ಬೆಂಗಳೂರು: ಯುಪಿಐ ಆಧರಿತ ಪೇಮೆಂಟ್ (United Payments Interface – UPI) ಮೇಲೆ ಯಾವುದೇ ಶುಲ್ಕ ವಿಧಿಸುವುದಿಲ್ಲ’ ಎಂದು ಕೇಂದ್ರ ಹಣಕಾಸು ಇಲಾಖೆಯು (Union Finance Ministry) ಸ್ಪಷ್ಟಪಡಿಸಿದೆ. ಈ ಮೂಲಕ ದೊಡ್ಡಮಟ್ಟದಲ್ಲಿ ವಿವಾದವಾಗಿ ಬೆಳೆಯಬಹುದಾಗಿದ್ದ ವಿಚಾರವನ್ನು ಆರಂಭದಲ್ಲಿಯೇ ತಣ್ಣಗಾಗಿಸಿದೆ. ‘ಡಿಜಿಟಲ್ ಸೇವೆಗಳನ್ನು (Digital Transaction) ಒದದಿಸುವ ಸೇವಾದಾತರಿಗೆ ತುಸು ಖರ್ಚು ಬರುವುದು ನಿಜ. ಈ ಖರ್ಚು ಭರಿಸಲು ಪರ್ಯಾಯ ಮಾರ್ಗಗಳನ್ನು ಹುಡುಕಬೇಕಿದೆ. ಒಟ್ಟಾರೆಯಾಗಿ ಡಿಜಿಟಲ್ ವಹಿವಾಟು ಹೆಚ್ಚಾಗುವುದು ಸಮಾಜ ಹಾಗೂ ಉತ್ಪಾದಕತೆಗೆ ಹಲವು ರೀತಿಯಲ್ಲಿ ಅನುಕೂಲವಾಗಿದೆ. ಡಿಜಿಟಲ್ ಪಾವತಿಗಳಿಗೆ ಪೂರಕ ವ್ಯವಸ್ಥೆ ಕಲ್ಪಿಸಲು ಕೇಂದ್ರ ಸರ್ಕಾರವು ಕಳೆದ ವರ್ಷ ಹಲವು ನೆರವು ನೀಡಿತ್ತು. ಆ ನೆರವನ್ನು ಈ ವರ್ಷವೂ ಮುಂದುವರಿಸಲಿದೆ’ ಎಂದು ಹಣಕಾಸು ಇಲಾಖೆ ಹೇಳಿದೆ.
ಡಿಜಿಟಲ್ ವಹಿವಾಟಿನ ಪ್ರಮಾಣ ಹೆಚ್ಚಾಗುತ್ತಿರುವಂತೆಯೇ ಯುಪಿಐ ಸೇರಿದಂತೆ ವಿವಿಧ ರೀತಿಯ ಪಾವತಿ ಮತ್ತು ಸ್ವೀಕೃತಿಗಳಿಗೆ (Payments and Receipts) ಶುಲ್ಕ ವಿಧಿಸುವ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India – RBI) ಕರಡು ಪ್ರಸ್ತಾವವೊಂದನ್ನು ಜನರ ಮುಂದಿಟ್ಟು ಪ್ರತಿಕ್ರಿಯೆ ಆಹ್ವಾನಿಸಿತ್ತು. ‘ಪ್ರತಿ ವಹಿವಾಟಿಗೂ ಡಿಜಿಟಲ್ ಸೇವಾದಾತರಿಗೆ ಒಂದಿಷ್ಟು ಖರ್ಚು ಬರುತ್ತದೆ. ಅದನ್ನು ಬಳಕೆದಾರರೇ ತುಂಬಬೇಕು’ ಎನ್ನುವುದು ರಿಸರ್ವ್ ಬ್ಯಾಂಕ್ ವಾದವಾಗಿತ್ತು. ಈ ಪ್ರಸ್ತಾವಕ್ಕೆ ಜನರಿಂದ ವಿರೋಧ ವ್ಯಕ್ತವಾಗಿತ್ತು. ‘ಡಿಜಿಟಲ್ ಆರ್ಥಿಕತೆಯಿಂದ ಹಲವು ಅನುಕೂಲ ಎಂದು ಮೂಗಿಗೆ ತುಪ್ಪ ಸವರಿದಿರಿ. ಈಗ ನೋಡಿದರೆ ನಮ್ಮ ಜೇಬಿನ ದುಡ್ಡಿನಲ್ಲಿಯೂ ಪಾಲು ಕೇಳುತ್ತಿದ್ದೀರಿ. ನಾವು ನಗದು ಚಲಾವಣೆ ಮಾಡಿಕೊಂಡೇ ನೆಮ್ಮದಿಯಾಗಿರುತ್ತೇವೆ’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಜನರ ಪ್ರತಿ ಉಸಿರಿಗೆ ತೆರಿಗೆ ಹಾಕುವ ಅಪಾಯವಿದೆ: UPI ಸೇರಿ ಎಲ್ಲ ಡಿಜಿಟಲ್ ಪಾವತಿಗೆ ಶುಲ್ಕದ ಪ್ರಸ್ತಾವಕ್ಕೆ ತೀವ್ರ ವಿರೋಧ
ಡಿಬಿಟ್ ಕಾರ್ಡ್ ಆಧರಿತ ನಗದು ವರ್ಗಾವಣೆ ಮತ್ತು ಯುಪಿಐ ಆಧರಿತ ಹಣಕಾಸಿನ ವಹಿವಾಟಿಗೆ ಆಗುತ್ತಿರುವ ವೆಚ್ಚವನ್ನು ಭರ್ತಿ ಮಾಡಿಕೊಳ್ಳುವ ದೃಷ್ಟಿಯಿಂದ ಅಲ್ಪ ಪ್ರಮಾಣದ ಶುಲ್ಕ ವಿಧಿಸುವ ಸಾಧ್ಯತೆಯನ್ನು ಪರಿಶೀಲಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಮುಂದಾಗಿತ್ತು. ಪ್ರತಿ ವಹಿವಾಟಿಗೆ ಇಂತಿಷ್ಟು ಮೊತ್ತ ಎಂದು ನಿಗದಿಪಡಿಸುವ ಸಾಧ್ಯತೆಯನ್ನೂ ಪರಿಶೀಲಿಸಲು ಆರ್ಬಿಐ ಚಿಂತನೆ ನಡೆಸಿತ್ತು. ‘ಪಾವತಿ ವ್ಯವಸ್ಥೆಗೆ ಶುಲ್ಕಗಳು’ ಹೆಸರಿನ ಕರಡು ಪ್ರಸ್ತಾವ ಪ್ರಕಟಿಸಿದ್ದ ಆರ್ಬಿಐ ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಿತ್ತು. ಒಂದು ವೇಳೆ ಆರ್ಬಿಐನ ಈ ಚಿಂತನೆ ಕಾರ್ಯರೂಪಕ್ಕೆ ಬಂದಿದ್ದರೆ ಫೋನ್ ಪೆ, ಗೂಗಲ್ ಪೆ, ಭೀಮ್ ಸೇರಿದಂತೆ ಆ್ಯಪ್ಗಳ ಮೂಲಕ ನಡೆಯುವ ಯುಪಿಐ ಆಧರಿತ ಪೇಮೆಂಟ್ ವ್ಯವಸ್ಥೆಗೆ ಶುಲ್ಕ ವಿಧಿಸಲಾಗುತ್ತಿತ್ತು.
UPI is a digital public good with immense convenience for the public & productivity gains for the economy. There is no consideration in Govt to levy any charges for UPI services. The concerns of the service providers for cost recovery have to be met through other means. (1/2)
— Ministry of Finance (@FinMinIndia) August 21, 2022
ಆರ್ಬಿಐ ಪ್ರಸ್ತಾವವನ್ನು ತೀವ್ರವಾಗಿ ವಿರೋಧಿಸಿದ್ದ ಚಿಂತಕ ರಾಜಾರಾಂ ತಲ್ಲೂರು, ‘ಸಾಂಪ್ರದಾಯಿಕ ಬ್ಯಾಂಕಿಂಗ್ನಿಂದ ಬರುವ ಆದಾಯ ಬರುತ್ತಿದ್ದರೂ (ಅಂದರೆ ಸಾಲದ ಬಡ್ಡಿ, ಠೇವಣಿಯ ಮರು ಹೂಡಿಕೆ, ಬ್ಯಾಂಕಿಂಗ್ ಸೇವೆಗಳಿಗೆ ವಿಧಿಸುವ ವೆಚ್ಚ) ಇಲ್ಲಿಯ ತನಕ ಇಷ್ಟೆಲ್ಲ ವೆಚ್ಚ ಕಡಿತ ಪ್ರಯತ್ನ ಮಾಡಿ ಕೂಡ ನಿಮ್ಮ ಹೊಟ್ಟೆ ತುಂಬಿಲ್ಲ ಯಾಕೆ? ಈಗ ಜನ ತಮ್ಮ ಕಿಸೆಯಲ್ಲಿಟ್ಟುಯ್ಕೊಂಡು ತಿರುಗುವ ದುಡ್ಡನ್ನೂ ಡಿಜಿಟಲ್ ಮಾಡಿ, ಅದರಲ್ಲೂ ಪಾಲಿಗೆ ಬರುತ್ತಿದ್ದೀರಲ್ಲಾ ಉದ್ದೇಶ ಏನು’ ಎಂದು ಕಟುವಾಗಿ ಪ್ರಶ್ನಿಸಿದ್ದರು.
ಇದನ್ನೂ ಓದಿ: UPI: ಫೋನ್ ಪೆ, ಗೂಗಲ್ ಪೆ, ಭೀಮ್ ವಹಿವಾಟು ಆಗಬಹುದು ದುಬಾರಿ; ಯುಪಿಐ ಆಧರಿತ ವಹಿವಾಟಿಗೆ ಶುಲ್ಕ ವಿಧಿಸಲು ಆರ್ಬಿಐ ಚಿಂತನೆ
ಇದೀಗ ಕೇಂದ್ರ ಸರ್ಕಾರವು ಆರ್ಬಿಐ ಪ್ರಸ್ತಾವಕ್ಕೆ ‘ಇಲ್ಲ’ ಎಂದು ಸ್ಪಷ್ಟವಾಗಿ ಹೇಳುವ ಮೂಲಕ ಯುಪಿಐ ಪಾವತಿ ಮತ್ತು ಸ್ವೀಕೃತಿಗಳು ಈ ಮೊದಲಿನಂತೆಯೇ ಉಚಿತವಾಗಿರುತ್ತವೆ. ಡಿಜಿಟಲ್ ಆರ್ಥಿಕತೆಯನ್ನು ಬೆಳೆಸಲು ಇದು ಸಹಕಾರಿ ಎಂದು ಕೇಂದ್ರ ಹಣಕಾಸು ಇಲಾಖೆ ತಿಳಿಸಿದೆ.
ದೇಶದಲ್ಲಿ ಪ್ರಸ್ತುತ 338 ಬ್ಯಾಂಕುಗಳು ಯುಪಿಐ ಸೇವಾ ವ್ಯವಸ್ಥೆಯಲ್ಲಿ ನೋಂದಾಯಿಸಿಕೊಂಡಿವೆ. ಪ್ರತಿದಿನ 21 ಕೋಟಿಗೂ ಹೆಚ್ಚಿನ ಮೊತ್ತದ ವಹಿವಾಟು ನಡೆಯುತ್ತಿದೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ ಅಂಕಿಅಂಶಗಳ ತಿಳಿಸುತ್ತವೆ.
ಹಣಕಾಸು, ಉದ್ಯಮಗಳಿಗೆ ಸಂಬಂಧಿಸಿದ ಮತ್ತಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:10 am, Mon, 22 August 22