ಪಾಕಿಸ್ತಾನಕ್ಕೆ ಶೇ. 19, ಭಾರತಕ್ಕೆ ಶೇ. 50 ಸುಂಕ ಹಾಕಿದ್ದೇಕೆ ಅಮೆರಿಕ? ರಘುರಾಮ್ ರಾಜನ್ ಹೇಳಿದ್ದಿದು
Raghuram Rajan speaks at Zurich University event: ರಷ್ಯನ್ ತೈಲ ಖರೀದಿ ಮಾಡುತ್ತಿರುವುದಕ್ಕೆ ಶಾಸ್ತಿಯಾಗಿ ಭಾರತದ ಮೇಲೆ ಟ್ಯಾರಿಫ್ ಹಾಕಿದ್ದಾಗಿ ಅಮೆರಿಕ ಹೇಳಿದೆ. ಆದರೆ, ಆರ್ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಪ್ರಕಾರ, ಭಾರತದ ಮೇಲೆ ಟ್ಯಾರಿಫ್ ಹಾಕಲು ರಷ್ಯನ್ ತೈಲ ಖರೀದಿ ಕಾರಣ ಅಲ್ಲ. ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಘರ್ಷ ಅಂತ್ಯಕ್ಕೆ ತಾನು ಕಾರಣ ಎಂದು ಡೊನಾಲ್ಡ್ ಟ್ರಂಪ್ ಹೇಳಿಕೆಗಳನ್ನು ಸರಿಯಾಗಿ ನಿರ್ವಹಿಸದೇ ಇದ್ದದ್ದು ಕಾರಣ ಎಂದು ರಾಜನ್ ಹೇಳಿದ್ದಾರೆ.

ನವದೆಹಲಿ, ಡಿಸೆಂಬರ್ 10: ಭಾರತದ ಮೇಲೆ ಅಮೆರಿಕ ಶೇ. 50ರಷ್ಟು ಟ್ಯಾರಿಫ್ ಹಾಕಿರುವುದು ಬಹಳಷ್ಟು ಅಂತಾರಾಷ್ಟ್ರೀಯ ರಾಜಕೀಯ ತಜ್ಞರಿಗೆಯೇ ಅಚ್ಚರಿ ಮೂಡಿಸಿದೆ. ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಂಡಿಲ್ಲವೆಂದು, ಹಾಗೂ ರಷ್ಯಾದ ತೈಲವನ್ನು ಖರೀದಿಸಲಾಗುತ್ತಿದೆ ಎಂದೂ ಕಾರಣ ನೀಡಿ ಭಾರತದ ಮೇಲೆ ಡೊನಾಲ್ಡ್ ಟ್ರಂಪ್ ಶೇ. 50ರಷ್ಟು ಸುಂಕ ಹೇರಿದ್ದಾರೆ. ಆದರೆ, ಆರ್ಥಿಕ ತಜ್ಞ ಹಾಗೂ ಮಾಜಿ ಆರ್ಬಿಐ ಗವರ್ನರ್ ರಘುರಾಮ್ ರಾಜನ್ (Raghuram Rajan) ಪ್ರಕಾರ, ಭಾರತದ ಮೇಲೆ ಅಮೆರಿಕ ಟ್ಯಾರಿಫ್ ಹಾಕಲು ಬೇರೆಯೇ ಕಾರಣವಿದೆ.
ಸ್ವಿಟ್ಜರ್ಲ್ಯಾಂಡ್ನ ಜೂರಿಚ್ ಯೂನಿವರ್ಸಿಟಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ರಘುರಾಮ್ ರಾಜನ್, ಭಾರತದ ಮೇಲೆ ಅಮೆರಿಕ ಟ್ಯಾರಿಫ್ ಹಾಕಲು ಆಪರೇಷನ್ ಸಿಂದೂರ್ ಕಾರಣವಾಯಿತು ಎಂದಿದ್ದಾರೆ.
ಟ್ರಂಪ್ ಅವರನ್ನು ನಿರ್ವಹಿಸಿ ಪಾಕಿಸ್ತಾನ ಗೆದ್ದಿತು…
ಆಪರೇಷನ್ ಸಿಂದೂರ್ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಭಾವ್ಯ ಯುದ್ಧವನ್ನು ತಾನು ತಪ್ಪಿಸಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಾರಿ ಬಾರಿ ಹೇಳುತ್ತಲೇ ಬಂದಿದ್ದಾರೆ. ಪಾಕಿಸ್ತಾನವು ಈ ವಿಚಾರದಲ್ಲಿ ಟ್ರಂಪ್ ಅವರಿಗೆ ಬಹಿರಂಗವಾಗಿಯೇ ಥ್ಯಾಂಕ್ಸ್ ಹೇಳಿದೆ. ಆದರೆ, ಆಪರೇಷನ್ ಸಿಂದೂರ್ ನಿಲ್ಲಲು ಅಮೆರಿಕ ಕಾರಣ ಅಲ್ಲ, ಡೊನಾಲ್ಡ್ ಟ್ರಂಪ್ ಮಧ್ಯಪ್ರವೇಶ ಮಾಡಲಿಲ್ಲ ಎಂದು ಭಾರತವೂ ಹೇಳುತ್ತಲೇ ಬಂದಿದೆ.
ಇದನ್ನೂ ಓದಿ: ಭಾರತೀಯ ಅಕ್ಕಿ ಮೇಲೆ ಟ್ರಂಪ್ ಕಣ್ಣು; ಟ್ಯಾರಿಫ್ ಹೆಚ್ಚಿಸಿದರೆ ಭಾರತದ ಮೇಲೇನು ಪರಿಣಾಮ?
ರಘುರಾಮ್ ರಾಜನ್ ಪ್ರಕಾರ, ಭಾರತವು ಈ ರೀತಿ ವಾದ ಮಾಡಿ ತಪ್ಪು ಮಾಡಿರಬಹುದು. ಡೊನಾಲ್ಡ್ ಟ್ರಂಪ್ ಹೇಳಿದ್ದನ್ನು ಒಪ್ಪಿದ ಪಾಕಿಸ್ತಾನಕ್ಕೆ ಶೇ. 19ರಷ್ಟು ಟ್ಯಾರಿಫ್ ಸಿಕ್ಕಿತು. ಟ್ರಂಪ್ ಹೇಳಿಕೆ ನಿರಾಕರಿಸಿದ ಭಾರತಕ್ಕೆ ಶೇ. 50ರಷ್ಟು ಟ್ಯಾರಿಫ್ ಸಿಕ್ಕಿತು. ಪಾಕಿಸ್ತಾನ ಸರಿಯಾಗಿ ಪರಿಸ್ಥಿತಿ ನಿಭಾಯಿಸಿತು ಎಂದಿದ್ದಾರೆ.
‘ರಷ್ಯನ್ ತೈಲದ ಸಮಸ್ಯೆ ಅಲ್ಲ ಅದು. ವ್ಯಕ್ತಿತ್ವಗಳ ವಿಷಯ ಮುಖ್ಯವಾಗಿತ್ತು. ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಕೊನೆಗೊಳ್ಳಲು ತಾನು ಕಾರಣ ಎಂದು ಟ್ರಂಪ್ ಹೇಳಿಕೊಂಡಿದ್ದರು. ಅದಾದ ಬಳಿಕ ಭಾರತ ಮಾಡಿದ ಕೆಲ ಪ್ರತಿಕ್ರಿಯೆಗಳನ್ನು ಶ್ವೇತಭವನದಲ್ಲಿರುವವರು ಹೇಗೆ ಸ್ವೀಕರಿಸಿದರು ಎಂಬುದು ಸಮಸ್ಯೆ. ಇದೆಲ್ಲವೂ ಟ್ರಂಪ್ರಿಂದಾಗಿಯೇ ಎಂದು ಹೇಳಿ ಪಾಕಿಸ್ತಾನ ಸರಿಯಾಗಿ ಪರಿಸ್ಥಿತಿ ನಿರ್ವಹಿಸಿತು’ ಎಂದು ಮಾಜಿ ಆರ್ಬಿಐ ಗವರ್ನರ್ ಹೇಳಿದ್ದಾರೆ.
ಇದನ್ನೂ ಓದಿ: ಅಮೆರಿಕ ಜೊತೆ ಟ್ರೇಡ್ ಮಾತುಕತೆ; ಕರ್ನಾಟಕ ಐಎಎಸ್ ಅಧಿಕಾರಿ ದರ್ಪಣ್ ಜೈನ್ ಭಾರತದ ಮುಖ್ಯ ಸಂಧಾನಕಾರ
ರಘುರಾಮ್ ರಾಜನ್ ಮಾತನಾಡಿರುವ ಈ ಮಾತುಗಳಿರುವ ಕ್ಲಿಪ್ ವೈರಲ್ ಆಗಿದೆ. ಡಿಸೆಂಬರ್ 4ರಂದು ಇದು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಆಗಿದೆ. ಸ್ವಿಟ್ಜರ್ಲ್ಯಾಂಡ್ನಲ್ಲಿನ ಈ ಕಾರ್ಯಕ್ರಮ ಯಾವಾಗ ನಡೆದಿದೆ ನಿಖರವಾಗಿ ಗೊತ್ತಾಗಿಲ್ಲ. ರಘುರಾಮ್ ರಾಜನ್ ಅವರು, ಭಾರತ ಹಾಗೂ ಅಮೆರಿಕದ ನಾಯಕರ ನಡುವೆ ಸೌಹಾರ್ದತೆ ಮೂಡಿ, ಉತ್ತಮ ಒಪ್ಪಂದಗಳು ಏರ್ಪಡುವಂತಾಗಲಿ ಎಂದು ಈ ಕ್ಲಿಪ್ನಲ್ಲಿ ಆಶಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




