Petrol
ಪೆಟ್ರೋಲ್ ಈ ಭೂಮಿಯಲ್ಲಿ ಸೀಮಿತ ಪ್ರಮಾಣದಲ್ಲಿ ಲಭ್ಯ ಇರುವ ಸಂಪನ್ಮೂಲ. ಕಚ್ಚಾ ತೈಲ ಅಥವಾ ಪೆಟ್ರೋಲಿಯಂನಿಂದ ತಯಾರಿಸಲಾಗುವ ಉಪ ಉತ್ಪನ್ನಗಳಲ್ಲಿ ಪೆಟ್ರೋಲ್ ಒಂದು. ಮರಗಿಡ ಇತ್ಯಾದಿ ವಸ್ತುಗಳು ಲಕ್ಷಾಂತರ ವರ್ಷಗಳ ಕಾಲ ಭೂಗರ್ಭದಲ್ಲಿ ಹುದುಗಿ ಡೀಕಂಪೋಸ್ ಆದಾಗ ಪೆಟ್ರೋಲಿಯಂ ಆಗಿ ಪರಿವರ್ತಿತಗೊಳ್ಳುತ್ತದೆ. ಈ ಕಚ್ಚಾ ತೈಲವನ್ನು ಹೊರತೆಗೆದು, ಅದನ್ನು ಸಂಸ್ಕರಿಸಿ ಪೆಟ್ರೋಲ್, ಡೀಸೆಲ್, ಕೆರೋಸಿನ್, ಎಟಿಎಫ್, ಪ್ಯಾರಾಫಿನ್ ಇತ್ಯಾದಿ ಉಪ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಪೆಟ್ರೋಲ್ ಅನ್ನು ಅಮೆರಿಕ ಮೊದಲಾದ ಕೆಲ ದೇಶಗಳಲ್ಲಿ ಗ್ಯಾಸೋಲಿನ್ ಎಂದೂ ಕರೆಯುತ್ತಾರೆ. ವಾಹನಗಳಿಗೆ ಇಂಧನವಾಗಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಬಳಸಲಾಗುತ್ತದೆ. ಹೀಗಾಗಿ, ಇವೆರಡಕ್ಕೆ ಬಹಳ ದೊಡ್ಡ ಬೇಡಿಕೆ ಇದೆ. ಅದರಲ್ಲೂ ನೂರು ವರ್ಷಗಳಿಂದ ಪೆಟ್ರೋಲ್ ಅತ್ಯಂತ ಬೇಡಿಕೆ ಹೊಂದಿದ್ದ ಸಂಪನ್ಮೂಲ ಎನಿಸಿದೆ. ಆದರೆ, ಪೆಟ್ರೋಲ್ ಅನ್ನು ಇಂಧನವಾಗಿ ಬಳಕೆ ಮಾಡಿದಾಗ ಪರಿಸರಕ್ಕೆ ಹಾನಿಯಾಗುವ ವಸ್ತುಗಳು ವಾತಾವರಣಕ್ಕೆ ಸೇರುತ್ತವೆ. ಈ ಕಾರಣಕ್ಕೆ ಜಗತ್ತು ಪೆಟ್ರೋಲ್‌ನಿಂದ ವಿಮುಖವಾಗಿ ಪರ್ಯಾಯ ಇಂಧನದತ್ತ ವಾಲುತ್ತಿದೆ.