Budget 2023: ಬಜೆಟ್​ಗೆ ದಿನಗಣನೆ, ನಾಳೆ ಸಾಂಪ್ರದಾಯಿಕ ಹಲ್ವಾ ಸಮಾರಂಭ; ಸಿಹಿ ಹಂಚಲಿದ್ದಾರೆ ನಿರ್ಮಲಾ ಸೀತಾರಾಮನ್

|

Updated on: Jan 25, 2023 | 1:03 PM

Halwa Ceremony 2023; ಹಲ್ವಾ ಸಮಾರಂಭ ಸಾಮಾನ್ಯವಾಗಿ ಬಜೆಟ್ ಮಂಡನೆಗಿಂತ ಆರೇಳು ದಿನಗಳ ಮೊದಲು ನಡೆಯುತ್ತದೆ. ಇದಾದ ಬಳಿಕ ಸಿಬ್ಬಂದಿ ಸಂಪೂರ್ಣವಾಗಿ ಲಾಕ್ ಇನ್ ಆಗಿ ಬಜೆಟ್ ಪ್ರತಿಗಳ ತಯಾರಿಕೆಯಲ್ಲಿ ತೊಡಗಿಕೊಳ್ಳುತ್ತಾರೆ.

Budget 2023: ಬಜೆಟ್​ಗೆ ದಿನಗಣನೆ, ನಾಳೆ ಸಾಂಪ್ರದಾಯಿಕ ಹಲ್ವಾ ಸಮಾರಂಭ; ಸಿಹಿ ಹಂಚಲಿದ್ದಾರೆ ನಿರ್ಮಲಾ ಸೀತಾರಾಮನ್
ಹಲ್ವಾ ಸಮಾರಂಭದ ಸಂಗ್ರಹ ಚಿತ್ರ
Image Credit source: PTI
Follow us on

ನವದೆಹಲಿ: ಕೇಂದ್ರ ಬಜೆಟ್​ ಮಂಡನೆಗೆ ದಿನಗಣನೆ ಆರಂಭವಾಗಿದ್ದು, ಸಾಂಪ್ರದಾಯಿಕ ಹಲ್ವಾ ಸಮಾರಂಭ (Halwa Ceremony) ನಾಳೆ (ಜನವರಿ 26) ನಡೆಯಲಿದೆ. ದೆಹಲಿಯ ನಾರ್ಥ್ ಬ್ಲಾಕ್​ನಲ್ಲಿರುವ ಹಣಕಾಸು ಸಚಿವಾಲಯದ ಮುಖ್ಯ ಕಚೇರಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅಧಿಕಾರಿಗಳಿಗೆ ಹಲ್ವಾ ಹಂಚಲಿದ್ದಾರೆ. ಬಳಿಕ ಬಜೆಟ್​ ಪ್ರತಿಗಳ ಅಂತಿಮ ಹಂತದ ಸಿದ್ಧತೆ ಕಾರ್ಯಕ್ರಮ ಆರಂಭವಾಗುತ್ತದೆ. ನಂತರ ಬಜೆಟ್ ಮಂಡನೆಯಾಗುವವರೆಗೂ ಅಧಿಕಾರಿಗಳು ಕಚೇರಿಯಲ್ಲೇ ಇರಬೇಕಾಗುತ್ತದೆ. ಬಜೆಟ್ ಮಾಹಿತಿಯ ಗೋಪ್ಯತೆ ಕಾಪಾಡಿಕೊಳ್ಳುವುದಕ್ಕಾಗಿ ಈ ನಿಯಮ ಅನುಸರಿಸಲಾಗುತ್ತದೆ. ಬಜೆಟ್ ಪ್ರತಿಗಳ ಅಂತಿಮ ಹಂತದ ಸಿದ್ಧತೆಯಲ್ಲಿರುವ ಅಧಿಕಾರಿಗಳನ್ನು ಉತ್ತೇಜಿಸುವುದಕ್ಕಾಗಿ ಹಲ್ವಾ ಕಾರ್ಯಕ್ರಮವನ್ನು ಅವರಿದ್ದ ಸ್ಥಳದಲ್ಲೇ ಏರ್ಪಡಿಸಲಾಗುತ್ತದೆ. ಒಂದು ದೊಡ್ಡ ಕಡಾಯಿಯಲ್ಲಿ (ಅಡುಗೆ ಮಾಡಲು ಬಳಸುವ ದೊಡ್ಡ ಪಾತ್ರೆ) ಹಲ್ವಾ ತಯಾರಿಸಲಾಗುತ್ತದೆ. ಹಣಕಾಸು ಸಚಿವರು ಅಲ್ಲಿಗೆ ಬಂದು ಕಡಾಯಿಯಲ್ಲಿರುವ ಹಲ್ವಾ ಹೂರಣವನ್ನು ಸೌಟಿನಿಂದ ತಿರುಗಿಸುತ್ತಾರೆ. ಬಳಿಕ ಆ ಸಿಹಿಯನ್ನು ಅಲ್ಲಿನ ಎಲ್ಲಾ ಸಿಬ್ಬಂದಿಗೂ ಹಂಚುತ್ತಾರೆ. ಬಳಿಕ ಅಧಿಕಾರಿಗಳ ಲಾಕ್ ಇನ್ ಅವಧಿ ಆರಂಭವಾಗುತ್ತದೆ.

ಹಲ್ವಾ ಸಮಾರಂಭ ಸಾಮಾನ್ಯವಾಗಿ ಬಜೆಟ್ ಮಂಡನೆಗಿಂತ ಆರೇಳು ದಿನಗಳ ಮೊದಲು ನಡೆಯುತ್ತದೆ. ಇದಾದ ಬಳಿಕ ಸಿಬ್ಬಂದಿ ಸಂಪೂರ್ಣವಾಗಿ ಲಾಕ್ ಇನ್ ಆಗಿ ಬಜೆಟ್ ಪ್ರತಿಗಳ ತಯಾರಿಕೆಯಲ್ಲಿ ತೊಡಗಿಕೊಳ್ಳುತ್ತಾರೆ. ಹಣಕಾಸು ಸಚಿವರು ಹಾಗೂ ಇಲಾಖೆಯ ಕೆಲವೇ ಕೆಲವು ಮಂದಿ ಹಿರಿಯ ಅಧಿಕಾರಿಗಳನ್ನು ಬಿಟ್ಟರೆ ಬೇರಾರೂ ಕೂಡ ಆ ಕಟ್ಟಡದಿಂದ ಹೊರಗೆ ಹೋಗಲು ಅವಕಾಶ ಇರುವುದಿಲ್ಲ. ಮನೆಯವರ ಸಂಪರ್ಕದಿಂದಲೂ ಕಡಿತಗೊಂಡಿರುತ್ತಾರೆ. ಅಷ್ಟರ ಮಟ್ಟಿಗೆ ರಹಸ್ಯತನ ಕಾಪಾಡಿಕೊಳ್ಳಲಾಗುತ್ತದೆ.

ಇದನ್ನೂ ಓದಿ: ಏನಿದು ಬಜೆಟ್ ಹಲ್ವಾ ಸಮಾರಂಭ? ಇಲ್ಲಿದೆ ಪೂರ್ಣ ವಿವರ

2021ರಲ್ಲಿ ನಡೆಯದ ಹಲ್ವಾ ಸಮಾರಂಭ

2021ರಲ್ಲಿ ಕೋವಿಡ್ ಸಾಂಕ್ರಾಮಿಕದ ಕಾರಣ ಹಲ್ವಾ ಕಾರ್ಯಕ್ರಮವನ್ನು ಮೊದಲ ಬಾರಿಗೆ ಕೈಬಿಡಲಾಗಿತ್ತು. ಆದರೆ ಬಜೆಟ್ ಮುಖ್ಯ ಕೆಲಸಗಳಲ್ಲಿ ತೊಡಗಿದ ಸಿಬ್ಬಂದಿಗೆ ಆಗ ಸಿಹಿ ಹಂಚಿಕೆ ಮಾತ್ರ ಮಾಡಲಾಗಿತ್ತು. ಅಂದಹಾಗೆ, ಹಲ್ವಾ ಸಮಾರಂಭ ದಶಕಗಳಿಂದಲೂ ಆಚರಣೆಯಲ್ಲಿದೆ. ಬಜೆಟ್ ಅನ್ನು ಬಹುತೇಕ ಅಂತಿಮ ರೂಪಿಗೆ ಕೊಂಡೊಯ್ಯಲಾಗುತ್ತಿರುವ ಸಂದರ್ಭದ ಖುಷಿಯನ್ನು ಹೀಗೆ ಸಿಹಿ ತಿನಿಸುವ ಮೂಲಕ ಹಂಚಿಕೊಳ್ಳಲಾಗುತ್ತದೆ. ಜತೆಗೆ, ಸಿಬ್ಬಂದಿ ವರ್ಗದ ಲಾಕ್ ಇನ್ ಅವಧಿಯ ಏಕತಾನತೆ ಕಳೆಯುವುದಕ್ಕಾಗಿ ಹೀಗೊಂದು ಸಂಭ್ರಮ ಆಚರಿಸಲಾಗುತ್ತಿದೆ ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:03 pm, Wed, 25 January 23