
ವಾಷಿಂಗ್ಟನ್, ಜನವರಿ 15: ದೇಶದೊಳಗೆ ಸಾಮಾಜಿಕ ಮತ್ತು ಕಾನೂನಾತ್ಮಕವಾಗಿ ಸಮಸ್ಯೆಗಳನ್ನು ತರಬಲ್ಲಂತಹ ವಿದೇಶೀಯರನ್ನು ನಿರ್ಬಂಧಿಸುವ ಸಲುವಾಗಿ ಅಮೆರಿಕ ಸರ್ಕಾರ ಕೆಲ ದೇಶಗಳ ನಿವಾಸಿಗಳಿಗೆ ವೀಸಾ ನೀಡುವಿಕೆಯನ್ನು (US Immigration Visa) ಸ್ಥಗಿತಗೊಳಿಸಿದೆ. ಒಟ್ಟು 75 ದೇಶಗಳಿಗೆ ಅಮೆರಿಕದ ವೀಸಾ ಪ್ರಕ್ರಿಯೆಯನ್ನು ಅನಿರ್ದಿಷ್ಟಾವಧಿವರೆಗೆ ಫ್ರೀಜ್ ಮಾಡಲಾಗಿದೆ. ಈ 75 ದೇಶಗಳ ಪೈಕಿ ಪಾಕಿಸ್ತಾನ, ಬಾಂಗ್ಲಾದೇಶ ಮೊದಲಾದವರು ಸೇರಿವೆ. ಪಾಕಿಸ್ತಾನದೊಂದಿಗೆ ಅಮೆರಿಕದ ಸಂಬಂಧಕ್ಕೆ ಹೊಸ ಪುಷ್ಟಿ ಸಿಕ್ಕಿರುವ ಹೊತ್ತಲ್ಲೇ ಈ ಬೆಳವಣಿಗೆ ನಡೆದಿದೆ.
ಗಮನಿಸಬೇಕಾದ ಸಂಗತಿ ಎಂದರೆ ಮೇಲಿನ ವೀಸಾ ನಿರ್ಬಂಧವು ವಲಸಿಗರಿಗೆ ಮಾತ್ರವೇ ಅನ್ವಯ ಆಗುವುದು. ಇಮ್ಮೈಗ್ರೇಶನ್ ವೀಸಾ ಅರ್ಜಿ ಸಲ್ಲಿಸಿರುವವರ ಪೈಕಿ ಆಯ್ದ 75 ದೇಶಗಳ ಜನರ ಅರ್ಜಿ ಪ್ರಕ್ರಿಯೆ ಮುಂದುವರಿಯುವುದಿಲ್ಲ. ಆದರೆ, ಪ್ರವಾಸ, ಬ್ಯುಸಿನೆಸ್ ಇತ್ಯಾದಿ ತಾತ್ಕಾಲಿಕವಾಗಿ ಬಂದು ಹೋಗುವವರಿಗೆ ತಡೆ ಇರುವುದಿಲ್ಲ, ವೀಸಾ ನಿರಾಕರಿಸಲಾಗುವುದಿಲ್ಲ.
ಇದನ್ನೂ ಓದಿ: 2025ರಲ್ಲಿ ಚೀನಾಗೆ ವ್ಯಾಪಾರ ಸುಗ್ಗಿ; ಭಾರತದ ರಫ್ತಿನಲ್ಲೂ 5.5 ಬಿಲಿಯನ್ ಡಾಲರ್ನಷ್ಟು ಹೆಚ್ಚಳ
ಅಮೆರಿಕದಲ್ಲಿ ಸಾಮಾಜಿಕ ಭದ್ರತಾ ಸೌಲಭ್ಯಗಳು ಉತ್ತಮವಾಗಿವೆ. ವಲಸಿಗರು ಈ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು ಸೌಲಭ್ಯಗಳನ್ನು ಪಡೆದು, ಡ್ರಗ್ಸ್, ಅಪರಾಧ, ಭಯೋತ್ಪಾದನೆ ಇತ್ಯಾದಿ ಕೃತ್ಯಗಳ ಮೂಲಕ ಸಮಾಜ ಹಾಗೂ ದೇಶದ ಭದ್ರತೆಗೆ ಅಪಾಯ ತರಬಹುದು. ಇದನ್ನು ನಿಯಂತ್ರಿಸಲು ಟ್ರಂಪ್ ಸರ್ಕಾರ ಈ ಕ್ರಮ ಕೈಗೊಂಡಿದೆ. ಜನವರಿ 21ರಿಂದ ಮೇಲೆ ತಿಳಿಸಿದ 75 ದೇಶಗಳ ಜನರ ವಲಸೆ ಅರ್ಜಿಗಳನ್ನು ಪ್ರೋಸಸ್ ಮಾಡಲಾಗುವುದಿಲ್ಲ ಎನ್ನಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ