ಕರ್ನಾಟಕಕ್ಕೂ ತಟ್ಟಲಿದೆಯಾ ಇರಾನ್, ಇಸ್ರೇಲ್ ಸಂಘರ್ಷದ ಪರಿಣಾಮ? ಆತಂಕಕ್ಕೆ ಕಾರಣ ಇಲ್ಲಿದೆ
Petrol, Diesel, Gold price Hike: ಇರಾನ್ ಹಾಗೂ ಇಸ್ರೇಲ್ ನಡುವೆ ಯುದ್ಧ ಶುರುವಾಗಿದೆ. ಕ್ಷಿಪಣಿಗಳ ದಾಳಿ, ಬೆಂಕಿಯ ಮಳೆಯಲ್ಲಿ ಇಸ್ರೇಲ್-ಇರಾನ್ ಬೆಂದು ಹೋಗುತ್ತಿವೆ. ಯುದ್ಧದ ಕಾರ್ಮೋಡ ಇಡೀ ವಿಶ್ವಕ್ಕೆ ಆವರಿಸಿದೆ. ಇದರ ಪರಿಣಾಮ ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳಿಗೆ ತಟ್ಟುವ ಸಾಧ್ಯತೆ ಇದೆ. ಯುದ್ಧದ ಪರಿಣಾಮ ಪೆಟ್ರೋಲ್, ಡಿಸೇಲ್ ಹಾಗೂ ಬಂಗಾರದ ಬೆಲೆ ಏರಿಕೆಯಾಗುವ ಆತಂಕ ಎದುರಾಗಿದೆ. ಇದರ ಬಿಸಿ ಬೆಂಗಳೂರು ಸೇರಿದಂತೆ ಇಡೀ ಕರ್ನಾಟಕಕ್ಕೆ ತಟ್ಟಲಿದೆ.

ಬೆಂಗಳೂರು, ಜೂನ್ 17: ಇರಾನ್ ಹಾಗೂ ಇಸ್ರೇಲ್ ನಡುವಣ ಸೇನಾ ಸಂಘರ್ಷ (Iran Isrel War) ಸದ್ಯಕ್ಕಂತೂ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಇದರ ಪರಿಣಾಮ ಜಾಗತಿಕ ತೈಲ ಮಾರುಕಟ್ಟೆ ಮೇಲೆ ಆಗಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ (Petrol, Diesel Price) ಏರಿಕೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಭಾರತಕ್ಕೆ ಪ್ರತಿದಿನ ಸುಮಾರು 39 ಲಕ್ಷ ಬ್ಯಾರೆಲ್ ಕಚ್ಚಾತೈಲದ ಅಗತ್ಯ ಇದೆ. ಶೇಕಡಾ 80 ರಷ್ಟು ಕಚ್ಚಾ ತೈಲವನ್ನು ಭಾರತ (India) ಆಮದು ಮಾಡಿಕೊಳ್ಳುತ್ತದೆ. ಇರಾನ್ನಿಂದಲೇ ಗರಿಷ್ಠ ಕಚ್ಚಾ ತೈಲ ಆಮದು ಮಾಡಿಕೊಳ್ಳಲಾಗುತ್ತದೆ. ಹೀಗಾಗಿ ಪೆಟ್ರೋಲ್, ಡೀಸಲ್ ಬೆಲೆ ಏರಿಕೆಯ ಆತಂಕ ಎದುರಾಗಿದೆ.
ಕಚ್ಚಾ ತೈಲ ಬೆಲೆಗಳ ಮೇಲೆ ಯುದ್ಧದ ಪರಿಣಾಮ ನೇರವಾಗಿ ಆಗುತ್ತಿದೆ. ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಿಗೂ ಇದರ ಬಿಸಿ ತಟ್ಟುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಎಷ್ಟಿದೆ ಪೆಟ್ರೋಲ್, ಡೀಸೆಲ್ ದರ?
ಬೆಂಗಳೂರಿನಲ್ಲಿ ಸದ್ಯ 1 ಲೀಟರ್ ಪೆಟ್ರೋಲ್ ದರ 102.92 ರೂ. ಇದೆ. ಡೀಸೆಲ್ ದರ 1 ಲೀಟರ್‌ಗೆ 89.02 ರೂ. ಇದೆ.
ತೈಲ ಪೂರೈಕೆ ಕಡಿತದ ಆತಂಕ
ಇಸ್ರೇಲ್ ದಾಳಿ ಪರಿಣಾಮ ಇರಾನ್ನಿಂದ ತೈಲ ಸರಬರಾಜು ಕಡಿತಗೊಳ್ಳುವ ಸಾಧ್ಯತೆ ಇದ್ದು, ಭಾರತವೂ ಒಳಗೊಂಡಂತೆ ಜಾಗತಿಕವಾಗಿ ತೈಲ ಬೆಲೆ ಏರಿಕೆಯ ಆತಂಕ ಕಂಡು ಬಂದಿದೆ.
ಪರ್ಷಿಯನ್ ಗಲ್ಫ್ ಬಂದ್ ಆದರೆ ಭಾರಿ ಸಂಕಷ್ಟ
ಪರ್ಷಿಯನ್ ಗಲ್ಫ್ ಜಲಮಾರ್ಗ ಪ್ರದೇಶವನ್ನು ಇರಾನ್ ನಿಯಂತ್ರಿಸುತ್ತದೆ. ಪರ್ಷಿಯನ್ ಗಲ್ಫ್, ಮೆಡಿಟರೇನಿಯನ್ ಸಮುದ್ರ ಮಾರ್ಗವಾಗಿದೆ. ಈ ಸಮುದ್ರದ ಮಾರ್ಗದ ಮೂಲಕವೇ ಇರಾನ್ , ಇರಾಕ್ , ಕುವೈತ್ , ಸೌದಿ ಅರೇಬಿಯಾ , ಕತಾರ್ , ಬಹ್ರೇನ್ , ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಓಮನ್ ದೇಶಗಳು ತೈಲ ರಪ್ತು ವ್ಯಾಪರ ವಹಿವಾಟು ಮಾಡುತ್ತವೆ. ಇದು ಇರಾನ್ ಹಿಡಿತದಲ್ಲಿದ್ದು, ಇಸ್ರೇಲ್ ದಾಳಿ ಕುಗ್ಗಿಸಲು ಇರಾನ್ ಈ ಪರ್ಷಿಯನ್ ಗಲ್ಫ್ ಮಾರ್ಗ ಬಂದ್ ಮಾಡಿದರೆ ಜಾಗತಿಕ ಕಚ್ಚಾ ತೈಲ ಬೆಲೆ ಗಗನಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಇದರಿಂದ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯ ಸಾಧ್ಯತೆಯ ಬಗ್ಗೆಯೂ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಮತ್ತೆ ಗಗನಕ್ಕೇರಿದ ಚಿನ್ನದ ಬೆಲೆ: ಒಂದೇ ದಿನದಲ್ಲಿ ಗ್ರಾಂಗೆ 300 ರೂ. ಹೆಚ್ಚಳ
ಕಷ್ಟ ಬಂದಾಗ ಬಂಗಾರ ಕೈ ಹಿಡಿಯುತ್ತದೆ ಎಂದು ಚಿನ್ನ ಖರೀದಿ ಮಾಡುವವರಿಗೆ ಈಗ ಬಂಗಾರವೇ ಕೈಗೆ ಸಿಗದ ರೀತಿ ಆಗಿದೆ. ದಿನದಿಂದ ದಿನಕ್ಕೆ ಬಂಗಾರ ಬಲು ಭಾರ ಅನ್ನಿಸಲು ಶುರುವಾಗಿದೆ. ಇದಕ್ಕೆ ಕಾರಣವೂ ಇರಾನ್ ಹಾಗೂ ಇಸ್ರೆಲ್ ಯುದ್ಧ! ಯುದ್ಧದ ಪರಿಣಾಮ ಈಗ ಚಿನ್ನದ ಮೇಲೂ ತಟ್ಟಿದ್ದು, ಒಂದೇ ದಿನದಲ್ಲಿ ಚಿನ್ನದ ಬೆಲೆ ಗ್ರಾಂಗೆ 300 ರೂ. ಏರಿಕೆ ಆಗಿದೆ.
24 ಕ್ಯಾರಟ್ ಗೋಲ್ಡ್ ಪ್ರತಿ ಗ್ರಾಂಗೆ 10 ಸಾವಿರ ರೂಪಾಯಿ ಇತ್ತು. ಈಗ 10,300 ರೂಪಾಯಿಗೆ ಏರಿಕೆ ಆಗಿದೆ. ಅದೇ ರೀತಿ 22 ಕ್ಯಾರಟ್ ಪ್ರತಿ ಗ್ರಾಂಗೆ 9050 ರಪಾಯಿ ಇತ್ತು. ಆದೀಗ ಪ್ರತಿ ಗ್ರಾಂಗೆ 9350 ರೂಪಾಯಿ ಬೆಲೆ ಏರಿಕೆ ಆಗಿದೆ. ಇದೇ ರೀತಿಯಲ್ಲಿ ಯುದ್ಧ ಮುಂದುವರೆದರೆ, ಮುಂದಿನ 6 ತಿಂಗಳಲ್ಲಿ 12 ರಿಂದ 13 ಸಾವಿರಕ್ಕೆ ಬಂಗಾರದ ಬೆಲೆ ಏರುವ ಸಾಧ್ಯತೆ ಇದೆ.
ಇದನ್ನೂ ಓದಿ: ಕೋಮು ಕ್ರಿಮಿಗಳ ಹುಟ್ಟಡಗಿಸಲು ಬಂದ ಸ್ಪೆಷಲ್ ಆ್ಯಕ್ಷನ್ ಫೋರ್ಸ್: ಏನಿದರ ಕೆಲಸ? ಇದರಲ್ಲಿ ಯಾರ್ಯಾರು ಇರ್ತಾರೆ?
ಒಟ್ಟಿನಲ್ಲಿ ಈಗ ಯುದ್ಧದ ಪರಿಣಾಮ ತೈಲ ಹಾಗೂ ಚಿನ್ನದ ಮೇಲೆ ತಟ್ಟಿದ್ದು, ಏಕಾಏಕಿ ಬಂಗಾರದ ಬೆಲೆ ಗಗನಕ್ಕೇರಿದೆ. ಇದೇ ರೀತಿ ಯುದ್ಧ ಮುಂದುವರೆದರೆ, ಬೆಂಗಳೂರಿಗೆ ಹಾಗೂ ಇಡೀ ಕರ್ನಾಟಕಕ್ಕೂ ಇದರ ಬಿಸಿ ಜೋರಾಗಿಯೇ ತಟ್ಟುವುದರಲ್ಲಿ ಅನುಮಾನವಿಲ್ಲ.







