ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 28ರ ದಿನಭವಿಷ್ಯ
Daily Numerology February 28: ಜನ್ಮಸಂಖ್ಯೆಗೆ 1, 2, 3ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಫೆಬ್ರವರಿ 28ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಈ ದಿನ ನಿಮ್ಮ ಅದೃಷ್ಟ ಹೇಗಿರಲಿದೆ, ಯಾವ ಸವಾಲುಗಳನ್ನು ಎದುರಿಸಬೇಕಾಗಬಹುದು ಮತ್ತು ಅದಕ್ಕೆ ಪರಿಹಾರಗಳೇನು ಎಂದು ವಿವರವಾಗಿ ವಿವರಿಸಲಾಗಿದೆ.

ಚಪ್ಪಲಿ, ಛತ್ರಿ ಈ ಎರಡನ್ನೂ ಯಾರಿಗೆ ಅಗತ್ಯ ಇದೆಯೋ ಅಂಥವರಿಗೆ ನೀಡಿ. ಹೀಗೆ ಮಾಡುವುದರಿಂದ ನಿಮ್ಮ ಮೇಲೆ ಬಂದಿರುವ ವೃಥಾರೋಪಗಳಿಂದ ಹೊರಗೆ ಬರುವುದಕ್ಕೆ ಸಾಧ್ಯವಾಗಲಿದೆ. ದೊಡ್ಡ ಮಟ್ಟದ ನಷ್ಟ ಆಗಬಹುದು ಎಂದು ನೀವಂದುಕೊಂಡಿದ್ದ ವ್ಯವಹಾರದಲ್ಲಿ ನಷ್ಟದ ಪ್ರಮಾಣ ಕಡಿಮೆ ಆಗಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):
ನಿಮ್ಮ ಜತೆ ಈ ಹಿಂದೆ ಉದ್ಯೋಗ ಮಾಡಿದ್ದವರು ಏನಾದರೂ ವ್ಯಾಪಾರ- ವ್ಯವಹಾರದ ಆಫರ್ ತಂದಲ್ಲಿ ಗಂಭೀರವಾಗಿ ಪರಿಗಣಿಸಿ. ಒಂದು ವೇಳೆ ಈ ದಿನ ಆ ಬಗ್ಗೆ ಚರ್ಚೆ ಮಾಡುವುದಕ್ಕೆ ಮನಸ್ಸಿಲ್ಲ ಅಂತಾದರೂ ಒಂದೆರಡು ದಿನ ಸಮಯ ತೆಗೆದುಕೊಳ್ಳವುದು ಒಳ್ಳೆ ತೀರ್ಮಾನ ಎನಿಸಿಕೊಳ್ಳಲಿದೆ. ಸಂಗಾತಿಯ ಉದ್ಯೋಗ ವಿಚಾರದಲ್ಲಿ ಅನಿಶ್ಚಿತತೆ ಕಾಡಲಿದೆ. ಇದರಿಂದ ಉಂಟಾಗುವ ಆತಂಕದಿಂದ ಹೊರಬರುವುದಕ್ಕೆ ನಾನಾ ಪ್ರಯತ್ನವನ್ನು ಮಾಡಲಿದ್ದೀರಿ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):
ಸಾವಯವ ಉತ್ಪನ್ನಗಳ ಮಾರಾಟ ಮಾಡುತ್ತಾ ಇರುವವರು ವ್ಯಾಪಾರದ ವಿಸ್ತರಣೆಗೆ ಹಲವು ರೀತಿ ಪ್ರಯತ್ನಗಳನ್ನು ಮಾಡಲಿದ್ದೀರಿ. ನಿಮ್ಮ ಉಳಿತಾಯ ಹಾಗೂ ಹೂಡಿಕೆ ಮಾಡಿದ್ದ ಹಣವನ್ನು ತೆಗೆದು, ಅದನ್ನು ಈ ಉದ್ದೇಶಕ್ಕೆ ಬಳಸುವುದಕ್ಕೆ ಮುಂದಾಗಲಿದ್ದೀರಿ. ಹೊಸ ಮಾರುಕಟ್ಟೆಯಲ್ಲಿ ಈಗಷ್ಟೇ ಕೆಲಸ ಆರಂಭಿಸಿದವರು ತಾಳ್ಮೆ- ಸಂಯಮ ವಹಿಸುವುದು ಮುಖ್ಯವಾಗುತ್ತದೆ. ಸೇಲ್ಸ್- ಮಾರ್ಕೆಟಿಂಗ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಾ ಇದ್ದೀರಿ ಅಂತಾದಲ್ಲಿ ಮೇಲಧಿಕಾರಿ ನೀಡುವ ಸಲಹೆಯನ್ನು ಗಂಭೀರವಾಗಿ ತೆಗೆದುಕೊಳ್ಳಿ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):
ದೂರ ಪ್ರಯಾಣ ಅನಿವಾರ್ಯ ಅಂತಾದಲ್ಲಿ ಯಾವುದೇ ಹಿಂಜರಿಕೆ ಮಾಡದೆ ಹೊರಟುಬಿಡಿ. ಇದರಿಂದ ನಿಮಗೆ ಹಲವು ರೀತಿಯಲ್ಲಿ ಅನುಕೂಲಗಳು ಒದಗಿಬರಲಿವೆ. ದೇವತಾ ಕಾರ್ಯಗಳಲ್ಲಿ ಭಾಗೀ ಆಗುವುದಕ್ಕೆ ಆಹ್ವಾನ ಬಂದಲ್ಲಿ ಇಲ್ಲ ಎನ್ನದೆ ಕಡ್ಡಾಯವಾಗಿ ಭಾಗಿ ಆಗುವುದಕ್ಕೆ ಪ್ರಯತ್ನಿಸಿ. ಬ್ಯಾಂಕ್ ಉದ್ಯೋಗಿಗಳಿಗೆ ಸ್ವಲ್ಪ ಮಟ್ಟಿಗೆ ಒತ್ತಡದ ದಿನ ಇದಾಗಿರುತ್ತದೆ.
ಲೇಖನ- ಸ್ವಾತಿ ಎನ್.ಕೆ.
