ಭಾರತದ ಸೋಲಾರ್ ಉತ್ಪನ್ನಗಳ ಆಮದು ಮೇಲೆ ಅಮೆರಿಕದಿಂದ ಶೇ. 126 ಸುಂಕ; ಕುಸಿತ ಕಂಡ ಸೋಲಾರ್ ಕಂಪನಿಗಳ ಷೇರುಬೆಲೆ

US impose import duty of 126pc on Indian solar products: ಭಾರತೀಯ ಸೋಲಾರ್ ಕಂಪನಿಗಳಿಂದ ಮಾಡಿಕೊಳ್ಳಲಾಗುವ ಆಮದುಗಳ ಮೇಲೆ ಅಮೆರಿಕ ಸರ್ಕಾರ ಶೇ. 126ರಷ್ಟು ಸುಂಕ ವಿಧಿಸಿದೆ. ವರ್ಷದ ಹಿಂದೆ ವಿಯೆಟ್ನಾಂ ಇತ್ಯಾದಿ ದೇಶಗಳ ಸೋಲಾರ್ ಉತ್ಪನ್ನಗಳ ಮೇಲೆ ಅಮೆರಿಕ ಆಮದು ಸುಂಕ ಹಾಕಿತ್ತು. ಆಗ ಭಾರತೀಯ ಕಂಪನಿಗಳನ್ನು ಹೊರತಪಡಿಸಲಾಗಿತ್ತು. ಈಗ ಭಾರತೀಯ ಸೋಲಾರ್ ಕಂಪನಿಗಳಿಗೂ ಅಮೆರಿಕದ ಆಮದು ಸುಂಕದ ತಡೆ ಎದುರಾಗಿದೆ.

ಭಾರತದ ಸೋಲಾರ್ ಉತ್ಪನ್ನಗಳ ಆಮದು ಮೇಲೆ ಅಮೆರಿಕದಿಂದ ಶೇ. 126 ಸುಂಕ; ಕುಸಿತ ಕಂಡ ಸೋಲಾರ್ ಕಂಪನಿಗಳ ಷೇರುಬೆಲೆ
ಸೋಲಾರ್

Updated on: Feb 25, 2026 | 12:29 PM

ನವದೆಹಲಿ, ಫೆಬ್ರುವರಿ 25: ಭಾರತದ ಸೋಲಾರ್ ಉತ್ಪನ್ನಗಳ (Indian solar imports) ಮೇಲೆ ಅಮೆರಿಕ ಶೇ. 126ರಷ್ಟು ಪೂರ್ವಭಾವಿ ಸುಂಕಗಳನ್ನು (Preliminery duties) ವಿಧಿಸಿದೆ. ಇತರ ಕೆಲ ದೇಶಗಳ ಮೇಲೂ ವಿವಿಧ ದರಗಳ ಸುಂಕಗಳನ್ನು ಅಮೆರಿಕ ವಿಧಿಸಿದೆ. ಲಾವೋಸ್, ಇಂಡೋನೇಷ್ಯಾ ದೇಶಗಳಿಂದ ರಫ್ತಾಗುವ ಸೋಲಾರ್ ಉತ್ಪನ್ನಗಳ ಮೇಲೆ ಶೇ. 81ರಿಂದ 143ರಷ್ಟು ಸುಂಕವನ್ನು ಅಮೆರಿಕ ಹೇರಿದೆ ಎಂದು ಸಿಎನ್​ಬಿಸಿ ಟಿವಿ18ನಲ್ಲಿ ವರದಿಯಾಗಿದೆ.

ಸೋಲಾರ್ ಉತ್ಪನ್ನಗಳ ಆಮದು ಮೇಲೆ ಅಮೆರಿಕ ವಿಧಿಸಿರುವ ಸುಂಕಕ್ಕೂ ಅದರ ಪ್ರತಿಸುಂಕ ಕ್ರಮಕ್ಕೂ ಸಂಬಂಧ ಇಲ್ಲ. ಸೋಲಾರ್ ಉತ್ಪನ್ನಗಳು ತಯಾರಾದ ದೇಶದಲ್ಲಿ ಅದಕ್ಕೆ ಸಿಕ್ಕಿರುವ ಸಬ್ಸಿಡಿಗಳೆಷ್ಟು ಎನ್ನುವುದರ ಆಧಾರದ ಮೇಲೆ ಸುಂಕವನ್ನು ವಿಧಿಸಲಾಗಿರುವುದು ತಿಳಿದುಬಂದಿದೆ. ಅಂದರೆ, ಸೋಲಾರ್ ಉತ್ಪನ್ನ ತಯಾರಿಸುವ ಕಂಪನಿಗಳಿಗೆ ಆ ದೇಶದ ಸರ್ಕಾರ ಸಬ್ಸಿಡಿ ನೆರವು ಒದಗಿಸಿದಾಗ, ಉತ್ಪನ್ನದ ಬೆಲೆ ಕಡಿಮೆ ಆಗಿರುತ್ತದೆ. ಇದರಿಂದ ಕಡಿಮೆ ಬೆಲೆಗೆ ರಫ್ತು ಮಾಡಲು ಸಾಧ್ಯವಾಗುತ್ತದೆ. ಅಮೆರಿಕದ ಸೋಲಾರ್ ಉತ್ಪಾದಕರಿಗಿಂತ ಕಡಿಮೆ ಬೆಲೆಗೆ ಉತ್ಪನ್ನಗಳನ್ನು ಒದಗಿಸಲು ಸಾಧ್ಯವಾಗುತ್ತದೆ. ಈ ಅಂಶ ಪರಿಗಣಿಸಿ ಅಮೆರಿಕದ ವಾಣಿಜ್ಯ ಸಚಿವಾಲಯವು ಸೋಲಾರ್ ಉತ್ಪನ್ನಗಳ ಆಮದು ಮೇಲೆ ಅಧಿಕ ಸುಂಕವನ್ನು ಹೇರಲು ನಿರ್ಧರಿಸಿದೆ ಎನ್ನಲಾಗಿದೆ.

ಇದನ್ನೂ ಓದಿ: ನಮ್ಮನ್ನು ಕಿತ್ತು ತಿನ್ನುತ್ತಿದ್ದವರು ಇವತ್ತು ಟ್ಯಾರಿಫ್ ಕಟ್ತಿದಾರೆ, ಅವರೂ ಖುಷ್, ನಾವೂ ಖುಷ್: ಡೊನಾಲ್ಡ್ ಟ್ರಂಪ್

ಭಾರತದ ಯಾವ್ಯಾವ ಕಂಪನಿಗಳ ಮೇಲೆ ಪರಿಣಾಮ?

ಭಾರತದಲ್ಲಿ ಸೋಲಾರ್ ಉಪಕರಣಗಳನ್ನು ತಯಾರಿಸುವ ಹಲವಾರು ಕಂಪನಿಗಳಿವೆ. ಅವುಗಳ ಪೈಕಿ ಕೆಲ ಕಂಪನಿಗಳು ಅಮೆರಿಕನ್ ಮಾರುಕಟ್ಟೆಗೆ ಹೆಚ್ಚು ರಫ್ತು ಮಾಡುತ್ತವೆ. ಅಂಥ ಕಂಪನಿಗಳಲ್ಲಿ ವಾರೀ ಎನರ್ಜೀಸ್, ವಿಕ್ರಮ್ ಸೋಲಾರ್ ಲಿಮಿಟೆಡ್, ಪ್ರೀಮಿಯರ್ ಎನರ್ಜೀಸ್ ಲಿಮಿಟೆಡ್ ಇತ್ಯಾದಿ ಇವೆ.

ಅಮೆರಿಕದಿಂದ ಸಿಕ್ಕಾಪಟ್ಟೆ ಸುಂಕ ಹೇರಿಕೆ ಕ್ರಮ ಬಂದ ಬೆನ್ನಲ್ಲೇ ಈ ಸೋಲಾರ್ ಕಂಪನಿಗಳ ಷೇರುಗಳು ಬುಧವಾರ ನೆಲಕಚ್ಚಿವೆ. ವಾರೀ ಎನರ್ಜೀಸ್ ಷೇರುಬೆಲೆ ಬೆಳಗಿನ ವಹಿವಾಟಿನಲ್ಲಿ ಶೇ. 10ರಷ್ಟು ಕುಸಿದಿತ್ತು. ಪ್ರೀಮಿಯರ್ ಎನರ್ಜೀಸ್ ಕೂಡ ಶೇ. 10 ಕೆಳಗಿನ ಮಿತಿ ಮುಟ್ಟಿತ್ತು. ವಿಕ್ರಮ್ ಸೋಲಾರ್​ನ ಷೇರುಬೆಲೆ ಶೇ. 5ಕ್ಕಿಂತಲೂ ಹೆಚ್ಚಿನ ಕುಸಿತ ಕಂಡಿದೆ.

ಇದನ್ನೂ ಓದಿ: ಡಿಸೆಂಬರ್ ಕ್ವಾರ್ಟರ್​ನಲ್ಲಿ ಜಿಡಿಪಿ ಶೇ. 8.1 ಹಿಗ್ಗಿರುವ ಸಾಧ್ಯತೆ: ಎಸ್​ಬಿಐ ವರದಿಯಲ್ಲಿ ಅಂದಾಜು

ಎರಡು ವರ್ಷದಲ್ಲಿ 9 ಪಟ್ಟು ರಫ್ತು ಹೆಚ್ಚಳ

ಅಮೆರಿಕದ ವಾಣಿಜ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಭಾರತದಿಂದ ಸೋಲಾರ್ ಉತ್ಪನ್ನಗಳನ್ನು 2024ರಲ್ಲಿ ಆಮದು ಮಾಡಿಕೊಂಡಿರುವುದು 792.6 ಮಿಲಿಯನ್ ಡಾಲರ್ ಮೌಲ್ಯದಷ್ಟು. 2022ದಕ್ಕೆ ಹೋಲಿಸಿದರೆ 2024ರಲ್ಲಿ ಒಂಬತ್ತು ಪಟ್ಟು ಹೆಚ್ಚು ಆಮದು ನಡೆದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us