ಅಂಡಮಾನ್ ಬಳಿ ಎರಡು ಲಕ್ಷ ಕೋಟಿ ಲೀಟರ್ ಕಚ್ಛಾ ತೈಲ ನಿಕ್ಷೇಪ? ಭಾರತದ ಆರ್ಥಿಕ ಬೆಳವಣಿಗೆಗೆ ರಾಕೆಟ್ ವೇಗ ಕೊಡಬಲ್ಲುದು ಈ ಸಂಗ್ರಹ
Petroleum minister Hardeep Singh Puri speaks of possible crude oil reserves at Andaman sea: ಅಂಡಮಾನ್ ಸಮುದ್ರ ಗರ್ಭದೊಳಗೆ ಹತ್ತಿರ ಹತ್ತಿರ ಎರಡು ಲಕ್ಷ ಕೋಟಿ ಬ್ಯಾರಲ್ ಕಚ್ಛಾ ತೈಲ ಇರುವ ಸುಳಿವು ಸಿಕ್ಕಿದೆ. ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಈ ಮಾಹಿತಿ ನೀಡಿದ್ದಾರೆ. ಗಯಾನದಲ್ಲಿ ಇತ್ತೀಚೆಗೆ ಸಿಕ್ಕಷ್ಟು ದೊಡ್ಡ ಪ್ರಮಾಣದ ತೈಲ ಸಂಗ್ರಹವು ಅಂಡಮಾನ್ನಲ್ಲಿ ಇರಬಹುದು ಎಂದಿದ್ದಾರೆ.

ನವದೆಹಲಿ, ಜೂನ್ 16: ಅಂಡಮಾನ್ ಸಮುದ್ರದಲ್ಲಿ ಬೃಹತ್ತಾದ ತೈಲ ನಿಕ್ಷೇಪವೊಂದು (Crude oil reserves) ಇರುವ ಸುಳಿವು ಸಿಕ್ಕಿದೆ. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ (Hardeep Singh Puri) ಅವರೇ ನೀಡಿದ ಮಾಹಿತಿ ಪ್ರಕಾರ, ಅಂಡಮಾನ್ ಸಮುದ್ರದೊಳಗೆ (Andaman Sea) 1,84,440 ಕೋಟಿ ಲೀಟರ್ನಷ್ಟು ಕಚ್ಛಾ ತೈಲ ಸಂಗ್ರಹ ಇರುವ ಸಾಧ್ಯತೆ ಇದೆ. ದಿ ನ್ಯೂ ಇಂಡಿಯನ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಹರ್ದೀಪ್ ಸಿಂಗ್ ಪುರಿ, ಒಂದು ವೇಳೆ, ಇಷ್ಟು ಪ್ರಮಾಣದ ಕಚ್ಛಾ ತೈಲ ಸಿಕ್ಕರೆ ಭಾರತವನ್ನು 20 ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಕರೆದೊಯ್ಯಬಲ್ಲುದು ಎಂದಿದ್ದಾರೆ.
ಭಾರತದ ಒಎನ್ಜಿಸಿ ಮತ್ತಿತರ ಹಲವು ಸಂಸ್ಥೆಗಳು ವಿವಿಧೆಡೆ ತೈಲ ಅನ್ವೇಷಣೆ ನಡೆಸುತ್ತಿವೆ. ಸಣ್ಣ ಸಣ್ಣ ತೈಲ ನಿಕ್ಷೇಪಗಳು ಸಿಕ್ಕಿವೆ. ಆದರೆ, ಗಯಾನದಲ್ಲಿ ಇತ್ತೀಚೆಗೆ ಸಿಕ್ಕಷ್ಟು ಬೃಹತ್ ಪ್ರಮಾಣದ ಕಚ್ಛಾ ತೈಲ ಸಂಗ್ರಹವು ಅಂಡಮಾನ್ ಸಮುದ್ರದಲ್ಲಿ ದೊರಕುವ ಎಲ್ಲಾ ಸಾಧ್ಯತೆ ಇದೆ ಎಂದು ಕೇಂದ್ರ ಸಚಿವರು ವಿಶ್ವಾಸದಿಂದ ಹೇಳಿದ್ದಾರೆ.
ಅಂಡಮಾನ್ ಸಮುದ್ರದ ಸಂಭಾವ್ಯ 1,84,550 ಕೋಟಿ ಲೀಟರ್ ಕಚ್ಚಾ ತೈಲ ಎಂದರೆ ಸುಮಾರು 11.6 ಬಿಲಿಯನ್ ಬ್ಯಾರಲ್ ಆಗುತ್ತದೆ. ಕೆರಿಬಿಯನ್ ದ್ವೀಪ ಸಮೂಹದಲ್ಲಿರುವ ಗಯಾನ ದೇಶದಲ್ಲೂ 11.6 ಬಿಲಿಯನ್ ಬ್ಯಾರಲ್ ಕಚ್ಛಾ ತೈಲ ನಿಕ್ಷೇಪ ಸಿಕ್ಕಿತ್ತು. ಇದರೊಂದಿಗೆ ವಿಶ್ವದ 14ನೇ ಅತಿ ಹೆಚ್ಚು ಆಯಿಲ್ ರಿಸರ್ವ್ ಹೊಂದಿರುವ ದೇಶವೆನಿಸಿದೆ ಗಯಾನ. ಅಂಡಮಾನ್ನಲ್ಲಿ ಇಷ್ಟು ತೈಲ ಇರುವುದು ನಿಜವೇ ಆದಲ್ಲಿ ಭಾರತಕ್ಕೆ ಬಹಳ ಮಹತ್ತರ ಸಂಗತಿ ಎನಿಸುತ್ತದೆ.
ಇದನ್ನೂ ಓದಿ: ವಾಯುಶಕ್ತಿ ಉತ್ಪಾದನೆ; ಗುಜರಾತ್, ತಮಿಳುನಾಡನ್ನು ಹಿಂದಿಕ್ಕಿದ ಕರ್ನಾಟಕ ನಂ. 1; ಕೇಂದ್ರದಿಂದ ಪ್ರಶಸ್ತಿ
ಅಂಡಮಾನ್ನಲ್ಲಿ ತೈಲ ಇರಬಹುದು ಎಂದು ಸುಮ್ಮನೆ ಹಾರಿಕೆಯ ಹೇಳಿಕೆ ನೀಡಿದ್ದಲ್ಲ. ತೈಲ ಅನ್ವೇಷಣೆ ಕಾರ್ಯದ ವೇಳೆ ತೈಲ ಇರುವಿಕೆಯ ಸುಳಿವು ನೀಡುವ ವಸ್ತುಗಳು ಪತ್ತೆಯಾಗಿವೆ. ಈ ಆಧಾರಗಳ ಮೇಲೆ ಅಂಡಮಾನ್ ಸಮುದ್ರ ಅಡಿಯೊಳಗೆ ಭಾರೀ ತೈಲ ನಿಕ್ಷೇಪ ಇರಬಹುದು ಎನ್ನುವ ಸುಳಿವು ಇದೆ.
ತೈಲ ಬಾವಿ ಕೊರೆಯಲು ದುಬಾರಿ ವೆಚ್ಚ
ತೈಲ ನಿಕ್ಷೇಪ ಇರುವುದು ಖಚಿತವಾದರೂ ಅದನ್ನು ಹೊರತೆಗೆಯುವ ಕೆಲಸ ಸುಲಭವಲ್ಲ. ಬೋರ್ವೆಲ್ಗಳನ್ನು ಕೊರೆಸಿದಾಗ ನೀರು ಗ್ಯಾರಂಟಿ ಬರುತ್ತೆ ಎಂದು ಹೇಳಲು ಆಗೊಲ್ಲ. ಅದು ತೈಲ ಬಾವಿಗಳಿಗೂ ಅನ್ವಯ ಆಗುತ್ತದೆ. ಗಯಾನದಲ್ಲಿ 41 ಬಾವಿಗಳನ್ನು ಕೊರೆದ ಬಳಿಕ ತೈಲ ಸಿಕ್ಕಿತ್ತು. ಸಾವಿರಾರು ಕೋಟಿ ರೂ ವೆಚ್ಚವಾಗುತ್ತದೆ. ಭಾರತ ಇದಕ್ಕೆ ಅಣಿಯಾಗಿದೆ.
ಅಂಡಮಾನ್ನಲ್ಲಿ ಬೃಹತ್ ತೈಲ ಸಿಕ್ಕರೆ ಭಾರತಕ್ಕೆ ಎಷ್ಟು ಉಪಯೋಗ?
ಭಾರತ ತನ್ನ ಶೇ. 90ಕ್ಕಿಂತಲೂ ಹೆಚ್ಚು ಪೆಟ್ರೋಲ್, ಡೀಸಲ್ ಅಗತ್ಯಗಳಿಗೆ ತೈಲ ಆಮದಿನ ಮೇಲೆ ಅವಲಂಬಿತವಾಗಿದೆ. ಭಾರತದ ಒಟ್ಟಾರೆ ಟ್ರೇಡ್ ಡೆಫಿಸಿಟ್ ಹಿಗ್ಗಲು ಇದೂ ಒಂದು ಕಾರಣ. ಅಂಡಮಾನ್ ತೈಲ ಸಂಗ್ರಹದಿಂದ ಈ ಸಮಸ್ಯೆ ನಿವಾರಣೆ ಆಗಬಹುದು. ಇದು ದೇಶದ ಆರ್ಥಿಕತೆಗೆ ಪುಷ್ಟಿ ಕೊಡಬಹುದು. ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಭಾರತದ ಜಿಡಿಪಿ 20 ಟ್ರಿಲಿಯನ್ ಡಾಲರ್ನಷ್ಟು ಬೆಳೆಯಬಹುದು ಎಂದು ಹೇಳಿದ್ದು ಈ ಅಂದಾಜಿನಲ್ಲೇ.
ಇದನ್ನೂ ಓದಿ: ಭಾರತದಲ್ಲಿ ಮಿಲಿಯನೇರ್ಗಳ ಸಂಖ್ಯೆ 85,000 ಕ್ಕಿಂತ ಹೆಚ್ಚು; ಜಾಗತಿಕವಾಗಿ ಮೂರೇ ದೇಶಗಳು ಭಾರತಕ್ಕಿಂತ ಮುಂದು
ಭಾರತದಲ್ಲಿ ಇತರ ಕೆಲವೆಡೆ ಇವೆ ಸಣ್ಣ ಸಣ್ಣ ತೈಲ ನಿಕ್ಷೇಪಗಳು…
ಭಾರತದಲ್ಲಿ ಅಲ್ಪ ಪ್ರಮಾಣದಲ್ಲಿ ತೈಲ ಉತ್ಪಾದನೆ ನಡೆಯುತ್ತಿದೆ. ಅಸ್ಸಾಮ್, ಗುಜರಾತ್, ರಾಜಸ್ಥಾನ, ಮುಂಬೈ, ಆಂಧ್ರದ ಕೆಲ ಪ್ರದೇಶಗಳಲ್ಲಿ ತೈಲ ಉತ್ಪಾದನೆ ಆಗುತ್ತಿದೆ. ವಿಶಾಖಪಟ್ಟಣ, ಮಂಗಳೂರು, ಪಡೂರ್ ಬಳಿ ತಕ್ಕಮಟ್ಟಿಗೆ ಪೆಟ್ರೋಲಿಯಂ ರಿಸರ್ವ್ಸ್ ಇವೆ. ಒಎನ್ಜಿಸಿ, ಆಯಿಲ್ ಇಂಡಿಯಾ ಮೊದಲಾದ ಕೆಲ ಕಂಪನಿಗಳು ತೈಲ ಅನ್ವೇಷಣೆ ಮತ್ತು ಉತ್ಪಾದನೆ ಮಾಡಬಲ್ಲುವು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




