ಹಾರ್ಮುಜ್ ಜಲಸಂಧಿಯ ತಲೆನೋವೇ ಬೇಡ; ಆಯಿಲ್ ಪೈಪ್​ಲೈನ್ ಯೋಜನೆ ಜಾರಿಗೆ ಯುಎಇ ಮುಂದು

UAE's New Pipeline Project: Enhancing Energy Security & Global Oil Supply from Fujairah ಯುಎಇ ತನ್ನ ತೈಲ ರಫ್ತು ಸಾಮರ್ಥ್ಯ ಹೆಚ್ಚಿಸಲು 'ವೆಸ್ಟ್-ಈಸ್ಟ್ ಪೈಪ್‌ಲೈನ್' ಯೋಜನೆಗೆ ಚುರುಕು ನೀಡಿದೆ. ಹಾರ್ಮುಜ್ ಜಲಸಂಧಿಯ ಮೇಲಿನ ಅವಲಂಬನೆ ಕಡಿಮೆಗೊಳಿಸಿ, ಫುಜೈರಾ ಮೂಲಕ ತೈಲ ಪೂರೈಕೆಯನ್ನು ದ್ವಿಗುಣಗೊಳಿಸುವುದು ಇದರ ಮುಖ್ಯ ಉದ್ದೇಶ. 2027ರೊಳಗೆ ಪೂರ್ಣಗೊಳ್ಳಲಿರುವ ಈ ಯೋಜನೆ, ಅನಿಶ್ಚಿತ ಪರಿಸ್ಥಿತಿಯಲ್ಲಿ ಯುಎಇ ಇಂಧನ ಭದ್ರತೆಯನ್ನು ಖಚಿತಪಡಿಸಿ, ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಅದರ ಸ್ಥಾನವನ್ನು ಬಲಪಡಿಸುತ್ತದೆ.

ಹಾರ್ಮುಜ್ ಜಲಸಂಧಿಯ ತಲೆನೋವೇ ಬೇಡ; ಆಯಿಲ್ ಪೈಪ್​ಲೈನ್ ಯೋಜನೆ ಜಾರಿಗೆ ಯುಎಇ ಮುಂದು
ಆಯಿಲ್ ಪೈಪ್​ಲೈನ್ ಯೋಜನೆ
Image Credit source: AI/Mediaforge/TV9

Updated on: May 15, 2026 | 7:41 PM

ದುಬೈ, ಮೇ 15: ತೈಲ ರಫ್ತು ವಿಸ್ತರಿಸಲು ಮತ್ತು ಸುಗಮಗೊಳಿಸಲು ಯುಎಇ ದೇಶವು ತನ್ನ ಆಯಿಲ್ ಪೈಪ್​ಲೈನ್ ಯೋಜನೆಯ (UAE Oil Pipeline Project) ಕಾರ್ಯಕ್ಕೆ ಚುರುಕು ನೀಡಲು ನಿರ್ಧರಿಸಿದೆ. ಹಾರ್ಮುಜ್ ಜಲಸಂಧಿಯು (Strait of Hormuz) ಇರಾನ್-ಅಮೆರಿಕ ಯುದ್ಧದಿಂದಾಗಿ ತಡೆಗೊಂಡಿರುವುದರಿಂದ ತೈಲ ಪೂರೈಕೆಯಲ್ಲಿ ಬಹಳ ವ್ಯತ್ಯಯ ಆಗಿದೆ. ಯುಎಇ ಇತ್ಯಾದಿ ಗಲ್ಫ್ ರಾಷ್ಟ್ರಗಳ ತೈಲ ರಫ್ತಿಗೆ ಸಂಚಕಾರವಾಗಿದೆ. ಹೀಗಾಗಿ, ತೈಲ ರಫ್ತಿಗೆ ಹಾರ್ಮುಜ್ ಜಲಸಂಧಿಯ ಮೇಲೆ ಅವಲಂಬನೆ ಕಡಿಮೆ ಮಾಡಲು ಯುಎಇಗೆ ಈಗ ಆಯಿಲ್ ಪೈಪ್​ಲೈನ್ ಯೋಜನೆ ಒಂದು ಪ್ರಮುಖ ಮಾರ್ಗವಾಗಿದೆ. ಈ ಯೋಜನೆ ಜಾರಿಯನ್ನು ಬೇಗ ಮಾಡಲು ಯುಎಇ ನಿರ್ಧರಿಸಿದೆ.

ಈ ಯೋಜನೆಯನ್ನು ‘ವೆಸ್ಟ್-ಈಸ್ಟ್ ಪೈಪ್‌ಲೈನ್’ (West-East Pipeline) ಎಂದು ಕರೆಯಲಾಗುತ್ತದೆ. ಒಮನ್ ಕೊಲ್ಲಿಯ ಕರಾವಳಿಯಲ್ಲಿರುವ ಫುಜೈರಾ (Fujairah) ಮೂಲಕ ತೈಲ ರಫ್ತು ಮಾಡುವ ಸಾಮರ್ಥ್ಯವನ್ನು ದ್ವಿಗುಣಗೊಳಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಪೈಪ್‌ಲೈನ್ ನಿರ್ಮಾಣ ಕಾರ್ಯವು ಈಗಾಗಲೇ ನಡೆಯುತ್ತಿದ್ದು, 2027 ರ ವೇಳೆಗೆ ಇದು ಪೂರ್ಣಗೊಂಡು ಕಾರ್ಯಾಚರಣೆಗೆ ಮುಕ್ತವಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: ಹಾರ್ಮುಜ್‌ ಸುತ್ತಲಿನ ಪ್ರದೇಶವೂ ಸುರಕ್ಷಿತವಲ್ಲ! ಮತ್ತೆ ಭಾರತದ ಹಡಗಿನ ಮೇಲೆ ದಾಳಿ

ಈ ಆಯಿಲ್ ಪೈಪ್​ಲೈನ್ ಯೋಜನೆಯ ಹಿನ್ನೆಲೆ ಮತ್ತು ಮಹತ್ವ

ಹಾರ್ಮುಜ್ ಜಲಸಂಧಿಯು ವಿಶ್ವದ ಅತ್ಯಂತ ಪ್ರಮುಖ ಮತ್ತು ಜನನಿಬಿಡ ತೈಲ ಸಾಗಣೆ ಮಾರ್ಗವಾಗಿದೆ. ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಾಗಣೆಗೆ ಅಡ್ಡಿಯಾಗುವ ಆತಂಕ ಎದುರಾಗಿದೆ.

ಪ್ರಸ್ತುತ ಯುಎಇ ತನ್ನ ಬಹುಪಾಲು ತೈಲವನ್ನು ಹಾರ್ಮುಜ್ ಜಲಸಂಧಿಯ ಮೂಲಕವೇ ರಫ್ತು ಮಾಡುತ್ತದೆ. ಹೊಸ ಪೈಪ್‌ಲೈನ್ ಪೂರ್ಣಗೊಂಡರೆ, ಜಲಸಂಧಿಯಲ್ಲಿ ಯಾವುದೇ ಸಮಸ್ಯೆ ಎದುರಾದರೂ ಯುಎಇ ಸುರಕ್ಷಿತವಾಗಿ ತೈಲವನ್ನು ರಫ್ತು ಮಾಡಬಹುದಾಗಿದೆ.

ಅಬುಧಾಬಿಯ ಯುವರಾಜ ಶೇಖ್ ಖಾಲಿದ್ ಬಿನ್ ಮೊಹಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಅಬುಧಾಬಿ ನ್ಯಾಷನಲ್ ಆಯಿಲ್ ಕಂಪನಿಗೆ (ADNOC) ಈ ಯೋಜನೆಯನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಆದೇಶಿಸಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಯುಎಇ ಭೇಟಿಯಲ್ಲಿ ಹಲವು ಒಪ್ಪಂದಗಳಿಗೆ ಸಹಿ

ಪ್ರಸ್ತುತ ಇರುವ ಪೈಪ್‌ಲೈನ್ ದಿನಕ್ಕೆ ಸುಮಾರು 1.8 ಮಿಲಿಯನ್ ಬ್ಯಾರೆಲ್‌ಗಳಷ್ಟು ತೈಲವನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಹೊಸ ಪೈಪ್‌ಲೈನ್ ಬಂದ ನಂತರ ಫುಜೈರಾ ಮೂಲಕ ರಫ್ತು ಸಾಮರ್ಥ್ಯವು ದಿನಕ್ಕೆ 4 ಮಿಲಿಯನ್ ಬ್ಯಾರೆಲ್‌ಗಳಿಗೆ ಏರಿಕೆಯಾಗುವ ಸಾಧ್ಯತೆಯಿದೆ.

ಈ ಕ್ರಮವು ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಯುಎಇ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಮತ್ತು ಸಂಘರ್ಷದ ಸಮಯದಲ್ಲಿ ತೈಲ ಪೂರೈಕೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us