ಎಐನಿಂದ ಭಯ ಬೇಡ; ನಾವು ಊಹಿಸಿಕೊಳ್ಳಲೂ ಸಾಧ್ಯವಿಲ್ಲದಂತಹ ಉದ್ಯೋಗಗಳು ಸೃಷ್ಟಿಯಾಗುತ್ತವೆ, ನೋಡ್ತಿರಿ: ವಿಶಾಲ್ ಸಿಕ್ಕಾ

Vianai systems CEO Vishal Sikka speaks of AI disruption and opportunities: ಎಐನಿಂದ ಹೊಸ ಉದ್ಯೋಗ ಸಾಧ್ಯತೆಗಳು ಹುಟ್ಟಿಕೊಳ್ಳುತ್ತವೆ ಎಂದು ವಿಯಾನ್​ಎಐ ಸಿಸ್ಟಮ್ಸ್​ನ ಸಿಇಒ ವಿಶಾಲ್ ಸಿಕ್ಕಾ ಹೇಳಿದ್ದಾರೆ. ಎಐನಿಂದ ಉದ್ಯೋಗಗಳು ನಶಿಸುತ್ತವೆ ಎನ್ನುವ ಆತಂಕದ ನಡುವೆ ವಿಶಾಲ್ ಸಿಕ್ಕಾ ಧೈರ್ಯದ ಮಾತುಗಳನ್ನಾಡಿದ್ದಾರೆ. ಪ್ರತೀ ಬಾರಿ ಹೊಸ ತಂತ್ರಜ್ಞಾನ ಬಂದಾಗೆಲ್ಲಾ ಜನರು ಆತಂಕಕ್ಕೊಳಗಾಗುತ್ತಿದ್ದುದನ್ನು ಅವರು ಉದಾಹರಿಸಿದ್ಧಾರೆ.

ಎಐನಿಂದ ಭಯ ಬೇಡ; ನಾವು ಊಹಿಸಿಕೊಳ್ಳಲೂ ಸಾಧ್ಯವಿಲ್ಲದಂತಹ ಉದ್ಯೋಗಗಳು ಸೃಷ್ಟಿಯಾಗುತ್ತವೆ, ನೋಡ್ತಿರಿ: ವಿಶಾಲ್ ಸಿಕ್ಕಾ
ವಿಶಾಲ್ ಸಿಕ್ಕಾ

Updated on: Feb 18, 2026 | 6:39 PM

ನವದೆಹಲಿ, ಫೆಬ್ರುವರಿ 18: ಕೃತಕ ಬುದ್ಧಿಮತ್ತೆ ಬೆಳೆದಂತೆ ಮನುಷ್ಯರಿಗೆ ಮಾಡೋಕೆ ಕೆಲಸಗಳೇ ಇಲ್ಲದಂತಾಗುತ್ತದೆ ಎಂದು ಅದೆಷ್ಟೋ ಜನರು ಹೆದರಿಸುತ್ತಿದ್ದಾರೆ. ಯಾವ ಸೆಕ್ಟರ್ ಅನ್ನೂ ಎಐ ಬಿಡೋದಿಲ್ಲ. ಎಲ್ಲರೂ ಕೂಡ ಬಾಧಿತರಾಗುವವರೇ ಎನ್ನುತ್ತಿದ್ದಾರೆ. ಆದರೆ, ಭಾರತೀಯ ಉದ್ಯಮಿ ಡಾ. ವಿಶಾಲ್ ಸಿಕ್ಕಾ (Vishal Sikka) ಅವರು ಎಐನಿಂದ ತೀರಾ ಭಯಪಡುವ ಅವಶ್ಯಕತೆ ಇಲ್ಲ ಎಂದು ಸಮಾಧಾನ ಹೇಳಿದ್ದಾರೆ.

ವಿಯಾನ್​ಎಐ ಸಿಸ್ಟಮ್ಸ್​ನ (Vianai Systems) ಸ್ಥಾಪಕ ಸಿಇಒ ಆದ ವಿಶಾಲ್ ಸಿಕ್ಕಾ ಅವರು ಎಐನಿಂದ ಹೊಸ ಸಾಧ್ಯತೆಗಳು ಮತ್ತು ಉದ್ಯೋಗಗಳು ತೆರೆದುಕೊಳ್ಳುತ್ತವೆ ಎಂದಿದ್ದಾರೆ.

ಇದನ್ನೂ ಓದಿ: ಭಾರತ-ಅಮೆರಿಕ ಕನೆಕ್ಟ್ ಸೇರಿದಂತೆ ವಿವಿಧ ಎಐ ಯೋಜನೆಗಳನ್ನು ತೆರೆದಿಟ್ಟ ಗೂಗಲ್ ಸಿಇಒ ಸುಂದರ್ ಪಿಚೈ

‘ನಿನ್ನೆ ನಾವು ಮಾಡುತ್ತಿದ್ದ ಕೆಲಸವನ್ನು ಎಐ ಮಾಡಬಲ್ಲುದು ಎಂದು ನಾವೆಲ್ಲಾ ಹೆದರಿದ್ದೇವೆ. ಆದರೆ, ಎಐನಿಂದ ಸಾಧ್ಯವಾಗುವ ಹೊಸ ಅಪ್ಲಿಕೇಶನ್​ಗಳನ್ನು ಕಾಣಲು ನಮಗೆ ಆಗುತ್ತಿಲ್ಲ’ ಎಂದು ವಿಶಾಲ್ ಸಿಕ್ಕಾ ಅಭಿಪ್ರಾಯಪಟ್ಟಿದ್ಧಾರೆ. ಅಂದರೆ, ಎಐ ತಂತ್ರಜ್ಞಾನದಿಂದ ಹೊಸ ಉದ್ಯೋಗ ಸಾಧ್ಯತೆಗಳನ್ನು ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದು ಅವರ ಅನಿಸಿಕೆ. ಹಾಗೆಯೇ, ಐತಿಹಾಸಿಕವಾಗಿ ಹೊಸ ತಂತ್ರಜ್ಞಾನಗಳು ಬಂದಾಗೆಲ್ಲಾ ಅವುಗಳ ನಿಜವಾದ ಉಪಯೋಗ ಶುರುವಾಗುವ ಮುನ್ನ ಅಪಾಯಕಾರಿ ಎನಿಸುತ್ತವೆ ಎಂಬುದನ್ನು ಒತ್ತಿ ಹೇಳಿದ್ದಾರೆ.

‘ಟಿವಿ ಬಂದಾಗ ಜನರು ಪರದೆ ಮೇಲೆ ಕಾಗದ ತುಂಡಿನಲ್ಲಿ ಬರೆದಿದ್ದನ್ನು ಓದುತ್ತಿದ್ದರು. ಹೊಸ ತಂತ್ರಜ್ಞಾನ ಬಂದಾಗ ಮೊದಮೊದಲು ಹಳೆಯ ಮಾದರಿಯಂತೆ ಕೆಲಸವನ್ನು ಮಾಡಲು ಯತ್ನಿಸುತ್ತೇವೆ. ಹೊಸ ಮಾಧ್ಯಮವನ್ನು ಹೊಸದಾಗಿ ಹೇಗೆ ಉಪಯೋಗಿಸಿಕೊಳ್ಳಬಹುದು ಎಂಬುದನ್ನು ಊಹಿಸಿಕೊಳ್ಳಲು ಆಗುವುದಿಲ್ಲ’ ಎಂದು ವಿಯಾನ್​ಎಐ ಸಿಸ್ಟಮ್ಸ್​ನ ಸಿಇಒ ವಿವರಿಸಿದ್ದಾರೆ.

ಇದನ್ನೂ ಓದಿ: ಭಾರತ್​ಜೆನ್ ಎಐನಿಂದ ಸ್ಕೈಏರ್​ವರೆಗೂ ದೆಹಲಿ ಶೃಂಗಸಭೆಯಲ್ಲಿ ಭಾರತೀಯರ ಎಐ ಶಕ್ತಿ ಪ್ರದರ್ಶನ

ಅವರ ಪ್ರಕಾರ ಎಐ ಸದ್ಯ ಈ ಹಂತದಲ್ಲಿದೆ. ನಾಳೆಯ ಉದ್ಯಮಗಳ ಸಾಧ್ಯತೆಯನ್ನು ಕಾಣುವ ಬದಲು ನಿನ್ನೆಯ ಕೆಲಸವನ್ನು ಅನುಕರಿಸಲಾಗುತ್ತಿದೆ.

ಭಾರತವು ಲಾರ್ಜ್ ಲ್ಯಾಂಗ್ವೇಜ್ ಮಾಡಲ್​ಗಳನ್ನು ನಿರ್ಮಿಸುವುದಕ್ಕೆ ಮಾತ್ರವೇ ಗಮನ ಕೊಡಬಾರದು. ನೂರು ಕೋಟಿ ಜನರು ಎಐ ಅನ್ನು ಸಮರ್ಪಕವಾಗಿ ಬಳಸಲು ಸಾಧ್ಯವಾಗುವಂತೆ ಮಾಡುವುದು ಮುಖ್ಯ. ಜನರಿಗೆ ಎಐನ ಸಾಮರ್ಥ್ಯ ಮತ್ತು ಮಿತಿಗಳು ಗೊತ್ತಾದರೆ ಹೊಸ ಅಪ್ಲಿಕೇಶನ್​ಗಳನ್ನು ನಿರ್ಮಿಸಬಹುದು ಎಂದು ವಿಶಾಲ್ ಸಿಕ್ಕಾ ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ