ಇಥನಾಲ್ ಬಂದ ನಂತರ ಸಕ್ಕರೆ ಕಾರ್ಖಾನೆಗಳಿಗೆ ಬಂತು ಜೀವ: ನಿತಿನ್ ಗಡ್ಕರಿ
Nitin Gadkari defends ethanol policy: ಇಥನಾಲ್ ಮಿಶ್ರಿತ ಇ20 ಪೆಟ್ರೋಲ್ ಬಳಕೆಯಿಂದ ವಾಹನಗಳ ಮೈಲೇಜ್ ಕಡಿಮೆ ಆಗುತ್ತಿದೆ ಎನ್ನುವ ಆರೋಪವನ್ನು ನಿತಿನ್ ಗಡ್ಕರಿ ತಳ್ಳಿಹಾಕಿದ್ದಾರೆ. ಗಡ್ಕರಿ ಮಕ್ಕಳಿಗೆ ಅನುಕೂಲವಾಗಲೆಂದು ಇಥನಾಲ್ ಬಳಕೆ ಮಾಡಲಾಗುತ್ತಿದೆ ಎನ್ನುವ ಆರೋಪವನ್ನೂ ತಳ್ಳಿಹಾಕಿದ್ದಾರೆ. ಇಥನಾಲ್ ಬಳಕೆಯಿಂದಾಗಿ ಸಕ್ಕರೆ ಉದ್ಯಮ ಜೀವ ಉಳಿಸಿಕೊಂಡಿದೆ ಎಂದಿದ್ದಾರೆ.

ಪುಣೆ, ಸೆಪ್ಟೆಂಬರ್ 14: ಇಥನಾಲ್ ಬಳಕೆ ಆರಂಭವಾದಾಗಿನಿಂದ ದೇಶದ ಸಕ್ಕರೆ ಉದ್ಯಮಕ್ಕೆ ಜೀವ ಬಂದಂತಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿಯ ನಾಮ್ ಫೌಂಡೇಶನ್ನ ಕಾರ್ಯಕ್ರಮದವೊಂದರಲ್ಲಿ ಮಾತನಾಡುತ್ತಿದ್ದ ನಿತಿನ್ ಗಡ್ಕರಿ, ಭಾರತದಲ್ಲಿ ಸಕ್ಕರೆ ಅಧಿಕ ಇದೆ. ಇಥನಾಲ್ನಿಂದಾಗಿ ಸಕ್ಕರೆ ಕಾರ್ಖಾನೆಗಳು ಜೀವ ಉಳಿಸಿಕೊಳ್ಳಲು ಯಶಸ್ವಿಯಾಗಿವೆ ಎಂದು ಹೇಳಿದ್ದಾರೆ.
ಇಥನಾಲ್ ಮಿಶ್ರಿತ ಪೆಟ್ರೋಲ್ನಿಂದ ವಾಹನಗಳಿಗೆ ಹಾನಿಯಾಗುತ್ತಿದೆ. ನಿತಿನ್ ಗಡ್ಕರಿಯ ಇಬ್ಬರು ಮಕ್ಕಳಿಗೆ ಲಾಭ ಮಾಡಲು ಇಥನಾಲ್ ಬಳಸಲಾಗುತ್ತಿದೆ ಎನ್ನುವುದು ಸೇರಿದಂತೆ ವಿವಿಧ ಆರೋಪಗಳ ಹಿನ್ನೆಲೆಯಲ್ಲಿ ನಿತಿನ್ ಗಡ್ಕರಿ ಈ ಮೇಲಿನ ಮಾತುಗಳನ್ನಾಡಿದ್ದಾರೆ.
ನಾವು ಸಾಕಷ್ಟು ಪೆಟ್ರೋಲಿಯಂ ಇಂಧನ ಆಮದು ಮಾಡಿಕೊಳ್ಳುತ್ತಿದ್ದೇವೆ. ಇಥನಾಲ್ ಬಳಕೆ ಶುರುವಾದಾಗಿನಿಂದ ಪೆಟ್ರೋಲಿಯಂ ಆಮದು ಕಡಿಮೆಗೊಂಡಿದೆ. ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳಿಗೆ ಇಥನಾಲ್ನಿಂದ ಲಾಭವಾಗಿದೆ ಎಂದು ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಇದನ್ನೂ ಓದಿ: ಭಾರತ ಹೇಗೆ ಸಾಗಬೇಕು? ಮಲೇಷ್ಯಾವಾ, ಕೊರಿಯಾವಾ? ಭಾರತದ 16 ವರ್ಷದ ಜೀನಿಯಸ್ ಬಾಲಕ ಹೇಳೋದೇನು ಗೊತ್ತಾ?
ಶೇ. 20ರಷ್ಟು ಇಥನಾಲ್ ಮಿಶ್ರವಾಗಿರುವ ಪೆಟ್ರೋಲ್ (ಇ20) ಬಳಕೆಯನ್ನು ಸರ್ಕಾರ ಉತ್ತೇಜಿಸುತ್ತಿದೆ. ಈ ಇ20 ಪೆಟ್ರೋಲ್ನಿಂದ ವಾಹನಗಳ ಎಂಜಿನ್ಗೆ ಹಾನಿಯಾಗುತ್ತಿದೆ. ಮೈಲೆಜ್ ಕೂಡ ಕಡಿಮೆ ಆಗುತ್ತಿದೆ ಎನ್ನುವ ಆರೋಪವನ್ನು ಅನೇಕರು ಮಾಡುತ್ತಿದ್ದಾರೆ. ಹಾಗೆಯೇ, ನಿತಿನ್ ಗಡ್ಕರಿ ಅವರ ಇಬ್ಬರು ಮಕ್ಕಳು ಇಥನಾಲ್ ತಯಾರಿಕೆಯ ಬ್ಯುಸಿನೆಸ್ನಲ್ಲಿದ್ದಾರೆ. ಹೀಗಾಗಿ, ಇ20 ಪೆಟ್ರೋಲ್ ಬಳಕೆಗೆ ಉತ್ತೇಜಿಸಲಾಗುತ್ತಿದೆ ಎನ್ನುವ ಗಂಭೀರ ಆರೋಪವೂ ಕೇಳಿಬರುತ್ತಿದೆ.
ಆದರೆ, ಇ20 ಪೆಟ್ರೋಲ್ ಬಳಕೆಯನ್ನು ನಿಲ್ಲಿಸಬೆಕು ಎಂದು ದಾಖಲಾಗಿದ್ದ ಪಿಐಎಲ್ ಅನ್ನು ಸುಪ್ರೀಂಕೋರ್ಟ್ ಕೂಡ ತಿರಸ್ಕರಿಸಿದೆ. ಆದಾಗ್ಯೂ ಕಾಂಗ್ರೆಸ್ ಹಾಗು ಇತರ ವಿಪಕ್ಷಗಳು ಇ20 ಪೆಟ್ರೋಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ ಇವೆ.
ಇದನ್ನೂ ಓದಿ: ಮುಂದಿನ ಅನೇಕ ದಶಕಗಳು ಭಾರತದ ಪಾರಮ್ಯಕ್ಕೆ ಅವಕಾಶ: ಮಾರುತಿ ಸುಜುಕಿ ಸಿಇಒ
ಕೃಷಿ ಕ್ಷೇತ್ರಕ್ಕೆ ಹೊಸ ತಂತ್ರಜ್ಞಾನ ಬೇಕು: ಗಡ್ಕರಿ
ಮಹಾರಾಷ್ಟ್ರದ ವಿದರ್ಭ ಮತ್ತು ಮರಾಠವಾಡ ಪ್ರದೇಶಗಳಲ್ಲಿ ರೈತರ ಆತ್ಮಹತ್ಯೆ ಹೆಚ್ಚಳ ವಿಚಾರವನ್ನು ಉಲ್ಲೇಖಿಸಿದ ನಿತಿನ್ ಗಡ್ಕರಿ, ಈ ಪ್ರದೇಶಗಳಲ್ಲಿ ಕೃಷಿಗೆ ನೀರಿನ ಕೊರತೆ ಒಂದು ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ. ಹಾಗೆಯೇ, ಕೃಷಿಗಾರಿಕೆಗೆ ಹೊಸ ತಂತ್ರಜ್ಞಾನಗಳ ಅಗತ್ಯ ಇದ್ದು ಈ ನಿಟ್ಟಿನಲ್ಲಿ ಪ್ರಯೋಗಗಳು ನಡೆಯುತ್ತಿವೆ ಎಂದು ಸಚಿವರು ವಿವರಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




