
ನವದೆಹಲಿ, ಡಿಸೆಂಬರ್ 11: ಅಮೆರಿಕದ ಸೆಂಟ್ರಲ್ ಬ್ಯಾಂಕ್ ಆಗಿರುವ ಫೆಡರಲ್ ರಿಸರ್ವ್ ಸಂಸ್ಥೆ (US Fed Reserve) ತನ್ನ ಬಡ್ಡಿದರವನ್ನು 25 ಮೂಲಾಂಕಗಳಷ್ಟು ಇಳಿಸಿದೆ. ಶೇ. 3.75-4.00ರ ಶ್ರೇಣಿಯಲ್ಲಿದ್ದ ಬಡ್ಡಿದರವನ್ನು ಶೇ. 3.50-3.75ಕ್ಕೆ ಇಳಿಸಿದೆ. ಈ 25 ಮೂಲಾಂಕಗಳಷ್ಟು ಬಡ್ಡಿದರ ಇಳಿಕೆ ನಿರೀಕ್ಷಿತವೇ ಇತ್ತಾದ್ದರಿಂದ ಅಮೆರಿಕ ಹಾಗೂ ಜಾಗತಿಕ ಮಾರುಕಟ್ಟೆಗಳ ಪ್ರತಿಕ್ರಿಯೆಯಲ್ಲಿ ಹೆಚ್ಚಿನ ಏರುಪೇರಾಗಿಲ್ಲ, ಆಗುವುದೂ ಇಲ್ಲ ಎಂಬುದು ಗಮನಾರ್ಹ.
ಅಮೆರಿಕದ ಫೆಡರಲ್ ರಿಸರ್ವ್ನ ಛೇರ್ಮನ್ ಜಿರೋಮ್ ಪೋವೆಲ್ ಅವರು ಸಭೆಯ ನಿರ್ಧಾರಗಳನ್ನು ಪ್ರಟಿಸುವಾಗ ಕೆಲ ಸುಳಿವುಗಳನ್ನು ಕೊಟ್ಟಿದ್ದಾರೆ. ಹಣದುಬ್ಬರ ನಿಯಂತ್ರಣದಲ್ಲಿರುವುದಕ್ಕೆ ಸಮಾಧಾನಗೊಂಡಿರುವ ಅವರು, ಅಲ್ಲಿಯ ನಿರುದ್ಯೋಗ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸರ್ಕಾರವು ಉದ್ಯೋಗ ದತ್ತಾಂಶವನ್ನು ತಿರುಚುತ್ತಿದೆ. ಪೇರೋಲ್ ಬೆಳವಣಿಗೆ ಮೈನಸ್ನಲ್ಲಿರಬಹುದು ಎಂದು ಪೋವೆಲ್ ಅನುಮಾನಿಸಿದ್ದಾರೆ. ಅಂದರೆ, ನಿರುದ್ಯೋಗ ಹೆಚ್ಚುತ್ತಿರಬಹುದು ಎಂಬುದು ಅವರ ಸಂದೇಹ.
ಇದನ್ನೂ ಓದಿ: ಅಮೌಂಟು, ಟ್ಯಾಲೆಂಟು ಎರಡೂ ಇದ್ರೆ ಮಾತ್ರ ತೆರೆಯುತ್ತೆ ಅಮೆರಿಕದ ಗೇಟು; ಇಲ್ಲಿದೆ ಟ್ರಂಪ್ ಗೋಲ್ಡ್ ಕಾರ್ಡ್ ವೀಸಾ ರೇಟು
ಅಮೆರಿಕದ ನಿರುದ್ಯೋಗ ಹೆಚ್ಚುತ್ತಿದೆ ಎಂದಲ್ಲಿ ಫೆಡರಲ್ ರಿಸರ್ವ್ ತನ್ನ ಮುಂದಿನ ಸಭೆಗಳಲ್ಲಿ ಬಡ್ಡಿದರ ಕಡಿತಕ್ಕೆ ಕೈ ಹಾಕಲು ಮುಂದಾಗಬಹುದು. ಅಷ್ಟೇ ಅಲ್ಲ, ಜಿರೋಮ್ ಪೋವೆಲ್ ಅವರ ಅಧಿಕಾರಾವಧಿ ಮುಗಿಯಲಿದ್ದು, ಮುಂದಿನ ಅಧ್ಯಕ್ಷರು ದರಕಡಿತಕ್ಕೆ ಒಲವು ತೋರುವ ಸಾಧ್ಯತೆ ಹೆಚ್ಚಿದೆ ಎಂದು ತಜ್ಞರು ಭಾವಿಸಿದ್ದಾರೆ. 2026ರಲ್ಲಿ ಒಮ್ಮೆ ಬಡ್ಡಿದರ ಕಡಿತ ಆಗುವ ನಿರೀಕ್ಷೆ ಇದೆ.
ಫೆಡರಲ್ ರಿಸರ್ವ್ನ ಇವತ್ತಿನ ನಿರ್ಧಾರದಲ್ಲಿ 25 ಮೂಲಾಂಕಗಳಷ್ಟು ಬಡ್ಡಿದರ ಇಳಿಸಲಾಗಿದೆ. ಮಾರುಕಟ್ಟೆಗಳು ಇದನ್ನು ಮೊದಲೇ ನಿರೀಕ್ಷಿಸಿದ್ದವಾದ್ದರಿಂದ ಹೆಚ್ಚಿನ ವ್ಯತ್ಯಯವಾಗಿಲ್ಲ. ಆದರೆ, ದರ ಇಳಿಕೆಯಿಂದ ಡಾಲರ್ ತುಸು ಮೃದುಗೊಳ್ಳಬಹುದು. ಇದರ ಪರಿಣಾಮವಾಗಿ ಚಿನ್ನ, ಬೆಳ್ಳಿಯಂತಹ ವಸ್ತುಗಳ ಮೇಲೆ ಹೂಡಿಕೆಗಳು ಹೆಚ್ಚಾಗಬಹುದು. ಅವುಗಳ ಬೆಲೆ ಏರಬಹುದು ಎಂದು ತಜ್ಞರು ನಿರೀಕ್ಷಿಸಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಶೇ. 19, ಭಾರತಕ್ಕೆ ಶೇ. 50 ಸುಂಕ ಹಾಕಿದ್ದೇಕೆ ಅಮೆರಿಕ? ರಘುರಾಮ್ ರಾಜನ್ ಹೇಳಿದ್ದಿದು
ಭಾರತದ ಮಾರುಕಟ್ಟೆಗಳ ಮೇಲೆ ಹೆಚ್ಚಿನ ಪ್ರಭಾವ ಬೀರುವುದು ಅಮೆರಿಕದ ಬಡ್ಡಿದರ ಕಡಿತ ಅಲ್ಲ, ಬದಲಾಗಿ ವ್ಯಾಪಾರ ಒಪ್ಪಂದ. ಟ್ರೇಡ್ ಡೀಲ್ ಏರ್ಪಟ್ಟು ಎರಡೂ ಕಡೆಗಳಿಗೆ ಸಮಾಧಾನವಾಗುವ ರೀತಿಯಲ್ಲಿ ಒಪ್ಪಂದ ಆಗಿಬಿಟ್ಟರೆ ಮಾರುಕಟ್ಟೆ ಜಿಗಿಜಿಗಿಯಬಹುದು. ಭಾರತ-ಅಮೆರಿಕ ನಡುವೆ ಉತ್ತಮವಾದ ವ್ಯಾಪಾರ ಒಪ್ಪಂದ ಏರ್ಪಟ್ಟು, ಭಾರತದ ಮೇಲಿನ ಟ್ಯಾರಿಫ್ ಶೇ. 20ಕ್ಕಿಂತಲೂ ಕಡಿಮೆಗೆ ತಗ್ಗಲಿ ಎಂದು ಭಾರತೀಯ ಮಾರುಕಟ್ಟೆ ಕಾತರದಿಂದ ಎದುರುನೋಡುತ್ತಿರುವುದು ಹೌದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ