
ನವದೆಹಲಿ, ಜುಲೈ 16: ಭಾರತದಲ್ಲಿ ಡಿಜಿಟಲ್ ಪಾವತಿಯ ಕ್ರಾಂತಿ ಸೃಷ್ಟಿಸಿರುವ ಯುಪಿಐ (UPI- Unified Payments Interface) ವಹಿವಾಟುಗಳ ಮೇಲೆ ಮತ್ತೊಮ್ಮೆ ಸೇವಾ ಶುಲ್ಕಗಳು ಜಾರಿಯಾಗುವ ಮುನ್ಸೂಚನೆ ಸಿಕ್ಕಿದೆ. ದೇಶದ ದೊಡ್ಡ ದೊಡ್ಡ ವ್ಯಾಪಾರ ಸಂಸ್ಥೆಗಳು ಮತ್ತು ಕಾರ್ಪೊರೇಟ್ ಕಂಪನಿಗಳು (Large Businesses) ನಡೆಸುವ ಯುಪಿಐ ವಹಿವಾಟುಗಳ ಮೇಲೆ ಎಂಡಿಆರ್ (Merchant Discount Rate – MDR), ಅಂದರೆ ವ್ಯಾಪಾರಿ ರಿಯಾಯಿತಿ ದರವನ್ನು ವಿಧಿಸುವ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿ ಯೋಚಿಸುತ್ತಿದೆ ಎಂದು ವರದಿಗಳು ತಿಳಿಸಿವೆ.
ಪ್ರಸ್ತುತ ದೇಶದಲ್ಲಿ ಯುಪಿಐ ಮೂಲಕ ಹಣ ವರ್ಗಾವಣೆ ಮಾಡುವುದು ಸಂಪೂರ್ಣ ಉಚಿತವಾಗಿದೆ. ಆದರೆ, ಯುಪಿಐ ತಂತ್ರಜ್ಞಾನ ವ್ಯವಸ್ಥೆಯನ್ನು ನಿರಂತರವಾಗಿ ನಿರ್ವಹಿಸಲು ಬ್ಯಾಂಕ್‌ಗಳು ಮತ್ತು ಹಣಕಾಸು ತಂತ್ರಜ್ಞಾನ (Fintech) ಕಂಪನಿಗಳಿಗೆ ತಗಲುವ ಭಾರಿ ವೆಚ್ಚವನ್ನು ಸರಿದೂಗಿಸಲು ಈ ಕ್ರಮಕ್ಕೆ ಮುಂದಾಗಲಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: 250 ರೂ ಸಣ್ಣ ಎಸ್ಐಪಿಗಳತ್ತ ಮುಗಿಬಿದ್ದ ಹೊಸ ಹೂಡಿಕೆದಾರರು; ಬಂದಷ್ಟೇ ವೇಗದಲ್ಲಿ ನಿರ್ಗಮನ; ಏನು ಕಾರಣ?
ಯಾವುದೇ ಒಬ್ಬ ಗ್ರಾಹಕರು ಅಂಗಡಿಯಲ್ಲಿ ಕ್ಯೂಆರ್ ಕೋಡ್ (QR Code) ಸ್ಕ್ಯಾನ್ ಮಾಡಿ ಅಥವಾ ಕಾರ್ಡ್ ಬಳಸಿ ಡಿಜಿಟಲ್ ಪಾವತಿ ಮಾಡಿದಾಗ, ಆ ಹಣವನ್ನು ಸುರಕ್ಷಿತವಾಗಿ ಪ್ರಕ್ರಿಯೆಗೊಳಿಸಲು ಬ್ಯಾಂಕ್ ಮತ್ತು ಪೇಮೆಂಟ್ ಗೇಟ್‌ವೇಗಳು ವ್ಯಾಪಾರಿಯಿಂದ ಪಡೆಯುವ ನಿರ್ದಿಷ್ಟ ಶೇಕಡಾವಾರು ಶುಲ್ಕವನ್ನು MDR (Merchant Discount Rate) ಎನ್ನಲಾಗುತ್ತದೆ. ಪ್ರಸ್ತುತ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳಿಗೆ ಈ ಶುಲ್ಕವಿದೆ, ಆದರೆ ಸಾಮಾನ್ಯ ಯುಪಿಐ ವಹಿವಾಟುಗಳಿಗೆ ಸರ್ಕಾರ ಇದನ್ನು ಶೂನ್ಯ (Zero MDR) ಮಾಡಿದೆ.
ಇದನ್ನೂ ಓದಿ: ಇಪಿಎಫ್ಒ ಅಪ್ಡೇಟ್; ಪಿಎಫ್ ಖಾತೆಗೆ ಬರುತ್ತಿದೆ ಬಡ್ಡಿ ಹಣ; ನಿಮಗೆ ಬಂದಿದೆಯಾ, ಪರಿಶೀಲಿಸುವುದು ಹೇಗೆ?
ಗ್ರಾಹಕರ ಮೇಲಾಗುವ ಪರಿಣಾಮವೇನು?
ನೇರವಾಗಿ ಗ್ರಾಹಕರಿಂದ ಯಾವುದೇ ಶುಲ್ಕ ವಸೂಲಿ ಮಾಡದಿದ್ದರೂ, ದೊಡ್ಡ ವ್ಯಾಪಾರ ಸಂಸ್ಥೆಗಳ ಮೇಲೆ ಎಂಡಿಆರ್ ಶುಲ್ಕ ಬಿದ್ದರೆ, ಅವರು ಆ ಹೊರೆಯನ್ನು ಅಂತಿಮವಾಗಿ ಉತ್ಪನ್ನಗಳ ಬೆಲೆ ಹೆಚ್ಚಿಸುವ ಮೂಲಕ ಅಥವಾ ಹೆಚ್ಚುವರಿ ಸೇವಾ ತೆರಿಗೆಯ ರೂಪದಲ್ಲಿ ಗ್ರಾಹಕರ ಮೇಲೆಯೇ ಹಾಕುವ ಸಾಧ್ಯತೆಯಂತೂ ಇರುತ್ತದೆ.
ಈ ಪ್ರಸ್ತಾವನೆಯು ಇನ್ನೂ ಆರಂಭಿಕ ಹಂತದ ಚರ್ಚೆಯಲ್ಲಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತು ಹಣಕಾಸು ಸಚಿವಾಲಯದ ಅಂತಿಮ ನಿರ್ಧಾರದ ಬಳಿಕವಷ್ಟೇ ಅಧಿಕೃತ ನಿಯಮಗಳು ಹೊರಬರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ