ್ಲಿ ದೇಶದ ನಿವಾಸಿಗಳನ್ನು ಒಳಗೊಂಡಂತೆ ಯಶಸ್ವಿ ಪ್ರಾಯೋಗಿಕ ಸಂಚಾರ (Trials) ನಡೆಸಿದ ಬಳಿಕವೇ ಈಗ ವಾಣಿಜ್ಯ ಬಳಕೆಗೆ ಹಸಿರು ನಿಶಾನೆ ನೀಡಲಾಗಿದೆ.
ಮೂರನೇ ಹಂತ (ಹಂತ-ಹಂತದ ನಿಲ್ದಾಣಗಳ ಉದ್ಘಾಟನೆ): ಜೂನ್ 30 ರಂದು ಇಡೀ ದೇಶದಲ್ಲಿ ಒಂದೇ ಬಾರಿಗೆ ರೈಲು ಆರಂಭಿಸುತ್ತಿಲ್ಲ. ಹಂತ-ಹಂತವಾಗಿ ವಿವಿಧ ನಗರಗಳನ್ನು ಜೋಡಿಸಲಾಗುತ್ತಿದೆ:
ಇದನ್ನೂ ಓದಿ: ಚ್ಯಾಟ್ ಜಿಪಿಟಿಯಲ್ಲಿ ಕೇಳಬಾರದ ಒಂದು ಪ್ರಶ್ನೆ ಯಾವುದು? ಸಿಇಒ ಸ್ಯಾಮ್ ಆಲ್ಟ್ಮ್ಯಾನ್ ಉತ್ತರ ಕೇಳಿ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ