ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್ (Union Budget 2023) ಕ್ಷಣಗಣನೆ ಆರಂಭವಾಗಿದೆ. 2024ರಲ್ಲಿ ಲೋಕಸಭೆ ಚುನಾವಣೆ ಬರುವುದರಿಂದ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುವುದಿಲ್ಲ. ಹೀಗಾಗಿ ಈ ಬಾರಿಯ ಬಜೆಟ್ ಮೇಲೆ ಜನರ, ಅದರಲ್ಲೂ ಮಧ್ಯಮ ವರ್ಗದವರ ನಿರೀಕ್ಷೆಗಳು ಹೆಚ್ಚಾಗಿವೆ. ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಹೆಚ್ಚಿನ ಕೊಡುಗೆಗಳನ್ನು ನೀಡಲಿದೆಯೇ ಎಂಬ ಕುತೂಹಲ ಹೆಚ್ಚಾಗಿದೆ. ಆದಾಯ ತೆರಿಗೆ ಮಿತಿ ಹಾಗೂ ನಿಯಮಗಳಲ್ಲಿ ಬದಲಾವಣೆ, ಅಗತ್ಯ ವಸ್ತುಗಳ ಬೆಲೆ ಇಳಿಕೆ ನಿರೀಕ್ಷೆ ಜತೆಗೆ ವಿವಿಧ ಕ್ಷೇತ್ರಗಳು ತಮ್ಮದೇ ಆದ ನಿರೀಕ್ಷೆಗಳನ್ನು ಬಜೆಟ್ ಮೇಲೆ ಇಟ್ಟುಕೊಂಡಿವೆ. ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್ ಮಂಡನೆ ಸಮಯ, ಎಲ್ಲಿ ವೀಕ್ಷಿಸಬಹುದು, ಜನರ ನಿರೀಕ್ಷೆಗಳೇನು ಹಾಗೂ ಮತ್ತಷ್ಟು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಫೆಬ್ರವರಿ 1ರಂದು ಬುಧವಾರ 2023-24ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆ ದಿನ ಬೆಳಿಗ್ಗೆ 11 ಗಂಟೆಗೆ ಸಂಸತ್ನಲ್ಲಿ ಬಜೆಟ್ ಮಂಡನೆ ಆರಂಭಿಸಲಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ಐದನೇ ಬಾರಿಗೆ ಬಜೆಟ್ ಮಂಡನೆ ಮಾಡಲಿದ್ದಾರೆ. 2022ರಲ್ಲಿ ಅವರು ಸುಮಾರು 1.5 ಗಂಟೆ ಕಾಲ ಬಜೆಟ್ ಮಂಡನೆ ಮಾಡಿದ್ದರು. 2021ರಲ್ಲಿ 2 ಗಂಟೆ 40 ನಿಮಿಷಗಳ ಕಾಲ ಅವರು ಬಜೆಟ್ ಮಂಡನೆ ಮಾಡಿದ್ದು, ದೇಶದ ಇತಿಹಾಸದಲ್ಲಿಯೇ ಸುದೀರ್ಘ ಬಜೆಟ್ ಎಂದು ಪರಿಗಣಿಸಲ್ಪಟ್ಟಿದೆ.
ಲೋಕಸಭಾ ಟಿವಿ, ರಾಜ್ಯಸಭಾ ಟಿವಿ, ದೂರದರ್ಶನ (ಡಿಡಿ ನ್ಯೂಸ್) ಹಾಗೂ ಇತರ ಸುದ್ದಿ ವಾಹಿನಿಗಳಲ್ಲಿ ಬಜೆಟ್ ಮಂಡನೆ ವೀಕ್ಷಿಸಬಹುದಾಗಿದೆ. ಸಂಸದ್ ಟಿವಿ ಮತ್ತು ಸಂಸತ್ನ ಟ್ವಿಟರ್ ಖಾತೆಗಳಲ್ಲಿಯೂ ಬಜೆಟ್ ಮಂಡನೆಯ ನೇರ ಪ್ರಸಾರ ದೊರೆಯಲಿದೆ. ದೂರದರ್ಶನ ಮತ್ತು ಲೋಕಸಭೆಯ ಅಧಿಕೃತ ಯೂಟ್ಯೂಬ್ ಚಾನೆಲ್ಗಳಲ್ಲೂ ಬಜೆಟ್ ನೇರ ಪ್ರಸಾರ ಲಭ್ಯವಾಗಲಿದೆ.
ಸಂಸತ್ನ ಬಜೆಟ್ ಅಧಿವೇಶನ ಜನವರಿ 31ರಂದು ಆರಂಭಗೊಳ್ಳಲಿದ್ದು ಏಪ್ರಿಲ್ 6ರ ವರೆಗೆ ನಡೆಯಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ನ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡುವುದರೊಂದಿಗೆ ಬಜೆಟ್ ಅಧಿವೇಶನ ಆರಂಭಗೊಳ್ಳಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರ ವರೆಗೆ ಬಜೆಟ್ ಅಧಿವೇಶನಕ್ಕೆ ಬಿಡುವು ಇರಲಿದೆ. ಈ ಅವಧಿಯಲ್ಲಿ ಸಂಸದೀಯ ಸ್ಥಾಯಿ ಸಮಿತಿಗಳು ಅನುದಾನದ ಬೇಡಿಕೆ ಬಗ್ಗೆ ಪರಿಶೀಲನೆ ನಡೆಸಲಿವೆ. ವಿವಿಧ ಸಚಿವಾಲಯಗಳು ಮತ್ತು ಅವುಗಳ ಇಲಾಖೆಗಳಿಗೆ ಸಂಬಂಧಿಸಿದ ವರದಿಗಳನ್ನು ಕೂಡ ಸಿದ್ಧಪಡಿಸಲಿವೆ. ಜನವರಿ 31ರಂದು ಹಣಕಾಸು ಸಚಿವರು ಆರ್ಥಿಕ ಸಮೀಕ್ಷೆ ಬಿಡುಗಡೆ ಮಾಡುವ ನಿರೀಕ್ಷೆ ಇದೆ.
ಆದಾಯ ತೆರಿಗೆ ದರ ಇಳಿಕೆ: ದೇಶದಲ್ಲಿ ಗರಿಷ್ಠ ಆದಾಯ ತೆರಿಗೆ ದರ ಶೇ 30ರಷ್ಟಿದೆ. ಇದನ್ನು ಶೇ 25ಕ್ಕೆ ಇಳಿಸಬೇಕು ಎಂಬ ಬೇಡಿಕೆ ಇದೆ. ಗರಿಷ್ಠ ತೆರಿಗೆಯನ್ನು ವಾರ್ಷಿಕ 10 ಲಕ್ಷ ರೂ.ಗಿಂತ ಹೆಚ್ಚು ಆದಾಯದವರಿಗೆ ವಿಧಿಸಲಾಗುತ್ತಿದೆ. ಗರಿಷ್ಠ ತೆರಿಗೆ ಹಾಕಲಾಗುವ ಮೊತ್ತವನ್ನು 20 ಲಕ್ಷ ರೂ.ಗೆ ಏರಿಸಬೇಕೆಂಬ ಮನವಿ ಕೇಳಿಬಂದಿದೆ.
ಸೆಕ್ಷನ್ 80ಸಿ ಮಿತಿ ಹೆಚ್ಚಳ: ಸದ್ಯ ಆದಾಯ ತೆರಿಗೆಯ ಸೆಕ್ಷನ್ 80ಸಿ ಅಡಿಯಲ್ಲಿ ವಿವಿಧ ಹೂಡಿಕೆ, ವೆಚ್ಚಗಳಿಗೆ ಗರಿಷ್ಠ ತೆರಿಗೆ ವಿನಾಯಿತಿ ಮಿತಿ 1.5 ಲಕ್ಷ ರೂ. ಇದೆ. ಇದರ ವ್ಯಾಪ್ತಿಯಲ್ಲೇ ಮಕ್ಕಳ ಶಿಕ್ಷಣ ವೆಚ್ಚವೂ ಬರುತ್ತದೆ. ಆದರೆ, ಈಗಿನ ಕಾಲಮಾನದಲ್ಲಿ ಸಾಮಾನ್ಯ ಶಾಲೆಯ ಶುಲ್ಕವೇ ಕನಿಷ್ಠ ಒಂದು ಲಕ್ಷ ರೂ. ಆಗಿದೆ. ಇಂಥ ಸಂದರ್ಭದಲ್ಲಿ ಶಿಕ್ಷಣ ವೆಚ್ಚವನ್ನು ಇತರ ಖರ್ಚುಗಳ ಗುಂಪಿಗೆ ಸೇರಿಸುವುದಕ್ಕಿಂತ ಅದಕ್ಕೆಂದೇ ಪ್ರತ್ಯೇಕ ತೆರಿಗೆ ವಿನಾಯಿತಿ ವ್ಯವಸ್ಥೆ ಮಾಡಬೇಕು ಎಂಬ ಬೇಡಿಕೆ ಇದೆ. ಟ್ಯಾಕ್ಸ್ ರಿಬೇಟ್ ಪಡೆಯುವ ವಿಚಾರದಲ್ಲಿ ಜೀವ ವಿಮೆಗಳಿಗೆ ಪ್ರತ್ಯೇಕ ವಿಭಾಗ ಸ್ಥಾಪಿಸಬೇಕೆಂಬುದು ಈ ಕ್ಷೇತ್ರದವರ ಅಪೇಕ್ಷೆಯಾಗಿದೆ. ಟ್ಯಾಕ್ಸ್ ರಿಬೇಟ್ ಎಂದರೆ ನಾವು ಪಾವತಿಸುವ ತೆರಿಗೆ ಹಣವನ್ನು ಮರಳಿ ಪಡೆಯುವ ಅವಕಾಶ. ಸದ್ಯ, ಇದರ ಮಿತಿ 1.5 ಲಕ್ಷ ರೂಪಾಯಿ ಇದೆ. ಇವೆಲ್ಲವೂ ಆದಾಯ ತೆರಿಗೆಯ ಸೆಕ್ಷನ್ 80 ಸಿ ಅಡಿಯಲ್ಲಿ ಬರುತ್ತದೆ. ಲೈಫ್ ಇನ್ಷೂರೆನ್ಸ್ನ ಪ್ರೀಮಿಯಮ್, ಪಿಪಿಎಫ್, ಎನ್ಎಸ್ಸಿ, ಎನ್ಪಿಎಸ್, ಗೃಹ ಸಾಲ ಇತ್ಯಾದಿ ಅನೇಕ ಹೂಡಿಕೆಗಳು ಈ ಮಿತಿಯೊಳಗೆ ಬರುತ್ತವೆ. ಆದ್ದರಿಂದ ಇನ್ಷೂರೆನ್ಸ್ ಪಾಲಿಸಿಗಳಿಗೆ ಪ್ರತ್ಯೇಕ ಟ್ಯಾಕ್ಸ್ ರಿಬೇಟ್ ಸೌಲಭ್ಯ ಕೊಡಬೇಕು ಎಂಬ ಬೇಡಿಕೆಯೂ ಇದೆ.
ಎಲೆಕ್ಟ್ರಿಕ್ ವಾಹನ ಖರೀದಿಗೆ ತೆರಿಗೆ ವಿನಾಯಿತಿ: ಎಲೆಕ್ಟ್ರಿಕ್ ವಾಹನ ಖರೀದಿಗೆ ತೆಗೆದುಕೊಳ್ಳುವ ಸಾಲಕ್ಕೆ ನಾವು ಕಟ್ಟುವ ಬಡ್ಡಿ ಹಣವನ್ನು ತೆರಿಗೆ ವಿನಾಯಿತಿ ಪಡೆಯಲು ಉಪಯೋಗಿಸಬಹುದು. ಸೆಕ್ಷನ್ 80ಇಇಬಿ ಪ್ರಕಾರ 2023 ಮಾರ್ಚ್ 31ರವರೆಗೆ ತೆಗೆದುಕೊಳ್ಳಲಾಗುವ ಇಂಥ ಸಾಲಗಳಿಗೆ ಟ್ಯಾಕ್ಸ್ ಡಿಡಕ್ಷನ್ ಅವಕಾಶ ಇರುತ್ತದೆ. ಆದರೆ, ಈ ಅವಕಾಶವನ್ನು 2025ರವರೆಗೂ ವಿಸ್ತರಿಸಬೇಕೆಂಬ ಬೇಡಿಕೆ ಇದೆ.
ಹೆಲ್ತ್ ಇನ್ಷೂರೆನ್ಸ್ ತೆರಿಗೆ ವಿನಾಯಿತಿ: ಇಂದಿನ ರೋಗ ರುಜಿನಗಳ ಕಾಲಮಾನದಲ್ಲಿ ಆರೋಗ್ಯ ವಿಮೆ ಅತ್ಯಂತ ಅಗತ್ಯಗಳಲ್ಲಿ ಒಂದಾಗಿದೆ. ಆದಾಯ ತೆರಿಗೆ ಸೆಕ್ಷನ್ 80ಡಿ ಅಡಿಯಲ್ಲಿ ಆರೋಗ್ಯ ವಿಮೆ ಮೇಲಿನ ವೆಚ್ಚಕ್ಕೆ ಇರುವ ತೆರಿಗೆ ವಿನಾಯಿತಿ ಮಿತಿಯನ್ನು 1 ಲಕ್ಷ ರೂವರೆಗೂ ಏರಿಸಬೇಕು ಎಂದು ಕೇಳಿಕೊಳ್ಳಲಾಗಿದೆ.
ಇಷ್ಟೇ ಅಲ್ಲದೆ ಇನ್ನೂ ಅನೇಕ ಬೇಡಿಕೆಗಳು ಸರ್ಕಾರದ ಮುಂದಿವೆ. ಆದರೆ, ಇವುಗಳ ಪೈಕಿ ಯಾವುದನ್ನೆಲ್ಲ ಸರ್ಕಾರ ಈಡೇರಿಸಲಿದೆ? ಎಷ್ಟು ಪ್ರಮಾಣದಲ್ಲಿ ಈಡೇರಿಸಲಿದೆ ಎಂಬ ಪ್ರಶ್ನೆಗಳಿಗೆ ಫೆಬ್ರವರಿ ಒಂದರಂದು ಉತ್ತರ ದೊರೆಯಲಿದೆ.
ಬಜೆಟ್ ಸಂಬಂಧಿತ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:04 pm, Wed, 25 January 23