ಅಮೆರಿಕಕ್ಕೆ ಹೋಗಲು ಇಬಿ-5 ವೀಸಾ ಬದಲು ಹೊಸ ಗೋಲ್ಡ್ ಕಾರ್ಡ್: ಬೆಲೆ 5 ಮಿಲಿಯನ್ ಡಾಲರ್

USA gold card visa scheme for immigrants: ಅಮೆರಿಕ ಸರ್ಕಾರ ಇಬಿ-5 ವೀಸಾ ಬದಲು ಗೋಲ್ಡ್ ಕಾರ್ಡ್ ವೀಸಾ ಯೋಜನೆ ಜಾರಿಗೊಳಿಸುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇದನ್ನು ಗ್ರೀನ್ ಕಾರ್ಡ್ ಪ್ರಿವಿಲೇಜ್ ಪ್ಲಸ್ ಎಂದು ಬಣ್ಣಿಸಿದ್ದಾರೆ. ಗೋಲ್ಡ್ ಕಾರ್ಡ್ ವೀಸಾ ಯೋಜನೆ ಅಡಿ, ಅಮೆರಿಕಕ್ಕೆ ಬರಬೇಕೆನ್ನುವವರು ಕನಿಷ್ಠ ಐದು ಮಿಲಿಯನ್ ಡಾಲರ್ ಹೂಡಿಕೆ ಮಾಡಬೇಕು ಎನ್ನುವ ನಿಯಮ ಇದೆ. ಅಂದರೆ ಸುಮಾರು 45 ಕೋಟಿ ರೂ ಹೂಡಿಕೆ ಮಾಡಿದರೆ ಭಾರತೀಯರು ಅಮೆರಿಕದಲ್ಲಿ ಪೌರತ್ವ ಪಡೆಯಲು ಸಾಧ್ಯವಾಗುತ್ತದೆ.

ಅಮೆರಿಕಕ್ಕೆ ಹೋಗಲು ಇಬಿ-5 ವೀಸಾ ಬದಲು ಹೊಸ ಗೋಲ್ಡ್ ಕಾರ್ಡ್: ಬೆಲೆ 5 ಮಿಲಿಯನ್ ಡಾಲರ್
ಡೊನಾಲ್ಡ್ ಟ್ರಂಪ್

Updated on: Feb 26, 2025 | 10:42 AM

ವಾಷಿಂಗ್ಟನ್, ಫೆಬ್ರುವರಿ 26: ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರ ಕೇವಲ ಶ್ರೀಮಂತ ವಿದೇಶೀಯರನ್ನು ಮಾತ್ರ ಬರಮಾಡಿಕೊಳ್ಳಲು ಹೊರಟಂತಿದೆ. ಅಮೆರಿಕಕ್ಕೆ ವಲಸೆ ಹೋಗಿ ಪೌರತ್ವ ಪಡೆಯಲು ಇದ್ದ ಮಾರ್ಗಗಳಲ್ಲಿ ಇಬಿ-5 ವೀಸಾ ಒಂದು. ಈಗ ಇಬಿ-5 ವೀಸಾ ಬದಲು ಅಲ್ಲಿನ ಸರ್ಕಾರ ಗೋಲ್ಡ್ ಕಾರ್ಡ್ ಇನ್ವೆಸ್ಟರ್ ವೀಸಾ ಯೋಜನೆಯನ್ನು ಘೋಷಿಸಿದೆ. ಈ ಗೋಲ್ಡ್ ಕಾರ್ಡ್ ಸ್ಕೀಮ್ ನಲ್ಲಿ, ವಲಸಿಗರು ಅಮೆರಿಕದಲ್ಲಿ ಐದು ಮಿಲಿಯನ್ ಡಾಲರ್ ಹಣ ಹೂಡಿಕೆ ಮಾಡಬೇಕು. ಅಂದರೆ 45 ಕೋಟಿ ರೂಗೂ ಅಧಿಕ ಹಣ ಬೇಕಾಗುತ್ತದೆ. ಇನ್ನೆರಡು ವಾರದಲ್ಲಿ ಈ ಯೋಜನೆ ಜಾರಿಗೆ ಬರುವ ನಿರೀಕ್ಷೆ ಇದೆ.

ಇಬಿ-5 ವೀಸಾ ಯೋಜನೆಯನ್ನು ಗ್ರೀನ್ ಕಾರ್ಡ್ ವೀಸಾ ಪ್ರೋಗ್ರಾಮ್ ಎನ್ನಲಾಗುತ್ತದೆ. ಹೂಡಿಕೆದಾರರಾಗಿ ಅಮೆರಿಕಕ್ಕೆ ಹೋಗಿ ಅಲ್ಲಿ ಖಾಯಂ ನಿವಾಸಕ್ಕೆ ಅನುಮತಿ ಪಡೆಯುವ ಅವಕಾಶವನ್ನು ಅದು ನೀಡುತ್ತದೆ. ಬಹಳಷ್ಟು ಭಾರತೀಯರಿಗೆ ಅಮೆರಿಕಕ್ಕೆ ವಲಸೆ ಹೋಗಲು ಈ ಗ್ರೀನ್ ಕಾರ್ಡ್ ಉತ್ತಮ ಮಾರ್ಗವಾಗಿತ್ತು. ಅಮೆರಿಕದಲ್ಲಿ ಹೊಸ ಉದ್ದಿಮೆಗಳಲ್ಲಿ 1.05 ಮಿಲಿಯನ್ ಡಾಲರ್ ಹೂಡಿಕೆ ಮಾಡಬೇಕು ಮತ್ತು ಅಮೆರಿಕನ್ನರಿಗೆ 10 ಹೊಸ ಉದ್ಯೋಗಗಳನ್ನು ಸೃಷ್ಟಿಸಬೇಕು ಎಂಬುದು ಅದರ ಮುಖ್ಯ ಮಾನದಂಡವಾಗಿತ್ತು. ಅಥವಾ ನಿಯೋಜಿತ ಕ್ಷೇತ್ರದಲ್ಲಿ ಹೂಡಿಕೆ ಮಾಡುವುದಾದರೆ ಕೇವಲ ಎಂಟು ಲಕ್ಷ ಡಾಲರ್ ಹೂಡಿಕೆ ಮಾತ್ರವೇ ಅಗತ್ಯತೆ ಇತ್ತು. ಅಂದರೆ, ಸುಮಾರು 7-10 ಕೋಟಿ ರೂನಷ್ಟು ಹಣವು ಇದ್ದರೆ ಇಬಿ-5 ವೀಸಾ ಪಡೆದು ಅಮೆರಿಕಕ್ಕೆ ಹೋಗಿ ಅಲ್ಲಿ ವಾಸ ಮಾಡಬಹುದಿತ್ತು.

ಇದನ್ನೂ ಓದಿ: ಕೋಟಿ ಕೋಟಿ ಕುಬೇರನಿಗೆ ಚಿಲ್ಲರೆ ಕಾಟ; ಅಮೆರಿಕಕ್ಕೆ ಪೆನ್ನಿ ಸಂಕಟ

ಈಗ ಗೋಲ್ಡ್ ಕಾರ್ಡ್ ವೀಸಾ ಸ್ಕೀಮ್ ಮಾಡಲಾಗಿದೆ. ಇದರಲ್ಲಿ ಕನಿಷ್ಠ ಹೂಡಿಕೆ 45 ಕೋಟಿ ರೂ ಆಗುತ್ತದೆ. ಹಣದ ಹೊಳೆ ಹರಿಸುವವರನ್ನು ಅಮೆರಿಕಕ್ಕೆ ಬರಮಾಡಿಕೊಳ್ಳುತ್ತೇವೆ. ಇದರಿಂದ ಅಮೆರಿಕದ ಆರ್ಥಿಕತೆಗೆ ಸಹಾಯವಾಗುತ್ತದೆ ಎನ್ನುತ್ತಾರೆ. ‘ಅವರು ಶ್ರೀಮಂತರು, ಯಶಸ್ವಿ ವ್ಯಕ್ತಿಗಳಾಗಿರುತ್ತಾರೆ. ಇಲ್ಲಿ ಸಾಕಷ್ಟು ಹಣ ಖರ್ಚು ಮಾಡುತ್ತಾರೆ. ಸಾಕಷ್ಟು ತೆರಿಗೆ ಕಟ್ಟುತ್ತಾರೆ. ಸಾಕಷ್ಟು ಜನರಿಗೆ ಉದ್ಯೋಗ ಒದಗಿಸುತ್ತಾರೆ. ಈ ಯೋಜನೆ ಅತ್ಯಂತ ಯಶಸ್ವಿಯಾಗಬಹುದು ಎಂದನಿಸುತ್ತದೆ,’ ಎಂದು ಅಮೆರಿಕ ಅಧ್ಯಕ್ಷರು ಹೇಳಿದ್ದಾರೆ.

ಅಮೆರಿಕದಲ್ಲಿ ಗ್ರೀನ್ ಕಾರ್ಡ್ ಪಡೆದು ಖಾಯಂ ಪೌರತ್ವ ಸಿಗದೇ ಕಾಯುತ್ತಿರುವ ಭಾರತೀಯರ ಸಂಖ್ಯೆ ಬಹಳ ಇದೆ. ಕೆಲವರು 50 ವರ್ಷಗಳಿಂದ ಕಾಯುತ್ತಿದ್ದಾರೆ. ಎಂಜಿನಿಯರುಗಳು, ವೈದ್ಯರು, ತಂತ್ರಜ್ಞರು ಇತ್ಯಾದಿ ಕೌಶಲ್ಯವಂತ ವೃತ್ತಿಪರರೂ ಕೂಡ ಅಮೆರಿಕದ ಪೌರತ್ವ ಸಿಗದೇ ಕಾಯುತ್ತಲೇ ಇದ್ದಾರೆ. ಈ ವಿಚಾರವನ್ನು ಪ್ರಸ್ತಾಪಿಸಿರುವ ಭಾರತೀಯ ಅಮೆರಿಕನ್ ವ್ಯಕ್ತಿ ಅಜಯ್ ಭುತೋರಿಯಾ, ಹೊಸ ಸರ್ಕಾರದ ಗೋಲ್ಡ್ ಕಾರ್ಡ್ ಸ್ಕೀಮ್ ಅನ್ನು ಟೀಕಿಸಿದ್ದಾರೆ.

ಇದನ್ನೂ ಓದಿ: ಭಾರತಕ್ಕೆ ಸೌರಶಕ್ತಿ: ಸಿಲಿಕಾನ್ ವೇಫರ್, ಇನ್ಗೋಟ್​ಗಳ ತಯಾರಿಕೆಗೆ ಉತ್ತೇಜಿಸಲು ಸರ್ಕಾರದಿಂದ ಬಿಲಿಯನ್ ಡಾಲರ್ ಸಬ್ಸಿಡಿ ಸ್ಕೀಮ್

‘ಲಕ್ಷಾಂತರ ಪ್ರತಿಭಾನ್ವಿತರಿಗೆ ಅವಕಾಶ ಸಿಗಲಾಗುವ ರೀತಿಯಲ್ಲಿ ವಲಸೆ ನೀತಿಯಲ್ಲಿ ಸುಧಾರಣೆ ಆಗಬೇಕೆಂದು ವರ್ಷಗಳಿಂದ ಹೋರಾಡುತ್ತಾ ಬಂದಿದ್ದೇನೆ. ಈಗ ಶ್ರೀಮಂತ ವಿದೇಶಿಗರಿಗೆ ಪೌರತ್ವದ ದಾರಿ ಮಾಡಿಕೊಡುವ ಹೊಸ ಗೋಲ್ಡ್ ಕಾರ್ಡ್ ಯೋಜನೆ ಮಾಡಿದ್ದಾರೆ. ಇದು ಅನ್ಯಾಯ.’ ಎಂದು ಡೆಮಾಕ್ರಾಟ್ ಪಕ್ಷದ ಬೆಂಬಲಿಗರೂ ಆದ ಅವರು ಕಿಡಿಕಾರಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us