ಇಪಿಎಫ್‌ಒ ಅಪ್ಡೇಟ್; ಪಿಎಫ್ ಖಾತೆಗೆ ಬರುತ್ತಿದೆ ಬಡ್ಡಿ ಹಣ; ನಿಮಗೆ ಬಂದಿದೆಯಾ, ಪರಿಶೀಲಿಸುವುದು ಹೇಗೆ?
EPF accounts to get interest credited for 2025-26 year: 2025-26ರ ವರ್ಷಕ್ಕೆ ದೇಶಾದ್ಯಂತ 34 ಕೋಟಿ ಇಪಿಎಫ್ ಖಾತೆಗಳಿಗೆ ಶೇ. 8.25ರ ವಾರ್ಷಿಕ ದರದಲ್ಲಿ ಬಡ್ಡಿ ಹಣ ಜಮೆ ಮಾಡಲಾಗುತ್ತಿದೆ. ಹತ್ತಿರ ಹತ್ತಿರ ಒಂದೂವರೆ ಲಕ್ಷ ಕೋಟಿ ರೂನಷ್ಟು ಮೊತ್ತದ ಬಡ್ಡಿ ಹಣ ವರ್ಗಾವಣೆ ಆಗುತ್ತಿದೆ. ನಿಮ್ಮ ಪಿಎಫ್ ಅಕೌಂಟ್ಗೆ ಬಡ್ಡಿ ಬಂದಿದೆಯಾ, ಬ್ಯಾಲನ್ಸ್ ಎಷ್ಟಿದೆ ಎಂದು ಪರಿಶೀಲಿಸಲು ಕೆಲ ಮಾರ್ಗಗಳಿವೆ.

ನವದೆಹಲಿ, ಜುಲೈ 16: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (EPFO) ಕೋಟ್ಯಂತರ ಪಿಎಫ್ ಚಂದಾದಾರರ ಖಾತೆಗಳಿಗೆ 2025-26ನೇ ಹಣಕಾಸು ವರ್ಷದ ವಾರ್ಷಿಕ ಬಡ್ಡಿಯನ್ನು ಜಮೆ ಮಾಡಲು ನಿನ್ನೆಯೇ (ಜುಲೈ 15) ಅಧಿಕೃತವಾಗಿ ಚಾಲನೆ ನೀಡಿದೆ. ಈ ಬಾರಿ ಇಪಿಎಫ್‌ಒ ಕೇಂದ್ರಿಕೃತ ಐಟಿ ವ್ಯವಸ್ಥೆಯ (CITES) ಅಡಿಯಲ್ಲಿ ಸ್ವಯಂಚಾಲಿತವಾಗಿ ಒಂದೇ ಬ್ಯಾಚ್‌ನಲ್ಲಿ ಸುಮಾರು 34 ಕೋಟಿ ಖಾತೆಗಳಿಗೆ ಶೇ. 8.25 ರಷ್ಟು ಬಡ್ಡಿದರದ ಹಣವನ್ನು ಜಮೆ ಮಾಡುತ್ತಿದೆ.
ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವೀಯ ಅವರ ಪ್ರಕಾರ, ಒಟ್ಟು 1.44 ಲಕ್ಷ ಕೋಟಿ ರೂಪಾಯಿಗೂ ಅಧಿಕ ಬಡ್ಡಿ ಹಣವನ್ನು ಅರ್ಹ ಚಂದಾದಾರರ ಖಾತೆಗಳಿಗೆ ವರ್ಗಾಯಿಸಲಾಗುತ್ತಿದೆ. ನಿಮ್ಮ ಖಾತೆಗೆ ಬಡ್ಡಿ ಹಣ ಜಮೆಯಾಗಿದೆಯೇ ಇಲ್ಲವೇ ಎಂಬುದನ್ನು ಮನೆಯಲ್ಲೇ ಕುಳಿತು ಸುಲಭವಾಗಿ ಪರಿಶೀಲಿಸಲು 4 ಸರಳ ಮಾರ್ಗಗಳು ಇಲ್ಲಿವೆ:
ಪಿಎಫ್ ಬ್ಯಾಲೆನ್ಸ್ ಪರಿಶೀಲಿಸುವ 4 ಸುಲಭ ವಿಧಾನಗಳು
1. ಇಪಿಎಫ್‌ಒ ಪೋರ್ಟಲ್ ಮೂಲಕ ಪಿಎಫ್ ಬ್ಯಾಲನ್ಸ್ ಪರಿಶೀಲನೆ:
- ಮೊದಲಿಗೆ ಇಪಿಎಫ್‌ಒ ಅಧಿಕೃತ ಪಾಸ್‌ಬುಕ್ ಪೋರ್ಟಲ್‌ಗೆ (EPFO Member Passbook) ಭೇಟಿ ನೀಡಿ: unifiedportal-mem.epfindia.gov.in
- ನಿಮ್ಮ 12 ಅಂಕಿಯ ಯುಎಎನ್ (UAN) ಸಂಖ್ಯೆ, ಪಾಸ್‌ವರ್ಡ್ ಮತ್ತು ಕ್ಯಾಪ್ಚಾ ಕೋಡ್ ನಮೂದಿಸಿ ಲಾಗಿನ್ ಆಗಿ.
- ನಿಮ್ಮ ಆಧಾರ್ ಲಿಂಕ್ ಆಗಿರುವ ಮೊಬೈಲ್‌ಗೆ ಬರುವ ಒಟಿಪಿ (OTP) ನಮೂದಿಸಿ ವೆರಿಫೈ ಮಾಡಿ.
- ಲಾಗಿನ್ ಆದ ನಂತರ ‘View’ ವಿಭಾಗಕ್ಕೆ ಹೋಗಿ ‘Passbook Lite’ ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ಇತ್ತೀಚಿನ ಪಿಎಫ್ ಕೊಡುಗೆಗಳು ಮತ್ತು ಜಮೆಯಾಗಿರುವ ಬಡ್ಡಿಯ ವಿವರಗಳನ್ನು ಕಾಣಬಹುದು.
ಇದನ್ನೂ ಓದಿ: ಐಟಿ ರಿಟರ್ನ್ಸ್ ಸಲ್ಲಿಸಲು ಜುಲೈ 31 ಕೊನೆಯ ದಿನ; ಡೆಡ್ಲೈನ್ ಮಿಸ್ ಆದರೆ ಏನೆಲ್ಲಾ ದಂಡ, ಶುಲ್ಕಗಳಿವೆ ಗೊತ್ತಾ?
2. ಉಮಾಂಗ್ ಆಪ್ ಮೂಲಕ ಪಿಎಫ್ ಬ್ಯಾಲನ್ಸ್ ಪರಿಶೀಲನೆ:
- ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸರ್ಕಾರದ ಅಧಿಕೃತ ‘UMANG’ ಆಪ್ ಅನ್ನು ಡೌನ್‌ಲೋಡ್ ಮಾಡಿ ಓಪನ್ ಮಾಡಿ.
- ಆಪ್‌ನಲ್ಲಿ ಲಭ್ಯವಿರುವ ಸೇವೆಗಳಲ್ಲಿ ‘EPFO’ ಆಯ್ಕೆ ಮಾಡಿ.
- ಮುಂದೆ ‘Employee Centric Services’ ಅಡಿಯಲ್ಲಿ ‘View Passbook’ ಕ್ಲಿಕ್ ಮಾಡಿ.
- ನಿಮ್ಮ UAN ಸಂಖ್ಯೆಯನ್ನು ನಮೂದಿಸಿ, ಮೊಬೈಲ್‌ಗೆ ಬರುವ OTP ದಾಖಲಿಸಿದರೆ ನಿಮ್ಮ ಒಟ್ಟು ಪಿಎಫ್ ಬ್ಯಾಲೆನ್ಸ್ ಪರದೆಯ ಮೇಲೆ ಮೂಡುತ್ತದೆ. ಇಲ್ಲಿಂದ ನೀವು ಪಾಸ್‌ಬುಕ್ ಅನ್ನು PDF ರೂಪದಲ್ಲೂ ಡೌನ್‌ಲೋಡ್ ಮಾಡಿಕೊಳ್ಳಬಹುದು.
3. ಮಿಸ್ಡ್ ಕಾಲ್ ಮೂಲಕ ಪಿಎಫ್ ಬ್ಯಾಲನ್ಸ್ ಪರಿಶೀಲನೆ:
ನಿಮ್ಮ ಮೊಬೈಲ್‌ನಲ್ಲಿ ಇಂಟರ್ನೆಟ್ ಇಲ್ಲದಿದ್ದರೂ ಕೇವಲ ಒಂದು ಮಿಸ್ಡ್ ಕಾಲ್ (Missed Call) ನೀಡಿ ಬ್ಯಾಲೆನ್ಸ್ ತಿಳಿಯಬಹುದು.
- ನಿಮ್ಮ UAN ಸಂಖ್ಯೆಗೆ ನೋಂದಾಯಿತವಾಗಿರುವ ಮೊಬೈಲ್ ಸಂಖ್ಯೆಯಿಂದ 9966044425 ಗೆ ಮಿಸ್ಡ್ ಕಾಲ್ ಕೊಡಿ.
- ಎರಡು ರಿಂಗ್ ಆದ ನಂತರ ಕರೆ ಸ್ವಯಂಚಾಲಿತವಾಗಿ ಕಟ್ ಆಗುತ್ತದೆ.
ಕೆಲವೇ ಸೆಕೆಂಡುಗಳಲ್ಲಿ ಇಪಿಎಫ್‌ಒನಿಂದ ನಿಮ್ಮ ಫೋನ್‌ಗೆ ಎಸ್‌ಎಂಎಸ್ ಬರಲಿದ್ದು, ಅದರಲ್ಲಿ ನಿಮ್ಮ ಕೊನೆಯ ಕೊಡುಗೆ ಮತ್ತು ಒಟ್ಟು ಬ್ಯಾಲೆನ್ಸ್ ವಿವರ ಇರುತ್ತದೆ. ಈ ಸೇವೆ ಸಿಗಬೇಕೆಂದರೆ ನಿಮ್ಮ UAN ನೊಂದಿಗೆ ಆಧಾರ್, ಪ್ಯಾನ್ ಮತ್ತು ಬ್ಯಾಂಕ್ ಖಾತೆ ಲಿಂಕ್ ಆಗಿರಬೇಕು.
ಇದನ್ನೂ ಓದಿ: ಹೊಸ ಐಆರ್ಸಿಟಿಸಿ ವೆಬ್ಸೈಟ್ ಸಿದ್ಧ; ಬೀಟಾ ಆವೃತ್ತಿ ಬಿಡುಗಡೆ; ರೈಲ್ವೆ ಟಿಕೆಟ್ ಬುಕಿಂಗ್ ಇನ್ಮುಂದೆ ಸರಳ
4. ಕೇವಲ ಒಂದು ಎಸ್‌ಎಂಎಸ್ (SMS) ಕಳುಹಿಸುವ ಮೂಲಕ:
ಚಂದಾದಾರರು ತಮ್ಮ ನೋಂದಾಯಿತ ಮೊಬೈಲ್‌ನಿಂದ ಮೆಸೇಜ್ ಕಳುಹಿಸುವ ಮೂಲಕವೂ ಮಾಹಿತಿ ಪಡೆಯಬಹುದು.
ನಿಮ್ಮ ಮೊಬೈಲ್‌ನ ಮೆಸೇಜ್ ಬಾಕ್ಸ್‌ನಲ್ಲಿ EPFOHO UAN KAN ಎಂದು ಟೈಪ್ ಮಾಡಿ (ಇಲ್ಲಿ UAN ಜಾಗದಲ್ಲಿ ನಿಮ್ಮ 12 ಅಂಕಿಯ ನೈಜ ಯುಎಎನ್ ಸಂಖ್ಯೆ ಬರೆಯಿರಿ. ಕೊನೆಯಲ್ಲಿ ‘KAN’ ಎಂದು ಬರೆದರೆ ನಿಮಗೆ ಕನ್ನಡದಲ್ಲೇ ಮಾಹಿತಿ ಸಿಗುತ್ತದೆ).
ಈ ಸಂದೇಶವನ್ನು 7738299899 ಸಂಖ್ಯೆಗೆ ಕಳುಹಿಸಿ. ತಕ್ಷಣವೇ ನಿಮ್ಮ ಖಾತೆಯ ವಿವರಗಳು ಎಸ್‌ಎಂಎಸ್ ಮೂಲಕ ಲಭ್ಯವಾಗುತ್ತವೆ.
ಬಡ್ಡಿ ಜಮೆ ವಿಳಂಬವಾದರೆ ನಷ್ಟವಿಲ್ಲ
ಒಂದು ವೇಳೆ ನಿಮ್ಮ ಖಾತೆಗೆ ತಾಂತ್ರಿಕ ಕಾರಣಗಳಿಂದ ಬಡ್ಡಿ ಹಣ ತಡವಾಗಿ ಕ್ರೆಡಿಟ್ ಆದರೂ ಚಂದಾದಾರರಿಗೆ ಯಾವುದೇ ನಷ್ಟವಾಗುವುದಿಲ್ಲ. ಇಪಿಎಫ್ ನಿಯಮಾವಳಿಗಳ ಪ್ರಕಾರ, ಬಡ್ತಿಯನ್ನು ನಿಮ್ಮ ಮಾಸಿಕ ಚಾಲ್ತಿ ಬ್ಯಾಲೆನ್ಸ್ ಮೇಲೆಯೇ ಲೆಕ್ಕ ಹಾಕಲಾಗುವುದರಿಂದ, ಹಣ ತಡವಾಗಿ ಕಾಣಿಸಿಕೊಂಡರೂ ಪೂರ್ಣ ಬಡ್ಡಿ ಮೊತ್ತ ಸುರಕ್ಷಿತವಾಗಿ ಖಾತೆ ಸೇರಲಿದೆ ಎಂದು ಇಪಿಎಫ್‌ಒ ಸ್ಪಷ್ಟಪಡಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




