ಭಾರತದಲ್ಲಿ ಮಿಲಿಯನೇರ್ಗಳ ಸಂಖ್ಯೆ 85,000 ಕ್ಕಿಂತ ಹೆಚ್ಚು; ಜಾಗತಿಕವಾಗಿ ಮೂರೇ ದೇಶಗಳು ಭಾರತಕ್ಕಿಂತ ಮುಂದು
Knight Frank Global Wealth Report 2025: ನೈಟ್ ಫ್ರ್ಯಾಂಕ್ ಗ್ಲೋಬಲ್ ವೆಲ್ತ್ ರಿಪೋರ್ಟ್ ಪ್ರಕಾರ ಭಾರತದಲ್ಲಿ ಮಿಲಿಯನೇರ್ಗಳ ಸಂಖ್ಯೆ 85,000ಕ್ಕೂ ಹೆಚ್ಚಿದೆ. ವಿಶ್ವದ ಶೇ. 3.7ರಷ್ಟು ಮಿಲಿಯನೇರ್ಗಳು ಭಾರತೀಯರೇ ಆಗಿದ್ದಾರೆ. ಭಾರತದ ಪ್ರಬಲ ಆರ್ಥಿಕ ಬೆಳವಣಿಗೆ, ಉದ್ದಿಮೆಗಾರಿಕೆಗೆ ಪುಷ್ಟಿ, ಡಿಜಿಟಲ್ ಇನ್ಫ್ರಾಸ್ಟ್ರಕ್ಚರ್, ಬಂಡವಾಳ ಲಭ್ಯತೆ ಇತ್ಯಾದಿ ಕಾರಣದಿಂದ ವೈಯಕ್ತಿಕ ಸಂಪತ್ತು ವೃದ್ಧಿಗೆ ಹೆಚ್ಚು ಅವಕಾಶ ಸಿಕ್ಕಿದೆ.

ನವದೆಹಲಿ, ಜೂನ್ 15: ವಿಶ್ವದಲ್ಲಿ ಅತಿಹೆಚ್ಚು ಮಿಲಿಯನೇರ್ಗಳಿರುವ ದೇಶಗಳ ಸಾಲಿನಲ್ಲಿ ಭಾರತ ಇದೆ. ನೈಟ್ ಫ್ರ್ಯಾಂಕ್ ಗ್ಲೋಬಲ್ ವೆಲ್ತ್ ರಿಪೋರ್ಟ್ 2025 ಪ್ರಕಾರ ಭಾರತದಲ್ಲಿ ಮಿಲಿಯನೇರ್ಗಳೆನಿಸಿಕೊಳ್ಳುವ ಶ್ರೀಮಂತರ ಸಂಖ್ಯೆ 85,698 ಇದೆ. ಅತಿಹೆಚ್ಚು ಮಿಲಿಯನೇರ್ಗಳನ್ನು ಹೊಂದಿದ ದೇಶಗಳ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ವಿಶ್ವದ ಶೇ. 3.7ರಷ್ಟು ಮಿಲಿಯನೇರ್ಗಳು ಭಾರತದಲ್ಲಿದ್ದಾರೆ ಎಂದು ಈ ವರದಿ ಹೇಳುತ್ತದೆ. ಅಮೆರಿಕ, ಚೀನಾ, ಜಪಾನ್ ಬಳಿಕ ಭಾರತದಲ್ಲಿ ಅತಿಹೆಚ್ಚು ಮಿಲಿಯನೇರ್ಸ್ ಇದ್ದಾರೆ.
ಮಿಲಿಯನೇರ್ಗಳೆಂದರೆ ಎಷ್ಟು ಆಸ್ತಿವಂತರಾಗಿರಬೇಕು?
ಮಿಲಿಯನೇರ್ಗಳನ್ನು ಅಧಿಕ ಆಸ್ತಿ ಹೊಂದಿರುವ ವ್ಯಕ್ತಿಗಳು ಅಥವಾ ಎಚ್ಎನ್ಡಬ್ಲ್ಯುಐ ಎಂದು ಕರೆಯಲಾಗುತ್ತದೆ. ನಿವ್ವಳ ಆಸ್ತಿ ಮೌಲ್ಯ ಕನಿಷ್ಠ 10 ಮಿಲಿಯನ್ ಡಾಲರ್ನಷ್ಟಾದರೂ ಇರಬೇಕು. ನೆಟ್ ವರ್ತ್ ಎಂದರೆ ಸಾಲಗಳನ್ನು ಕಳೆದು ಉಳಿಯುವ ಆಸ್ತಿಗಳ ಮೌಲ್ಯ. 10 ಮಿಲಿಯನ್ ಡಾಲರ್ ಎಂದರೆ ಸುಮಾರು 85-87 ಕೋಟಿ ರೂ ಆಗುತ್ತದೆ. ಹತ್ತಿರ ಹತ್ತಿರ ನೂರು ಕೋಟಿ ರೂ ಹಣವಂತರು. ಭಾರತದಲ್ಲಿ ಇಷ್ಟು ಪ್ರಮಾಣದಲ್ಲಿ ಸ್ಥಿತಿವಂತರಿರುವುದು ನಿಜಕ್ಕೂ ಸೋಜಿಗ.
ಇದನ್ನೂ ಓದಿ: ಪಾಕಿಸ್ತಾನ 3 ರಫೇಲ್ ಹೊಡೆದಿಲ್ಲ; ವಾಸ್ತವ ಗೊತ್ತಾದರೆ ಅಚ್ಚರಿ ಆಗಬಹುದು: ಡಸ್ಸೋ ಏವಿಯೇಶನ್ ಸಿಇಒ
ಭಾರತದ ಪ್ರಬಲ ಆರ್ಥಿಕ ಬೆಳವಣಿಗೆಯು ಶ್ರೀಮಂತರ ಸಂಖ್ಯೆ ಹೆಚ್ಚಳಕ್ಕೆ ಕಾರಣ
ನೈಟ್ ಫ್ರ್ಯಾಂಕ್ನ ಈ ವರದಿ ಪ್ರಕಾರ, ಭಾರತದಲ್ಲಿ ಆಗುತ್ತಿರುವ ಪ್ರಬಲ ಆರ್ಥಿಕ ವಾತಾವರಣ, ಉದ್ದಿಮೆಗಾರಿಕೆ ಚಟುವಟಿಕೆ, ಬಂಡವಾಳ ಲಭ್ಯತೆ ಇತ್ಯಾದಿ ಕಾರಣಗಳು ವ್ಯಕ್ತಿಗತ ಸಂಪತ್ತು ಹೆಚ್ಚಳಕ್ಕೆ ಕಾರಣವಾಗಿವೆ ಎನ್ನಲಾಗಿದೆ.
ಸ್ಮಾರ್ಟ್ಫೋನ್ಗಳು ಹೆಚ್ಚು ಮಂದಿಯ ಕೈಲಿರುವುದು, ಡಿಜಿಟಲ್ ಬ್ಯಾಂಕಿಂಗ್ ಎಲ್ಲೆಡೆ ವ್ಯಾಪಿಸುತ್ತಿರುವುದು, ಹೀಗೆ ಡಿಜಿಟಲ್ ಇನ್ಫ್ರಾಸ್ಟ್ರಕ್ಚರ್ ಬೆಳೆದಿರುವುದು ಸಂಪತ್ತು ಗಳಿಕೆಗೆ ಹೆಚ್ಚಿನ ಅವಕಾಶ ಸಿಕ್ಕಿದೆ ಎಂದು ಈ ವರದಿಯು ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ಜಾಗತಿಕ ಮಾರುಕಟ್ಟೆಯಲ್ಲಿ ಆ್ಯಪಲ್ ಅನ್ನು ಹಿಂದಿಕ್ಕಿದ ಸ್ಯಾಮ್ಸುಂಗ್; ಎಐ ಶಕ್ತ ಪರಿಕರಗಳೇ ಈ ಮುನ್ನಡೆಗೆ ಕಾರಣ
ಭಾರತದಲ್ಲಿ ಬಿಲಿಯನೇರ್ಗಳ ಸಂಖ್ಯೆಯಲ್ಲೂ ಹೆಚ್ಚಳ
ಭಾರತದಲ್ಲಿ ಬಿಲಿಯನೇರ್ಗಳ ಸಂಖ್ಯೆಯೂ ಕೂಡ ಬಹಳ ವೇಗವಾಗಿ ಹೆಚ್ಚುತ್ತಿದೆ. ಭಾರತದಲ್ಲಿ ಈಗ ಬಿಲಿಯನೇರ್ಗಳ ಸಂಖ್ಯೆ 191 ಇದೆ. 2023ರಲ್ಲಿ 165 ಮಂದಿ ಅತಿಶ್ರೀಮಂತರಿದ್ದರು. ಒಂದೇ ವರ್ಷದಲ್ಲಿ 26 ಹೊಸ ಬಿಲಿಯನೇರ್ಗಳು ಸೇರ್ಪಡೆಯಾಗಿದ್ದಾರೆ. ಅಂದರೆ, ಶೇ. 12ರಷ್ಟು ಬಿಲಿಯನೇರ್ಗಳ ಸಂಖ್ಯೆ ಹೆಚ್ಚಳ ಆಗಿದೆ.
ಬಿಲಿಯನೇರ್ ಎಂದರೆ ಕನಿಷ್ಠ ಒಂದು ಬಿಲಿಯನ್ ಡಾಲರ್ ಮೌಲ್ಯದ ನಿವ್ವಳ ಆಸ್ತಿ ಹೊಂದಿರುವವರು. ಒಂದು ಬಿಲಿಯನ್ ಡಾಲರ್ ಎಂದರೆ ಸುಮಾರು 8,500 ಕೋಟಿ ರೂ. ಭಾರತದಲ್ಲಿರುವ ಎಲ್ಲಾ 191 ಬಿಲಿಯನೇರ್ಗಳ ಒಟ್ಟು ಆಸ್ತಿ ಗಣಿಸಿದರೆ ಬಹುತೇಕ ಒಂದು ಟ್ರಿಲಿಯನ್ ಡಾಲರ್ನಷ್ಟಾಗುತ್ತದೆ ಎನ್ನಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




